ಹುಬ್ಬಳ್ಳಿ: ತೀವ್ರ ಕುತೂಹಲ ಮೂಡಿಸಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ (hubballi dharwad municipal corporation ) ಮೇಯರ್ ಹಾಗೂ ಉಪಮೇಯರ್ ಚುನಾವಣೆ ಇಂದು(ಜೂನ್ 20) ನಡೆಯಲಿದ್ದು, ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಜೆಪಿ ಹಾಗೂ ಕಾಂಗ್ರೆಸ್ ತೀವ್ರ ಕಸರತ್ತು ನಡೆಸಿವೆ. ಎರಡು ಪಕ್ಷಗಳ ನಾಯಕರು ಈ ಚುನಾವಣೆಯನ್ನು ಜಿದ್ದಿಗೆ ತೆಗೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಒಂದೊಂದು ಮತವು ಸಹ ಈಗ ಬಹುಳ ಮುಖ್ಯವಾಗಿದೆ. ಇದರ ಮಧ್ಯೆ ಕಾಂಗ್ರೆಸ್‌ಗೆ ಒಂದು ಬಿಗ್ ಶಾಕ್ ಆಗಿದೆ. ಹೌದು… ಹು-ಧಾ ಪಾಲಿಕೆ ಮೇಯರ್-ಉಪಮೇಯರ್ ಚುನಾವಣೆಯ ಜನಪ್ರತಿನಿಧಿಗಳ ಮತದಲ್ಲಿ ಕಾಂಗ್ರೆಸ್ ಒಂದು ಮತ ಕಳೆದುಕೊಂಡಿದೆ. ಇದರಿಂದ ಬಿಜೆಪಿಗೆ ಒಂದು ಮತ ಪ್ಲಸ್ ಆಗಿದೆ.
ಇದನ್ನೂ ಓದಿ: ಹು-ಧಾ ಮೇಯರ್-ಉಪಮೇಯರ್ ಗದ್ದುಗೆಗಾಗಿ ಕೈ, ಕಮಲ ಕಸರತ್ತು, ಬಿಜೆಪಿಗೆ ಅಡ್ಡಮತದಾನದ ಭೀತಿ
ಮತದಾನದ ಹಕ್ಕು ಪಡೆಯಲು ಕಾಂಗ್ರೆಸ್ ಹಾಗೂ ಬಿಜೆಪಿ ಇಬ್ಬರು ಜನಪ್ರತಿನಿಧಿಗಳು ಕೋರ್ಟ್ ಮೊರೆ ಹೋಗಿದ್ದರು. ಈ ಪೈಕಿ ಕಾಂಗ್ರೆಸ್‌ಗೆ ಹಿನ್ನಡೆಯಾಗಿದೆ. ಧಾರವಾಡ ಕಾಂಗ್ರೆಸ್ ಶಾಸಕ ವಿನಯ ಕುಲಕರ್ಣಿ ಅವರಿಗೆ ಹುಬ್ಬಳ್ಳಿ ಧಾರವಾಡ ಮೇಯರ್-ಉಪಮೇಯರ್ ಚುನಾವಣೆಯಲ್ಲಿ ಮತದಾನಕ್ಕೆ ಅವಕಾಶ ಸಿಕ್ಕಿಲ್ಲ. ಬದಲಾಗಿ ಬಿಜೆಪಿಯ ಎಂಎಲ್‌ಸಿ ಎಸ್.ವಿ. ಸಂಕನೂರ ಅವರಿಗೆ ಮತದಾನಕ್ಕೆ ಅವಕಾಶ ಸಿಕ್ಕಿದೆ. ಇದರಿಂದ ಜನಪ್ರತಿನಿಧಿಗಳ ಮತದಲ್ಲಿ ಕಾಂಗ್ರೆಸ್‌ಗೆ ಒಂದು ಮತ ಮನಸ್ ಆಗಿದ್ದರೆ, ಬಿಜೆಪಿಗೆ ಒಂದು ಪ್ಲಸ್ ಆಗಿದೆ.
