ದೇವನಹಳ್ಳಿ: ಹೊಸಕೋಟೆಯಲ್ಲಿ ಬಿಜೆಪಿ ಕಾರ್ಯಕರ್ತ ಕೃಷ್ಣಪ್ಪ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಶರತ್ ಬಚ್ಚೇಗೌಡ (Sharath BacheGowda) ಅವರು ಸಾಕ್ಷ್ಯ ಬಿಡುಗಡೆ ಮಾಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಬೆಂಡಿಗಾನಹಳ್ಳಿಯಲ್ಲಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಸಿಗರು ಬಿಜೆಪಿ ಕಾರ್ಯಕರ್ತನ ಕೊಲೆ ಮಾಡಿದ್ದಾರೆ ಅಂತಿದ್ದಾರೆ. 2 ತಿಂಗಳ ಹಿಂದೆಯಷ್ಟೇ ಕೃಷ್ಣಪ್ಪ, ಗಣೇಶಪ್ಪ ಬಿಜೆಪಿ ಸೇರ್ಪಡೆಯಾಗಿದ್ದರು. ಬಿಜೆಪಿ ಸೇರ್ಪಡೆಯಾಗಿ ಸಚಿವರ ಜತೆ ಫೋಟೋ ತೆಗೆಸಿಕೊಂಡಿದ್ದಾರೆ. ಜೊತೆಗೆ ಅಣ್ಣ, ತಮ್ಮಂದಿರ ನಡುವೆ ಜಮೀನು ವ್ಯಾಜ್ಯ ನಡೆಯುತ್ತಿತ್ತು. ಈ ವಿಚಾರಕ್ಕೆ ಗಲಾಟೆಯಾಗಿ ಕೃಷ್ಣಪ್ಪ ಕೊಲೆ ಆಗಿದೆ. ಅವರ ಪಕ್ಷದವರೇ ಕಿತ್ತಾಡಿಕೊಂಡು ಕಾಂಗ್ರೆಸ್ ಮೇಲೆ ಹಾಕುತ್ತಿದ್ದಾರೆ ಎಂದರು.
ಮಾಜಿ ಸಚಿವರು ತಾಲೂಕಿನಲ್ಲಿ ಶಾಂತಿ ಕದಡಿಸುವ ಕೆಲಸ ಮಾಡುತ್ತಿದ್ದಾರೆ. ಇಂತಹ ಕುತಂತ್ರ ರಾಜಕಾರಣವನ್ನು ಬಿಡಬೇಕು ಎಂದು ಶಾಸಕ ಶರತ್ ಬಚ್ಚೇಗೌಡ ಕಿಡಿಕಾರಿದರು.
ಇದನ್ನೂ ಓದಿ: ನಿನ್ನೆ ಕೊಲೆ, ಇಂದು ಬೋರ್ಡ್ ಧ್ವಂಸ: ಹೊಸಕೋಟೆಯಲ್ಲಿ ಮುಂದುವರಿದ ದ್ವೇಷ ಗಲಭೆ
ಎಂಟಿಬಿ ಕಡೆಯವರು ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದಾರೆ. ಸೋಲಿನ ಹತಾಶೆಯಲ್ಲಿ ಮಹಿಳೆಯರು, ವೃದ್ದರ ಮೇಲೆ ಹಲ್ಲೆ ಮಾಡಿದ್ದಾರೆ. ಆ ಮೂಲಕ ನಮ್ಮ ಕ್ಷೇತ್ರದಲ್ಲಿ ಶಾಂತಿ ಕದಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅಣ್ಣ, ತಮ್ಮಂದಿರ ಜಗಳದ ಕೊಲೆ ಕೇಸ್ ನಮ್ಮ ಮೇಲೆ ಹಾಕಲು ಯತ್ನಿಸುತ್ತಿದ್ದಾರೆ.
