ಈ ನಾಡಿನ ಹಿತರಕ್ಷಣೆಗಾಗಿ ನಾವು ಈ ಮೈತ್ರಿಗೆ ಮುಂದಾಗಿದೇವೆ; ಹಾಸನದಲ್ಲಿ ಹೆಚ್​ಡಿ ಕುಮಾರಸ್ವಾಮಿ

| Updated By: ಗಣಪತಿ ಶರ್ಮ

Updated on: Sep 13, 2023 | 7:00 PM

ಎಷ್ಟು ಕ್ಷೇತ್ರದಲ್ಲಿ ನಾವು ಸ್ಪರ್ಧೆ ಮಾಡ್ತೇವೆ ಎಂಬುದು ಮುಖ್ಯವಲ್ಲ. 28ಕ್ಕೆ 28 ಕ್ಷೇತ್ರದಲ್ಲೂ ಈ ಮೈತ್ರಿಯ ಸಂಬಂಧ ಚೆನ್ನಾಗಿ ಇರಬೇಕು. ಎರಡೂ ಪಕ್ಷಗಳು ಗೆಲ್ಲಬೇಕು ಎಂಬುದೇ ನಮ್ಮ ಮೊದಲ ಆದ್ಯತೆ ಎಂದು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಬಗ್ಗೆ ಹೆಚ್​ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಈ ನಾಡಿನ ಹಿತರಕ್ಷಣೆಗಾಗಿ ನಾವು ಈ ಮೈತ್ರಿಗೆ ಮುಂದಾಗಿದೇವೆ; ಹಾಸನದಲ್ಲಿ ಹೆಚ್​ಡಿ ಕುಮಾರಸ್ವಾಮಿ
ಹೆಚ್​ಡಿ ಕುಮಾರಸ್ವಾಮಿ
Follow us on

ಹಾಸನ, ಸೆಪ್ಟೆಂಬರ್ 13: ಮುಂಬರುವ ಲೋಕಸಭೆ ಚುನಾವಣೆಗೆ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಳ್ಳುವ (BJP JDS alliance) ಸಾಧ್ಯತೆ ಬಗ್ಗೆ ಜೆಡಿಎಸ್ ನಾಯಕ ಹೆಚ್​ಡಿ ಕುಮಾರಸ್ವಾಮಿ (HD Kumaraswamy) ಬಹಿರಂಗ ಹೇಳಿಕೆ ನೀಡಿದ್ದಾರೆ. ಹಾಸನದಲ್ಲಿ ಬುಧವಾರ ಮಾತನಾಡಿದ ಅವರು, ಈ ನಾಡಿನ ಹಿತರಕ್ಷಣೆಗಾಗಿ ನಾವು ಈ ಮೈತ್ರಿಗೆ ಮುಂದಾಗಿದೇವೆ. ಒಂದೆಡೆ ಲೂಟಿ ಹೊಡೆಯುತ್ತಿದಾರೆ, ಇನ್ನೊಂದೆಡೆ ಇಂತಹ ಪರಿಸ್ಥಿತಿ ಇದೆ. ಇದೆಲ್ಲವನ್ನೂ ಸರಿಮಾಡಬೇಕಿದೆ ಎಂದು ಹೇಳಿದ್ದಾರೆ.

ಎಷ್ಟು ಕ್ಷೇತ್ರದಲ್ಲಿ ನಾವು ಸ್ಪರ್ಧೆ ಮಾಡ್ತೇವೆ ಎಂಬುದು ಮುಖ್ಯವಲ್ಲ. 28ಕ್ಕೆ 28 ಕ್ಷೇತ್ರದಲ್ಲೂ ಈ ಮೈತ್ರಿಯ ಸಂಬಂಧ ಚೆನ್ನಾಗಿ ಇರಬೇಕು. ಎರಡೂ ಪಕ್ಷಗಳು ಗೆಲ್ಲಬೇಕು ಎಂಬುದೇ ನಮ್ಮ ಮೊದಲ ಆದ್ಯತೆ. ಹಣ, ಅಧಿಕಾರದ ಮದದಲ್ಲಿ 20, 24 ಸೀಟು ಅಂತಾ ಹೇಳುತ್ತಿದ್ದಾರೆ. ಹಾಸನದಲ್ಲೂ ಮುಗಿಸಿ ಬಿಡ್ತೀವಿ ಎಂದು ಹೇಳುತ್ತಿದ್ದಾರೆ. ನಮ್ಮ ಮುಂದೆ ಇರುವ ಗುರಿ 28ಕ್ಕೆ 28 ಸ್ಥಾನವನ್ನೂ ಗೆಲ್ಲುವುದಾಗಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಬಿಜೆಪಿ, ಜೆಡಿಎಸ್ ಕಾರ್ಯಕರ್ತರ ಮಧ್ಯೆ ಭಿನ್ನಾಭಿಪ್ರಾಯ ಇಲ್ಲ; ಹೆಚ್​ಡಿ ಕುಮಾರಸ್ವಾಮಿ

