ತುಮಕೂರು: ಆರೋಗ್ಯದ ನೆಪವೊಡ್ಡಿ ಹಾಗೂ ತನ್ನನ್ನು ಚುನಾವಣೆಗೆ ನಿಲ್ಲಲು ಕುಟುಂಬಸ್ಥರು ಒಪ್ಪುತ್ತಿಲ್ಲ ಎನ್ನುತ್ತಾ ಮಧುಗಿರಿ ಹಾಲಿ ಶಾಸಕ ವೀರಭದ್ರಯ್ಯ ಅವರು ರಾಜಕೀಯ ನಿವೃತ್ತಿ ಘೋಷಿಸಿದ್ದರು. ಆದರೆ ಇದರ ಹಿಂದೆ ಎಚ್ಡಿ ಕುಮಾರಸ್ವಾಮಿ ಅವರು ಹೂಡಿದ ಚುನಾವಣ ರಣತಂತ್ರವೂ ಅಡಗಿದೆ. ಮಧುಗಿರಿ ಮೇಲೆ ವಿಶೇಷ ಆಸಕ್ತಿ ವಹಿಸಿರುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಕಾಂಗ್ರೆಸ್ನ ಮಾಜಿ ಶಾಸಕ ಕೆಎನ್ ರಾಜಣ್ಣ ವಿರುದ್ಧ ಪ್ರಬಲ ಅಭ್ಯರ್ಥಿ ನಿಲ್ಲಿಸಲು ಯೋಜನೆ ಹಾಕಿಕೊಂಡಿದ್ದಾರೆ. 2019 ರ ಲೋಕಸಭಾ ಚುನಾವಣೆಯ ದೇವೆಗೌಡರ ಸೋಲು ಹಾಗೂ ವಿಧಾನಪರಿಷತ್ ಚುನಾವಣೆಯ ಅಭ್ಯರ್ಥಿ ಸೋಲು, ಜೊತೆಗೆ ತಮ್ಮ ಬಗ್ಗೆ ಹಾಗೂ ತಂದೆ ದೇವೆಗೌಡರ ಬಗ್ಗೆ ಲಘುವಾಗಿ ಮಾತನಾಡಿದ್ದ ರಾಜಣ್ಣರನ್ನ ಸೋಲಿಸಲು ಕುಮಾರಸ್ವಾಮಿ ಅವರು ಈ ಚುನಾವಣ ರಣತಂತ್ರ ರೂಪಿಸಿದ್ದಾರೆ.
ರಾಜಣ್ಣ ಅವರನ್ನು ಮಣಿಸಲು ಸಜ್ಜಾಗಿರುವ ಕುಮಾರಸ್ವಾಮಿ ಅವರು ಈಗಾಗಲೇ ಕಣಕ್ಕಿಳಿದಿದ್ದು, ಮಧುಗಿರಿ ಕ್ಷೇತ್ರದಲ್ಲಿ ಹಿಂದುಳಿದ ವರ್ಗದ ಪ್ರಬಲ ಅಭ್ಯರ್ಥಿಯನ್ನ ನಿಲ್ಲಿಸಲು ದಳಪತಿಗಳ ಚರ್ಚೆಯೂ ನಡೆದಿದೆ. ಇದರ ಮುಂದುವರಿದ ಭಾಗವಾಗಿ ಕ್ಷೇತ್ರದ ಅಭಿಪ್ರಾಯವನ್ನು ಕುಮಾರಸ್ವಾಮಿ ಅವರು ಸಂಗ್ರಹಿಸುತ್ತಿದ್ದಾರೆ. ಇದನ್ನರಿತ ಹಾಲಿ ಶಾಸಕ ವೀರಭದ್ರಯ್ಯ ತಾವೇ ಚುನಾವಣೆ ಕಣದಿಂದ ಹಿಂದೆ ಸರಿಯುವ ಮಾತನಾಡಿದ್ದಾರೆಂದು ಮಾತುಗಳು ಕೇಳಿಬರುತ್ತಿವೆ. ಇನ್ನೊಂದೆಡೆ, ವೀರಭದ್ರಯ್ಯ ಅವರು ಕುಮಾರಸ್ವಾಮಿ ಏನು ಹೇಳುತ್ತಾರೆಯೋ ಹಾಗೆ ನಡೆಯಲು ಬದ್ಧ ಎಂದಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಶಾಸಕರು ಹೇಳಿದ್ದಾರೆ.
