ಪ್ರಧಾನಿ ಮೋದಿ ಹೇಳಿದಂತೆ ತಿನ್ನೋದೂ ಇಲ್ಲ, ತಿನ್ನುಲು ಬಿಡುವುದು ಇಲ್ಲ: ಡಿಕೆಶಿಗೆ ಸಚಿವ ಅಶೋಕ್ ತಿರುಗೇಟು
ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮತ್ತು ಪುತ್ರನ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದ್ದೇ ತಡ ಇದನ್ನೇ ಅಸ್ತ್ರವನ್ನಾಗಿಸಿಕೊಂಡಿರುವ ಕಾಂಗ್ರೆಸ್, ಬಿಜೆಪಿ ಮೇಲೆ ಟೀಕಾಪ್ರಹಾರ ನಡೆಸುತ್ತಿದ್ದು, ಮಾರ್ಚ್ 9ರಂದು ರಾಜ್ಯಾದ್ಯಂತ 2 ಗಂಟೆ ಬಂದ್ಗೆ ಕರೆ ನೀಡಿದೆ. ಇದಕ್ಕೆ ಸಚಿವರಾದ ಸುಧಾಕರ್, ಅಶೋಕ್ ತಿರುಗೇಟು ನೀಡಿದ್ದಾರೆ.
ಆನೇಕಲ್: ಕಾಂಗ್ರೆಸ್ ಏನೇ ಕರೆ ಕೊಟ್ಟರೂ ಅದಕ್ಕೆ ಮೂರು ಪೈಸೆ ಬೆಲೆ ಇರಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ (R.Ashok) ಹೇಳಿದ್ದಾರೆ. ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ (Madal Virupakshappa) ಮತ್ತು ಪುತ್ರನ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದ್ದೇ ತಡ ಇದನ್ನೇ ಅಸ್ತ್ರವನ್ನಾಗಿಸಿಕೊಂಡಿರುವ ಕಾಂಗ್ರೆಸ್ ಬಿಜೆಪಿ ವಿರುದ್ಧ ಸಮರ ಸಾರಿದೆ. ಅಲ್ಲದೆ, ಮಾರ್ಚ್ 9ರಂದು ರಾಜ್ಯಾದ್ಯಂತ 2 ಗಂಟೆ ಬಂದ್ (Karnataka Bandh For 2 Hours) ಮಾಡುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (D.K.Shivakumar) ಕರೆ ನೀಡಿದ್ದಾರೆ. ಈ ಬಗ್ಗೆ ಆನೇಕಲ್ನಲ್ಲಿ ಪ್ರತಿಕ್ರಿಯಿಸಿದ ಸಚಿವ ಅಶೋಕ್, ಕಾಂಗ್ರೆಸ್ನವರು 14 ಸಾವಿರ ಕೋಟಿಯ 2ಜಿ ಹಗರಣ ಮಾಡಿದ್ದಾರೆ. ಎಂದರು.
ಶಾಸಕ ಮಾಡಾಳ್ ವಿರೂಪಾಕ್ಷಪ್ಪರನ್ನು ನಾವು ಸಮರ್ಥನೆ ಮಾಡಿಕೊಳ್ಳುವುದಿಲ್ಲ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಒಬ್ಬರ ಮೇಲೂ ದಾಳಿ ಆಗಲಿಲ್ಲ. ಆದರೆ ನಾವು ಪಾರದರ್ಶಕವಾಗಿದ್ದೇವೆ, ಪ್ರಧಾನಿ ಮೋದಿ ಪಾರದರ್ಶಕವಾಗಿದ್ದಾರೆ. ಮೋದಿ ಹೇಳಿದಂತೆ ಯಾರನ್ನೂ ತಿನ್ನಲು ಬಿಡಲ್ಲ, ತಿನ್ನೋದೂ ಇಲ್ಲ, ಲೋಕಾಯುಕ್ತ ಸಂಸ್ಥೆಗೆ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದೇವೆ ಎಂದು ಸಚಿವ ಅಶೋಕ್ ಹೇಳಿದರು.
