ಬೆಂಗಳೂರು, (ಜನವರಿ 25): ದೆಹಲಿಯಲ್ಲಿ ಬಿಜೆಪಿ ಸೇರ್ಪಡೆಯಾಗಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಇದೀಗ ಬೆಂಗಳೂರಿಗೆ ಬಂದಿಳಿದಿದ್ದಾರೆ. ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಶೆಟ್ಟರ್ ಅವರನ್ನು ಬಿಜೆಪಿ ಕಾರ್ಯಕರ್ತರು ಸ್ವಾಗತಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶೆಟ್ಟರ್, ಬಿಜೆಪಿ ನಮ್ಮ ಮನೆ, ವಾಪಸ್ ಬಂದಿರುವುದು ಬಹಳ ಸಂತಸವಾಗುತ್ತಿದೆ.ಬಿಜೆಪಿ ರಾಷ್ಟ್ರೀಯ ನಾಯಕರು ಗೌರವದಿಂದ ಪಕ್ಷಕ್ಕೆ ಸ್ವಾಗತಿಸಿದ್ದಾರೆ. ನಾನು ಬಿಜೆಪಿಗೆ ಮರಳಲು ಪವರ್ಫುಲ್ ನಾಯಕ ಮೋದಿಯೇ ಕಾರಣ ಎಂದಿದ್ದಾರೆ.
ಬಿಜೆಪಿ ರಾಷ್ಟ್ರೀಯ ನಾಯಕರು ಗೌರವದಿಂದ ಪಕ್ಷಕ್ಕೆ ಸ್ವಾಗತಿಸಿದ್ದಾರೆ. ನಾನು ಬಿಜೆಪಿಗೆ ಮರಳಲು ಪವರ್ಫುಲ್ ನಾಯಕ ಮೋದಿಯೇ ಕಾರಣ. ಗೌರವ ಸಿಕ್ಕಿಲ್ಲವೆಂದು ಪಕ್ಷ ಬಿಟ್ಟಿದ್ದೆ, ಇಂದು ಪಕ್ಷ ಗೌರವ ಕೊಟ್ಟಿದೆ. ಕಾಂಗ್ರೆಸ್ ಪಕ್ಷದಲ್ಲೂ ಗೌರವವಿತ್ತು, ಆದರೆ ಅದು ನಮ್ಮ ಮನೆಯಲ್ಲ. ನಮ್ಮ ಮನೆಗೆ ವಾಪಸ್ ಬಂದಿರುವುದು ನನಗೆ ತುಂಬಾ ಖುಷಿಕೊಟ್ಟಿದೆ ಎಂದು ಹೇಳಿದರು.
ಇನ್ನು ಇದೇ ವೇಲೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮಾತನಾಡಿ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಬಿಜೆಪಿಗೆ ಮರಳಿದ್ದಾರೆ. ಕರ್ನಾಟಕದಲ್ಲಿ ಇನ್ಮುಂದೆ ಕಾಂಗ್ರೆಸ್ ಪಕ್ಷದ ಕೈಚಳಕ ನಡೆಯುವುದಿಲ್ಲ ಎಂಬ ಸ್ಪಷ್ಟ ಸಂದೇಶ ಇದರಿಂದ ಕೊಟ್ಟಂತಾಗಿದೆ. ರಾಜ್ಯದಲ್ಲಿ 28ಕ್ಕೆ 28 ಲೋಕಸಭಾ ಸ್ಥಾನ ಗೆಲ್ಲುವ ಸ್ಪಷ್ಟ ಸೂಚನೆ ಇದಾಗಿದೆ ಎಂದು ತಿಳಿಸಿದರು. ಮುಂದೆ ಯಾವಾಗ ವಿಧಾನಸಭಾ ಚುನಾವಣೆ ನಡೆದರೂ ಸ್ಪಷ್ಟ ಬಹುಮತದೊಂದಿಗೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಶ್ರಮಿಸುತ್ತೇವೆ. ಈ ರಾಜಕೀಯ ಬೆಳವಣಿಗೆ ವಿಚಾರದಲ್ಲಿ ನಮ್ಮ ಪಕ್ಷದ ಎಲ್ಲ ಕಾರ್ಯಕರ್ತರು, ಮುಖಂಡರು ಸಂತಸದಿಂದಿದ್ದಾರೆ ಎಂದೂ ಅವರು ತಿಳಿಸಿದರು. ಬಿಜೆಪಿ ಕರ್ನಾಟಕದ ಭದ್ರಕೋಟೆ ಎಂದು ಸಾಬೀತು ಪಡಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಳಿಕ ಶೆಟ್ಟರ್ ಅವರು ಬೆಂಗಳೂರಿನ ಕುಮಾರಕೃಪಾ ದಕ್ಷಿಣದಲ್ಲಿರುವ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ನಿವಾಸಕ್ಕೆ ಭೇಟಿ ನೀಡಿ ರಾಜೀನಾಮೆ ಪತ್ರ ನೀಡಿದರು. ಖುದ್ದು ಬಂದು ರಾಜೀನಾಮೆ ಪತ್ರ ನೀಡುವಂತೆ ಹೊರಟ್ಟಿ ಸೂಚಿಸಿದ್ದರು. ಅದರಂತೆ ಇದೀಗ ಶೆಟ್ಟರ್ ಅವರು ತಮ್ಮ ಲೆಟರ್ ಹೆಡ್ನಲ್ಲಿ ಟೈಪ್ ಮಾಡದೇ ಹಸ್ತಾಕ್ಷರದಲ್ಲಿ ಬರೆದ ರಾಜೀನಾಮೆ ಪತ್ರ ಸಲ್ಲಿಸಿದರು.
Published On - 10:31 pm, Thu, 25 January 24