ಭಾರತ್ ಜೋಡೋಗೆ ಬೈ..ಬೈ ಹೇಳಿ ಹೋದ ಕಾಂಗ್ರೆಸ್ ಅಧಿನಾಯಕಿ: ಅರ್ಧ ದಿನದ ಯಾತ್ರೆಯಲ್ಲಿ ಸೋನಿಯಾ ಮೇನಿಯಾ ಹೇಗಿತ್ತು ನೋಡಿ
ಭಾರತ್ ಜೋಡೋಗೆ ಬೈ..ಬೈ ಹೇಳಿ ಹೋದ ಕಾಂಗ್ರೆಸ್ ಅಧಿನಾಯಕಿ ದೆಹಲಿಗೆ ವಾಪಸ್ ಆಗಿದ್ದಾರೆ. ಇನ್ನು ಅರ್ಧ ದಿನದ ಯಾತ್ರೆಯಲ್ಲಿ ಸೋನಿಯಾ ಮೇನಿಯಾ ಹೇಗಿತ್ತು ನೋಡಿ
ಮೈಸೂರು: ದೇಶದಲ್ಲಿ ಒಗ್ಗಟ್ಟು ಮೂಡಿಸುವ ಅಭಿಲಾಷೆಯೊಂದಿಗೆ ತಮಿಳುನಾಡಿನ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್ ಜೋಡೋ ಯಾತ್ರೆ (Bharat Jodo Yatra)ಹೆಸರಿನಲ್ಲಿ ಪಾದಯಾತ್ರೆ ಕೈಗೊಂಡಿರುವ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರು 20 ದಿನಗಳ ಕಾಲ ಕೇರಳದಲ್ಲಿ ಯಾತ್ರೆ ನಡೆಸಿ ಇದೀಗ ಕರ್ನಾಟಕದಲ್ಲೂ ಮುಂದುವರಿಸಿದ್ದಾರೆ. ಇದಕ್ಕೆ ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಸಾಥ್ ನೀಡಿ, ಇದೀಗ ದೆಹಲಿಗೆ ವಾಪಸ್ ಆಗಿದ್ದಾರೆ.
ಹೌದು….ಪುತ್ರ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಇಂದು(ಅ.06) ಸೋನಿಯಾ ಗಾಂಧಿ ಭಾಗವಹಿಸಿದ್ರು. ನಾಯಕರು, ಕಾರ್ಯಕರ್ತರ ನಡುವೆ ಅರ್ಧ ದಿನ ಹೆಜ್ಜೆ ಹಾಕಿ ವಾಪಸ್ ದೆಹಲಿಗೆ ಮರಳಿದ್ದಾರೆ.
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಕರಾಡಿಯಾ ಗ್ರಾಮದಲ್ಲಿ ಭಾರತ್ ಜೋಡೋ ಯಾತ್ರೆಗೆ ಬೈ ಹೇಳಿದ ಸೋನಿಯಾ ಗಾಂಧಿ, ರಸ್ತೆ ಮಾರ್ಗವಾಗಿ ಮೈಸೂರಿಗೆ ವಿಮಾನ ನಿಲ್ದಾಣಕ್ಕೆ ತೆರೆಳಿ ಅಲ್ಲಿಂದ ವಿಶೇಷ ವಿಮಾನದಲ್ಲಿ ದೆಹಲಿಗೆ ಪ್ರಯಾಣ ಬೆಳೆಸಿದರು. ಇನ್ನು ಪುತ್ರನ ಯಾತ್ರೆಯಲ್ಲಿ ಭಾಗವಹಿಸಿ ಮತ್ತಷ್ಟು ಬಲ ನೀಡಿದ ಸೋನಿಯಾ ಅವರ ಅರ್ಧ ದಿನ ಯಾತ್ರೆ ಹೇಗಿತ್ತುಎನ್ನುವುದು ಈ ಕೆಳಗಿನಂತಿದೆ ನೋಡಿ.
