ಗ್ಯಾರಂಟಿ ಕಾರ್ಡ್​ ಹೆಸರಲ್ಲಿ ಕಾಂಗ್ರೆಸ್​ನಿಂದ ಕುತಂತ್ರ ರಾಜಕಾರಣ; ಹೆಚ್​ ಡಿ ಕುಮಾರಸ್ವಾಮಿ

|

Updated on: May 26, 2023 | 12:58 PM

ರಾಜ್ಯ ವಿಧಾನಸಭೆ ಚುನಾವಣೆ ಗೆಲ್ಲಲು ಕಾಂಗ್ರೆಸ್​​ ಪಕ್ಷ ಗ್ಯಾರಂಟಿ ಕಾರ್ಡ್​ ಹೆಸರಲ್ಲಿ ಕುತಂತ್ರ ರಾಜಕಾರಣ ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಗ್ಯಾರಂಟಿ ಕಾರ್ಡ್​ ಹೆಸರಲ್ಲಿ ಕಾಂಗ್ರೆಸ್​ನಿಂದ ಕುತಂತ್ರ ರಾಜಕಾರಣ; ಹೆಚ್​ ಡಿ ಕುಮಾರಸ್ವಾಮಿ
ಹೆಚ್​ಡಿ ಕುಮಾರಸ್ವಾಮಿ
Follow us on

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ(Karnataka Assembly election) ಗೆಲ್ಲಲು ಕಾಂಗ್ರೆಸ್(Congress)​​ ಪಕ್ಷ ಗ್ಯಾರಂಟಿ ಕಾರ್ಡ್​ ಹೆಸರಲ್ಲಿ ಕುತಂತ್ರ ರಾಜಕಾರಣ ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ(HD Kumaraswamy) ಹೇಳಿದ್ದಾರೆ. ‘ಮತದಾನಕ್ಕೂ ಮುನ್ನ ಕುಣಿಗಲ್​, ಆರ್​ಆರ್ ನಗರ ಸೇರಿ 42 ವಿಧಾನಸಭಾ ಕ್ಷೇತ್ರಗಳಲ್ಲಿ 60 ಸಾವಿರ ಕುಟುಂಬಗಳಿಗೆ ಕೂಪನ್​​​​​ ಕಾರ್ಡ್ ಹಂಚಿದ್ದಾರೆ. ಈ ಕಾರ್ಡ್‌ ಹಿಂದೆ ಬಾರ್‌ಕೋಡ್ ನಂಬರ್ ಇದ್ದು, ಶಾಪ್‌ನಲ್ಲಿ ನೀವು ಸ್ವೈಪ್ ಮಾಡಿ 3,500 ರಿಂದ 5 ಸಾವಿರ ಬೆಲೆಯ ವಸ್ತು ಖರೀದಿ ಮಾಡಬಹುದು ಎಂದು ಆಮಿಷ ಒಡ್ಡಿದ್ದಾರೆ. ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ನೀಡುವುದರಿಂದ ಯಾವುದೇ ಉಪಯೋಗವಿಲ್ಲ. ಬಿಜೆಪಿ ಸರ್ಕಾರದ್ದು 40% ಹೇಳಿದ್ರಲ್ಲ, ಈಗ ಏನು ಹೇಳ್ತೀರಿ, 5 ಸಾವಿರ 60 ಸಾವಿರ ಕಾರ್ಡ್ ಅಂದ್ರೆ 30 ಕೋಟಿಯಾಯ್ತು, 30 ಕೋಟಿ ಗಿಫ್ಟ್ ಕೊಡಬೇಕು‌ ನೀವಿಗಾ ಎಂದು ಕಾಂಗ್ರೆಸ್​ ವಿರುದ್ದ ಹರಿಹಾಯ್ದಿದ್ದಾರೆ.

