ವಿಧಾನಸಭೆ: ನನ್ನ ಸರ್ಕಾರದ ಅವಧಿಯಲ್ಲಿ ಹೆಚ್ಚು ಸಾಲ (Karnataka BJP Govt Loan) ಪಡೆಯಾಗಿದೆ ಎಂಬ ವಿಪಕ್ಷಗಳ ಆರೋಪ ಸುಳ್ಳು. ನಾವು ಹೆಚ್ಚು ಸಾಲ ಮಾಡಿಲ್ಲ, ಬದಲಾಗಿ ಸಿದ್ದರಾಮಯ್ಯ ಅವರ ಆಡಳಿತಾವಧಿಯಲ್ಲೇ ಅತಿಹೆಚ್ಚು ಸಾಲ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ವಿಧಾನಸಭೆಯಲ್ಲಿ ಹೇಳಿದ್ದಾರೆ. ಬಜೆಟ್ ಮೇಲಿನ ಚರ್ಚೆಯಲ್ಲಿ ಉತ್ತರ ನೀಡಿದ ಸಿಎಂ ಬೊಮ್ಮಾಯಿ, 65 ವರ್ಷಗಳಲ್ಲಿ ಮಾಡಿದ್ದ ಒಟ್ಟು ಸಾಲವನ್ನು ಸಿದ್ದರಾಮಯ್ಯ 5 ವರ್ಷದಲ್ಲೇ ಮಾಡಿದ್ದಾರೆ. ಸಿದ್ದರಾಮಯ್ಯ (Siddaramaiah) ಅವರ 5 ವರ್ಷದ ಆಡಳಿತದಲ್ಲಿ 1,30,000 ಕೋಟಿ ರೂ. ಸಾಲ ಪಡೆಯಲಾಗಿತ್ತು. ನನ್ನ ಸರ್ಕಾರದ ಅವಧಿಯಲ್ಲಿ ಹೆಚ್ಚು ಸಾಲ ಪಡೆದಿಲ್ಲ. ಹಿಂದಿನ ಸರ್ಕಾರದಲ್ಲಿ ಪಡೆದ ಸಾಲದ ಮರುಪಾವತಿ ಕೂಡ ಮಾಡಲಾಗಿದೆ. ಇದು ಸರ್ಕಾರದ ನಿರಂತರ ಪ್ರಕ್ರಿಯೆ ಎಂದರು.
ಕೊರೋನಾ ಕಾಲದಲ್ಲಿ ಆರ್ಥಿಕ ಬೆಳವಣಿಗೆ ಕುಸಿತವಾಗಿ ವೆಚ್ಚ ಹೆಚ್ಚಾಯಿತು. ಇದರಿಂದ ರಾಜ್ಯದ ಆರ್ಥಿಕ ಬೆಳವಣಿಗೆ ಕೊರೋನಾ ಕಾಲದಲ್ಲಿ ಬದಲಾವಣೆಯಾಗಿದೆ. ಯಡಿಯೂರಪ್ಪ ಅವರ ಸರ್ಕಾರದ ಅವಧಿಯಲ್ಲಿ ಕಾಲದಲ್ಲಿ 71 ಸಾವಿರ ಕೋಟಿ ರೂ. ಸಾಲ ಪಡೆಯಲು ತೀರ್ಮಾನ ಮಾಡಿದ್ದೆವು. ನಾನು ಅದನ್ನು 67 ಸಾವಿರ ಕೋಟಿಗೆ ಇಳಿಸಿದೆ. ಈ ಬಾರಿ 77 ಸಾವಿರ ಕೋಟಿ ರೂ. ಸಾಲ ಪಡೆಯಲು ತೀರ್ಮಾನ ಮಾಡಿದ್ದೇವೆ. ಆದರೆ ಅದಕ್ಕಿಂತ ಕಡಿಮೆಯೇ ಸಾಲ ಪಡೆಯಲು ಪ್ಲಾನ್ ಮಾಡಿದ್ದೇವೆ, ನಾವು ಪಡೆಯುವ ಸಾಲ ಆಸ್ತಿ ಸೃಷ್ಟಿಗೆ ಬಳಕೆ ಮಾಡಲು ತೀರ್ಮಾನ ಮಾಡಿದ್ದೇವೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
ಇನ್ನು, ತಾವು ಮಂಡಿಸಿದ ಬಜೆಟ್ ಬಗ್ಗೆ ಮಾತನಾಡಿದ ಸಿಎಂ, ಕೊವಿಡ್ ಬಳಿಕ ತಕ್ಷಣವೇ ಆರ್ಥಿಕ ಸ್ಥಿತಿ ಸುಧಾರಣೆಯಾಗಿದೆ. ಬದುಕಿನಲ್ಲಿ ಮುಂದೆ ಬರಬೇಕೆಂಬ ಜನರ ಉತ್ಸಾಹವೇ ಕಾರಣ. ಜನರ ಉತ್ಸಾಹದಿಂದಾಗಿ ರಾಜ್ಯದ ಆರ್ಥಿಕತೆ ಸುಧಾರಣೆಯಾಗಿದೆ. 3,209 ಕೋಟಿ ವೆಚ್ಚದ ಬಜೆಟ್ ಮಂಡಿಸಿದ್ದೇವೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಶೇ.16ರಷ್ಟು ಹೆಚ್ಚಳವಾಗಿದೆ. ಇದರಿಂದ ಆದಾಯ ಹೆಚ್ಚಳವಾಗಿರುವುದು ಸ್ಪಷ್ಟವಾಗಿದೆ ಎಂದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿಧಾನಸಭೆ ಉಪನಾಯಕ ಯು.ಟಿ.ಖಾದರ್, ಹೇಗೆ ಆದಾಯ ಹೆಚ್ಚಾಗಲು ಸಾಧ್ಯ? ಕೃಷಿ ಮತ್ತು ಕೈಗಾರಿಕಾ ಬೆಳವಣಿಗೆ ಕುಸಿದಿದೆಯಲ್ಲಾ ಎಂದರು. ಇದಕ್ಕೆ ಉತ್ತರಿಸಿದ ಸಿಎಂ, ಇಲ್ಲ ಕುಸಿದಿಲ್ಲ ಎಂದರು. ಇದಕ್ಕೆ ಖಾದರ್, ನೀವು ಕೊಟ್ಟ ಮಾಹಿತಿಯಲ್ಲೇ ವಿವರಣೆ ಇದೆಯಲ್ಲಾ ಎಂದರು.