ಸೋನಿಯಾ ಅರ್ಧ ದಿನ ಯಾತ್ರೆ ಹೇಗಿತ್ತು? ಭಾರತ್ ಜೋಡೋ ಯಾತ್ರೆಯ ಐದನೇ ದಿನ ಮಂಡ್ಯದಲ್ಲಿ ಭರದಿಂದ ಸಾಗಿದ್ದು, ಇದರಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಪಾಲ್ಗೊಂಡಿದ್ರು. ಬೆಳಗ್ಗೆ ಪಾಂಡವಪುರದ ಹೆಳ್ಳಾಳೆ ಗ್ರಾಮದಿಂದ ಯಾತ್ರ ಆರಂಭವಾಯ್ತು. ಆದ್ರೆ, ಸೋನಿಯಾ ಗಾಂಧಿ ಜಕ್ಕನಹಳ್ಳಿಯಿಂದ ಯಾತ್ರೆಯಲ್ಲಿ ಭಾಗವಹಿಸಿ ಹೆಜ್ಜೆ ಹಾಕಿದರು. ಸ್ವಲ್ಪ ಹೊತ್ತು ಪುತ್ರ ರಾಹುಲ್ ಗಾಂಧಿ ಹಾಗೂ ರಾಜ್ಯ ನಾಯಕರೊಂದಿಗೆ ಪಾದಯಾತ್ರೆ ಮಾಡಿದ ಸೋನಿಯಾ ಅವರನ್ನು ನೋಡಲು ಕಾಂಗ್ರೆಸ್ ಕಾರ್ಯಕರ್ತರು ಮುಗಿಬಿದ್ರು. ನಂತರ ಸೋನಿಯಾ ಗಾಂಧಿ ಯಾತ್ರೆಯಲ್ಲಿ ಹೆಜ್ಜೆ ಹಾಕುತ್ತ ದೂರದಿಂದ ನಿಂತು ನೋಡುತ್ತಿದ್ದ ಜನರತ್ತ ಕೈ ಮಾಡುತ್ತಿದ್ರು. ಅಲ್ಲದೇ ಒಂದೆಡೆ ಮಹಿಳೆಯರ ಬಳಿ ಹೋಗಿ ಮಾತನಾಡಿದ ಪ್ರಸಂಗವೂ ಸಹ ನಡೆಯಿತು.
ಬಳಿಕ ಆರೋಗ್ಯದ ದೃಷ್ಟಿಯಿಂದ ಸ್ವಲ್ಪವೇ ನಡೆದು ರಾಹುಲ್ ಗಾಂಧಿ ಒತ್ತಾಯದ ಮೇರೆಗೆ ಸೋನಿಯಾ ಗಾಂಧಿ ವಾಪಸ್ ಆದರು. ಬೆಳಗ್ಗೆ 9.03ಕ್ಕೆ ಮಾಣಿಕ್ಯನಹಳ್ಳಿ ಗೇಟ್ ಮುಂಭಾಗ ಪಾದಯಾತ್ರೆಗೆ ಸೇರ್ಪಡೆಗೊಂಡ ಸೋನಿಯಾ ಗಾಂಧಿ ಅವರು ಸುಮಾರು ಒಂದೂವರೆ ಕಿಮೀ ನಷ್ಟು ನಡೆದು ಅಮೃತಿ ಗ್ರಾಮದ ಬಳಿ ಹೋಗುತ್ತಿದ್ದರು. ಈ ವೇಳೆ ಸೋನಿಯಾ ಅವರನ್ನು ತಡೆದ ರಾಹುಲ್ ಗಾಂಧಿ ಸಾಕು, ಬೇಡ.. ನಿಮ್ಮಿಂದ ಆಗಲ್ಲ ಎಂದರು. ಆಗ ಇನ್ನೊಂದಿಷ್ಟು ದೂರ ನಡೆಯುತ್ತೇನೆ ಎಂದು ಸೋನಿಯಾ ಗಾಂಧಿ ಕೇಳಿದರು. ಆದರೆ, ಬೇಡ ಎಂದು ಸೋನಿಯಾ ಅವರನ್ನು ಕಾರ್‌ನಲ್ಲಿ ಹತ್ತಿಸಿ ವಾಪಸ್ ಕಳುಹಿಸಿದರು.
ನೆಲಕ್ಕೆ ಬಿದ್ದ ಬಾಲಕಿಯನ್ನು ಮೇಲೆತ್ತಿದ ಸೋನಿಯಾ ಭಾರತ್ ಜೋಡೋ ಯಾತ್ರೆ ವೇಳೆ ನೂಕಾಟ ತಳ್ಳಾಟದಿಂದ ಬಾಲಕಿ ನೆಲಕ್ಕೆ ಬಿದ್ಲು. ಈ ವೇಳ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಬಾಲಕಿಯನ್ನು ಮೇಲಕ್ಕೆ ಎತ್ತಿ ಸಂತೈಸಿದ್ದಾರೆ. ಬಾಲಕಿಯ ಬೆನ್ನು ಸವರಿ ಏನಾದ್ರೂ ಪೆಟ್ಟಾಯ್ತಾ ಅಂತ ಕಾಳಜಿ ತೋರಿರುವುದು ವಿಶೇಷವಾಗಿತ್ತು.