ಕಾಂಗ್ರೆಸ್ ಹದಿನಾಲ್ಕು ಸಾವಿರ ಕೋಟಿಯ 2ಜಿ, ಹಗರಣ ಮಾಡಿದ್ದರು. ಕೋಲ್ ಹಗರಣ, ಫಿರಂಗಿ ಹಗರಣ ಲಕ್ಷ ಲಕ್ಷ ಕೋಟಿ ಮಾಡಿಕೊಂಡರು. ಮಾಡಾಳ್ ಕೂಡ ಮಾಡಿದ್ದಾರೆ, ಅದು ತಪ್ಪು, ಅದನ್ನು ನಾವು ಸಮರ್ಥನೆ ಮಾಡಲ್ಲ. ಕಾಂಗ್ರೆಸ್ ಇದ್ದಾಗ ಎಪ್ಪತ್ತು ಕಂಪ್ಲೇಂಟ್ ಹೋಗಿತ್ತು. ಒಬ್ಬರು ಮೇಲೆ ದಾಳಿ ಆಗಲಿಲ್ಲ, ಎಲ್ಲಾ ಮುಚ್ಚಿ ಹಾಕಿದ್ದರು. ನಾವು ಲೋಕಾಯುಕ್ತಕ್ಕೆ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದೇವೆ. ಬಿಜೆಪಿ ಆಗಲಿ, ಕಾಂಗ್ರೆಸ್ ಆಗಲಿ, ಜೆಡಿಎಸ್ ಆಗಲಿ ಅಥವಾ ಯಾರೇ ಆಗಲಿ. ಅವರನ್ನು ಶಿಕ್ಷಿಸುವವರೆಗೂ ಕೆಲಸ ಮಾಡುತ್ತಾರೆ ಎಂದರು. ಇವರು (ಸಿದ್ದರಾಮಯ್ಯ) ವಾಚ್ ಕಟ್ಟಿದ್ದರಲ್ಲ, ಎಲ್ಲಿಂದ ಬಂತು ವಾಚ್? ಸಿದ್ರಾಮಯ್ಯ ಕಟ್ಟಿದ್ದ ಫಾರಿನ್ ವಾಚ್, ಅವಗ ಯಾಕೆ ತನಿಖೆ ಮಾಡಿಲ್ಲ? ರಿಡೂ ಬಗ್ಗೆ ಯಾಕೆ ತನಿಖೆ ಆಗಲಿಲ್ಲ? ಆವಾಗ ತನಿಖೆ ಮಾಡಿದ್ದರೆ ಇದೇನು ಇದಕ್ಕಿಂತ ನೂರು ಕೋಟಿ ಹೊರಗೆ ಬರುತ್ತಿತ್ತು ಎಂದರು.
ಈ ಹಿಂದೆ ಕಾಂಗ್ರೆಸ್, ಜೆಡಿಎಸ್ ಸೇರಿ ಸರ್ಕಾರ ರಚಿಸಿಕೊಂಡಿದ್ದರು. ಆದರೆ 14 ತಿಂಗಳಲ್ಲಿ ಸಮ್ಮಿಶ್ರ ಸರ್ಕಾರ ಚಟ್ಟ ಕಟ್ಟಿಕೊಂಡು ಹೋಯಿತು. ಹೆಣ ಹೋರಲೂ ಈ ಮೈತ್ರಿ ಸರ್ಕಾರದವರಿಗೆ ಜನ ಇರಲಿಲ್ಲ. ಇದ್ದವರೆಲ್ಲಾ ನಮ್ಮ ಮುನಿರತ್ನ ಗ್ಯಾಂಗ್. ಕೊಟ್ಟ ಕುದುರೆ ಏರಲು ಆಗಲಿಲ್ಲ. ಚುನಾವಣೆ ಗೆಲ್ಲಲಾಗಲ್ಲ ಎಂದು ಮಾಟಮಂತ್ರದ ಮೊರೆ ಹೋಗಿದ್ದಾರೆ ಎಂದು ಕಾಂಗ್ರೆಸ್, ಜೆಡಿಎಸ್ ನಾಯಕರ ವಿರುದ್ಧ ವಾಗ್ದಾಳಿ ಅಶೋಕ್ ನಡೆಸಿದರು.