ಬಿಜೆಪಿ ಜೊತೆಗಿನ ಮೈತ್ರಿಗೆ ಜೆಡಿಎಸ್​ ಕಾರ್ಯಕರ್ತರ ವಿರೋಧ ಇದೆಯೆಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಬಿಜೆಪಿ, ಜೆಡಿಎಸ್ ಕಾರ್ಯಕರ್ತರ ನಡುವೆ ಯಾವತ್ತೂ ಭಿನ್ನಾಭಿಪ್ರಾಯ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಒಂದೆಡೆ ಕಾಂಗ್ರೆಸ್ ವಿರುದ್ಧ ನಮ್ಮ ಹೋರಾಟ ಮುಂದುವರಿದಿದೆ. ಮತ್ತೊಂದೆಡೆ ಬಿಜೆಪಿ ಹೋರಾಟವೂ ಮುಂದುವರಿದಿದೆ. ನಮ್ಮೆರಡು ಪಕ್ಷಗಳಲ್ಲಿ ಯಾವುದೇ ಗೊಂದಲ ಇಲ್ಲ, ಹೊಂದಾಣಿಕೆ ಇದೆ. ಶುಭ ಘಳಿಗೆ ಆರಂಭ ಎಂದು ಈ ನಾಡಿನ ಜನತೆ ಹೇಳುತ್ತಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಬಿಜೆಪಿ ಕಚೇರಿಗೆ ನನ್ನ ಹೆಣವೂ ಹೋಗಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಟಾಂಗ್

ಬಿಜೆಪಿ ಕಚೇರಿಗೆ ನನ್ನ ಹೆಣವೂ ಹೋಗಲ್ಲ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಟಾಂಗ್ ನೀಡಿದ ಕುಮಾರಸ್ವಾಮಿ, ಅವರು ಹಾಗೆ ಹೇಳುತ್ತಾರೆ. ಆ ಬಗ್ಗೆ ಮುಂದೆ ಚರ್ಚೆ ಮಾಡೋಣ. 2004 ರಲ್ಲಿ ಯಾಱರನ್ನು ಇಟ್ಟುಕೊಂಡು ಯಾರನ್ನು ಭೇಟಿಯಾದರು? ಜೆಡಿಎಸ್​ನಲ್ಲಿದ್ದರೆ ಮುಖ್ಯಮಂತ್ರಿ ಆಗುವುದಿಲ್ಲ ಎಂದು ಯಾಱರನ್ನು ಭೇಟಿಯಾಗಿದ್ದರು, ಯಾರು ಸಿಎಂ ಆಗಬೇಕು, ಯಾರು ಡಿಸಿಎಂ ಆಗಬೇಕೆಂದು ಚರ್ಚಿಸಿದ್ದರು ಎಂಬುದೆಲ್ಲ ಈಗ ಇತಿಹಾಸ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್‌ ಬಂದಿದೆ-ಬರಗಾಲ ತಂದಿದೆ; ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ, ವ್ಯಂಗ್ಯ

ಆಗಿನ ಬಿಜೆಪಿ ನಾಯಕರ ಜೊತೆ ಸಿದ್ದರಾಮಯ್ಯ ಚರ್ಚಿಸಿದ್ದ ಇತಿಹಾಸ ಇದೆ. 2008 ರಲ್ಲಿ ಮೂವರು ಬಿಎಸ್ ಯಡಿಯೂರಪ್ಪ ಜೊತೆ ಮಂತ್ರಿ ಆಗಲು ಹೊರಟಿರಲಿಲ್ಲವೇ? ಹೆಚ್​.ಸಿ.ಮಹದೇವಪ್ಪ, ಸತೀಶ್ ಜಾರಕಿಹೊಳಿಯನ್ನು ಮಂತ್ರಿ ಮಾಡಿ ಹಣಕಾಸು ಖಾತೆ ಕೊಡಿ ಎಂದು ಬಿಎಸ್​​ವೈ ಜೊತೆ ಚರ್ಚೆ ಆಗಿರಲಿಲ್ಲವೇ? ಈಗ ಬಿಜೆಪಿಗೆ ನನ್ನ ಹೆಣವೂ ಹೋಗಲ್ಲ ಎಂದು ಹೇಳುತ್ತಿದ್ದೀರಾ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಜತೆಗೆ, ಇವರು ನಮಗಿಂತ ಮೊದಲೇ ಅರ್ಜಿ ಹಾಕಿಕೊಂಡು ಹೋಗಿದ್ದವರು ಎಂದು ವ್ಯಂಗ್ಯವಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