ಬೆಂಗಳೂರು: ಕರ್ನಾಟಕ ರಾಜಕಾರಣದಲ್ಲಿ ಇಂದು (ಸೆ.08) ಮಹತ್ತರ ಬೆಳವಣಿಗೆಯೊಂದು ನಡೆದಿದೆ. ಲೊಕಸಭೆ ಚುನಾವಣೆಗೆ ಇನ್ನೂ ಏಳೆಂಟು ತಿಂಗಳು ಬಾಕಿ ಇದ್ದು, ಇದಕ್ಕೂ ಮುನ್ನವೇ ರಾಷ್ಟ್ರೀಯ ಪಕ್ಷ ಭಾರತೀಯ ಜನತಾ ಪಾರ್ಟಿ (BJP) ಜೊತೆಗೆ ಜೆಡಿಎಸ್ (JDS) ಮೈತ್ರಿ ಮಾಡಿಕೊಂಡಿದೆ. ರಾಜ್ಯದಲ್ಲಿ ಎರಡು ವಿರೋಧ ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದು, ಈ ವಿಚಾರ ರಾಜ್ಯ ರಾಜಕೀಯದ ಪಡಸಾಲೆಯಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಈ ಬಗ್ಗೆ ಕಾಂಗ್ರೆಸ್ (Congress) ನಾಯಕರು ಪ್ರತಿಕ್ರಿಯಿಸಿದ್ದು, ಯಾರು ಏನು ಹೇಳಿದರು ಇಲ್ಲಿದೆ ಸಂಪೂರ್ಣ ರಿಪೋರ್ಟ್.
ಬಿಜೆಪಿ, ಜೆಡಿಎಸ್ ಮೈತ್ರಿ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ‘ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಳ್ಳಲಿ ಬಿಡಿ ನಮಗೇನು?’ ಯಾರೆಲ್ಲಾ ಮೈತ್ರಿ ಮಾಡಿಕೊಳ್ಳುತ್ತಾರೆ, ಯಾರು ಪ್ರತ್ಯೇಕವಾಗಿ ಸ್ಪರ್ಧಿಸುತ್ತಾರೆಂಬೆಲ್ಲ ವಿಷಯಗಳಿಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ಲೋಕಸಭಾ ಚುನಾವಣೆ ವೇಳೆ ನಾವು ಜನರ ಬಳಿ ಮತ ಕೇಳುತ್ತೇವೆ. ರಾಜ್ಯದ ಜನ ನಮ್ಮ ಪರವಾಗಿದ್ದಾರೆ, ನಮಗೆ ಜನ ಮತ ಹಾಕುತ್ತಾರೆ ಎಂದು ಹೇಳಿದರು.
ಇನ್ನು ಈ ವಿಚಾರವಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಟ್ವೀಟ್ ಮಾಡಿ ಬಿಜೆಪಿ – ಜೆಡಿಎಸ್ ಮೈತ್ರಿಯಾಗಿ ಲೋಕಸಭಾ ಚುನಾವಣೆ ಎದುರಿಸುವುದಾದರೆ ಬಹಳ ಸಂತೋಷ. ಆದರೆ ಮೈತ್ರಿಯಾದ ನಂತರ ಜೆಡಿಎಸ್ ತನ್ನ ಸಿದ್ಧಾಂತ ಹೇಗೆ ಉಳಿಸಿಕೊಳ್ಳುತ್ತದೆ ಗೊತ್ತಿಲ್ಲ. ಪಕ್ಷ ಉಳಿಯುತ್ತೋ ಇಲ್ಲವೋ ಗೊತ್ತಿಲ್ಲ. ಅವರ ಮೈತ್ರಿಗೆ ನನ್ನ ವಿರೋಧವಂತೂ ಇಲ್ಲ. ಅವರಿಗೆ ಆಲ್ ದಿ ಬೆಸ್ಟ್ ಎಂದು ಹಾರೈಸಿದ್ದಾರೆ.
ಈ ಕುರಿತು ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಇಬ್ಬರು ಅಸಹಾಯಕರು ಸೇರಿಕೊಂಡು ಮೈತ್ರಿ ಮಾಡಿಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಜೆಡಿಎಸ್ ಮತ್ತು ಬಿಜೆಪಿಗೆ ಬಿಟ್ಟಿದ್ದು. ವಿಧಾನಸಭೆ ಚುನಾವಣೆಯಲ್ಲಿ ಇಬ್ಬರೂ ಪರಸ್ಪರ ಫೈಟ್ ಮಾಡಿದ್ದರು. ಈಗ ಮತ್ತೆ ಮೈತ್ರಿ ವಿಚಾರ ಮಾತಾಡುತ್ತಿದ್ದಾರೆ ಎಂದು ಹೇಳಿದರು.
