ಬಿಜೆಪಿಯೊಂದಿಗಿನ ಮೈತ್ರಿ ಬಗ್ಗೆ ಅಧ್ಯಕ್ಷ ಇಬ್ರಾಹಿಂ ಸೇರಿದಂತೆ ಜೆಡಿಎಸ್ ಇತರೆ ನಾಯಕರ ಭಿನ್ನ ಅಭಿಪ್ರಾಯ
ಸದ್ಯ ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಮಾತುಕತೆ ಬಗ್ಗೆ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಈ ನಡುವೆ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಅಭಿಪ್ರಾಯ ಕೇಳಲು ಜೆಡಿಎಸ್ ಕಾರ್ಯಕರ್ತರ ಸಮಾವೇಶವನ್ನು ಬೆಂಗಳೂರಿನಲ್ಲಿ ನಡೆಸಲಾಯಿತು. ಈ ಸಭೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಸೇರಿದಂತೆ ಇತರೆ ನಾಯಕರು ಭಿನ್ನ ಅಭಿಪ್ರಾಯಗಳನ್ನು ತಿಳಿಸಿದ್ದಾರೆ.
ಬೆಂಗಳೂರು, ಸೆ.10: ಸದ್ಯ ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ (BJP JDS Alliance) ಮಾತುಕತೆ ಬಗ್ಗೆ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಈ ನಡುವೆ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಅಭಿಪ್ರಾಯ ಕೇಳಲು ಜೆಡಿಎಸ್ ಕಾರ್ಯಕರ್ತರ ಸಮಾವೇಶವನ್ನು ಬೆಂಗಳೂರಿನಲ್ಲಿ (Bengaluru) ನಡೆಸಲಾಯಿತು. ಈ ಸಭೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ (C.M.Ibrahim) ಸೇರಿದಂತೆ ಇತರೆ ನಾಯಕರು ಭಿನ್ನ ಅಭಿಪ್ರಾಯಗಳನ್ನು ತಿಳಿಸಿದ್ದಾರೆ.
ಸಮಾವೇಶದಲ್ಲಿ ಮಾತನಾಡಿದ ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಕುದುರೆ ಚೆನ್ನಾಗಿದ್ದರೆ ಖರೀದಿ ಮಾಡುವವನು ಮನೆಗೆ ಬರುತ್ತಾನೆ. ಕುದುರೆಯನ್ನು ಮಾರ್ಕೆಟ್ಗೆ ತೆಗೆದುಕೊಂಡು ಹೋಗಿ ಮಾರಬೇಕಿಲ್ಲ. ಮಾರ್ಕೆಟ್ನಲ್ಲಿ ಮಾರಬೇಕಿಲ್ಲ ಅಂತಾ ಇಂದು ಜೆಡಿಎಸ್ ಸ್ಪಷ್ಟಪಡಿಸಿದೆ. ಯಾರ ಜೊತೆಯೂ ಮೈತ್ರಿ ಆಗಬೇಕೆಂಬ ಆತುರ, ಅನಿವಾರ್ಯತೆ ಇಲ್ಲ ಎಂದರು.
ಮೈತ್ರಿ ವಿಚಾರದಲ್ಲಿ ಸೂಕ್ತ ಸಮಯದಲ್ಲಿ ಒಳ್ಳೆ ನಿರ್ಧಾರ ತೆಗೆದುಕೊಳ್ಳುತ್ತೇವೆ. ಆದರೆ ಜೆಡಿಎಸ್ ಪಕ್ಷವನ್ನು ಅಡವಿಟ್ಟು ತೀರ್ಮಾನ ತೆಗೆದುಕೊಳ್ಳಲ್ಲ. ನಾನು ಜೆಡಿಎಸ್ ಅಧ್ಯಕ್ಷನಾಗಿ ಇದನ್ನು ಸ್ಪಷ್ಟಪಡಿಸುತ್ತಿದ್ದೇನೆ ಎಂದು ಸಿಎಂ ಇಬ್ರಾಹಿಂ ಹೇಳಿದರು.
ಮೋದಿ ಜಗತ್ತು ಮೆಚ್ಚುವ ನಾಯಕ: ಜಿಟಿ ದೇವೇಗೌಡ
ಮೋದಿ ಜಗತ್ತು ಮೆಚ್ಚುವ ನಾಯಕ. ಈಗಾಗಲೇ ಮೋದಿ ವಿಶ್ವಮಟ್ಟದ ನಾಯಕರಾಗಿ ಹೊರಹೊಮ್ಮಿದ್ದಾರೆ ಎಂದು ಹೇಳಿದ ಶಾಸಕ ಜಿಟಿ ದೇವೇಗೌಡ, ನಾವು ಅವರಿಗೆ ಅವರಿಗೆ ನಾವು ಎಂದು ಬಿಜೆಪಿ ಮತ್ತು ಜೆಡಿಎಸ್ ಮುಂದುವರಿಯಬೇಕಾಗಿದೆ. ರಾಜಕೀಯ ಸಹಜೀವನ ಮಾಡಬೇಕಿದೆ ಎಂದರು.
