Karnataka Breaking News Highlights: ಖಾಸಗಿ ಸಾರಿಗೆ ಒಕ್ಕೂಟಗಳ ಬೇಡಿಕೆ ಈಡೇರಿಸುವುದಾಗಿ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಭರವಸೆ ನೀಡಿದ ಹಿನ್ನೆಲೆ ಮುಷ್ಕರ ಹಿಂಪಡೆಯಾಗಲಿದೆ. ಇದೀಗ, ವಂಚನೆ ಪ್ರಕರಣ ಸಂಬಂಧ ಹಿಂದುತ್ವ ಹೆಸರಿನಲ್ಲಿ ಭಾಷಣ ಮಾಡುತ್ತಿದ್ದ ಚೈತ್ರಾ ಕುಂದಾಪುರ (Chaitra Kundapura) ಅರೆಸ್ಟ್ ಆಗಿದ್ದು, ಈಕೆಗೆ ಕಾಂಗ್ರೆಸ್ ವಕ್ತಾರೆ ಸುರಯ್ಯ ಅಂಜುಂ ಆಶ್ರಯ ನೀಡಿದ್ದರು ಎಂಬೂದು ಬೆಳಕಿಗೆ ಬಂದಿದೆ. ಈ ಬಗ್ಗೆ ರಾಜಕೀಯ ಕೆಸರೆರಚಾಟಗಳು ನಡೆಯುತ್ತಿವೆ. ಇದರ ಜೊತೆಗೆ ಗ್ಯಾರಂಟಿ (Guarantee Schemes) ಚರ್ಚೆ, ಲೋಕಸಭೆ ಚುನಾವಣೆ (Lok Sabha Elections) ತಯಾರಿ, ಬಿಜೆಪಿ-ಜೆಡಿಎಸ್ ಮೈತ್ರಿ, ಪ್ರಜ್ವಲ್ ರೇವಣ್ಣ ಸಂಸದ ಸ್ಥಾನ ಅನರ್ಹ, ಕಾವೇರಿ ನೀರು ವಿವಾದ (Cauvery Water), ಮೈಸೂರು ದಸಾರ (Mysuru Dasara) ಸೇರಿದಂತೆ ಪ್ರಸಕ್ತ ವಿದ್ಯಾಮಾನಗಳಿಗೆ ಸಂಬಂಧಿಸಿದ ಕ್ಷಣ ಕ್ಷಣದ ಮಾಹಿತಿಯನ್ನು ಟಿವಿ9 ಡಿಜಿಟಲ್ ಲೈವ್ನಲ್ಲಿ ವೀಕ್ಷಿಸಿ.
ರಾಜಸ್ಥಾನದ ಜೈಪುರದಲ್ಲಿ ಸಿಎಂ ಅಶೋಕ್ ಗೆಹಲೊಟ್ರನ್ನು ಡಿಸಿಎಂ ಡಿ.ಕೆ ಶಿವಕುಮಾರ್ ಭೇಟಿ ಮಾಡಿ ಚರ್ಚೆ ಮಾಡಿದ್ದಾರೆ.
ತಮಿಳುನಾಡಿಗೆ ಮತ್ತೆ ನೀರು ಹರಿಸುವಂತೆ ಆದೇಶ ವಿರೋಧಿಸಿ ಮೈಸೂರಿನಲ್ಲಿ ಮೇಣದ ಬತ್ತಿ ಮೆರವಣಿಗೆ ಮಾಡಲಾಯಿತು. ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸದಂತೆ ಮೈಸೂರು ಕನ್ನಡ ವೇದಿಕೆಯಿಂದ ಪ್ರತಿಭಟನೆ ಮಾಡಲಾಗಿದೆ.
ಅನುಮತಿ ಕೊಡದಿದ್ದರೂ ಈದ್ಗಾದಲ್ಲಿ ಗಣಪತಿ ಪ್ರತಿಷ್ಠಾಪನೆ ಮಾಡುತ್ತೇವೆ ಎಂದು ರಾಜ್ಯ ಸರ್ಕಾರಕ್ಕೆ ಶಾಸಕ ಅರವಿಂದ ಬೆಲ್ಲದ ಎಚ್ಚರಿಕೆ ನೀಡಿದ್ದಾರೆ. ಈದ್ಗಾದಲ್ಲಿ ಗಣಪತಿ ಪ್ರತಿಷ್ಠಾಪನೆಗೆ ಅನುಮತಿ ಕೊಟ್ಟರೂ ಮಾಡುತ್ತೇವೆ. ಅನುಮತಿ ಕೊಡದೇ ಇದ್ದರೂ ಪ್ರತಿಷ್ಠಾಪನೆ ಮಾಡಿಯೇ ಮಾಡುತ್ತೇವೆ ಎಂದು ಹೇಳಿದ್ದಾರೆ.