ಜೆಡಿಎಸ್ ಬಿಜೆಪಿ ಬಿ ಟೀಮ್ ಎಂಬ ವಿಚಾರವಾಗಿ ಮಾತನಾಡಿದ ಅವರು ಅದರ ಬಗ್ಗೆ ನಾನು ಕಾಮೆಂಟ್ ಮಾಡಲ್ಲ. ಮೈತ್ರಿ ವಿಚಾರದಲ್ಲಿ ಬಿಜೆಪಿ ದ್ವಂದ್ವ ನಿಲುವು ಅನುಸರಿಸುತ್ತದೆ. ಮಹಾರಾಷ್ಟ್ರದಲ್ಲಿ ಅಜಿತ್ ಪವಾರ್ ವಿರುದ್ಧ ಸಾವಿರಾರು ಕೋಟಿ ಹಗರಣದ ಆರೋಪ ಮಾಡಿದ್ದರು. ಒಂದೇ ತಿಂಗಳಲ್ಲಿ ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಸೇರಿಸಿಕೊಂಡರು. ಇವತ್ತು ಟೀಕೆ, ನಾಳೆ ಮೈತ್ರಿ ಮಾಡಿಕೊಳ್ಳುವುದರಲ್ಲಿ ಅರ್ಥವಿಲ್ಲ. ಹಲವಾರು ಬಿಜೆಪಿ ನಾಯಕರು ಕಾಂಗ್ರೆಸ್ನತ್ತ ಮುಖಮಾಡಿದ್ದಾರೆ. ಕರ್ನಾಟಕ ಬಿಜೆಪಿಗೆ ಹೆದರಿಕೆ ಶುರುವಾಗಿದೆ ಎಂದರು.
ಉಡುಪಿಯ ಬೈಂದುರ್ ಮಾಜಿ ಶಾಸಕ ಸುಕುಮಾರ್ ಶೆಟ್ಟಿ ಅವರು ಕಾಂಗ್ರೆಸ್ ಸೇರ್ಪಡೆ ಆಗುತ್ತಿದ್ದಾರೆ. ಹೀಗಾಗಿ ಬಿಜೆಪಿಯವರು ಮೊದಲು ತಮ್ಮಲ್ಲಿ ವ್ಯವಸ್ಥೆಯನ್ನು ಸುಧಾರಿಸಿಕೊಳ್ಳಲಿ. ಕರ್ನಾಟಕದಲ್ಲಿ ಕಾಂಗ್ರೆಸ್ಗೆ ದಿನದಿಂದ ದಿನಕ್ಕೆ ಮೇಲೆ ಏರುತ್ತಿದೆ. ಹಲವಾರು ಬಿಜೆಪಿ ನಾಯಕರು ಕಾಂಗ್ರೆಸ್ನತ್ತ ಮುಖಮಾಡಿದ್ದಾರೆ. ಕರ್ನಾಟಕ ಬಿಜೆಪಿಗೆ ಹೆದರಿಕೆ ಶುರುವಾಗಿದೆ. ಇಡೀ ದೇಶದಲ್ಲಿಯೂ ಬಿಜೆಪಿಗೆ ಇದೇ ಸ್ಥಿತಿ ಇದೆ. ತೆಲಂಗಾಣದಲ್ಲಿ ಕಾಂಗ್ರೆಸ್ ನಂಬರ್ 2 ಸ್ಥಾನದಲ್ಲಿದೆ. ಚುನಾವಣೆ ಬರುವ ವೇಳೆಗೆ ನಂಬರ್ ಒನ್ ಸ್ಥಾನಕ್ಕೆ ಬಂದರೂ ಅಚ್ಚರಿ ಇಲ್ಲ ಎಂದರು.
ಬಿಜೆಪಿ, ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್ಗೆ ಯಾವುದೇ ಪರಿಣಾಮ ಬೀರಲ್ಲ. ಕಾಂಗ್ರೆಸ್ ಪಕ್ಷ ಸ್ವತಂತ್ರವಾಗಿ ಸ್ಪರ್ಧೆ ಮಾಡುತ್ತದೆ. ಲೋಕಸಭೆ ಚುನಾವಣೆಯಲ್ಲಿ 20ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸ ಇದೆ. ಬಿಜೆಪಿ, ಜೆಡಿಎಸ್ ಹಿಂದಿನಿಂದ ಒಳಗೊಳಗೆ ಒಂದಾಗೇ ಇದ್ದರೂ. ಇದೀಗ ಬಹಿರಂಗವಾಗಿ ಒಪ್ಪಂದ ಮಾಡಿಕೊಂಡಿದ್ದಾರೆ ಅಷ್ಟೇ ಎಂದು ಕಲಬುರಗಿ ನಗರದಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಹೇಳಿದರು.
ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಉಭಯ ಪಕ್ಷದ ವರಿಷ್ಠರು ಹೇಳಿಕೆ ನೀಡಿಲ್ಲ. ಬಿಜೆಪಿ-ಜೆಡಿಎಸ್ ಮೈತ್ರಿಗೆ ನಮ್ಮ ತಕರಾರು ಇಲ್ಲ. ಕಾಂಗ್ರೆಸ್ ಬಹಳ ಬಲಿಷ್ಠವಾಗಿದೆ ಎಂದು ಇದರಲ್ಲಿ ಎದ್ದು ಕಾಣುತ್ತಿದೆ. ನಮ್ಮ ಕಾರ್ಯಕ್ರಮ ಅನುಷ್ಠಾನದ ಆಧಾರದ ಮೇಲೆ ನಾವು ಚುನಾವಣೆಗೆ ಹೋಗುತ್ತೇವೆ. ಮುಂದೆ ಏನೇನು ತೀರ್ಮಾನಗಳಾಗುತ್ತೆ ಗೊತ್ತಿಲ್ಲ. ನಾವು 20 ಕ್ಷೇತ್ರದಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂದು ಬೆಂಗಳೂರಿನಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭವಿಷ್ಯ ನುಡಿದರು.