ಬಿಬಿಎಂಪಿಯಲ್ಲಿ ಬಿಜೆಪಿ-ಜೆಡಿಎಸ್ ಅಧಿಕಾರ ಹಿಡಿಯಲಿದೆ. ಜೆಡಿಎಸ್ಗೆ ಅಂಟಿದ ಜಾತಿಯ ಕಳಂಕವನ್ನು ನಿರ್ಮೂಲನೆ ಮಾಡುತ್ತೇವೆ. 2024 ರಲ್ಲಿ ಮೋದಿ ಪ್ರಧಾನಿಯಾಗುವುದು ಎಷ್ಟು ನಿಶ್ಚಿತವೋ ಕಾಂಗ್ರೆಸ್ ಧೂಳೀಪಟ ಆಗುವುದು ಕೂಡ ಅಷ್ಟೇ ನಿಶ್ಚಿತ ಎಂದು ಹೇಳಿದರು.
ಇದನ್ನೂ ಓದಿ: ಪ್ರಧಾನಿ ಮೋದಿ ಜೊತೆ ಮಾತುಕತೆ ನಡೆದಿರುವುದು ನಿಜ: ಮೈತ್ರಿ ಬಗ್ಗೆ ಸತ್ಯ ಒಪ್ಪಿಕೊಂಡ ದೇವೇಗೌಡ
ನುಡಿದಂತೆ ಎಲ್ಲಿ ನಡೆಯುತ್ತಿದ್ದೀರಿ ಸಿದ್ದರಾಮಯ್ಯನವರೇ ಎಂದು ಕೇಳಿದ ಜಿಟಿ ದೇವೇಗೌಡ, ಮೋದಿ ರೈತರಿಗೆ ಕಿಸಾನ್ ಸಮ್ಮಾನ್ ಕೊಡುತ್ತಿದ್ದಾರೆ, ಯಡಿಯೂರಪ್ಪ ಕೊಡುತ್ತಿದ್ದ 4000 ರೂ. ನಿಲ್ಲಿಸಿದ್ದೀರಲ್ಲಾ ಸಿದ್ದರಾಮಯ್ಯನವರೇ ಎಂದು ಹೇಳಿದರು.
ಜೆಡಿಎಸ್ನಲ್ಲಿ ಇರುವ ಒಗ್ಗಟ್ಟು ಬಿಜೆಪಿ ಮತ್ತು ಕಾಂಗ್ರೆಸ್ನಲ್ಲಿ ಇಲ್ಲ. ಬಿಜೆಪಿ ಕೋಮುವಾದಿ, ಜೆಡಿಎಸ್ ಅಧಿಕಾರಕ್ಕಾಗಿ ಹೋಗುತ್ತದೆ ಎಂದು ಹೇಳಿದ್ದೀರಾ ಸಿದ್ದರಾಮಯ್ಯನವರೇ, ನಾವು ಹಿಂದೂಗಳು ಯಾರ ಜೊತೆ ಬೇಕಾದರೂ ಹೊಂದಾಣಿಕೆ ಮಾಡಿಕೊಳ್ಳುತ್ತೇವೆ. ನೀವು ಕೇರಳದಲ್ಲಿ ಮುಸ್ಲಿಂ ಲೀಗ್ ಜೊತೆ ಹೋಗಿದ್ದೀರಿ ಎಂದು ಪ್ರಶ್ನಿಸಿದರು.
ದೇವೇಗೌಡರು, ಕುಮಾರಸ್ವಾಮಿ, ಇಬ್ರಾಹಿಂ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಾಗಿರುತ್ತೇವೆ. ಅಪ್ಪಾಜಿ ಆಪ್ ಆಗೇ ಬಡೋ. ಕರ್ನಾಟಕದಲ್ಲಿ ಮತ್ತೆ ಹೊಸ ಚೈತನ್ಯ ಮೂಡಲಿದೆ ಎಂದು ಮಾಜಿ ಶಾಸಕ ಬಂಡೆಪ್ಪ ಕಾಶೆಂಪೂರ್ ಹೇಳಿದರು.