ಕಾಂಗ್ರೆಸ್ನವರಿಗೆ ಎರಡು ಟೀಂ ಮಾಡೋಕು ಜನ ಇಲ್ಲ: ಅಶೋಕ್
ವಿಜಯಸಂಕಲ್ಪ ಯಾತ್ರೆಗೆ ಅಭೂತಪೂರ್ವ ಪ್ರತಿಕ್ರಿಯೆ ಸಿಗುತ್ತಿದೆ. ಈ ವಿಜಯಯಾತ್ರೆ ಆದಮೇಲೆ ಕಾಂಗ್ರೆಸ್ ಗಂಟು ಮೂಟೆ ಕಟ್ಟಿಕೊಂಡು ಮನೆಗೆ ಹೋಗುವುದು ಗ್ಯಾರಂಟಿ. 15ದಿನಗಳ ಕಾಲ ನಾಲ್ಕು ಯಾತ್ರೆ ನಾವು ಮಾಡುತ್ತಾ ಇದ್ದೇವೆ. ನಾವು ನಾಲ್ಕು ಟೀಂ ಮಾಡಿದ್ದೇವೆ. ಒಂದೊಂದು ತಂಡದಲ್ಲೂ ಐದೈದು ಮಂತ್ರಿಗಳು ಇದ್ದು, ನಮ್ಮ ರಾಷ್ಟ್ರೀಯ ನಾಯಕರು ಕೂಡ ಬರುತ್ತಿದ್ದಾರೆ. ನಾಳೆ ಬೆಂಗಳೂರಿನ ಕಾರ್ಯಕ್ರಮ ಕೇಂದ್ರದ ನಾಯಕರು ಬರಲಿದ್ದಾರೆ. ಅಂದರೆ ನಾವು ಈ ಯಾತ್ರೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಆದರೆ ಕಾಂಗ್ರೆಸ್ನವರಿಗೆ ಎರಡು ಟೀಂ ಮಾಡಲೂ ಜನ ಇಲ್ಲ. ಅದಕ್ಕೆ ಸಿದ್ರಾಮಯ್ಯ, ಡಿ.ಕೆ ಶಿವಕುಮಾರ್ ಒದ್ದಾಡುತ್ತಾ ಇದ್ದಾರೆ ಎಂದರು.
ಭ್ರಷ್ಟಾಚಾರ ನಿಯಂತ್ರಣಕ್ಕೆ ಚಾಲನೆ ನೀಡಿದ್ದೇ ಸಿಎಂ ಬೊಮ್ಮಾಯಿ: ಸುಧಾಕರ್
ಚಿಕ್ಕಬಳ್ಳಾಪುರ: 2 ಗಂಟೆ ಕಾಲ ಕರ್ನಾಟಕ ಬಂದ್ಗೆ ಡಿ.ಕೆ.ಶಿವಕುಮಾರ್ ಕರೆ ನೀಡಿದ ವಿಚಾರವಾಗಿ ಮಾತನಾಡಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಭ್ರಷ್ಟಾಚಾರ ನಿಯಂತ್ರಣಕ್ಕೆ ಚಾಲನೆ ನೀಡಿದ್ದೇ ಸಿಎಂ ಬೊಮ್ಮಾಯಿ. ಕಾಂಗ್ರೆಸ್ ಅವಧಿಯಲ್ಲಿ ಹಾವಿನ ಹಲ್ಲು ಕಿತ್ತು ಬುಟ್ಟಿಯಲ್ಲಿ ಇಟ್ಟಿದ್ದರು. ಆದರೆ ನಾವು ಒಳ್ಳೆಯ ಹಾವನ್ನು ಮತ್ತೆ ಬುಟ್ಟಿಯಲ್ಲಿ ಇಟ್ಟಿದ್ದೇವೆ. ಕಾಂಗ್ರೆಸ್ನವರಂತೆ ಬಿ ರಿಪೋರ್ಟ್ ಅಥವಾ ಕೇಸ್ ಮುಚ್ಚಿ ಹಾಕಿಲ್ಲ. ಸತ್ಯತೋರಿಸಲು ಮುಂದಾಗಿರುವ ಮುಖ್ಯಮಂತ್ರಿಗೆ ಅಭಿನಂದನೆ ಹೇಳಿ. ಕಾಂಗ್ರೆಸ್ ನಾಯಕರಿಗೆ ಸೌಜನ್ಯ ಇದ್ದರೆ ಸಿಎಂಗೆ ಅಭಿನಂದನೆ ಹೇಳಲಿ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:18 pm, Sun, 5 March 23