JDS ಪ್ರಮುಖ ನಾಯಕ ಕಬಡ್ಡಿ ಬಾಬುಗೆ ಕಾಂಗ್ರೆಸ್ಗೆ ಆಹ್ವಾನಿಸಿದ್ದೇವೆ ಎಂದು ಕಬಡ್ಡಿ ಬಾಬು ಭೇಟಿ ನಂತರ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ. ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲೂ ಪಕ್ಷ ಬಲವರ್ಧನೆ ಕೆಲಸ ಮಾಡುತ್ತಿದ್ದೇವೆ. ಕಬಡ್ಡಿ ಬಾಬು, ಪುತ್ರ ಕಾಂಗ್ರೆಸ್ ಪಕ್ಷ ಸೇರಲು ಆಸಕ್ತಿ ತೋರಿಸಿದ್ದಾರೆ. ಬೆಂಗಳೂರು ದಕ್ಷಿಣ, ಪದ್ಮನಾಭನಗರ ಕ್ಷೇತ್ರದ ಹಲವರು ಪಕ್ಷ ಸೇರ್ತಾರೆ. ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತ ಒಪ್ಪಿ ಸೇರುವುದಾಗಿ ಮುಂದೆ ಬಂದಿದ್ದಾರೆ. ಬಿಜೆಪಿ, ಜೆಡಿಎಸ್ ಒಂದಾಗುತ್ತಿರುವ ಬಗ್ಗೆ ಕೇಳಿದ್ದೇನೆ ಎಂದು ಹೇಳಿದ್ದಾರೆ.
ಬೆಂಗಳೂರು: ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಆಯುಕ್ತರಾಗಿ ಐಎಎಸ್ ಅಧಿಕಾರಿ ಎಂ.ಎನ್.ನಾಗರಾಜು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ.
ಸಿಎಂ ಸಿದ್ದರಾಮಯ್ಯ ವಿರುದ್ಧ ಬಿ.ಕೆ.ಹರಿಪ್ರಸಾದ್ ಪರೋಕ್ಷ ವಾಗ್ದಾಳಿ ವಿಚಾರವಾಗಿ ಬಿ.ಕೆ.ಹರಿಪ್ರಸಾದ್ ಮನವೊಲಿಸಲು ಹಿರಿಯ ಸಚಿವದ್ವಯರು ಮುಂದಾಗಿದ್ದಾರೆ. ಸೆವೆನ್ ಮಿನಿಸ್ಟರ್ಸ್ ಕ್ವಾರ್ಟರ್ಸ್‌ನಲ್ಲಿರುವ ಬಿ.ಕೆ.ಹರಿಪ್ರಸಾದ್ ನಿವಾಸಕ್ಕೆ ಗೃಹ ಸಚಿವ ಪರಮೇಶ್ವರ್, ಸಚಿವ ಸತೀಶ್ ಜಾರಕಿಹೋಳಿ ಭೇಟಿ ನೀಡಿದ್ದಾರೆ.
ಇಂದಿರಾ ಕ್ಯಾಂಟೀನ್‌ಗೂ, ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಅದು ನನ್ನ ಬಿಸಿನೆಸ್, ಇದು ನನಗೆ ಆಗಿರುವ ವಂಚನೆ ಎಂದು ಬೆಂಗಳೂರಿನ ಸಿಸಿಬಿ ಕಚೇರಿ ಬಳಿ ಗೋವಿಂದಬಾಬು ಪೂಜಾರಿ ಹೇಳಿದ್ದಾರೆ. ಸಿಸಿಬಿ ಅಧಿಕಾರಿಗಳು ಕರೆದಿದ್ದಕ್ಕೆ ವಿಚಾರಣೆಗೆ ಆಗಮಿಸಿದ್ದೇನೆ. ದೂರಿನಲ್ಲಿ ಯಾರೆಲ್ಲಾ ಇದ್ದಾರೋ ಅವರನ್ನೆಲ್ಲಾ ಭೇಟಿಯಾಗಿದ್ದೇನೆ ಎಂದರು.