ಜೆಡಿಎಸ್ ಸಮಾವೇಶದಲ್ಲಿ ಮಾಜಿ ಸಚಿವ ವೆಂಕಟರಾವ್ ನಾಡಗೌಡ ಮಾತನಾಡಿ, ರಾಜಕೀಯದಲ್ಲಿ ಇಂತಹ ಅನಿವಾರ್ಯತೆ ಕೆಲವು ಸಲ ಇರುತ್ತದೆ. ಇನ್ನೂ ಯಾವುದೇ ತೀರ್ಮಾನ ಆಗಿಲ್ಲ, ಬಿಜೆಪಿಯವರೂ ಹೇಳಿಲ್ಲ. ತೀರ್ಮಾನವನ್ನು ವರಿಷ್ಠರಿಗೆ ಬಿಡೋಣ. ಅವರು ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗಿರುತ್ತೇವೆ ಎಂದರು.
ಮಾಜಿ ಸಚಿವ ಆಲ್ಕೋಡ್ ಹನುಮಂತಪ್ಪ ಮಾತನಾಡಿ, ಕಾಂಗ್ರೆಸ್ ಗೆಲ್ಲಿಸಬೇಕು ಅಂತಾ ಜನ ಕಾಂಗ್ರೆಸ್ ಗೆಲ್ಲಿಸಲಿಲ್ಲ. ಬಿಜೆಪಿ ಸೋಲಿಸಬೇಕು ಅಂತಾ ಮತ ಹಾಕಿದ್ದಕ್ಕೆ ಕಾಂಗ್ರೆಸ್ ಗೆದ್ದಿತು. ಇನ್ನು ಸ್ವಲ್ಪವೇ ದಿನ ಕಾದು ನೋಡಿ ಏನೇನು ಆಗುತ್ತದೆ ಅಂತಾ. ಬಿಜೆಪಿಗೆ ರಾಷ್ಟ್ರೀಯ ಮಟ್ಟದಲ್ಲಿ ಈ ಬಾರಿ ನಾವು ಬೇಕಾಗಿದ್ದೇವೆ. ರಾಷ್ಟ್ರೀಯ ಅಧ್ಯಕ್ಷರು, ಕುಮಾರಸ್ವಾಮಿ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧ ಎಂದರು.
ದೇವೇಗೌಡ ನಿರ್ಧಾರಕ್ಕೆ ನಾವು ಬದ್ಧ: ಕರೆಮ್ಮ ನಾಯಕ್
ಜೆಡಿಎಸ್ ಸಮಾವೇಶದಲ್ಲಿ ಶಾಸಕಿ ಕರೆಮ್ಮ ನಾಯಕ್ ಮಾತನಾಡಿ, ನಾವು ಶಾಸಕರಾಗಿದ್ದರೂ ಕ್ಷೇತ್ರದಲ್ಲಿ ಮುಳ್ಳಿನ ಮೇಲಿನ ನಡಿಗೆ ಮಾಡುತ್ತಿದ್ದೇವೆ. ಅಪ್ಪಾಜಿಯವರು (ಹೆಚ್ ಡಿ ದೇವೇಗೌಡ) ಆಲದ ಮರ ಇದ್ದಂತೆ. ಅವರು ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವೆಲ್ಲರೂ ಬದ್ಧ, ನಮ್ಮದು ಏನೂ ಇಲ್ಲ ಎಂದರು.
ರಾಜ್ಯ ಸರ್ಕಾರ ಯಾರಿಗೋ ಹುಟ್ಟಿದ ಮಗುವಿಗೆ ನನ್ನ ಮಗು ಅಂತಾ ಹೇಳುತ್ತಿದೆ. ಅನ್ನಭಾಗ್ಯ ಅಕ್ಕಿ ಕೇಂದ್ರ ಸರ್ಕಾರ ಕೊಡುತ್ತಿರುವುದು. ಇವರಿಗೆ ಮಾನ ಮರ್ಯಾದೆ ಇದ್ದರೆ ಐದು ಕೆಜಿ ಅಕ್ಕಿ ಅಂತಾ ಹೇಳಲಿ. ನಾವು ಬಿಜೆಪಿ ಜೊತೆ ಹೋಗುತ್ತೀವೋ ಇಲ್ಲವೋ ಎಂಬುದು ಕಾಂಗ್ರೆಸ್ಗೆ ಸಂಕಷ್ಟ ಆಗಿದೆ. ನಾವು 2006 ರಲ್ಲಿ ಬಿಜೆಪಿ ಜೊತೆ ಸರ್ಕಾರ ಮಾಡಿದ್ದು ಗೊತ್ತಿದ್ದೂ 2018 ರಲ್ಲಿ ಯಾಕೆ ಬಂದಿದ್ದಿರಿ ನೀವು ಸಿದ್ಧರಾಮಯ್ಯನವರೇ? ಎಂದು ಮಾಜಿ ಶಾಸಕ ಕೃಷ್ಣಾರೆಡ್ಡಿ ಹೇಳಿದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