ಡಿಕೆ ಶಿವಕುಮಾರ್ ಭೇಟಿಯಾದ ತೇಜಸ್ವಿನಿ ಅನಂತಕುಮಾರ್, ಕುತೂಹಲ ಕೆರಳಿಸಿದ ಮಾತುಕತೆ
ಕಳೆದ ಲೋಕಸಭಾ ಚುನಾವಣೆ ವೇಳೆ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ತೇಜಸ್ವಿನಿ ಅನಂತಕುಮಾರ್ ಅವರು ಸ್ಪರ್ಧೆ ಮಾಡುತ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಬಿಜೆಪಿಯಿಂದ ಟಿಕೆಟ್ ಕೈತಪ್ಪಿತ್ತು. ಅಷ್ಟೇ ಅಲ್ಲದೆ, ಇವರ ಪುತ್ರಿ ವಿಜೇತಾ ಅವರು ಜೆಡಿಎಸ್ ಪರ ಟ್ವೀಟ್ ಮಾಡುವ ಮೂಲಕ ಅವರು ದಳ ಸೇರುತ್ತಾರೆಯೇ ಎಂಬ ಕುತೂಹಲ ಮೂಡಿಸಿತ್ತು. ಇದೀಗ ತೇಜಸ್ವಿನಿ ಅವರು ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿರುವುದು ಮತ್ತಷ್ಟು ಕುತೂಹಲ ಕೆರಳಿಸಿದೆ.
ಬೆಂಗಳೂರು, ಸೆ.4: ಮಾಜಿ ಕೇಂದ್ರ ಸಚಿವ ದಿ.ಅನಂತ್ ಕುಮಾರ್ ಪತ್ನಿ ತೇಜಸ್ವಿನಿ ಅನಂತಕುಮಾರ್ (Tejaswini Ananth Kumar) ಅವರು ಇಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (D.K.Shivakumar) ಅವರನ್ನು ಭೇಟಿಯಾಗಿದ್ದಾರೆ. ಕುಮಾರಕೃಪಾ ಅತಿಥಿ ಗೃಹದಲ್ಲಿ ಡಿಸಿಎಂ ಭೇಟಿಯಾಗಿ ನಡೆಸಿದ ಮಾತುಕತೆ ರಾಜ್ಯ ರಾಜಕಾರಣದಲ್ಲಿ ಭಾರೀ ಕುತೂಹಲ ಮೂಡಿಸಿದೆ.
ಕಳೆದ ಲೋಕಸಭಾ ಚುನಾವಣೆ ವೇಳೆ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ತೇಜಸ್ವಿನಿ ಅನಂತಕುಮಾರ್ ಅವರು ಸ್ಪರ್ಧೆ ಮಾಡುತ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಬಿಜೆಪಿಯಿಂದ ಟಿಕೆಟ್ ಕೈತಪ್ಪಿತ್ತು. ಸದ್ಯ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ತೇಜಸ್ವಿನಿ ಅವರಿಗೆ 2024ರ ಲೋಕಸಭೆ ಚುನಾವಣೆಯಲ್ಲೂ ಟಿಕೆಟ್ ಸಿಗುವುದು ಅನುಮಾನ ಎಂದು ಹೇಳಲಾಗುತ್ತಿದೆ.
ಈ ನಡುವೆ ಆಪರೇಷನ್ ಹಸ್ತದ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ಡಿಕೆ ಶಿವಕುಮಾರ್ ಅವರನ್ನು ತೇಜಸ್ವಿನಿ ಅನಂತಕುಮಾರ್ ಅವರು ಭೇಟಿಯಾಗಿ ಮಾತುಕತೆ ನಡೆಸಿರುವುದು ಬಿಜೆಪಿ ನಾಯಕರಿಗೆ ಶಾಕ್ ನೀಡಿದ್ದು, ಕಾಂಗ್ರೆಸ್ ಕಾರ್ಯಕರ್ತರಲ್ಲಿ ಕುತೂಹಲ ಮೂಡಿಸಿದೆ.