ಭಾರತೀಯ ಜನತಾ ಪಕ್ಷದಲ್ಲೇ ಇದ್ದೇನೆ, ನಾನು ಸೈಲೆಂಟ್ ಆಗಿಲ್ಲ ಎಂದು ಬೆಂಗಳೂರಿನಲ್ಲಿ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ. ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಹೋಗುವ ಯೋಚನೆ ಇಲ್ಲ. ರಾಮಲಿಂಗಾರೆಡ್ಡಿ ಜತೆ ಯಾವುದೇ ರಾಜಕೀಯ ಚರ್ಚೆ ಮಾಡಿಲ್ಲ ಎಂದು ಹೇಳಿದ್ದಾರೆ.
ಇಂದಿರಾ ಕ್ಯಾಂಟೀನ್ ಬಾಕಿ ಬಿಲ್ಗೆ ಷಡ್ಯಂತ್ರ ಎಂಬ ಚೈತ್ರಾ ಕುಂದಾಪುರ ಆರೋಪಕ್ಕೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸ್ಪಷ್ಟನೆ ನೀಡಿದ್ದು, ಇಂದಿರಾ ಕ್ಯಾಂಟೀನ್ ಬಹುತೇಕ ಬಿಲ್ ಕ್ಲಿಯರ್ ಮಾಡಲಾಗಿದೆ. ಕೆಲವು ಸಣ್ಣಪುಟ್ಟ ಬಿಲ್ ಬಾಕಿ ಉಳಿಸಿಕೊಂಡಿರಬೇಕು. ಕಾನೂನಾತ್ಮಕವಾಗಿ ಇಂದಿರಾ ಕ್ಯಾಂಟೀನ್ ಬಿಲ್ ಪಾವತಿ ಆಗಿದೆ. ಗುತ್ತಿಗೆದಾರರಿಗೆ ಯಾವುದೇ ರೀತಿಯ ಬಿಲ್ ಬಾಕಿ ಉಳಿಸಿಕೊಂಡಿಲ್ಲ ಎಂದು ಹೇಳಿದರು.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿ ವಿಚಾರವಾಗಿ ವಿಧಾನಸೌಧದಲ್ಲಿ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿಕೆ ನೀಡಿದ್ದು, ಸ್ವಲ್ಪದಿನ ಕಾದು ನೋಡಿ ಏನಾಗಲಿದೆ ಅಂತಾ ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.
ತಮಿಳುನಾಡಿಗೆ ಒಂದು ತೊಟ್ಟು ನೀರನ್ನು ಕೂಡ ಬಿಡಬಾರದು ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಆಗ್ರಹಿಸಿದ್ದಾರೆ. ನೀರು ಬಿಟ್ಟು ರಾಜ್ಯ ಸರ್ಕಾರ ಅಕ್ಷಮ್ಯ ಅಪರಾಧ ಮಾಡಿದೆ. ಕೂಡಲೇ ಸರ್ಕಾರ ನೀರು ಹರಿಸುವುದನ್ನು ನಿಲ್ಲಿಸಬೇಕು ಎಂದು ಹೇಳಿದ್ದಾರೆ.
ದೆಹಲಿಯಲ್ಲಿ ನಡೆದ ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸಭೆಯಲ್ಲಿ ಮೈತ್ರಿ ವಿಚಾರವಾಗಿ ಚರ್ಚೆಯಾಗಿಲ್ಲ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ವರಿಷ್ಠರ ಜೊತೆ ರಾಜ್ಯ ರಾಜಕೀಯ ವಿಚಾರದ ಬಗ್ಗೆ ಚರ್ಚೆಯಾಗಿಲ್ಲ. ನರೇಂದ್ರ ಮೋದಿ, ಅಮಿತ್ ಶಾ ಮನಸ್ಸಿನಲ್ಲಿ ಏನಿದೆಯೋ ಗೊತ್ತಿಲ್ಲ. ಮೈತ್ರಿಗೆ ರಾಜ್ಯ ಬಿಜೆಪಿ ನಾಯಕರ ಆಕ್ಷೇಪ ಅಂತಾ ಏನೂ ಇಲ್ಲ. ಆದರೆ ವರಿಷ್ಠರು ಏನು ತೀರ್ಮಾನ ಮಾಡುತ್ತಾರೋ ನೋಡಬೇಕು. ಇದರಲ್ಲಿ ವೈಯಕ್ತಿಕ ಅಭಿಪ್ರಾಯ ಏನೂ ಇರುವುದಿಲ್ಲ ಎಂದರು.
