ಯಾದಗಿರಿ, (ಸೆಪ್ಟೆಂಬರ್ 10): ಮುಂಬರುವ ಲೋಕಸಭಾ ಚುನಾವಣೆಗೆ ಜೆಡಿಎಸ್ ಹಾಗೂ ಬಿಜೆಪಿ ಜೊತೆ ಜೊತೆಯಾಗಿ ಕಾಂಗ್ರೆಸ್ ವಿರುದ್ಧ ಕಣಕ್ಕಿಳಿಯಲು ಸಿದ್ಧತೆಗಳು ನಡೆದಿವೆ. ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಬಗ್ಗೆ ಈಗಾಗಲೇ ಬಿಜೆಪಿ ಹೈಕಮಾಂಡ್ ನಾಯಕರ ಜೊತೆ ಮಾತುಕತೆಗಳು ಸಹ ಮುಗಿದಿವೆ. ಖುದ್ದು ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡರ ಕಾರ್ಯಕರ್ತರ ಮುಂದೆ ಪರೋಕ್ಷವಾಗಿ ಮೈತ್ರಿಯ ಮಾತುಗಳನ್ನ ಆಡಿದ್ದಾರೆ. ಆದ್ರೆ, ಬಿಜೆಪಿಯೊಂದಿಗೆ ಹೋಗುವುದಕ್ಕೆ ಜೆಡಿಎಸ್ನಲ್ಲೇ ಅಸಮಾಧಾನ ಸ್ಫೋಟವಾಗಿದೆ. ಬಿಜೆಪಿಯೊಂದಿಗೆ ಮೈತ್ರಿಗೆ ಕೆಲ ಜೆಡಿಎಸ್ ಶಾಸಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಪ್ರಮುಖವಾಗಿ ಜೆಡಿಎಸ್ ಶಾಸಕ ಶರಣಗೌಡ ಕಂದಕೂರು ಬಹಿರಂಗವಾಗಿಯೇ ವಿರೋಧ ವ್ಯಕ್ತಪಡಿಸಿದ್ದು, ಇಂದಿನ ಬೆಂಗಳೂರು ಜೆಡಿಎಸ್ ಸಮಾವೇಶಕ್ಕೆ ಗೈರಾಗಿದ್ದಾರೆ. ಇದರೊಂದಿಗೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಯಾದಗಿರಿಯಲ್ಲಿ ಇಂದು(ಸೆಪ್ಟೆಂಬರ್ 10) ಸುದ್ದಿಗಾರರೊಂದಿಗೆ ಮಾತನಾಡಿದ ಶರಣಗೌಡ ಕಂದಕೂರು, ಸದ್ಯದ ನಿರ್ಧಾರ ಬಗ್ಗೆ ನನ್ನ ಒಪ್ಪಿಗೆ ಇಲ್ಲ. ಮೈತ್ರಿ ನಿರ್ಧಾರ ಮಾಡಿದ ಮೇಲೆ ಕಾಂಗ್ರೆಸ್ ಸೇರ್ತಾರೆ ಎನ್ನುವುದೇನಿಲ್ಲ. ಈಗಾಗಲೇ ಕೆಲವರು ನಮ್ಮ ಜೊತೆ ಮಾತನಾಡಿದ್ದಾರೆ. ತಿಂಡಿ, ಊಟ ಮಾಡುವಾಗ, ಕಾಫಿ ಕುಡಿಯುವಾಗ ಮಾತನಾಡಿದ್ದೇವೆ. ಪಕ್ಷದ ನಿರ್ಧಾರವನ್ನು ಯಾರೂ ಕಡೆಗಣನೆ ಮಾಡುವುದಕ್ಕೆ ಆಗಲ್ಲ. ಆದರೆ ನಾನು ಕಾರ್ಯಕರ್ತರ ಅಭಿಪ್ರಾಯ ಕೇಳಬೇಕಾಗುತ್ತದೆ. ನಾನೂ ಅನೇಕ ಬಾರಿ ಪಕ್ಷಕ್ಕಾಗಿ ತ್ಯಾಗ, ರಿಸ್ಕ್ ತೆಗೆದುಕೊಂಡಿದ್ದೇನೆ. ಪಕ್ಷ ನಮಗೇನು ಮಾಡಿದೆ ಎನ್ನುವುದು ಎಲ್ಲರಿಗೂ ಸಹ ಗೊತ್ತಿದೆ. ಮೈತ್ರಿಯಾದರೆ ಕ್ಷೇತ್ರದ ಮತದಾರರ ಅಭಿಪ್ರಾಯ ಪಡೆಯುತ್ತೇನೆ. ಆದರೆ ಪಕ್ಷದ ಅಭಿಪ್ರಾಯದಲ್ಲಿ ಭಿನ್ನಾಭಿಪ್ರಾಯ ಇರುವುದು ನಿಜ. ಈ ನಿರ್ಧಾರದಿಂದ ಕೆಲ ಹಾಲಿ, ಮಾಜಿ ಶಾಸಕರಿಗೆ ಅಸ್ತಿತ್ವದ ಪ್ರಶ್ನೆ ಕಾಡುತ್ತಿದೆ ಎಂದು ಒಪ್ಪಿಕೊಂಡರು.
