ಬೆಂಗಳೂರು, (ಅಕ್ಟೋಬರ್ 09): ಲೋಕಸಭಾ ಚುನಾವಣೆ (Loksabha Elections 2024)ಬಳಿಕ ಸಿದ್ದರಾಂಯ್ಯನವರ (Siddaramaiah) ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಬಿಜೆಪಿ(BJP) ನಾಯಕರು ಭವಿಷ್ಯ ನುಡಿಯುತ್ತಿದ್ದರೆ, ಇತ್ತ ಜೆಡಿಎಸ್ ನಾಯಕ ಹೆಚ್ಡಿ ಕುಮಾರಸ್ವಾಮಿ)(HD Kumaraswamy) ಮಾತ್ರ 2024ರಲ್ಲಿ ಮತ್ತೆ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ (Karnataka Assembly Elections) ನಡೆಯಲಿದೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ಅಲ್ಲದೇ ಡಿಕೆ ಶಿವಕುಮಾರ್ (DK SHivakumar) ಮತ್ತೆ ತಿಹಾರ್ ಜೈಲಿಗೆ ಹೋಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದು, ಇದು ರಾಜ್ಯ ರಾಜಕಾರಣದಲ್ಲಿ (Karnataka Politics) ಸಂಚಲನ ಮೂಡಿಸಿದೆ.
ನಿನ್ನೆ(ಅ,08) ತಮ್ಮ ಬಿಡದಿಯ ತೋಟದ ಮನೆಯಲ್ಲಿ ರಾಮನಗರ ಜಿಲ್ಲಾ ಮುಖಂಡರ ಸಭೆಯಲ್ಲಿ ಮಾತನಾಡಿರುವ ಕುಮಾರಸ್ವಾಮಿ, ಈ ಸರ್ಕಾರದ ಪಾಪದ ಕೊಡ ತುಂಬುತ್ತಿದೆ. ಇಷ್ಟು ಕೆಟ್ಟ ಸರ್ಕಾರವನ್ನು ನಾನು ನೋಡಿಯೇ ಇಲ್ಲ. ಆಂತರಿಕ ಕಚ್ಚಾಟದಿಂದ ಈ ಸರ್ಕಾರ ಹೋಗುತ್ತದೆ. 2024ರಲ್ಲಿ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯುವುದು ಖಚಿತ. ಆ ಚುನಾವಣೆಗೆ ಆ ವ್ಯಕ್ತಿ (ಡಿಕೆ ಶಿವಕುಮಾರ್) ಅಭ್ಯರ್ಥಿ ಆಗುವುದೇ ಅನುಮಾನ. ಅವರು ತಿಹಾರ್ ಗೆ ಓಡುವ ಕಾಲ ಹತ್ತಿರದಲ್ಲಿ ಇದೆ ಎಂದು ಹೆಚ್ಡಿ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದರು.
ಜೋಡೆತ್ತು ಎಂದವರು ನಡುರಸ್ತೆಯಲ್ಲಿ ಕೈ ಬಿಟ್ಟರು. ಮೈತ್ರಿ ಸರ್ಕಾರ ಹೋಗಿದ್ದು ಡಿಕೆ ಶಿವಕುಮಾನಿಂದಲೇ. ಸರ್ಕಾರದ ಪತನ ಗ್ಯಾರಂಟಿ, ಅವರು ತಿಹಾರ್ ಗೆ ಓಡುವುದು ಖಚಿತ. ನಮ್ಮನ್ನು ಹಾಸನಕ್ಕೆ ಓಡಿಸಬಹುದು, ಅವರು ತಿಹಾರ್ ಗೆ ಓಡುವ ಕಾಲ ಹತ್ತಿರದಲ್ಲಿ ಇದೆ. ಒಮ್ಮೆ ತಿಹಾರ್ ನೋಡಿಕೊಂಡು ಬಂದಿದ್ದಾರೆ. ಅವರು ಮತ್ತೆ ಅಲ್ಲಿಗೆ ಪರಮನೆಂಟಾಗಿ ಹೋದರೂ ಅಚ್ಚರಿ ಅಲ್ಲ ಎಂದು ಹೊಸ ಬಾಂಬ್ ಸಿಡಿಸಿದರು.