ಜೆಡಿಎಸ್ – ಬಿಜೆಪಿ ಮೈತ್ರಿ ಬಗ್ಗೆ ಯಡಿಯೂರಪ್ಪ ಹೇಳಿದ್ದರು. ಏನು ಮಾತುಕತೆ ಆಗಿದೆ, ಎಷ್ಟು ಹಂಚಿಕೆ ಆಗಿದೆ ಎಂದು ಹೇಳಿದ್ದರು. ನಿನ್ನೆ ನನಗೆ ಏನೂ ಗೊತ್ತಿಲ್ಲ ಎಂದು ಹೇಳಿದ್ದಾರೆ. ಯಡಿಯೂರಪ್ಪ ಅವರಿಗೆ ಬಿಜೆಪಿ ನಾಯಕರು ಬೆದರಿಕೆ ಹಾಕಿದ್ದಾರೆ. ಯಡಿಯೂರಪ್ಪ ಅವರ ಕುಟುಂಬವನ್ನ ಸೈಡ್ ಲೈನ್ ಮಾಡಿದ್ದಾರೆ. ಮೈತ್ರಿ ಮಾತುಕತೆಯಲ್ಲಿ ಯಡಿಯೂರಪ್ಪ ಅವರ ಅಭಿಪ್ರಾಯ ಪಡೆದಿಲ್ಲ. ಯಡಿಯೂರಪ್ಪ ಅವರನ್ನು ಮೂಲೆ ಗುಂಪು ಮಾಡಲು ಜೆಡಿಎಸ್ ಜೊತೆಗೆ ಬಿಜೆಪಿ ಹೋಗುತ್ತಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ರಮೇಶ್ ಬಾಬು ಹೇಳಿದ್ದಾರೆ.
ಮಂಗಳೂರು: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿ ವಿಚಾರವಾಗಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮೈತ್ರಿಯಲ್ಲಿ ಕ್ಷೇತ್ರ ಹಂಚಿಕೆ ಅಂತಿಮ ಹಂತ ತಲುಪಿಲ್ಲ. ಪ್ರಾಥಮಿಕ ಹಂತದಲ್ಲಿದೆ, ಬರುವ ದಿನಗಳಲ್ಲಿ ವರಿಷ್ಠರು ಚರ್ಚಿಸ್ತಾರೆ. ಮೈತ್ರಿ ಸಮಯದಲ್ಲಿ ನಮ್ಮ ಜತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ತಾರೆ. ವಿರೋಧ ಪಕ್ಷಗಳಾಗಿ ಒಂದಾಗಿ ಹೆಚ್ಚು ಸೀಟ್ ಗೆಲ್ಲುವ ಉದ್ದೇಶವಾಗಿದೆ. ಈವರೆಗೆ ನಮ್ಮ ಅಭಿಪ್ರಾಯ ಪಡೆಯುವ ಹಂತಕ್ಕೆ ಬಂದಿಲ್ಲ ಎಂದರು.
