AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಷರತ್ತು ನೆಪದಲ್ಲಿ ಜನರನ್ನು ಸತಾಯಿಸುವುದು ನ್ಯಾಯವಲ್ಲ: ಹೆಚ್​ಡಿ ಕುಮಾರಸ್ವಾಮಿ

ತಾನು ಘೋಷಿಸಿದ ಪಂಚ ಗ್ಯಾರಂಟಿಗಳಿಗೆ ಷರತ್ತು ವಿಧಿಸಲು ಹೋಗುತ್ತಿರುವ ಕಾಂಗ್ರೆಸ್ ನಡೆಯನ್ನು ಟೀಕಿಸಿದ ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸಹಿ ಮಾಡಿಕೊಟ್ಟ ಕಾರ್ಡ್​​ಗಳು ಜನರ ಬಳಿ ಇವೆ ಎಂದಿದ್ದಾರೆ.

ಷರತ್ತು ನೆಪದಲ್ಲಿ ಜನರನ್ನು ಸತಾಯಿಸುವುದು ನ್ಯಾಯವಲ್ಲ: ಹೆಚ್​ಡಿ ಕುಮಾರಸ್ವಾಮಿ
ಹೆಚ್​ಡಿ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ
Rakesh Nayak Manchi
|

Updated on: May 30, 2023 | 3:00 PM

Share

ಬೆಂಗಳೂರು: ತಾನು ಘೋಷಿಸಿದ ಪಂಚ ಗ್ಯಾರಂಟಿಗಳಿಗೆ ಷರತ್ತು ವಿಧಿಸಲು ಹೋಗುತ್ತಿರುವ ಕಾಂಗ್ರೆಸ್ ನಡೆಯನ್ನು ಟೀಕಿಸಿದ ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿ (HD Kumaraswamy), ಚುನಾವಣೆಗೂ ಮುನ್ನ ಗ್ಯಾರಂಟಿ ಬಗ್ಗೆ ಕಾಂಗ್ರೆಸ್​​ನವರು ಅಬ್ಬರಿಸಿದ್ದಾರೆ. ಈಗ ಮೀನಾಮೇಷ ಎಂದರೆ ರಾಜ್ಯದ ಜನ ಒಪ್ಪುವರೇ? ಸಿದ್ದರಾಮಯ್ಯ (Siddaramaiah), ಡಿಕೆ ಶಿವಕುಮಾರ್ (DK Shivakumar) ಸಹಿ ಮಾಡಿಕೊಟ್ಟ ಕಾರ್ಡ್​​ಗಳು ಜನರ ಬಳಿ ಇವೆ. ಕಾಂಗ್ರೆಸ್​ಗೆ 135 ಸೀಟು ಕೊಟ್ಟ ಜನತೆಯ ಬೇಡಿಕೆಯಲ್ಲಿ ನ್ಯಾಯವಿದೆ. 5 ಗ್ಯಾರಂಟಿಗಳನ್ನು ಜಾರಿಗೊಳಿಸುವುದು ಕಾಂಗ್ರೆಸ್ ಸರ್ಕಾರದ ಜವಾಬ್ದಾರಿ ಎಂದು ಹೇಳಿದ್ದಾರೆ.

ಸರಣಿ ಟ್ವೀಟ್ ಮಾಡಿದ ಕುಮಾರಸ್ವಾಮಿ, “ಕಾಂಗ್ರೆಸ್​ಗೆ 135 ಸೀಟು ಕೊಟ್ಟ ಜನತೆಯ ‘ಗ್ಯಾರಂಟಿ ಬೇಡಿಕೆ’ಯಲ್ಲಿ ನ್ಯಾಯವಿದೆ. 5 ಗ್ಯಾರಂಟಿ ಜಾರಿ ಕಾಂಗ್ರೆಸ್ ಸರಕಾರದ ಜವಾಬ್ದಾರಿ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಆಗುವುದಕ್ಕೆ ಮುನ್ನ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರೇ ಸಹಿ ಮಾಡಿಕೊಟ್ಟ ಕಾರ್ಡುಗಳು ಜನರ ಬಳಿ ಇವೆ. ಆ ಗ್ಯಾರಂಟಿಗಳಿಗೆ ಗ್ಯಾರಂಟಿಯೇ ಇಲ್ಲವೇ?” ಎಂದು ಪ್ರಶ್ನಿಸಿದ್ದಾರೆ.