ಇದನ್ನೂ ಓದಿ: ಲೋಕಸಭೆ ಚುನಾವಣೆಗೆ ಬಿಜೆಪಿ, ಜೆಡಿಎಸ್ ಮೈತ್ರಿ; ಬಿಎಸ್ ಯಡಿಯೂರಪ್ಪ ಹೇಳಿದ್ದಿಷ್ಟು
ಜೆಡಿಎಸ್ ಅನುಕೂಲ ಸಿಂಧೂ ರಾಜಕಾರಣ ಮಾಡುವುದಕ್ಕೆ ಹೊರಟಿದೆ. ತತ್ವ ರಹಿತ ರಾಜಕಾರಣ ಜೆಡಿಎಸ್ನದ್ದು. ಬಿಜೆಪಿಯವರ ಫಲಿತಾಂಶ ಕೂಡ ಮೋದಿ ಠಿಖಾಣಿ ಹೂಡಿದರೂ ಶೂನ್ಯ ಆಯ್ತು. ಪಾರ್ಲಿಮೆಂಟ್ ಸದಸ್ಯರೇ ಚುನಾವಣೆಗೆ ಈ ಬಾರಿ ನಿಲ್ಲಲು ಹಿಂದೇಟು ಹಾಕುತ್ತಿದ್ದಾರೆ. ನಾವು ಹಿಂದೆ ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡಿದ್ದೇ ದೊಡ್ಡ ತಪ್ಪು, ದೊಡ್ಡ ಸಮಸ್ಯೆ ಆಗಿತ್ತು. ಹೀಗಾಗಿ ನಾವು ಇವತ್ತು ಮುಕ್ತವಾಗಿದ್ದೇವೆ. ನಮ್ಮ ಸ್ಟ್ರಾಟಜಿ ನಾವು ಮಾಡುತ್ತೇವೆ. ಅವರು ತಮ್ಮ ಪ್ರಯತ್ನ ಮಾಡಲಿ, ಆದರೆ ಜನ ನಮ್ಮ ಜೊತೆಗೆ ಇದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಜೆಡಿಎಸ್ನವರು ಆತಂಕದಲ್ಲಿ ಇದ್ದಾರೆ. ಕಾಂಗ್ರೆಸ್ ಜನಪ್ರಿಯತೆ ಇದೆ. ಹಾಗಾಗಿ ಅವರಿಗೆ ಆತಂಕ ಇದೆ. ಈ ಆತಂಕದಿಂದ ಅವರು ಮೈತ್ರಿ ಮಾಡಿಕೊಂಡಿದ್ದಾರೆ. ಬಿಜೆಪಿ ಸರ್ಕಾರ ಆಡಳಿತದಿಂದ ಜನರ ಜೀವನ ದುಸ್ಥಿತಿ ಆಗಿದೆ. ಉದ್ಯೋಗ ಕೊಡುತ್ತೇವೆ ಎಂದು ಕೋಟ್ಯಂತರ ಉದ್ಯೋಗ ಕಿತ್ತುಕೊಂಡಿದ್ದಾರೆ. ಶ್ರೀಮಂತರ ಬಿಜೆಪಿ ವಿರುದ್ಧ ದುಡಿಯುವ ಜನ ದಂಗೆ ಎದ್ದಿದ್ದಾರೆ. ಈ ಆತಂಕದಿಂದ ಅವರು ಮೈತ್ರಿ ಮಾಡಿಕೊಂಡಿದ್ದಾರೆ ಎಂದು ತುಮಕೂರಿನಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ವಿಧಾನಸಭಾ ಚುನಾವಣಾ ಫಲಿತಾಂಶ ಬಂದು ನಾಲ್ಕು ತಿಂಗಳಾಗಿದೆ. ವಿಪಕ್ಷ ನಾಯಕರ ಆಯ್ಕೆ ಮಾಡಿಲು ಅವರಿಂದ ಸಾಧ್ಯವಾಗಿಲ್ಲ. ಇದು ನಾಲಾಯಕತನ. ಅವರ ಆಂತರಿಕ ಕಚ್ಚಾಟದಿಂದ ವಿಪಕ್ಷ ನಾಯಕ ಆಯ್ಕೆ ಮಾಡಿಕೊಂಡಿಲ್ಲ. ವಿಧಾನಸಭೆ ಹಾಗೂ ವಿಧಾನ ಪರಿಷತ್ನಲ್ಲಿ ಎರಡಲ್ಲೂ ಆಗಿಲ್ಲ ಎಂದು ವಾಗ್ದಾಳಿ ಮಾಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:14 pm, Fri, 8 September 23