ಮಂಗಳೂರು: ಚೈತ್ರಾ ಕುಂದಾಪುರ ಕೋಟಿ ಡೀಲ್ ಪ್ರಕರಣ ಸಂಬಂಧ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಚೈತ್ರಾ ಕುಂದಾಪುರ ಕೇಸ್ ನ ವ್ಯವಹಾರಕ್ಕೂ ನಮಗೂ ಸಂಬಂಧವಿಲ್ಲ. ಈ ಪ್ರಕರಣದಲ್ಲಿ ಸಮಗ್ರ ತನಿಖೆ ಆಗಬೇಕು, ಯಾರೇ ಇದ್ದರೂ ಉಗ್ರ ಶಿಕ್ಷೆ ಆಗಲಿ. ಸ್ವಾಮೀಜಿ ಅಲ್ಲ, ಯಾರೇ ಇದ್ದರೂ ಅವರ ಬಂಧನ ಆಗಬೇಕು. ಟಕೆಟ್ ಕೊಡಿಸುತ್ತೇವೆ ಅಂತ ಹಣ ಪಡೆದಿರೋದನ್ನ ನಾವು ಗಂಭೀರವಾಗಿ ಪರಿಗಣಿಸ್ತೇವೆ. ಬಿಜೆಪಿಗೆ ಇದರಲ್ಲಿ ಯಾವುದೇ ಸಂಬಂಧ ಇಲ್ಲ ಎನ್ನುವುದು ಸ್ಪಷ್ಟ. ಹೋರಾಟ ಹಲವರು ಮಾಡ್ತಾರೆ, ಹಾಗಂತ ಅದಕ್ಕೆಲ್ಲವಕ್ಕೂ ಪಕ್ಷಕ್ಕೆ ಸಂಬಂಧ ಇಲ್ಲ. ತನಿಖೆ ಆಗಲಿ, ದೊಡ್ಡ ದೊಡ್ಡ ಹೆಸರನ್ನು ಅಪರಾಧಿ ಸ್ಥಾನದಲ್ಲಿ ಇದ್ದವರು ಹೇಳುತ್ತಾರೆ. ಆದರೆ ತನಿಖೆ ಆಗಿ ಅದರ ಸತ್ಯ ಹೊರ ಬರಲಿ ಎಂದರು.
ವಂಚನೆ ಪ್ರಕರಣದಲ್ಲಿ ಚೈತ್ರಾ ಕುಂದಾಪುರ ಬಂಧನವಾಗಿದೆ. ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಹಿಂದೂ ಸಂಘಟನೆಗೂ ಇದಕ್ಕೂ ತಳಕು ಹಾಕುವುದು ಸರಿಯಲ್ಲ. ಹಿಂದೂ ಪರ ಭಾಷಣ ಮಾಡಿರುವುದನ್ನು ನಾನೂ ನೋಡಿದ್ದೇನೆ. ಆದರೆ ಈ ವಿಚಾರವನ್ನು ಸಂಘಟನೆಗೆ ಸೇರಿಸುವುದು ಸರಿಯಲ್ಲ. ಇದೊಂದು ಪ್ರತ್ಯೇಕ ಪ್ರಕರಣ ಅಂತಲೇ ಪರಿಗಣಿಸಬೇಕಾಗುತ್ತದೆ ಎಂದರು.
ಚೈತ್ರಾ ಕುಂದಾಪುರ ಅವರನ್ನು ಬಂಧಿಸಿದ ಬಗ್ಗೆ ಪ್ರತಿಕ್ರಿಯೆ ನೀಡಿದ ಗೃಹಸಚಿವ ಡಾ.ಜಿ.ಪರಮೇಶ್ವರ, ನನಗೆ ಬಂದ ಮಾಹಿತಿ ಪ್ರಕಾರ
ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹಣ ಪಡೆದಿದ್ದಾರೆ. 3.5 ಕೋಟಿ ರೂಪಾಯಿ ಹಣ ಪಡೆದಿರುವ ಬಗ್ಗೆ ಕಂಪ್ಲೆಂಟ್ ಆಗಿದೆ. ಸಿಸಿಬಿ ಪೊಲೀಸರ ತನಿಖೆ ಬಳಿಕ ಉಳಿದ ವಿಚಾರ ಗೊತ್ತಾಗಲಿದೆ. ಕೇಸ್ನಲ್ಲಿ ಸ್ವಾಮೀಜಿ ಭಾಗಿಯಾಗಿದ್ದರೆ ಅವರ ಬಂಧನವೂ ಆಗುತ್ತದೆ. ಪೊಲೀಸರು ಸುಮೊಟೋ ಕೇಸ್ ದಾಖಲಿಸಿಲ್ಲ. ಕಂಪ್ಲೆಂಟ್ ಆಧಾರದ ಮೇಲೆ ಚೈತ್ರಾ ಕುಂದಾಪುರ ಬಂಧನ ಆಗಿದೆ. ಯಾರೇ ತಪ್ಪು ಮಾಡಿದರೂ ಕೂಡ ಕಾನೂನಿನಡಿ ಕ್ರಮ ಆಗಲಿದೆ. ಚೈತ್ರಾ ಕುಂದಾಪುರ ಹಿಂದೂ ಪರವಾಗಿ ಭಾಷಣ ಮಾಡಿದ್ದಾರೆ. ಈ ಪ್ರಕರಣವನ್ನು ಅದಕ್ಕೆ ಮಿಕ್ಸಪ್ ಮಾಡುವುದು ಬೇಡ ಎಂದರು.