ಇದನ್ನೂ ಓದಿ: ನನ್ನ ವಿರುದ್ಧ ಅಪಪ್ರಚಾರ ಮಾಡಿದ್ದವರೆಲ್ಲ ಸಿಟಿ ರವಿ ಕೃತ್ಯದಿಂದ ತಮ್ಮ ವಾಂತಿಯನ್ನು ತಾವೇ ತಿನ್ನುವಂತಾಗಿದೆ; ಸಿದ್ದರಾಮಯ್ಯ
ಆರ್ಥಿಕ ಬೆಳವಣಿಗೆ ಜೊತೆ ಕೇಂದ್ರದಲ್ಲಿ ರಾಜ್ಯದ ಪಾಲು ಕೂಡ ಹೆಚ್ಚಳವಾಗಿದೆ. ಮೊದಲು ಎಲ್ಲಾ ಸಹಾಯಧನ ರಾಜ್ಯದ ಸಂಚಿತ ನಿಧಿಯಿಂದ ಬರುತ್ತಿತ್ತು. ಆದರೆ ಈಗ ನೇರವಾಗಿ ಫಲಾನುಭವಿಗಳಿಗೆ ಹೋಗುತ್ತಿದೆ. ನೇರವಾಗಿ ಇತರೆ ಇಲಾಖೆಗಳ ಬ್ಯಾಂಕ್ ಖಾತೆಗೆ ಜಮೆ ಆಗುತ್ತಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ 402 ಕೋಟಿ ಆರ್ಥಿಕ ಪ್ರಗತಿಯಲ್ಲಿದೆ. ರಾಜಸ್ಥಾನ, ಗೋವಾ ಸೇರಿ ಹಲವು ರಾಜ್ಯಗಳು ವಿತ್ತೀಯ ಕೊರತೆಯಲ್ಲಿದೆ. ಕಳೆದ ವರ್ಷಕ್ಕಿಂತ ಹೆಚ್ಚು ವಿತ್ತೀಯ ಕೊರತೆಯಲ್ಲಿದೆ. ರಾಜ್ಯದ ಬಜೆಟ್ ಮಂಡನೆ ಬಳಿಕ ತೆರಿಗೆ ಪರಿಹಾರ 9,300 ಕೋಟಿ ಬಂದಿದೆ. 6 ಸಾವಿರ ಕೋಟಿ ಬರುವ ನಿರೀಕ್ಷೆ ಇತ್ತು, ಆದರೆ 9,300 ಕೋಟಿ ಬಂದಿದೆ. ಮಾರ್ಚ್ ತಿಂಗಳಲ್ಲಿ ಮತ್ತಷ್ಟು ತೆರಿಗೆ ಪರಿಹಾರ ಬರಲಿದೆ ಎಂದರು.
ವಿವಿಧ ಮುಖ್ಯಮಂತ್ರಿಗಳ ಅವಧಿಯ ಸಾಲದ ಪ್ರಮಾಣ ಸಿಎಂ ಬೊಮ್ಮಾಯಿ ಹೇಳುತ್ತಿದ್ದಾಗ ಮಧ್ಯಪ್ರವೇಶಿಸಿ ಮಾತನಾಡಿದ ಸಿಟಿ ರವಿ, ನೀನು ನನ್ನನ್ನೇ ಪ್ರಶ್ನೆ ಮಾಡುತ್ತಿಯಲ್ಲಪ್ಪಾ ಎಂದು ಸಿಎಂ ಆಕ್ರೋಶ ವ್ಯಕ್ತಪಡಿಸಿದರು. ಈ ಸಂಶಯದ ಪ್ರವೃತ್ತಿ ಬಿಟ್ಟುಬಿಡು ರವಿ ಎಂದು ತಾಕೀತು ಮಾಡಿದರು.