ಪಬ್ಲಿಕ್ ನಲ್ಲಿ ನನ್ನ ಕೈ ಮೇಲೆ ಎತ್ತಿ ಜೋಡೆತ್ತು ಎಂದು ಹೇಳಿದ ನಯವಂಚಕ ಮಾತುಗಳನ್ನು ನಂಬಿ ಮೋಸ ಹೋದೆ. ಆಮೇಲೆ ಅವರು ನನ್ನನ್ನು ನಡು ರಸ್ತೆಯಲ್ಲಿ ಕೈ ಬಿಟ್ಟು ಎತ್ತು, ಗಾಡಿಯೊಂದಿಗೆ ಪಲಾಯನ ಮಾಡಿದರು. 2018 ಸರ್ಕಾರ ಹೋಗಿದ್ದು ಡಿ.ಕೆ.ಶಿವಕುಮಾರ್ ಅವರಿಂದಲೇ ಹೊರತು ನನ್ನಿಂದ ಅಲ್ಲ ಎಂದು ಗುಡುಗಿದರು.
ನನಗೂ ರಮೇಶ್ ಜಾರಕಿಹೊಳಿ ಅವರಿಗೂ ವೈಷಮ್ಯ ಇತ್ತಾ? ಬೆಳಗಾವಿ ಡಿಸಿಸಿ ಬ್ಯಾಂಕ್ ರಾಜಕೀಯಕ್ಕೆ ನಾನು ಬಲಿಪಶುವಾದೆ. ಅವರು ಬೆಳಗಾವಿ ರಾಜಕೀಯಕ್ಕೆ ಕೈಹಾಕಿದ್ದು ಯಾಕೆ? ನಾನು ಕುಮಾರಣ್ಣನ ಸರ್ಕಾರ ಉಳಿಸೋಕೆ ಪ್ರಾಮಾಣಿಕ ಪ್ರಯತ್ನ ಮಾಡಿದೆ ಎಂದು ಮೊಸಳೆ ಕಣ್ಣೀರು ಹಾಕಿ ಪ್ರಚಾರ ತೆಗೆದುಕೊಂಡರು. ಆಮೇಲೆ ನೋಡಿದರೆ ಒಳಗೊಳಗೇ ಮಾಡುವುದೆಲ್ಲವನ್ನು ಮಾಡಿದರು. ಅವರನ್ನು ನಂಬಿ ನಾನು ಕುತ್ತಿಗೆ ಕುಯ್ದುಕೊಂಡಿದ್ದೇನೆ ಎಂದು ಕಿಡಿಕಾರಿದರು.
ಕೋಟೆ ಕಟ್ಟಿ ಮೆರೆದವರೆಲ್ಲ ಏನೇನೋ ಆಗಿ ಹೋದರು. ಅದು ಇವರಿಗೂ ಅನ್ವಯ ಆಗುತ್ತದೆ. ಮಂಡ್ಯ ಚುನಾವಣೆಯಲ್ಲಿ ನಿಖಿಲ್ ಅವರಿಗೆ ಮೋಸ ಮಾಡಿದ ಹಾಗೆ ಇಲ್ಲಿಯೂ ನಾವು ಮಾಡಿದ್ದರೆ ಆ ವ್ಯಕ್ತಿ (ಡಿ.ಕೆ.ಸುರೇಶ್) ಯ ಕಥೆ ಅಂದೇ ಮುಗಿದು ಹೋಗುತ್ತಿತ್ತು. ಆದರೆ, ನಾವು ಮೈತ್ರಿ ಧರ್ಮ ಪಾಲಿಸಿದೆವು. ಅವರು ನಮಗೆ ಕೇಡು ಬಗೆದರು ಎಂದು ಡಿಕೆ ಶಿವಕುಮಾರ್ ಹಾಗೂ ಡಿಕೆ ಸುರೇಶ್ ವಿರುದ್ಧ ವಾಗ್ದಾಳಿ ನಡೆಸಿದರು.
ಜೀವನದಲ್ಲಿ ಅವರ (ಡಿಕೆ ಶಿವಕುಮಾರ್) ಜತೆ ಎಂದೂ ರಾಜಿ ಆಗಿಲ್ಲ. ಒಮ್ಮೆ ಅವರ ಜತೆ ಸರ್ಕಾರ ಮಾಡಿದ್ದರಿಂದ ನಾನು ಈಗಲೂ ನೋವು ಅನುಭವಿಸುತ್ತಿದ್ದೇನೆ. ನಮ್ಮನ್ನು ಹಾಸನಕ್ಕೆ ಓಡಿಸಬಹುದು, ಅವರು ತಿಹಾರ್ ಗೆ ಓಡುವ ಕಾಲ ಹತ್ತಿರದಲ್ಲಿ ಇದೆ ಎಂದು ಭವಿಷ್ಯ ನುಡಿದರು.
ಮತ್ತಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