ಮಾಜಿ ಡಿಸಿಎಂ ಗೋವಿಂದ ಕಾರಜೋಳ ನೇತೃತ್ವದ ಬಿಜೆಪಿ ನಿಯೋಗ ಮುನಿಯಮ್ಮ ನಿವಾಸಕ್ಕೆ ಭೇಟಿ ನೀಡಿದೆ. ವಿಧಾನ ಪರಿಷತ್ ಸದಸ್ಯರಾದ ಎನ್. ರವಿಕುಮಾರ್ ಹಾಗೂ ಛಲವಾದಿ ನಾರಾಯಣಸ್ವಾಮಿ ಇದ್ದಾರೆ. ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ.ಸುಧಾಕರ್ ಅವರು ವಂಚನೆ ಎಸಗಿದ ಆರೋಪ ಸಂಬಂಧ ವಂಚನೆಗೊಳಗಾದ ಮುನಿಯಮ್ಮ ಕುಟುಂಬಸ್ಥರು ದೂರು ನೀಡಿದ್ದರು.
ನೆರೆ ರಾಜ್ಯ ಕೇರಳದಲ್ಲಿ ನಿಫಾ ವೈರಸ್ ಪ್ರಕರಣ ಹೆಚ್ಚಾದ ಹಿನ್ನೆಲೆ ಮೈಸೂರು ಜಿಲ್ಲೆಯಲ್ಲಿ ಆರೋಗ್ಯ ಇಲಾಖೆಯಿಂದ ಹೈಅಲರ್ಟ್ ಘೋಷಿಸಿದೆ. ರಾಜ್ಯಕ್ಕೆ ಪ್ರವೇಶಿಸುವ ಪ್ರಯಾಣಿಕರ ಮೇಲೆ ಪೊಲೀಸರು ನಿಗಾ ಇರಿಸಿದ್ದು, ಹೆಚ್.ಡಿ.ಕೋಟೆ ತಾಲೂಕಿನ ಬಾವಲಿ ಚೆಕ್ಪೋಸ್ಟ್ನಲ್ಲಿ ಗಡಿ ಪ್ರವೇಶಿಸುವ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ. ಪ್ರತಿ ವಾಹನದ ವಿವರ ಪಡೆದುಕೊಂಡು ಪ್ರಯಾಣಿಕರ ಮೇಲೆ ನಿಗಾ ಇರಿಸಲಾಗುತ್ತಿದೆ. ಅಲ್ಲದೆ, ನಿಫಾ ಬಗ್ಗೆ ಸಿಬ್ಬಂದಿ ಜಾಗೃತಿ ಮೂಡಿಸುತ್ತಿದ್ದಾರೆ.
ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್, ಆಪರೇಷನ್ ಹಸ್ತವನ್ನು ಕ್ಷೇತ್ರದಿಂದ ಕ್ಷೇತ್ರಕ್ಕೆ ವಿಸ್ತರಿಸುತ್ತಿದೆ. ಬಿಜೆಪಿ ಶಾಸಕರ ಕ್ಷೇತ್ರದಲ್ಲಿ ನಾಯಕರ ಸೆಳೆಯುವ ಪ್ರಯತ್ನ ಮುಂದುವರಿಸಲಾಗಿದ್ದು, ಪದ್ಮನಾಭ ನಗರ ಕ್ಷೇತ್ರದ ಬಳಿಕ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲೂ ಆಪರೇಷನ್ಗೆ ಕೈಹಾಕಲಾಗಿದೆ. ಮಾಜಿ ಕಾರ್ಪೋರೇಟರ್ಗಳನ್ನು ಸೆಳೆಯಲು 10 ಮಂದಿ ಆಪ್ತರ ತಂಡವನ್ನೇ ಡಿಕೆ ಶಿವಕುಮಾರ್ ಅವರು ಸಿದ್ಧಪಡಿಸಿದ್ದಾರೆ. ಈ ತಂಡ ಬಿಜೆಪಿ ನಾಯಕರೊಂದಿಗೆ ಸಂಪರ್ಕ ನಡೆಸುತ್ತಿದ್ದು, ಬಿಜೆಪಿ ಮಾಜಿ ಕಾರ್ಪರೇಟರ್ಗಳು ಕಾಂಗ್ರೆಸ್ ಸೇರಲು ಒಲವು ಹೊಂದಿದ್ದಾರೆ ಎಂದು ತಿಳಿದುಬಂದಿದೆ.
ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ರೈತ ಸಂಘಟನೆಗಳು ಇಂದು ಕುಂದಗೋಳ ಬಂದ್ಗೆ ಕರೆ ನೀಡಿದೆ. ಅದರಂತೆ, ಕುಂದಗೋಳ ಪಟ್ಟಣದಲ್ಲಿ ಪ್ರತಿಭಟನಾ ರ್ಯಾಲಿ ಹಮ್ಮಿಕೊಂಡ ರೈತರು, ಗಾಳಿ ಮಾರಮ್ಮ ದೇವಸ್ಥಾನದಿಂದ ತಹಶೀಲ್ದಾರ್ ಕಚೇರಿವರೆಗೂ ರ್ಯಾಲಿ ನಡೆಸಲಿದ್ದಾರೆ. ವಿವಿಧ ಬೇಡಿಕೆಗಳಲ್ಲಿ ಅನಾವೃಷ್ಟಿಯಿಂದ ಕಂಗೆಟ್ಟ ರೈತರಿಗೆ 50 ಸಾವಿರ ಪರಿಹಾರ ನೀಡುವುದು ಕೂಡ ಸೇರಿದೆ.
ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುಗಡೆ ವಿಚಾರವಾಗಿ ಮಾತನಾಡಿದ ಕರವೇ ಅಧ್ಯಕ್ಷ ನಾರಾಯಣಗೌಡ, ರಾಜ್ಯದ ಎಲ್ಲಾ ಸಂಸದರು ನರಸತ್ತವರು. ಸಂಸದರ ಮನೆಗೆ ಕರವೇ ಕಾರ್ಯಕರ್ತರನ್ನು ನುಗ್ಗಿಸುತ್ತೇವೆ ಎಂದರು. ಟಿವಿ9 ಜೊತೆ ಮಾತನಾಡಿದ ಅವರು, ಕಾವೇರಿ ನದಿ ನೀರು ವಿಚಾರದಲ್ಲಿ ನಾವು ಭುಗಿಲೇಳಬೇಕಿದೆ. ಮತ್ತೆ 5 ಸಾವಿರ ಕ್ಯೂಸೆಕ್ ನೀರು ಬಿಡಬೇಕೆಂಬ ಆದೇಶವನ್ನು ನಾವು ಧಿಕ್ಕರಿಸುತ್ತೇವೆ. ನಮ್ಮಲ್ಲಿ ನೀರಿಲ್ಲ, ಇಂತಹ ಪರಿಸ್ಥಿತಿಯಲ್ಲಿ ಧಿಮಾಕು ಮಾಡುತ್ತಿದ್ದಾರೆ. ದೆಹಲಿಯಲ್ಲಿ ಕುಳಿತು ಧಿಮಾಕು ಮಾಡಿಕೊಂಡು ನೀರು ಕೊಡಿ ಅಂತಾರೆ. ಹೀಗೆ ಹೇಳುತ್ತಿದ್ದರೆ ತಮಿಳುನಾಡಿಗೆ ನೀರು ಕೊಡಲು ಹೇಗೆ ಸಾಧ್ಯ? ರಾಜ್ಯ ಸರ್ಕಾರದ ನಿಲುವನ್ನು ಈವರೆಗೂ ಬೆಂಬಲಿಸಿದ್ದೇವೆ. ಆದರೆ ಇನ್ನು ಬೆಂಬಲಿಸುವುದಿಲ್ಲ. ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶ ಪಾಲಿಸಿದ್ರೆ ಭುಗಿಲೇಳುತ್ತೇವೆ. ಲಾಠಿಚಾರ್ಜ್, ಫೈರಿಂಗ್ ಮಾಡಿ ಜೈಲಿಗೆ ಹಾಕಿದ್ರೂ ನಾವು ಹೆದರಲ್ಲ. ಕಾವೇರಿ ಕನ್ನಡಿಗರ ಜೀವನದಿ, ರಕ್ಷಣೆಗಾಗಿ ಏನು ಬೇಕಾದ್ರೂ ಮಾಡುತ್ತೇವೆ. ಬೆಂಗಳೂರಿನ ಗೋಲ್ಡ್ ಫಿಂಚ್ ಹೋಟೆಲ್‌ನಲ್ಲಿ ಇಂದು ಸಭೆ ಕರೆದಿದ್ದೇವೆ. ಶುಕ್ರವಾರ ಎಲ್ಲಾ ಡಿಸಿಗಳ ಕಚೇರಿ ಮುಂದೆ ಪ್ರತಿಭಟನೆ ಮಾಡುತ್ತೇವೆ. ಶನಿವಾರ ಜೈಲು ಭರೋ ಚಳವಳಿ ಮಾಡ್ತೇವೆ, ಎಲ್ಲಾ ಕಡೆ ಮುತ್ತಿಗೆ ಹಾಕುತ್ತೇವೆ. ರಾಜ್ಯ ಸರ್ಕಾರ ಎಷ್ಟು ಜನರನ್ನು ಜೈಲಿಗೆ ಹಾಕುತ್ತದೆಯೋ ಹಾಕಲಿ ಎಂದರು.
