ಬೆಂಗಳೂರು: ನಾವೆಲ್ಲರೂ ಸೇರಿ 2023ರ ಚುನಾವಣೆಯಲ್ಲಿ ಜೆಡಿಎಸ್ ಗೆಲ್ಲಿಸಬೇಕು. ಜೆಡಿಎಸ್ ಒಂದು ಮುಳುಗುವ ಪಕ್ಷ ಎನ್ನುವ ಅಪಪ್ರಚಾರಕ್ಕೆ ಹೇಗೆ ಉತ್ತರ ಕೊಡಬೇಕೆಂದು ನನಗೆ ಗೊತ್ತಿದೆ ಎಂದು ಜೆಡಿಎಸ್ ನಾಯಕ ಎಚ್.ಡಿ.ದೇವೇಗೌಡ ಹೇಳಿದರು. ಪಕ್ಷವು ಸಂಭವನೀಯ ಅಭ್ಯರ್ಥಿಗಳಿಗಾಗಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಮೀಸಲಾತಿಯ ಬಗ್ಗೆ ಮಾತನಾಡುವ ಬಿಜೆಪಿ ಅಥವಾ ಕಾಂಗ್ರೆಸ್ ನಾಯಕರು ನನ್ನ ಮುಂದೆ ಬಂದು ನಿಲ್ಲಲಿ. ಬಹಿರಂಗ ಚರ್ಚೆಗೆ ನಾನು ಸಿದ್ಧನಿದ್ದೇನೆ ಎಂದು ಘೋಷಿಸಿದರು. 2023ರವರೆಗೆ ಅವಿರತ ಹೋರಾಟ ನಡೆಸಲು ಸಂಕಲ್ಪ ಮಾಡಿದ್ದೇನೆ. ಮುಂದಿನ ಚುನಾವಣೆಯಲ್ಲಿ 123 ಸ್ಥಾನಗಳ ಗುರಿ ಇರಿಸಿಕೊಂಡಿದ್ದೇವೆ. ಕುಮಾರಸ್ವಾಮಿ ಹೋರಾಟಕ್ಕೆ ನಾವೆಲ್ಲ ಶಕ್ತಿ ತುಂಬೋಣ ಎಂದು ಕಿವಿ ಮಾತು ಹೇಳಿದರು.
ನಾನು ತುಂಬಾ ಮಾತನಾಡಬಹುದು. ಕುಮಾರಸ್ವಾಮಿ 10 ವರ್ಷದಲ್ಲಿ ಏನೆಲ್ಲಾ ಮಾಡಿದ್ದಾರೆ ಎಂದು ಹೇಳಬಹುದು. ನನ್ನಲ್ಲಿ ಅನುಭವದ ಕೊರತೆ ಇಲ್ಲ. ಪ್ರತಿಯೊಬ್ಬರಲ್ಲೂ ಶಕ್ತಿ ಇದೆ. ಮಾತನಾಡುವುದು ತುಂಬಾ ಇದೆ. ನಾನು ನನ್ನ ಹೋರಾಟವನ್ನು ಇಲ್ಲಿಗೆ ನಿಲ್ಲಿಸುವುದಿಲ್ಲ. ಕುಮಾರಸ್ವಾಮಿಗೆ ಶಕ್ತಿ ತುಂಬುತ್ತೇನೆ. 2023ರ ಚುನಾವಣೆಗೆ ಕುಮಾರಸ್ವಾಮಿ ಒಬ್ಬರೇ ಅಲ್ಲ ಎಲ್ಲರೂ ತಮ್ಮ ಶಕ್ತಿ ಅನುಸಾರ ಕೆಲಸ ಮಾಡಿದರೆ ಮಾತ್ರ ಯಶಸ್ಸು ಸಿಗಲು ಸಾಧ್ಯ. ಕಾಂಗ್ರೆಸ್ ಒಬ್ಬರು ಮುಖಂಡರ ಬಗ್ಗೆ ನಾನು ಹಾಸ್ಯ ಮಾಡುವುದಿಲ್ಲ. ಆದರೆ ಅವರ ನಡವಳಿಕೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಸುರಪುರ ಕಾರ್ಯಕ್ರಮದಲ್ಲಿ ಬಿಜೆಪಿ ನಡವಳಿಕೆ ಗಮನಿಸಿದ್ದೇನೆ. ಈ ಎರಡೂ ಪಕ್ಷಗಳ ವಿರುದ್ಧ ನಾವು ಹೋರಾಡಬೇಕಿದೆ ಎಂದರು.