ತಾಯಿಯ ಶೂ ಲೇಸ್ ಕಟ್ಟಿದ ರಾಹುಲ್ ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆ ವೇಳೆ ರಾಹುಲ್ ಗಾಂಧಿ ಸೋನಿಯಾ ಗಾಂಧಿ ಅವರ ಶೂ ಲೇಶ್ ಕಟ್ಟಿದ್ದಾರೆ. ತಾಯಿ-ಮಗನ ಬಾಂಧವ್ಯ ಸಾರುವ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಫೋಟೋವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್, ತಾಯಿಯನ್ನು ಗೌರವಿಸುವವರು, ಕಾಳಜಿ ತೋರುವವರು ಮಾತ್ರ ತಾಯ್ನೆಲವನ್ನೂ ಗೌರವಿಸಬಲ್ಲರು ಎಂದು ಬರೆದುಕೊಂಡಿದೆ.
ಎರಡು ದಿನ ರೆಸಾರ್ಟ್‌ನಲ್ಲಿ ತಂಗಿದ್ದ ಸೋನಿಯಾ ವೈದ್ಯಕೀಯ ತಪಾಸಣೆಗಾಗಿ ವಿದೇಶದಲ್ಲಿದ್ದ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರು ಸೋಮವಾರ ಭಾರತ್ ಜೋಡೊ ಯಾತ್ರೆಯಲ್ಲಿ ಪಾಲ್ಗೊಳ್ಳಲು ಕರ್ನಾಟಕಕ್ಕೆ ಆಗಮಿಸಿದ್ರು. ಸೋನಿಯಾ ಗಾಂಧಿ ಅವರು ಮಡಿಕೇರಿಗೆ ತೆರಳಿ ಖಾಸಗಿ ರೆಸಾರ್ಟ್‌ನಲ್ಲಿ ತಂಗಿದ್ದರು. ಇದೇ ವೇಳೆ ಮೈಸೂರಿನಲ್ಲಿ ಪ್ರಚಾರ ಮುಗಿಸಿದ ರಾಹುಲ್ ಗಾಂಧಿ, ಮಡಿಕೇರಿಗೆ ತೆರಳಿ ತಾಯಿ ಸೋನಿಯಾ ಗಾಂಧಿ ಅವರನ್ನು ಭೇಟಿ ಮಹತ್ವದ ಚರ್ಚೆ ಮಾಡಿದ್ರು.
ಬಳಿಕ ಕಬಿನಿ ಮೀಸಲು ಅರಣ್ಯ ಪ್ರದೇಶವಾದ ಕಡೆಗದ್ದೆಗೆ ಬುಧವಾರ ಕಾಂಗ್ರೆಸ್ ಮುಖಂಡರು ಭೇಟಿ ನೀಡಿದ್ದರು. ಹಿನ್ನೀರಿನ ಅರಣ್ಯ ಸಫಾರಿಗೂ ಹೋಗಿದ್ದರು. ಸ್ಥಳೀಯ ಶಾಸಕ ಅನಿಲ್ ಚಿಕ್ಕಮಾದು ಜೊತೆಗಿದ್ದರು. ಗುರುವಾರ ಬೆಳಗ್ಗೆ ಕಬಿನಿ ಹಿನ್ನೀರಿನ ಬಳಿ ಪಾದಯಾತ್ರೆಗೆ ತೆರಳುವ ಮುನ್ನ ಪಕ್ಷದ ಮುಖ್ಯಸ್ಥರು ತೋಟವೊಂದರಲ್ಲಿ ಸಸಿ ನೆಟ್ಟಿದ್ದರು. ಅಲ್ಲದೇ ಕರ್ನಾಟಕ ಚುನಾವಣೆ ಬಗ್ಗೆ ನಾಯಕರೊಂದಿಗೆ ಮಹತ್ವದ ಮಾತುಕತೆಗಳನ್ನ ಮಾಡಿದ್ದಾರೆ ಎಂದು ತಿಳಿದುಬಂದಿದೆ.
Published On - 6:59 pm, Thu, 6 October 22