ಕಾಂಗ್ರೆಸ್​ ಒಳಜಗಳಗಳ ಜಿಲ್ಲಾವಾರು ಸ್ಯಾಂಪಲ್‌, ಬಿಜೆಪಿ ಬಿಡುಗಡೆ ಮಾಡಿದ ಪಟ್ಟಿ ಹೀಗಿದೆ ನೋಡಿ!

|

Updated on: Sep 04, 2023 | 2:58 PM

ತನ್ನ ಮನೆಯೊಳಗಿನ ಕಿಚ್ಚನ್ನೇ ನಿಯಂತ್ರಿಸಲು ವಿಫಲವಾಗಿರುವ ಕಾಂಗ್ರೆಸ್‌‌ಗೆ, ಸದಾ ಬೇರೆಯವರದ್ದೇ ಚಿಂತೆ ಜಾಸ್ತಿ. ಅವರ ಒಳಜಗಳಗಳ ಜಿಲ್ಲಾವಾರು ಸ್ಯಾಂಪಲ್‌ ಹೀಗಿದೆ ನೋಡಿ ಎಂದು ಕರ್ನಾಟಕ ಬಿಜೆಪಿ, ಕಾಂಗ್ರೆಸ್​ನಲ್ಲಿನ ಮುಸುಕಿನ ಗುದ್ದಾಟವನ್ನು ಬಹಿರಂಗಪಡಿಸಿದೆ.

ಕಾಂಗ್ರೆಸ್​ ಒಳಜಗಳಗಳ ಜಿಲ್ಲಾವಾರು ಸ್ಯಾಂಪಲ್‌, ಬಿಜೆಪಿ ಬಿಡುಗಡೆ ಮಾಡಿದ ಪಟ್ಟಿ ಹೀಗಿದೆ ನೋಡಿ!
ಬಿಜೆಪಿ-ಕಾಂಗ್ರೆಸ್​
Follow us on

ಬೆಂಗಳೂರು, (ಸೆಪ್ಟೆಂಬರ್ 04): ರಾಜ್ಯದಲ್ಲಿ ಕಾಂಗ್ರೆಸ್ (Congress) ಸರ್ಕಾರ ಅಧಿಕಾರದ ಗದ್ದುಗೆ ಹಿಡಿದು ಶತದಿನ ಪೂರೈಸಿದೆ. ಆದ್ರೆ ಕೆಲ ಹಿರಿಯ ಶಾಸಕರ ಮುನಿಸು ಮಾತ್ರ ತಣ್ಣಗಾಗುತ್ತಲೇ ಇಲ್ಲ. ಸಮಯ ಸಿಕ್ಕಾಗಲೆಲ್ಲಾ ಲೆಟರ್ ಪಾಲಿಟಿಕ್ಸ್  (Letter Politics) ಮಾಡುತ್ತಲೇ ಇದ್ದಾರೆ. ಕಳೆದ ತಿಂಗಳಷ್ಟೆ ಸಿಎಲ್ ಪಿ ಸಭೆಗಾಗಿ ಶಾಸಕರ ಸಹಿ ಸಂಗ್ರಹ ಮಾಡಿದ್ದ ಹಿರಿಯ ಶಾಸಕ ಬಸವರಾಜ ರಾಯರೆಡ್ಡಿ‌, ಇದೀಗ ಮತ್ತೊಮ್ಮೆ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದು ಸಂಚಲನ ಸೃಷ್ಟಿಸಿದ್ದಾರೆ. ಮತ್ತೊಂದೆಡೆ ಇದನ್ನೇ ಅಸ್ತ್ರವಾಗಿ ಮಾಡಿಕೊಂಡ ಪ್ರತಿಪಕ್ಷ ಬಿಜೆಪಿ (BJP), ಸಾಮಾಜಿಕ ಜಾಲತಾಣಗಳ ಮೂಲಕ ಕಾಂಗ್ರೆಸ್​ನಲ್ಲಿನ ಭಿನ್ನಮತ, ಅಸಮಾಧಾನ ಸೇರಿದಂತೆ ಪಕ್ಷದ ಹುಳುಕು​ಗಳನ್ನು ಬಹಿರಂಗಪಡಿಸುತ್ತಿದ್ದು, ಈಗ ಕಾಂಗ್ರೆಸ್​ ಪಕ್ಷದಲ್ಲೇ ಜಿಲ್ಲಾವಾರು ಒಳಜಗಳಗಳ ಸ್ಯಾಂಪಲ್‌ ಹೀಗಿದೆ ನೋಡಿ ಬಿಜೆಪಿ ಪಟ್ಟಿ ರಿಲೀಸ್ ಮಾಡಿದೆ.