ಇದನ್ನೂ ಓದಿ: ಬಿಜೆಪಿಯೊಂದಿಗಿನ ಮೈತ್ರಿ ಬಗ್ಗೆ ಅಧ್ಯಕ್ಷ ಇಬ್ರಾಹಿಂ ಸೇರಿದಂತೆ ಜೆಡಿಎಸ್ ಇತರೆ ನಾಯಕರ ಭಿನ್ನ ಅಭಿಪ್ರಾಯ
ನಮ್ಮ ಕೆಲಸ ಶಾಸಕರು ಈ ಮೈತ್ರಿಯೊಂದಿಗೆ ಕಾಂಗ್ರೆಸ್ನ ಸೋಲಿಸಬೇಕು ಎಂದು ಟೇಬಲ್ ಕುಟ್ಟಿ ಮಾತಾಡುತ್ತಿದ್ದಾರೆ. ಕಾಂಗ್ರೆಸ್ ಗೆ ಸೋಲಿಸಲು ಹೋಗಿ ನಮ್ಮ ಪರಸ್ಥಿತಿ ಏನು? ದೇಶಕ್ಕೆ ಪ್ರಧಾನಿ ಹಾಗೂ ಐದು ಜನ ಸಿಎಂ ಕೊಟ್ಟ ಪಕ್ಷ. ನಾವು ಗೆಲ್ಲುವುದಕ್ಕೆ ಏನ್ ಮಾಡಬೇಕು ಎಂದು ವಿಚಾರ ಮಾಡಬೇಕು ಹೊರತು ಕಾಂಗ್ರೆಸ್ ವನ್ನ ಸೋಲಿಸಬೇಕು ಎನ್ನುವ ಪರಿಸ್ಥಿತಿಯಲ್ಲಿ ನಾವಿಲ್ಲ. ತಮ್ಮ ಸಾಯಲಿ ಎಂದಾಗ ತಿಮ್ಮ ಸತ್ತ ಎನ್ನುವ ರೀತಿ ಆಗಿದೆ. ಕಾಂಗ್ರೆಸ್ ನ ಸೋಲಿಸುವುದಕ್ಕೆ ಮೈತ್ರಿ ಅಂತ ಆದ್ರೆ ಇದಕ್ಕೆ ನಾನಲ್ಲ ಸಾಕಷ್ಟು ಜನ ವಿರೋಧಿಸುತ್ತಾರೆ ಎಂದು ಸ್ಪಷ್ಟಪಡಿಸಿದರು.