ಬೆಂಗಳೂರಿನ ಜೆಡಿಎಸ್​ ಕಚೇರಿಯಲ್ಲಿ ಮಾತನಾಡಿದ ಹೆಚ್​ಡಿ ಕುಮಾರಸ್ವಾಮಿ ‘ಬಿಜೆಪಿಯವರ ವಿರುದ್ಧ 40% ಕಮಿಷನ್ ಆರೋಪ ಮಾಡಿದ್ದೀರಾ, ನೀವು 5 ಸಾವಿರ ರೂ. ಗಿಫ್ಟ್ ಕೊಡ್ತೀವಿ ಎಂದು ಜನರಿಗೆ ವಂಚನೆ ಮಾಡಿ, ಇದಕ್ಕೆ ನೀವು ಎಷ್ಟು ಪರ್ಸೆಂಟ್ ಕಮಿಷನ್ ಹೊಡೆಯುತ್ತೀರಾ ಹೇಳಿ. ಆರ್​ಆರ್​ ನಗರದಲ್ಲಿ ಕುಸುಮಾ, ಕುಣಿಗಲ್ ಕ್ಷೇತ್ರದಲ್ಲಿ ರಂಗನಾಥ್​​, ರಾಮನಗರದಲ್ಲಿ ಇಕ್ಬಾಲ್​, ಮಾಗಡಿಯಲ್ಲಿ ಬಾಲಕೃಷ್ಣರಿಂದ ಕೂಪನ್ ಹಂಚಿಕೆ ಮಾಡಲಾಗಿದೆ. ಇಂತಹ ಅಕ್ರಮ ಕೂಪನ್​ಗಳಿಂದ ನಮ್ಮ ಪಕ್ಷ ಹಲವೆಡೆ ಸೋತಿದೆ. ನಿಮ್ಮ ಯೋಗ್ಯತೆಗೆ ಈ ರೀತಿ ಚುನಾವಣೆ ನಡೆಸಿ, ನಮ್ಮ ಪಕ್ಷಕ್ಕೆ ವಿಸರ್ಜನೆ ಮಾಡಿ ಅಂತ ಹೇಳ್ತಿರಾ! ಕಾಂಗ್ರೆಸ್​ನ ಅಕ್ರಮ ಕೂಪನ್​ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತನಿಖೆ ನಡೆಸಲಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಆಗ್ರಹಿಸಿದರು.

ಇದನ್ನೂ ಓದಿ:ಹೆಚ್ಚು ಗ್ಯಾರಂಟಿ ಕಾರ್ಡ್ ವಿತರಣೆ ಮಾಡುವವರಿಗೆ ಟಿವಿ ಉಡುಗೊರೆ: ಡಿ.ಕೆ.ಶಿವಕುಮಾರ್ ಘೋಷಣೆ

ಚುನಾವಣೆಗೂ ಮುನ್ನ ನಿನಗೂ ಫ್ರೀ, ನನಗೂ ಫ್ರೀ ಎಂದು ಇದೇ ಸಿಎಂ ಸಿದ್ದರಾಮಯ್ಯ ಅಂದರು, ಮೊದಲ ಸಂಪುಟದಲ್ಲೇ ಎಲ್ಲಾ ಗ್ಯಾರಂಟಿ ಜಾರಿ ಎಂದು ಹೇಳಿದ್ದರು. 200 ಯೂನಿಟ್ ಉಚಿತ ವಿದ್ಯುತ್ ನೀಡುವುದಾಗಿ ಹೇಳಿದ್ದಾರೆ. ರಾಜ್ಯದ ಜನರು ಯಾರೂ ವಿದ್ಯುತ್ ಬಿಲ್ ಕಟ್ಟಬೇಡಿ. ಮಹಿಳೆಯರಿಗೆ ಸರ್ಕಾರಿ ಬಸ್​ಗಳಲ್ಲಿ ಉಚಿತ ಪ್ರಯಾಣ ಅಂದ್ರು, ಈಗ ಈ ಗ್ಯಾರಂಟಿಗಳಿಗೆ ಕಂಡೀಷನ್​ ಇದೆ ಎಂದು ಹೇಳುತ್ತಿದ್ದಾರೆ. ಗ್ಯಾರಂಟಿ ಘೋಷಣೆ ಮುನ್ನವೇ ಯಾಕೆ ಷರತ್ತುಗಳ ಬಗ್ಗೆ ಹೇಳಿಲ್ಲ. ನಿಮ್ಮ ಕುತಂತ್ರದ ರಾಜಕೀಯಕ್ಕೆ ಮುಂದಿನ ದಿನಗಳಲ್ಲಿ ಪಾಠ ಕಲಿಸುತ್ತಾರೆ ಎಂದು ಕಾಂಗ್ರೆಸ್​ ಗ್ಯಾರಂಟಿ ವಿರುದ್ದ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಇನ್ನಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