  • ಕಲಬುರಗಿ : ಟ್ರೋಲ್‌ ಮಿನಿಸ್ಟರ್‌ ಪ್ರಿಯಾಂಕ್‌ ಖರ್ಗೆ ಅವರಿಗೆ ಸಚಿವ ಸ್ಥಾನ ನೀಡಿದ್ದು, ಕಲ್ಬುರ್ಗಿ ಜಿಲ್ಲೆಯ ಉಳಿದ ಕೈ ಶಾಸಕರಿಗೆ ಹಿಡಿಸಿಲ್ಲ. ಬಿ.ಆರ್. ಪಾಟೀಲ್‌ ಸರ್ಕಾರದ ವಿರುದ್ಧವೇ ಪತ್ರ ಬರೆದರೆ, ಅಜಯ್‌ ಸಿಂಗ್‌ ಪಕ್ಷದ ಚಟುವಟಿಕೆಗಳಿಂದ ದೂರ ದೂರ.
  • ರಾಯಚೂರು : ಶಾಸಕರೇ ಅಲ್ಲದ ಬೋಸರಾಜುಗೆ ಸಚಿವ ಸ್ಥಾನ ನೀಡಿದ್ದಕ್ಕೆ, ರಾಯಚೂರು ಕೈ ಶಾಸಕರು ರಾಜೀನಾಮೆ ಬೆದರಿಕೆ ಹಾಕಿದ್ದಾರೆ, ಅನುದಾನದ ಆಸೆ ತೋರಿಸಿ, ಸಿಎಂ ಸಿದ್ದರಾಮಯ್ಯ ತೇಪೆ ಹಚ್ಚಿದ್ದಾರೆ.
  • ಧಾರವಾಡ : ಸಂತೋಷ್‌ ಲಾಡ್‌ರಿಗೆ ಸಚಿವ ಸ್ಥಾನ ನೀಡಿದ್ದಕ್ಕೆ, ಡಿ.ಕೆ. ಶಿವಕುಮಾರ್‌ ಬಣದ ವಿನಯ್‌ ಕುಲಕರ್ಣಿ ಹಾಗೂ ಪರಮೇಶ್ವರ್‌ ಬಣದ ಪ್ರಸಾದ್‌ ಅಬ್ಬಯ್ಯ ನಿಗಿ ನಿಗಿ ಕೆಂಡ ಕಾರುತ್ತಿದ್ದಾರೆ.
  • ಶಿವಮೊಗ್ಗ : ನಿನ್ನೆ ಮೊನ್ನೆ ಬಂದ ಮಧು ಬಂಗಾರಪ್ಪರಿಗೇಕೆ ಮಂತ್ರಿಗಿರಿ ಎಂದು ಸಿದ್ದರಾಮಯ್ಯ ಬಣದ ಭದ್ರಾವತಿಯ ಸಂಗಮೇಶ್‌ ಗುರ್‌ ಎನ್ನುತ್ತಿದ್ದಾರೆ.
  • ದಾವಣಗೆರೆ : ಸಚಿವ ಎಸ್.ಎಸ್. ಮಲ್ಲಿಕಾರ್ಜುನ್‌ ಭ್ರಷ್ಟಾಚಾರಕ್ಕೆ ಬೇಸತ್ತು, ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜು ರಾಜೀನಾಮೆ ಬಿಸಾಡಿ ಹೊರಹೋಗುವ ಮಾತನಾಡಿದ್ದಾರೆ.
  • ಕೊಪ್ಪಳ : ಶಿವರಾಜ್‌ ತಂಗಡಗಿರಿಗೆ ಸಚಿವ ಸ್ಥಾನ ನೀಡಿದ್ದಕ್ಕೆ, ಶಾಸಕ ಬಸವರಾಜ ರಾಯರೆಡ್ದಿ, ಸರ್ಕಾರದ ಭ್ರಷ್ಟಾಚಾರವನ್ನು ಹೋದಲ್ಲಿ ಬಂದಲ್ಲಿ ಎಳೆ ಎಳೆಯಾಗಿ ಬಿಚ್ಚಿಡುತ್ತಿದ್ದಾರೆ.
  • ಬೆಳಗಾವಿ : ಸಿದ್ದರಾಮಯ್ಯ ಬಣದ ಸತೀಶ್‌ ಜಾರಕಿಹೊಳಿಯವರಿಗೂ ಹಾಗೂ ಡಿ.ಕೆ. ಶಿವಕುಮಾರ್‌ ಬಣದ ಲಕ್ಷ್ಮಿ ಹೆಬ್ಬಾಳ್ಕರ್‌‌ಗೂ ಹುಸಿ ಮುನಿಸು, ಕಾಂಗ್ರೆಸ್ಸಿಗೆ ಬೆಳಗಾವಿ ಸೂತ್ರ ಹರಿದ ಗಾಳಿಪಟವಾಗಿದೆ.
  • ಬೆಂಗಳೂರು : ಡಿಸಿಎಂ ಡಿ.ಕೆ. ಶಿವಕುಮಾರ್‌‌ರವರ ಏಕಪಕ್ಷೀಯ ನಡೆಗಳಿಗೆ ಬೇಸತ್ತು, ಬೆಂಗಳೂರು ಕೈ ಶಾಸಕರು, ಡಿ.ಕೆ. ಶಿವಕುಮಾರ್‌‌ರವರ ಸಿಟಿ ರೌಂಡ್ಸ್‌ಗೆ ಚಕ್ಕರ್‌ ಹಾಕುತ್ತಿದ್ದಾರೆ.

