ಬೆಂಗಳೂರು: ರಾಜ್ಯದಲ್ಲಿ ಕೊರೊನಾ (Coronavirus) ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಕರ್ನಾಟಕ ಸರ್ಕಾರ ಕಠಿಣ ನಿಯಮಗಳನ್ನ ಜಾರಿಗೊಳಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar), ಇದು ಕೊವಿಡ್ ಲಾಕ್ಡೌನ್, ಕೊವಿಡ್ ಕರ್ಫ್ಯೂ ಅಲ್ಲ. ಇದು ಬಿಜೆಪಿ ಕರ್ಫ್ಯೂ, ಬಿಜೆಪಿಯ ಲಾಕ್ಡೌನ್ ಅಂತ ಹೇಳಿದ್ದಾರೆ. ಅವರಿಗೆ ರಾಜಕಾರಣ ಮಾಡಲು ಈಗ ಟಫ್ ಆಗುತ್ತಿದೆ. ತಮ್ಮ ರಾಜಕಾರಣಕ್ಕಾಗಿ ಟಫ್ ರೂಲ್ಸ್ ತಂದಿದ್ದಾರೆ. ಮೆರವಣಿಗೆ ಮಾಡಬೇಡಿ, ಪ್ರತಿಭಟನೆ ಮಾಡಬೇಡಿ ಅಂದಿದ್ದಾರೆ. ನಾವು ಮೆರವಣಿಗೆ ಮಾಡಲ್ಲ, ನೀರಿಗಾಗಿ ನಡೆಯುತ್ತೇವೆ ಅಂತ ಡಿಕೆಶಿ ತಿಳಿಸಿದ್ದಾರೆ.
ನಾವು ಕುಡಿಯುವ ನೀರಿಗಾಗಿ ನಡೆಯುತ್ತೇವೆ. ನಾವು ವಾಕ್ ಫಾರ್ ವಾಟರ್ ಮಾಡುತ್ತೇವೆ. ಅವರಿಗೂ ಕಾವೇರಿ ನೀರು ಕುಡಿಸುತ್ತೇವೆ. ವರ್ತಕರು, ವ್ಯಾಪಾರಿಗಳ ಮೇಲೆ ಗದಾಪ್ರಹಾರ ಮಾಡುತ್ತಿದ್ದಾರೆ. ರಾಜಕಾರಣ, ನಮ್ಮ ಮೇಲಿನ ದ್ವೇಷಕ್ಕೆ ವೀಕೆಂಡ್ ಲಾಕ್ಡೌನ್ ಜಾರಿಗೊಳಿಸಿದ್ದಾರೆ. ನೈಟ್ ಕರ್ಫ್ಯೂ ಜಾರಿಮಾಡಿ ಸಾಮಾನ್ಯರ ಮೇಲೆ ಗದಾಪ್ರಹಾರ ನಡೆಸಿದ್ದಾರೆ. ಈ ಸರ್ಕಾರ ವರ್ತಕರ ಕೊಲೆ ಮಾಡುವುದೊಂದು ಬಾಕಿಯಿದೆ ಅಂತ ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಹೇಳಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಯಾರೂ ನಡೆಯದಂತೆ ನೋಡಿಕೊಳ್ಳಲು ಆಗುತ್ತಾ. ಅವರಿಗೆ ಜನರ ಪ್ರಾಣ ಮುಖ್ಯವಿಲ್ಲ, ಅವರ ಪಕ್ಷ ಮುಖ್ಯವಾಗಿದೆ. ಮೊದಲ ಅಲೆಯಲ್ಲಿ ಸ್ವಿಮ್ಮಿಂಗ್ ಪೂಲ್ಗೆ ಇಳಿದಿದ್ದರಲ್ಲ. ಸಚಿವ ಸುಧಾಕರ್ ವಿರುದ್ಧ ಮೊದಲು ಪ್ರಕರಣ ದಾಖಲಿಸಲಿ. ಸಚಿವ ಶ್ರೀರಾಮುಲು, ಬಿಎಸ್ವೈ ವಿರುದ್ಧ ಕೇಸ್ ದಾಖಲಿಸಲಿ. ಸಿಎಂ ಮದುವೆಯಲ್ಲಿ ಭಾಗಿಯಾಗಿದ್ದರಲ್ಲ ಕೇಸ್ ದಾಖಲಿಸಲಿ ಅಂತ ಡಿಕೆಶಿ ಹೇಳಿದ್ದಾರೆ.
ಬೆಂಗಳೂರಿನ ಜನರಿಗೆ ನೀರು ಸಿಗಲು ಪ್ರಾರ್ಥನೆ ಮಾಡಲು ನಡೆಯುತ್ತೇವೆ. ನಮ್ಮದು ಪ್ರತಿಭಟನೆ ಅಲ್ಲ ಪ್ರಾರ್ಥನೆ. ನಾವು ಧರಣಿ ಮಾಡುತ್ತಿಲ್ಲ. ಯಾವ ಬದಲಾವಣೆ ಇಲ್ಲ. ಈಗಾಗಲೇ ಶಾಸಕಾಂಗ ಪಕ್ಷದ ನಾಯಕರ ಹತ್ತಿರ ಮಾತನಾಡಿದ್ದೇನೆ. ನಿಯಮದ ಪ್ರಕಾರವೇ ನಡೆಯುತ್ತೇವೆ. ನಮ್ಮ ಮೇಲಿನ ರಾಜಕಾರಣಕ್ಕಾಗಿ ಈ ರೀತಿ ಮಾಡುತ್ತಿದ್ದಾರೆ ಅಂತ ಶಿವಕುಮಾರ್ ಅಭಿಪ್ರಾಯಪಟ್ಟರು
ಇದನ್ನೂ ಓದಿ
ಬಳ್ಳಾರಿಯ ವಿಮ್ಸ್ ವೈದ್ಯಕೀಯ ಕಾಲೇಜಿನಲ್ಲಿ ಕೊರೊನಾ ಸ್ಫೋಟ; 21 ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆ
Published On - 11:50 am, Wed, 5 January 22