ಆ ಮೂಲಕ ಕ್ಷೇತ್ರದಲ್ಲಿ ನಮ್ಮ ಹೆಸರು ಕೆಡಿಸುವ ಕೆಲಸ ಮಾಡುತ್ತಿದ್ದಾರೆ. ದೂರುದಾರರೇ ಸ್ವತಃ ದೂರಿನಲ್ಲಿ ಕಾಂಗ್ರೆಸ್ನವರ ಬಗ್ಗೆ ಉಲ್ಲೇಖ ಮಾಡಿಲ್ಲ ಎಂದು ಎಂಟಿಬಿ ವಿರುದ್ಧ ಶರತ್ ವಾಗ್ದಾಳಿ ಮಾಡಿದರು.
ಬಿಜೆಪಿ ಕಾರ್ಯಕರ್ತನ ಹತ್ಯೆ ಪ್ರಕರಣ ಹಿನ್ನೆಲೆ ಹೊಸಕೋಟೆ ಡಿ.ಶೆಟ್ಟಿಹಳ್ಳಿಯ ಕಾರ್ಯಕರ್ತನ ಮನೆಗೆ ಬಿಜೆಪಿ ನಾಯಕರು ಭೇಟಿ ನೀಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಮಾಜಿ ಸಚಿವರಾದ ಅಶ್ವತ್ಥ್ ನಾರಾಯಣ್ ಹಾಗೂ ಈಶ್ವರಪ್ಪ, ಮಾಜಿ ಸಚಿವ ಭೈರತಿ ಬಸವರಾಜ್ ಮತ್ತು ಎಂಟಿಬಿ ನಾಗರಾಜ್ ಭೇಟಿ ನೀಡಿ, ಕುಟುಂಬಸ್ಥರಿಗೆ ಸಮಾಧಾನ ಮಾಡಿ 5 ಲಕ್ಷ ರೂಪಾಯಿ ಪರಿಹಾರ ನೀಡಿದ್ದಾರೆ.
ಮೇ 13ರಂದು ರಿಸಲ್ಟ್ ಬರ್ತಿದ್ದಂತೆ ರಾತ್ರಿ ಇದೇ ವಿಚಾರವಾಗಿ ಹೊಸಕೋಟೆ ತಾಲೂಕಿನ ಡಿ ಶೆಟ್ಟಿಹಳ್ಳಿಯಲ್ಲಿ ಕೃಷ್ಣಪ್ಪ ಹಾಗೂ ಗಣೇಶಪ್ಪ ಅನ್ನೋ ಸಹೋದರರ ನಡುವೆ ಗಲಾಟೆಯಾಗಿತ್ತು. ನೀನು ಪಕ್ಷದಲ್ಲಿ ಇದ್ದುಕೊಂಡೇ ಬಿಜೆಪಿಗೆ ಮೋಸ ಮಾಡಿದ್ದೀ ಅಂತಾ ಎಂಟಿಬಿ ಬೆಂಬಲಿಗ ಕೃಷ್ಣಪ್ಪ ತನ್ನ ಸಹೋದರನನ್ನ ಪ್ರಶ್ನಿಸಿದ್ದ. ಇಬ್ಬರ ನಡುವಿನ ಜಗಳ ವಿಕೋಪಕ್ಕೆ ಹೋಗಿದ್ದು, ಗಣೇಶಪ್ಪನ ಮಗ ಆದಿತ್ಯಾ ಮತ್ತು ಕೆಲವರು ಕೃಷ್ಣಪ್ಪನ ಮೇಲೆ ದೊಣ್ಣೆಗಳಿಂದ ಹಲ್ಲೆ ನಡೆಸಿದ್ರು. ಕುಡುಗೋಲಿನಿಂದ ಅಟ್ಯಾಕ್ ಮಾಡಿದ್ರು. ಇದ್ರಿಂದ ಗಾಯಗೊಂಡ ಕೃಷ್ಣಪ್ಪನನ್ನ ಆಸ್ಪತ್ರೆಗೆ ಸೇರಿಸಲಾಗಿತ್ತಾದ್ರೂ ಬದುಕುಳಿಯಲಿಲ್ಲ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.