ಇದನ್ನೂ ಓದಿ: ಸಿಎಂಗೆ ಬರೆದ ಪತ್ರದ ಹಿಂದಿನ ಕಾರಣವನ್ನು ರಿವೀಲ್​ ಮಾಡಿದ ಶಾಸಕ ಬಸವರಾಜ ರಾಯರೆಡ್ಡಿ

ಇದೆಲ್ಲದರ ನಡುವೆ ತಮಗೆ ಮಂತ್ರಿಗಿರಿ ತಪ್ಪಿಸಿದರು ಎಂಬ ಕಾರಣಕ್ಕೆ, ಡಿ.ಕೆ. ಶಿವಕುಮಾರ್‌‌ರವರ ಸಂಪೂರ್ಣ ಸಹಕಾರದೊಂದಿಗೆ ವಿಧಾನ ಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್, ಸಿಎಂ ಸಿದ್ದರಾಮಯ್ಯ ಕುರ್ಚಿಗೆ ಟೈಂ ಬಾಂಬ್‌ ಇಟ್ಟಿದ್ದಾರೆ. ಇದರೊಂದಿಗೆ ಕಾಂಗ್ರೆಸ್ ಬ್ಲಾಸ್ಟ್‌ ಆಗುವುದು ಖಚಿತ ಹಾಗೂ ನಿಶ್ಚಿತ ಎಂದು ಬಿಜೆಪಿ ಭವಿಷ್ಯ ನುಡಿದಿದೆ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