ಕುತೂಹಲ ಮೂಡಿಸಿದ ಶಾಸಕರ ಹೇಳಿಕೆ
ರಾಜಕೀಯ ನಿವೃತ್ತಿ ಘೋಷಣೆ ಮಾಡಿದ ಬೆನ್ನಲ್ಲೆ ಕೆ.ಎನ್.ರಾಜಣ್ಣ ಅವರನ್ನು ಶಾಸಕ ವೀರಭದ್ರಯ್ಯ ಅವರು ಹೊಗಳಿರುವುದು ಕುತೂಹಲ ಮೂಡಿಸಿದೆ. ರಾಜಣ್ಣ ಅವರಿಗೆ ತಕ್ಕ ಉತ್ತರ ಕೊಡಲು ನನ್ನ ಬಗ್ಗೆ ಏನು ಟೀಕೆ ಮಾಡಿದ್ದಾರೆ ಎಂದು ಪ್ರಶ್ನಿಸಿದ ವೀರಭದ್ರಯ್ಯ, ನನ್ನ ಬಗ್ಗೆಯಾಗಲಿ, ಪಕ್ಷದ ಬಗ್ಗೆಯಾಗಲಿ ವೈಯುಕ್ತಿಕವಾಗಿ ದ್ವೇಷ ಸಾಧಿಸಲಿಲ್ಲ. ಒಂದು ಬಾರಿ ಗೌಡರ ಬಗ್ಗೆ ಮಾತನಾಡಿದ್ದರು. ನಾವೆಲ್ಲಾ ಸೇರಿ ಪ್ರತಿಭಟನೆ ಮಾಡಿದ್ದೆವು ಎಂದರು.
ಹಿಂದಿನ ಚುನಾವಣೆಯಲ್ಲಿ ಅವರು ದ್ವೇಷ ಸಾಧಿಸಿ ಫಲ ಉಂಡಿದ್ದರು. ಅದಾದ ಮೇಲೆ ಅವರು ಸರಿಯಾದ ರೀತಿಯಲ್ಲಿ ನಡೆದುಕೊಂಡಿದ್ದರು. ಕುಮಾರಸ್ವಾಮಿ ನಾವು ಅವರು ಕಾದಾಡುವಂತೆ ಏನ್ ಮಾಡಿಲ್ಲ. ಪಕ್ಷ ಸಂಘಟನೆ ಮಾಡೋದು ಕೊನೆಯ ಒಂದು ವರ್ಷ ಬಾಕಿ ಇರುವಾಗ. ನನಗೆ ಆರೋಗ್ಯ ಸರಿ ಇಲ್ಲ, ನನ್ನ ಮನೆಯಲ್ಲಿ ಒಪ್ಪುತ್ತಿಲ್ಲ. ಮತ್ತೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಮನೆ ಎರಡು ಭಾಗ ಮಾಡಿಕೊಳ್ಳಲು ತಯಾರಿಲ್ಲ. ನನ್ನ ನಿರ್ಧಾರವನ್ನ ನಾನು ಈಗಾಗಲೇ ಹೇಳಿದ್ದೇನೆ. ನಿರ್ಧಾರದಿಂದ ಹಿಂದೆ ಸರಿದರೆ ನಾನು ಸಣ್ಣವನಾಗುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ.
ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:43 am, Fri, 7 October 22