ನಾವೆಲ್ಲರೂ ಒಗ್ಗೂಡಿ ಒಂದೇ ಮನಸ್ಸಿನಿಂದ ಹೋರಾಟ ಮಾಡೋಣ. ಜೆಡಿಎಸ್ ಮುಳುಗಿ ಹೋಗಿದೆ ಎಂದು ಅಪಪ್ರಚಾರ ಮಾಡುವ ಕೆಲವರಿದ್ದಾರೆ. ಅಂಥವರಿಗೆ ಯಾವ ಸಂದರ್ಭದಲ್ಲಿ ಏನು ಉತ್ತರ ಕೊಡಬೇಕು ಎಂದು ನನಗೆ ಗೊತ್ತಿದೆ. ಪ್ರತಿಯೊಂದು ವರ್ಗವನ್ನು ಗುರುತಿಸಿದ ನಾನು ನಿಮ್ಮ ಮುಂದೆ ಬದುಕಿದ್ದೇನೆ. ನನಗೆ ಅಹಂಕಾರ ಇಲ್ಲ ಸತ್ಯ ಹೇಳಲು ಯಾವ ಆತಂಕ ಇಲ್ಲ. ಹೆಣ್ಣು ಮಕ್ಕಳಿಗೆ ಮೀಸಲಾತಿ ಇಂದಿರಾಗಾಂಧಿ ಕೊಟ್ಟಿದ್ದಾ ಎಂದು ಪ್ರಶ್ನಿಸಿದರು.
ಮೈಕ್ ಮುಂದೆ ಮಾತನಾಡುವವರು ವೇದಿಕೆ ಸಿದ್ಧಪಡಿಸಿ ನನ್ನನ್ನು ಕರೆಯಲಿ. ಭಗವಂತ ನನಗೆ ಜ್ಞಾಪಕ ಶಕ್ತಿ ಕೊಟ್ಟಿದ್ದಾನೆ. ಯಾವುದೇ ವೇದಿಕೆಗೆ ಕರೆದರೂ ನಾನು ಬರುತ್ತೇನೆ. ಇದು ಕುಮಾರಸ್ವಾಮಿ ಅವರನ್ನು ಸಿಎಂ ಮಾಡಲು ನಡೆಸುತ್ತಿರುವ ಹೋರಾಟ ಅಲ್ಲ. ಪಕ್ಷ ಉಳಿಸಲು ನಡೆಸುತ್ತಿರುವ ಹೋರಾಟ. ಪಂಚರತ್ನ ಕಾರ್ಯಕ್ರಮ ಅಳವಡಿಸುವುದು ಹೇಗೆ ಎನ್ನುವ ಬಗ್ಗೆ ಹಲವರಿಗೆ ಅನುಮಾನ ಇದೆ. ಅದರ ಸಂಪೂರ್ಣ ಮಾಹಿತಿ ನನಗೆ ಇದೆ. 2023ರಲ್ಲಿ 123 ಸ್ಥಾನಗಳ ಗುರಿ ಮುಟ್ಟುವವರೆಗೂ ನಿಮ್ಮ ಜೊತೆ ಇದ್ದು ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಎಚ್.ಡಿ.ದೇವೇಗೌಡರ ಭಾಷಣದ ನಂತರ ಗದ್ಗದಿತರಾದ ಜೆಡಿಎಸ್ ಅಧ್ಯಕ್ಷ ಸಿ.ಎಂ.ಇಬ್ರಾಹಿಂ, ಸೂರ್ಯ-ಚಂದ್ರರು ಇರುವವರೆಗೂ ನಿಮ್ಮ ಮಾತು ಜೀವಂತವಾಗಿರುತ್ತದೆ. ಸತತ ಕಷ್ಟಸುಖಗಳನ್ನು ಎದುರಿಸಿ ಇಷ್ಟು ದೂರ ಬಂದಿದ್ದೀರಿ. ನಮ್ಮ ಪ್ರಾಣವನ್ನೇ ಧಾರೆ ಎರೆದರೂ ನಿಮ್ಮ ಉಪಕಾರ ಮರೆಯುವುದಿಲ್ಲ. ಮೀಸಲಾತಿ ವಿಚಾರದಲ್ಲಿ ದೊಡ್ಡ ನಿರ್ಧಾರ ತೆಗೆದುಕೊಂಡವರು ನೀವು. ನಿಮ್ಮ ಕೆಲಸವನ್ನು ಜನರಿಗೆ ಮುಟ್ಟಿಸಲು ನಾವು ವಿಫಲರಾಗಿದ್ದೇವೆ. ನಾನು ನಿಮ್ಮಲ್ಲಿ ಕ್ಷಮೆ ಕೇಳುತ್ತೇನೆ ಎಂದರು.