ಬಿಜೆಪಿಯವರ ಜೊತೆ ಹೋಗಬೇಕಾಗಿತ್ತು ಅಂದ್ರೆ, ಪಕ್ಷದ ನಿರ್ಧಾರ ನಾವು ಯಾರೂ ಕಡೆಗಣನೆ ಮಾಡೋದಕ್ಕೆ ಆಗಲ್ಲ. ಆದ್ರೆ ಅಂತಿಮವಾಗಿ ಕೆಲವು ರಾಜಕೀಯದ ಅಸ್ತಿತ್ವದ ಪ್ರಶ್ನೆ ಬಂದಾಗ ನಾವು ನಿನ್ನೆಯಿಂದ ವಿಚಾರ ಮಾಡುತ್ತಿದ್ದೇವೆ. ನಾಯಕರು ಅಧಿಕೃತವಾಗಿ ನಿರ್ಧಾರ ಹೇಳಿದ ಮೇಲೆ ನಾನೂ ಕಾರ್ಯಕರ್ತರ ಅಭಿಪ್ರಾಯ ಕೇಳಬೇಕಾಗುತ್ತದೆ. ನಮ್ ತಂದೆ, ದೊಡ್ಡಪ್ಪ ಅವವರು ಸುದೀರ್ಘ ರಾಜಕೀಯದಲ್ಲಿ ಜನತಾದಳ, ಜನತಾಪರಿವಾರದಲ್ಲಿ ಬಂದಿದ್ದಾರೆ. ನಾನೂ ಸಹಿತ ಪಕ್ಷಕ್ಕಾಗಿ ಅನೇಕ ಸಲ ತ್ಯಾಗ ಮಾಡಿದ್ದೇನೆ. ಪಕ್ಷ ಬಿಡಬೇಕು ಅಂತಾ ಯಾರಿಗೂ ಇಲ್ಲ. ಆದರೆ ಪಕ್ಷದ ಅಭಿಪ್ರಾಯದಲ್ಲಿ ಭಿನ್ನಾಭಿಪ್ರಾಯ ಇರುವಂಥದ್ದು ನಿಜ. ರಾಜಕೀಯದಲ್ಲಿ ಏನೇ ತೀರ್ಮಾನ ತಗೆದುಕೊಳ್ಳಬೇಕಾದರೂ ಎಲ್ಲಾ ಸಾಧಕ ಬಾಧಕಗಳನ್ನ, ಹಳ್ಳಿಯಿಂದ ದಿಲ್ಲಿಯವರೆಗೂ ವಿಚಾರ ಮಾಡಬೇಕು. ಅದು ದೇವೇಗೌಡ್ರಿಗೆ ಕರಗತ ಆಗಿದೆ. ಈ ನಿರ್ಧಾರದಿಂದ ಜೆಡಿಎಸ್, ಬಿಜೆಪಿ ಕೆಲ ಮಾಜಿ, ಹಾಲಿ ಶಾಸಕರಿಗೆ ಅಸ್ತಿತ್ವದ ಪ್ರಶ್ನೆ ಕಾಡುತ್ತಿದೆ. ಸೋಲಿನಿಂದ ಯಾರೋ ಒಬ್ಬ ನಾಯಕ ವಿರುದ್ಧ ಸೇಡು ತೀರಿಸಿಕೊಳ್ಳಲು ಇಂತಹ ನಿರ್ಧಾರ ಆಗುತ್ತಿರುವುದು ಸರಿಯಲ್ಲ. ಸದ್ಯದ ನಿರ್ಧಾರದ ಬಗ್ಗೆ ನನ್ನ ಒಪ್ಪಿಗೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ಜೊತೆ ನಮ್ಮ ಪಕ್ಷದ ಮೈತ್ರಿಗೆ ನನ್ನ ಸಹಮತವಿಲ್ಲ. ನಮ್ಮ ಪಕ್ಷ ಸಂಕಷ್ಟದ ಸ್ಥಿತಿಯಲ್ಲಿದೆ ಇಂತಹ ಸಮಯದಲ್ಲಿ ನಾವು ಯಾರದ್ದು ಮುಂದೆ ಹೋಗಿ ಮಂಡಿ ಉರೋದ್ದಕ್ಕೆ ವೈಯಕ್ತಿಕವಾಗಿ ನನ್ನ ಮನಸ್ಸು ಒಪ್ಪುತ್ತಿಲ್ಲ. ನಾನು ಮುಂದೆ ಏನೇ ಮಾಡಬೇಕು ಅಂದ್ರೆ ನಮ್ಮ ತಂದೆ ಹಾಗೂ ಪಕ್ಷದ ಕಾರ್ಯಕರ್ತರ ಅಭಿಪ್ರಾಯ ಪಡೆಯುತ್ತೆನೆ.. ವರಿಷ್ಟರಾದ ದೇವೆಗೌಡರು ಈ ಮೈತ್ರಿಗೆ ಒಪ್ಪುದಿಲ್ಲ ಅಂತ ನೂರಕ್ಕೆ ನೂರು ನನಗೆ ಅನ್ಸುತ್ತಿದೆ. ಬಿಜೆಪಿ ಜೊತೆ ಮೈತ್ರಿ ಆದ್ರೆ ನನ್ನ ಕಾರ್ಯಕರ್ತರ ಅಭಿಪ್ರಾಯ ಪಡೆಯುತ್ತೆನೆ ಎಂದು ಹೇಳುವ ಮೂಲಕ ಸಂಚಲನ ಮೂಡಿಸಿದ್ದಾರೆ.