ಭ್ರಷ್ಟಾಚಾರ ಎಲ್ಲಾ ಅವಧಿಯಲ್ಲಿ ಆಗಿದೆ, ನಾವು ಯಾರೂ ಕೂಡ ಸಂಪೂರ್ಣ ಭ್ರಷ್ಟಾಚಾರ ತೊಡೆದು ಹಾಕಿದ್ದೇವೆ ಅಂತ ಹೇಳಿಲ್ಲ, ಭ್ರಷ್ಟಾಚಾರದಿಂದ ಸಾರ್ವಜನಿಕರಿಗೆ ಸಮಸ್ಯೆ ಆಗುವುದನ್ನು ತೊಡೆದು ಹಾಕಿದ್ದೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು. ಗ್ರಾಮ ಒನ್ ಯೋಜನೆ ಮೂಲಕ ಗಂಟೆ ಗಟ್ಟಲೆ ಕಾಯುವ ಪರಿಸ್ಥಿತಿ ಕಡಿಮೆ ಆಗಿದೆ. ಆನ್ ಲೈನ್ ಮೂಲಕ ಸಮಸ್ಯೆ ತೊಡೆದು ಹಾಕಿದ್ದೇವೆ. ಗ್ರಾಮ ಸೇವಕರ ಸಂಬಳ ಹೆಚ್ಚಳ ಜೊತೆ, ಮನೆ ಮನೆಗೆ ತೆರಳಿ ಸಮಸ್ಯೆ ಆಲಿಸಲು ಸೂಚಿಸಲಾಗಿದೆ. ಅಭಿವೃದ್ಧಿ ಸುತ್ತ ಜನ ಓಡಾಡಬೇಕೇ ಹೊರತು, ಜನರ ಸುತ್ತ ಅಭಿವೃದ್ಧಿ ಓಡಾಡಬಾರದು. ಕೆಪಿಟಿಟಿ ಆಕ್ಟ್ ಪ್ರಕಾರ ಟೆಂಡರ್ ಪಾರದರ್ಶಕವಾಗಿರಬೇಕು, ಆ ಕೆಲಸ ಮಾಡಿದ್ದೇವೆ. 20%, 30% ಟೆಂಡರ್ ಕಮಿಷನ್ ಹೋಗದೆ, 5% ಮೀರದಂತೆ ಇರುವಂತೆ ಮಾಡಿದ್ದೇವೆ ಎಂದರು.
ಲೋಕಾಯುಕ್ತ ಮತ್ತೆ ಜಾರಿಗೆ ತಂದಿದ್ದೇವೆ. ರಾಮಕೃಷ್ಣ ಹೆಗಡೆ ಅವರ ಕಾಲದಲ್ಲೇ ಲೋಕಪಾಲ್ ಬಿಲ್ (1962) ಜಾರಿಗೆ ಬಂತು. ವಿಪಕ್ಷ ನಾಯಕರ ಸರ್ಕಾರ ಇದ್ದಾಗ ಲೋಕಾಯುಕ್ತ ಸಂಪೂರ್ಣ ನಿಷ್ಕ್ರಿಯ ಮಾಡಿದ್ದರು. ಬೇರೆ ರಾಜ್ಯದ ಬಗ್ಗೆ ಮಾತನಾಡದೆ, ನಮ್ಮಲ್ಲಿ ಹೇಗಿದೆ ಅನ್ನೋದನ್ನು ನೋಡಬೇಕು. ನಾವು ಭ್ರಷ್ಟಾಚಾರದ ಪರವೋ ವಿರುದ್ಧವೋ ಅಂತ ಜನ ನೋಡುತ್ತಾರೆ. ನಿಮ್ಮ ನೈತಿಕತೆ ಏನಿದೆ ಅನ್ನೋದನ್ನು ನೋಡಬೇಕು. ಅಡ್ವೊಕೇಟ್ ಜನರಲ್ ವಾದವನ್ನು ನಿಮ್ಮ ರಕ್ಷಣೆಗೆ ತೆಗೆದುಕೊಳ್ಳಬೇಕಾ? ಲೋಕಾಯುಕ್ತರ ಮಗ ಲಂಚ ತೆಗೆದುಕೊಂಡ ಅನ್ನೋ ಅರೋಪ ಬೇಕಾ? ನೆಗಡಿ ಬಂತು ಅಂತ ಮೂಗು ಕುಯ್ಡುಕೊಳ್ಳಬೇಕಾ? ನಿಮ್ಮ ಉದ್ದೇಶ ಏನು? ಲೋಕಾಯುಕ್ತ ಸಂಪೂರ್ಣ ಮುಚ್ಚಿ ಹಾಕೋದಾ? ಎಂದು ಸಿಎಂ ಕಾಂಗ್ರೆಸ್ ಪಕ್ಷವನ್ನು ಪ್ರಶ್ನಿಸಿದರು.
ರಾಜಯಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:11 pm, Thu, 23 February 23