ಮೈಸೂರು ಹೊರವಲಯದಲ್ಲಿರುವ ಖಾಸಗಿ ರೆಸಾರ್ಟ್ನಲ್ಲಿ ಕಾರ್ಯಾಗಾರ ಆಯೋಜಿಸಲಾಗಿದೆ. ಮೈಸೂರಿಗೆ ಆಗಮಿಸಿದ ದೇವೇಗೌಡರಿಗೆ ಸ್ಥಳೀಯ ಮುಖಂಡರು ಸ್ವಾಗತ ಕೋರಿದರು.
ಚಾಮುಂಡಿಬೆಟ್ಟಕ್ಕೆ ಎಚ್ಡಿಕೆ
ಪಂಚರತ್ನ ಕಾರ್ಯಕ್ರಮಗಳ ಬಗ್ಗೆ ಸಂಭಾವ್ಯ ಅಭ್ಯರ್ಥಿಗಳಿಗೆ ಮಾಹಿತಿ ನೀಡಲು ಆಯೋಜಿಸಿರುವ ಕಾರ್ಯಾಗಾರಕ್ಕೂ ಮೊದಲು ಚಾಮುಂಡಿ ಬೆಟ್ಟಕ್ಕೆ ಎಚ್.ಡಿ.ಕುಮಾರಸ್ವಾಮಿ ಹಾಗೂ ಪುತ್ರ ನಿಖಿಲ್ ಕುಮಾರಸ್ವಾಮಿ ಭೇಟಿ ನೀಡಿ, ಚಾಮುಂಡೇಶ್ವರಿ ದರ್ಶನ ಪಡೆದರು. ಮೂರು ಬಸ್ಸುಗಳಲ್ಲಿ 150ಕ್ಕೂ ಹೆಚ್ಚು ಜನರು ಬಂದಿದ್ದರು. ಈ ವೇಳೆ ನಾಯಕರೊಂದಿಗೆ ಸೆಲ್ಫಿಗೆ ಅಭಿಮಾನಿಗಳು ಮುಗಿಬಿದ್ದರು. ಮಹಿಳಾ ಅಭಿಮಾನಿಗಳ ಜೊತೆ ನಾಯಕರಿಬ್ಬರೂ ಸೆಲ್ಫಿ ತೆಗೆಸಿಕೊಂಡರು.
ಬೆಟ್ಟದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಂಭವನೀಯ ಅಭ್ಯರ್ಥಿಗಳು, ಶಾಸಕರು, ಮಾಜಿ ಶಾಸಕರ ಜೊತೆ ನಾಡದೇವತೆ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದಿದ್ದೇನೆ. ಪೂರ್ಣ ಪ್ರಮಾಣದ ಸರ್ಕಾರ ಅಸ್ತಿತ್ವಕ್ಕೆ ತರುವಂತೆ ತಾಯಿ ಚಾಮುಂಡೇಶ್ವರಿಯನ್ನು ಬೇಡಿದ್ದೇನೆ. ತಾಯಿ ಅನುಗ್ರಹದಿಂದ ಹಾಗೂ ಜನರ ಆಶೀರ್ವಾದದಿಂದ ನಾವು ಅಧಿಕಾರಕ್ಕೆ ಬರುತ್ತೇವೆ. ಉತ್ತಮ ಗುಣಮಟ್ಟದ ಶಿಕ್ಷಣ, ಆರೋಗ್ಯ, ರೈತರಿಗೆ ಸ್ವಾವಲಂಬಿ ಯೋಜನೆ, ಪ್ರತಿಯೊಬ್ಬರಿಗೂ ಸೂರು, ನೀರಾವರಿ ಕಾರ್ಯಕ್ರಮದ ಪಂಚರತ್ನ ಯೋಜನೆ ಜಾರಿ ಮಾಡುತ್ತೇವೆ ಎಂದು ಘೋಷಿಸಿದರು.