ಇದನ್ನೂ ಓದಿ: ಸುದೀಪ್ ಬರ್ತ್ಡೇ ಪಾರ್ಟಿಯಲ್ಲಿ ಆಪರೇಷನ್ ಹಸ್ತಕ್ಕೆ ಕೈ ಹಾಕಿದ್ರಾ ಡಿಕೆ ಶಿವಕುಮಾರ್? ಬಿಜೆಪಿ ನಾಯಕರೊಂದಿಗಿನ ಫೋಟೋ ವೈರಲ್
ಅನಂತಕುಮಾರ್ ಅವರು ರಾಜಕೀಯ ಜೀವನದುದ್ದಕ್ಕೂ ಪಕ್ಷ ನಿಷ್ಠರಾಗಿದ್ದವು. ಇವರ ನಿಧನ ನಂತರ ಇವರ ಪತ್ನಿ ತೇಜಸ್ವಿನಿ ಅವರಿಗೆ ಟಿಕೆಟ್ ನೀಡಬೇಕೆಂಬ ಒತ್ತಾಯಗಳು ಕೇಳಿಬಂದಿದ್ದವು. ಆದರೆ ಕುಟುಂಬ ರಾಜಕಾರಣವನ್ನು ವಿರೋಧಿಸುವ ಬಿಜೆಪಿ ಹೈಕಮಾಂಡ್, ತೇಜಸ್ವಿನಿ ಅವರಿಗೆ ಟಿಕೆಟ್ ನೀಡಿಲ್ಲ. ಈ ಎಲ್ಲಾ ಬೆಳವಣಿಗೆ ನಂತರ ಅನಂತಕುಮಾರ್ ಪುತ್ರಿ ವಿಜೇತಾ ಅವರು ಟ್ವೀಟ್ ಮಾಡಿ ಜೆಡಿಎಸ್ ಪರ ಬ್ಯಾಟ್ ಬೀಸಿದ್ದರು.
ಅಷ್ಟೇ ಅಲ್ಲದೆ, ಬಿಜೆಪಿಯನ್ನು ಕಟ್ಟಿ ಬೆಳೆಸಿದ ನನ್ನ ತಂದೆಯನ್ನು ಮರೆಯುತ್ತಿರುವ ಆ ಪಕ್ಷವೀಗ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ವಿಜೇತಾ ಅವರು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು. ಅನಂತಕುಮಾರ್‌ಗೆ ಸಿಗಬೇಕಾದ ಮನ್ನಣೆ ಸಿಗುತ್ತಿಲ್ಲ. ಇದರಿಂದಾಗಿ ಬಿಜೆಪಿಯ ಒಂದು ವರ್ಗದ ಕಾರ್ಯಕರ್ತರು ಅಸಮಾಧಾನಗೊಂಡಿದ್ದಾರೆ ಎಂಬ ಪತ್ರಿಕಾ ವರದಿಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದರು.
ತೇಜಸ್ವಿನಿ ಅನಂತಕುಮಾರ್ ಅವರು 2019ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣದ ಬಿಜೆಪಿ ಟಿಕೆಟ್ ಅನ್ನು ತೇಜಸ್ವಿನಿ ಬದಲಿಗೆ ತೇಜಸ್ವಿ ಸೂರ್ಯ ಅವರಿಗೆ ನೀಡಲಾಗಿತ್ತು. ಅಲ್ಲದೆ, 2023ರ ವಿಧಾನಸಭಾ ಚುನಾವಣೆಯಲ್ಲಿ ತೇಜಸ್ವಿನಿ ಅವರಿಗೆ ಅವಕಾಶ ನೀಡುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೂ ಟಿಕೆಟ್ ಘೋಷಣೆಯಾಗಿರಲಿಲ್ಲ.
ಹೀಗಾಗಿ ಫೇಸ್ಬುಕ್ನಲ್ಲಿ ಪರೋಕ್ಷವಾಗಿ ಪಕ್ಷದ ವಿರುದ್ಧ ಅಸಮಾಧಾನ ಹೊರಹಾಕಿದ್ದ ತೇಜಸ್ವಿನಿ, ಮಾತು ಬೆಳ್ಳಿ ಹೌದೋ ಅಲ್ಲವೋ ಗೊತ್ತಿಲ್ಲ. ಆದರೆ, ಮೌನ ಮಾತ್ರ ಬಂಗಾರ, ಏನಂತರಿ? ಎಂದು ಬರೆದಿದ್ದರು. ಆ ಮೂಲಕ ಟಿಕೆಟ್ ನೀಡದ ಬಗ್ಗೆ ಅಸಮಾಧಾನ ಇದ್ದರೂ ಪಕ್ಷ ನಿರ್ಧಾರಕ್ಕೆ ಗೌರವ ನೀಡಬೇಕು ಎಂಬ ಕಾರಣಕ್ಕೆ ಮೌನವಾಗಿದ್ದೇನೆ ಎಂದು ಮಾರ್ಮಿಕವಾಗಿ ನುಡಿದಂತಿತ್ತು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