ಇಂದು ತೆರಿಗೆ ಸಂಗ್ರಹಣಾ ಇಲಾಖೆಗಳ ಜತೆ ಸಿಎಂ ಸಿದ್ದರಾಮಯ್ಯ ಸಭೆ ನಡೆಸಲಿದ್ದಾರೆ. ಬೆಳಗ್ಗೆ 11 ಗಂಟೆಗೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಭೆ ಆರಂಭಗೊಳ್ಳಲಿದೆ. 2 ದಿನಗಳ ಕಾಲ ಡಿಸಿಗಳು, ಸಿಇಒಗಳ ಜತೆ ಸಭೆ ನಡೆಸಿದ್ದ ಸಿದ್ದರಾಮಯ್ಯ ಇಂದು ವಿವಿಧ ತೆರಿಗೆ ಸಂಗ್ರಹಣಾ ಇಲಾಖೆ ಅಧಿಕಾರಿಗಳ ಜತೆ ಸಬೆ ನಡೆಸಲಿದ್ದಾರೆ.
ಬಹುಕೋಟಿ ವಂಚನೆ ಪ್ರಕರಣದಲ್ಲಿ ಬಂಧನಕ್ಕೊಳಗಾದ ಚೈತ್ರಾ ಕುಂದಾಪುರ ಅವರ ವಿಚಾರಣೆ ಇಂದಿನಿಂದ ಆರಂಭವಾಗಲಿದೆ. ನಿನ್ನೆ ಬಂಧನಕ್ಕೊಳಗಾದ ಅವರನ್ನು ರಾತ್ರಿ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿತ್ತು. ಸದ್ಯ 10 ದಿನಗಳ ಕಾಲ ಕಸ್ಟಡಿಗೆ ಪಡೆದಿರುವ ಸಿಸಿಬಿ ಪೊಲೀಸರು, ಸಿಸಿಬಿ ಕಚೇರಿಗೆ ಕರೆತಂದು ವಿಚಾರಣೆ ನಡೆಸಲಿದ್ದಾರೆ. ಸಿಸಿಬಿ ಎಸಿಪಿ ರೀನಾ ಸುವರ್ಣ ಅವರಿಂದ ವಿಚಾರಣೆ ನಡೆಯಲಿದೆ. ಬಳಿಕ ಹಣ ಪಡೆದ ಸ್ಥಳಗಳಲ್ಲಿ ಮಹಜರು ಮಾಡಲಿದ್ದಾರೆ. ಚೈತ್ರಾ ಕುಂದಾಪುರ ಉದ್ಯಮಿ ಗೋವಿಂದ ಬಾಬು ಪೂಜಾರಿ ಮಾದರಿಯಲ್ಲೆ ಹಲವರಿಗೆ ವಂಚನೆ ಮಾಡಿರುವ ಸಾಧ್ಯತೆ ಹಿನ್ನೆಲೆ ಎಲ್ಲಾ ಆಯಾಮದಲ್ಲಿಯೂ ಬಂಧಿತ ಮೋಹನ್ ಕುಮಾರ್ ಅಲಿಯಾಸ್ ಗಗನ್ ಕಡೂರು, ರಮೇಶ್, ಧನರಾಜ್, ಶ್ರೀಕಾಂತ್, ಪ್ರಜ್ವಲ್ ಅವರನ್ನು ವಿಚಾರಣೆ ನಡೆಸಲಾಗುತ್ತದೆ.
Published On - 8:32 am, Thu, 14 September 23