ಉತ್ತಮ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲು ಬರುವ ಎಲ್ಲಾ ಸವಾಲನ್ನು ಸ್ವೀಕರಿಸಿದ್ದೇನೆ. ಜನರಿಗೆ ಉತ್ತಮ ಬದುಕು ಕಟ್ಟಿಕೊಡುವ ಸರ್ಕಾರ ಅಧಿಕಾರಕ್ಕೆ ತರುತ್ತೇವೆ. ಇದಕ್ಕೆ ರಾಜ್ಯದ ಜನರು ಆಶೀರ್ವಾದ ಮಾಡುವಂತೆ ಕೋರುತ್ತೇನೆ. ಒಂದು ವೇಳೆ ಈ ಯೋಜನೆ ಅನುಷ್ಠಾನ ಮಾಡದಿದ್ದರೆ ಪಕ್ಷವನ್ನು ವಿಸರ್ಜನೆ ಮಾಡುತ್ತೇನೆ. ಕಳೆದ ಬಾರಿ ಸಿಎಂ ಆಗಿದ್ದಾಗ ಪೂರ್ಣ ಬಹುಮತ ಇಲ್ಲದಿದ್ದರೂ ರೈತರ ಸಾಲ ಮನ್ನಾ ಮಾಡಿ ನುಡಿದಂತೆ ನಡೆದಿದ್ದೇನೆ. ಸಂಪೂರ್ಣವಾಗಿ ಒಂದು ಸರ್ಕಾರ ಹೇಗೆ ನಡೆಸಬಹುದು ಅಂತ ತೋರಿಸುವ ಸವಾಲು ಸ್ವೀಕರಿಸಿದ್ದೇನೆ. ಹೊಂದಾಣಿಕೆ ಅಥವಾ ಮೈತ್ರಿ ಸರ್ಕಾರ ಮಾಡಿದರೆ ಜನಪರ ಯೋಜನೆ ಅನುಷ್ಠಾನ ಮಾಡಲು ಆಗುವುದಿಲ್ಲ. ನಮ್ಮ ಪಕ್ಷದವರೆ ಅಲ್ಲ ಎಲ್ಲಾ ಪಕ್ಷದವರಲ್ಲಿಯೂ ಮುಂದಿನ ಚುನಾವಣೆಯ ನಂತರ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರಬಹುದು ಎಂಬ ನಿರೀಕ್ಷೆಯಿದೆ. ಆದರೆ ಜೆಡಿಎಸ್ ಪೂರ್ಣ ಪ್ರಮಾಣದ ಸರ್ಕಾರ ರಚಿಸಲಿದೆ ಎಂದರು.
ದೇವೇಗೌಡರ ಕುಟುಂಬದ ಮತ್ತೊಬ್ಬ ಅಭ್ಯರ್ಥಿ ಚುನಾವಣೆಗೆ ನಿಲ್ಲುವ ಕುರಿತು ಪ್ರತಿಕ್ರಿಯಿಸಿದ ಅವರು, 126 ಅಭ್ಯರ್ಥಿಗಳ ಪಟ್ಟಿ ಈಗಾಗಲೇ ಸಿದ್ಧವಾಗಿದೆ. ನಿಖಿಲ್ ತಮ್ಮ ಶಕ್ತಿಯನ್ನು ಬಳಸಿಕೊಂಡು ರಾಜ್ಯಾದ್ಯಂತ ಪ್ರವಾಸ ಮಾಡಲು ತೀರ್ಮಾನ ಮಾಡಿಕೊಂಡಿದ್ದಾರೆ. ಈಗ ಸಿದ್ಧವಾಗಿರುವ 126 ಅಭ್ಯರ್ಥಿಗಳ ಪಟ್ಟಿಯಲ್ಲಿ ಅವರ ಹೆಸರೂ ಇರಬಹುದು ಎಂದರು.
ಖರ್ಗೆಗೆ ಅಭಿನಂದನೆ
ಎಐಸಿಸಿಗೆ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷರಾದ ಕುರಿತು ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ‘ಕನ್ನಡಿಗರರೊಬ್ಬರು ಅಧ್ಯಕ್ಷರಾದರು ಎಂಬ ಸಂತೋಷ ನನಗೂ ಇದೆ. ಆದರೆ ಖರ್ಗೆ ಅವರಿಗೆ ಅಲ್ಲಿ ಕೆಲಸ ಮಾಡಲು ಎಷ್ಟು ಸ್ವಾತಂತ್ರ್ಯ ಇದೆ ಎಂಬುದು ಬಹಳ ಮುಖ್ಯ. ಕರ್ನಾಟಕ ಕಾಂಗ್ರೆಸ್ನಲ್ಲಿ ಈಗಾಗಲೇ ಎರಡು ಪವರ್ ಸೆಂಟರ್ ಇತ್ತು. ಖರ್ಗೆ ಅಧ್ಯಕ್ಷರಾಗುವ ಮೂಲಕ ಮೂರನೇ ಪವರ್ ಸೆಂಟರ್ ಸೃಷ್ಟಿಯಾಗಿದೆ ಎಂದರು.