“ದಿನನಿತ್ಯವೂ ಗ್ಯಾರಂಟಿಗಳ ಬಗ್ಗೆ ಜನರಲ್ಲಿ ನಿರೀಕ್ಷೆಯೂ ಮೇರೆ ಮೀರುತ್ತದೆ, ಆಕ್ರೋಶವೂ ಹೆಚ್ಚುತ್ತಿದೆ. ಜನಾಕ್ರೋಶಕ್ಕೆ ಸಬೂಬು ಸರಿಯಲ್ಲ. ಏಕೆಂದರೆ, ನಿರೀಕ್ಷೆ ಮೂಡಿಸಿದ್ದು ಇವರೇ. ಈಗ ಷರತ್ತು ನೆಪದಲ್ಲಿ ಜನರನ್ನು ಸತಾಯಿಸುವುದು ನ್ಯಾಯವಲ್ಲ. ಗ್ಯಾರಂಟಿಗಳ ಬಗ್ಗೆ ಮಾಧ್ಯಮಗಳಲ್ಲಿ ಅಬ್ಬರಿಸಿದ ಇವರೇ, ಈಗ ಮೀನಾಮೇಷ ಎಂದರೆ ಜನ ಒಪ್ಪುವರೇ” ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಇದನ್ನೂ ಓದಿ: ಉಚಿತ ಬಸ್ ಪ್ರಯಾಣ ಗ್ಯಾರಂಟಿಗೆ ಕಿಮೀ ಮಿತಿ ನಿಗದಿಗೆ ಚಿಂತನೆ; ಫಲಾನುಭವಿಗಳ ಪಟ್ಟಿ ನೀಡುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ

“ನನಗೂ ಫ್ರೀ, ನಿನಗೂ ಫ್ರೀ, ಸರ್ವರಿಗೂ ಫ್ರೀ ಎಂದ ಮುಖ್ಯಮಂತ್ರಿಗಳಿಗೆ ಈಗ ಗ್ಯಾರಂಟಿಗಳ ಬಗ್ಗೆ ದಿವ್ಯಮೌನವೇಕೆ? ಅವರ ಅಕ್ಕಪಕ್ಕದವರ ಹೇಳಿಕೆಗಳನ್ನು ಜನರು ನಂಬುತ್ತಿಲ್ಲ. ಮುಖ್ಯಮಂತ್ರಿಗಳೇ ಜನರಿಗೆ ನೇರವಾಗಿ ಹೇಳಲಿ, ಜನರಲ್ಲಿ ವಿಶ್ವಾಸ ಮೂಡಿಸಲಿ” ಎಂದರು.

“ಮಾಧ್ಯಮಗಳಲ್ಲಿ ಕಾಂಗ್ರೆಸ್ ಕೊಟ್ಟ ‘ಗ್ಯಾರಂಟಿ ಜಾಹೀರಾತು’ಗಳೂ ಇನ್ನೂ ಜನಮಾನಸದಿಂದ ಮಾಸಿಲ್ಲ. ಅದೇ ರೀತಿ ಸ್ವತಃ ಮುಖ್ಯಮಂತ್ರಿಗಳೇ ಜೂನ್ 1ಕ್ಕೆ ಜಾರಿ ಮಾಡುವ ಬಗ್ಗೆ ಜಾಹೀರಾತು ನೀಡಿ ಜನರಿಗೆ ಖಾತರಿ ಕೊಡಲಿ. ವಿಳಂಬದಿಂದ ಸರಕಾರದ ವಿಶ್ವಾಸಾರ್ಹತೆಗೆ ಪೆಟ್ಟು ಬೀಳುವುದೇ ಹೆಚ್ಚು. ಜನರಿಗೆ ಅಭದ್ರತೆಯ ಗ್ಯಾರಂಟಿ ಬೇಡವೇ ಬೇಡ” ಎಂದು ಹೇಳಿದ್ದಾರೆ.

“ಅದು ಬಿಟ್ಟು ‘ಕೆಲ ಸಚಿವರು, ಶಾಸಕ’ರನ್ನು ನನ್ನ ಮೇಲೆ ಛೂ ಬಿಟ್ಟರೆ ಪ್ರಯೋಜನವಿಲ್ಲ. ಅಂಥ ರಾಜಕಾರಣ ಉಪಯೋಗವೂ ಇಲ್ಲ. ಗ್ಯಾರಂಟಿಗಳ ಬಗ್ಗೆ ಜನಕ್ಕೆ ಬೆಟ್ಟದಷ್ಟು ನಿರೀಕ್ಷೆ ಇದೆ. ಜಾರಿ ಮಾಡಿ, ಅದರ ಹೊರತಾಗಿ ಈ ಭರವಸೆಗಳೇ ಅಗಮ್ಯಗೋಚರವಾಗಿ ಗಮ್ಯವೇ ಇಲ್ಲದ ಆಡಳಿತ ಕೊಡುವುದು ಬೇಡ. ಇಷ್ಟೇ ನನ್ನ ಕಾಳಜಿ” ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