ಬಿಜೆಪಿ ಜೊತೆ ಹೋಗುತ್ತಿದ್ದೇವೆ ಎಂದು ಇಲ್ಲಿಯವರೆಗೂ ನಮಗೆ ಕುಮಾರಸ್ವಾಮಿ, ದೇವೆಗೌಡರಾಗಲಿ ಇನ್ನು ಹೇಳಿಲ್ಲ. ನಾವೇನಾದರೂ ಆತುರದ ನಿರ್ಧಾರ ತೆಗೆದುಕೊಂಡ್ರೆ ಚುನಾವಣೆಯಲ್ಲಿ ಒಳ ಏಟು ಬಿಳುವ ಸಾಧ್ಯತೆಯಿದೆ. ದೇವೆಗೌಡರು ಮೈತ್ರಿಗೆ ಒಪ್ಪಿಗೆ ಕೊಟ್ಟೆ ಲಾಭದಕ್ಕಿಂತ ನಷ್ಟವೇ ಹೆಚ್ಚಾಗುತ್ತೆ. ನಮ್ಮ ಪಕ್ಷದ ಪರಿಸ್ಥಿತಿ ಸದ್ಯ ಬಹಳ ಹದಗೆಟ್ಟಿದೆ. ಬಿಜೆಪಿಯವರ ಜೊತೆ ನಾವು ಯಾವತ್ತು ಸಹವಾಸ ಮಾಡಿದ್ದೇವೆ, ಯಡಿಯೂರಪ್ಪ ಅವರಿಗೆ ಅಧಿಕಾರ ಹಸ್ತಾಂತರ ಮಾಡದ್ದಕ್ಕೆ ಇವತ್ತಿನ ಕೆಟ್ಟ ಪರಸ್ಥಿತಿಗೆ ಕಾರಣ. ಅವರಿಗೆ ಅಧಿಕಾರ ಕೊಟ್ಟಿದ್ದೆ ಆಗಿದ್ರೆ 2008 ರಿಂದ 2023 ರ ವರೆಗೆ ನಾಲ್ಕು ಸಲ ಕುಮಾರಸ್ವಾಮಿ ಅವರು ಸಿಎಂ ಆಗಿರುತ್ತಿದ್ದರು. ಅಂತಹ ಸಂದರ್ಭದಲ್ಲಿ ತೆಗೆದುಕೊಳ್ಳದ ನಿರ್ಧಾರ ಈಗ ಯಾಕೆ ಎಂದು ಪ್ರಶ್ನಿಸಿದರು.
ಶರಣಗೌಡ ಕಂದಕೂರು ಅವರ ಈ ಎಲ್ಲಾ ಮಾತುಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ಅವರ ಬೆಂಬಲ ಇಲ್ಲ. ಒಮದು ವೇಳೆ ಮೈತ್ರಿ ಮಾಡಿಕೊಂಡರೆ ಮುಂದಿನ ನಿರ್ಧಾರ ಬೇರೆಯಾಗಿರುತ್ತೆ ಎನ್ನುವ ಅರ್ಥ ನೀಡಿದಂತಿದೆ.
ಒಟ್ಟಿನಲ್ಲಿ ಸದ್ಯ ರಾಜ್ಯ ರಾಜಕಾರಣದಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿ ಸುದ್ದಿ ಜೋರಾಗಿದ್ದು, ಇದು ಮುಂದಿನ ದಿನಗಳಲ್ಲಿ ಏನಾಗಲಿದೆ ಎನ್ನುವುದನ್ನು ಕಾದುಬೋಡಬೇಕಿದೆ.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 6:24 pm, Sun, 10 September 23