ಹೌದು.. ಯೋಗೀಶಗೌಡ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಧಾರವಾಡ ಜಿಲ್ಲಾ ಪ್ರವೇಶಕ್ಕೆ ಕೋರ್ಟ್ ನಿರ್ಬಂಧ ವಿಧಿಸಿದೆ. ಈ ಹಿನ್ನೆಲೆಯಲ್ಲಿ ಮೇಯರ್-ಉಪಮೇಯರ್ ಮತದಾನಕ್ಕೆ ಅವಕಾಶ ಕೋರಿ ಅರ್ಜಿ ಸಲ್ಲಿಸಿದ್ದರು. ಆದ್ರೆ, ಜನಪ್ರತಿನಿಧಿಗಳ ವಿಶೇಷ ಕೋರ್ಟ್, ಅರ್ಜಿ ತಿರಸ್ಕರಿಸಿದೆ. ಇದರಿಂದ ಕಾಂಗ್ರೆಸ್‌ಗೆ ಒಂದು ಮತ ಕೈತಪ್ಪಿದೆ. ಇನ್ನು ಬಿಜೆಪಿ ಎಂಎಲ್‌ಸಿ ಸಂಕನೂರ ಮತದಾನಕ್ಕೆ ಪಾಲಿಕೆ ನಿರಾಕರಣೆ ಮಾಡಿತ್ತು. ಇದರ ವಿರುದ್ಧವಾಗಿ ಸಂಕನೂರ ಹೈಕೋರ್ಟ್ ಮೊರೆ ಹೋಗಿದ್ದು, ಇದೀಗ ಕೋರ್ಟ್ ಸಹ ಮತದಾನಕ್ಕೆ ಅವಕಾಶ ಮಾಡಿಕೊಟ್ಟಿದೆ. ಇದರಿಂದ ಬಿಜೆಪಿ ಬುಟ್ಟಿಗೆ ಒಂದು ಮತ ಸೇರಿದಂತಾಗಿದೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಒಟ್ಟು 82 ಸದಸ್ಯರ ಬಲ ಹೊಂದಿದ್ದು, ಅಧಿಕಾರ ಹಿಡಿಯಲು 46 ಮತಗಳು ಬೇಕು. ಸದ್ಯ ಬಿಜೆಪಿ ಕಾರ್ಪೊರೇಟರ್ಗಳ ಸಂಖ್ಯೆ 39 ಇದ್ದು, ಕಾಂಗ್ರೆಸ್ 33, ಪಕ್ಷೇತರ 6, AIMIM 3, ಜೆಡಿಎಸ್ 1 ಸ್ಥಾನ ಹೊಂದಿದೆ. ಇನ್ನು 8 ಜನಪ್ರತಿನಿಧಿಗಳು, 4 ಶಾಸಕರು, 1 ಸಂಸದ, 3 ಎಂಎಲ್‌ಸಿ ಪಾಲಿಕೆ ವ್ಯಾಪ್ತಿಯ ಜನಪ್ರತಿನಿಧಿಗಳು ಸೇರಿಸಿ ಒಟ್ಟು 90 ಮತಗಳಿವೆ. ಈಗಾಗಲೇ ಬಿಜೆಪಿಗೆ ಮೂವರು ಪಕ್ಷೇತರ ಸದಸ್ಯರು ಬೆಂಬಲ ಸೂಚಿಸಿದ್ದಾರೆ. ಇದರಿಂದ ಬಿಜೆಪಿ ಬಹುಮತ ಪಡೆದುಕೊಂಡಿದೆ. ಆದ್ರೆ, ಅಡ್ಡಮತದಾನದ ಭೀತಿ ಶುರುವಾಗಿದೆ.
ಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿದ್ದರೆ, ಉಪಮೇಯರ್ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಈ ಎರಡು ಸ್ಥಾನಕ್ಕೆ ಇಂದು (ಜೂನ್ 20) ಬೆಳಗ್ಗೆ 9 ರಿಂದ 11 ಗಂಟೆಯಿಂದ ನಾಮಪತ್ರ ಸಲ್ಲಿಕೆಗೆ ಅವಕಾಶ ಇದ್ದು, ಮಧ್ಯಾಹ್ನ 1ಕ್ಕೆ ಚುನಾವಣೆ ನಡೆಯಲಿದೆ. ಬೆಳಗಾವಿ ಪ್ರಾದೇಶಿಕ ಆಯುಕ್ತ ನಿತೇಶ ಪಾಟೀಲ್ ಈ ಚುನಾವಣೆಯನ್ನು ನಡೆಯಿಸಿ ಕೊಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಚುನಾವಣೆಯಲ್ಲಿ ಯಾರಿಗೆ ಗೆಲುವಾಗಲಿದೆ ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ.