Budget Session: ನಿಮ್ಮಂಥವರು ಶಾಸಕರಾಗಿರೋದು ಸದನಕ್ಕೇ ಅಗೌರವ; ಈಶ್ವರ್ ಖಂಡ್ರೆ ವಿರುದ್ಧ ಕಾಗೇರಿ ಕೆಂಡಾಮಂಡಲ

| Updated By: Ganapathi Sharma

Updated on: Feb 16, 2023 | 3:09 PM

ನಿಮ್ಮಂತಹವರು ಶಾಸಕರಾಗಿ ಆಯ್ಕೆಯಾಗಿ ಬರುವುದು ಸದನಕ್ಕೆ ಅಗೌರವ ಎಂದು ಈಶ್ವರ್ ಖಂಡ್ರೆ ವಿರುದ್ಧ ರೋಷದಿಂದ ಹೇಳಿದ ಕಾಗೇರಿ.

ಬೆಂಗಳೂರು: ವಿಧಾನಸಭೆಯ ಬಜೆಟ್ ಅಧಿವೇಶನದ (Budget Session) ಸಂದರ್ಭದಲ್ಲಿ ಗುರುವಾರ ಭಾಲ್ಕಿ ಶಾಸಕ ಈಶ್ವರ ಖಂಡ್ರೆ (eshwar khandre) ವಿರುದ್ಧ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕೆಂಡಾಮಂಡಲರಾದ ಘಟನೆ ನಡೆಯಿತು. ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಸಚಿವ ಅಶ್ವಥ್ ನಾರಾಯಣ ನೀಡಿರುವ ಆಕ್ಷೇಪಾರ್ಹ ಹೇಳಿಕೆ ವಿರುದ್ಧ ಪ್ರತಿಪಕ್ಷದ ಸದಸ್ಯರು ಕಲಾಪದ ವೇಳೆ ಪ್ರತಿಭಟನೆ ನಡೆಸಿದರು. ಈ ವೇಳೆ ಖಂಡ್ರೆ ಅವರು ಏರು ಧ್ವನಿಯಲ್ಲಿ ಮಾತನಾಡಿದರು. ಸ್ಪೀಕರ್ ಕುಳಿತುಕೊಳ್ಳಲು ಸೂಚಿಸದರೂ ಮಾತು ನಿಲ್ಲಿಸಲಿಲ್ಲ. ಇದರಿಂದ ಕೋಪಗೊಂಡ ಕಾಗೇರಿ, ಖಂಡ್ರೆ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ‘ಸದನ ಅಂದ್ರೆ ಏನಂದುಕೊಂಡಿದ್ದೀರಿ? ಈ ರೀತಿಯ ವರ್ತನೆ ತೋರಿದರೆ ನನ್ನ ಅಧಿಕಾರವನ್ನು ಬಳಸಬೇಕಾಗುತ್ತದೆ. ನಿಮ್ಮನ್ನು ಸದನದಿಂದ ಹೊರಗೆ ಕಳುಹಿಸಬೇಕಾಗುತ್ತದೆ. ನೀವು ತಮಾಷೆ ಮಾಡುತ್ತಿದ್ದೀರಾ? ಕುಳಿತುಕೊಳ್ಳಿ, ಮಾತನಾಡಬೇಡಿ. ನನ್ನ ಅಧಿಕಾರ ಪೂರ್ಣವಾಗಿ ಚಲಾಯಿಸಲು ಅವಕಾಶ ಕೊಡಬೇಡಿ. ಈಶ್ವರ ಖಂಡ್ರೆ, ನಿಮ್ಮ ಈ ನಡವಳಿಕೆ ಕಾಂಗ್ರೆಸ್ ಪಕ್ಷಕ್ಕಾದರೂ ಶೋಭೆ ತರುತ್ತದೆಯೇ? ನಿಮ್ಮಂತಹವರು ಶಾಸಕರಾಗಿ ಆಯ್ಕೆಯಾಗಿ ಬರುವುದು ಸದನಕ್ಕೆ ಅಗೌರವ’ ಎಂದು ರೋಷದಿಂದ ಹೇಳಿದರು.

ಇದರ ಬೆನ್ನಲ್ಲೇ ಕಾಂಗ್ರೆಸ್ ಸದ್ಯದರು ಸ್ಪೀಕರ್ ಪೀಠದ ಎದುರು ತೆರಳಿ ಪ್ರತಿಭಟನೆಗೆ ಮುಂದಾದರು. ಇದರಿಂದ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ನಂತರ ತಾತ್ಕಾಲಿಕವಾಗಿ ಕಲಾಪವನ್ನು ಮುಂದೂಡಲಾಯಿತು.

ಇದನ್ನೂ ಓದಿ: ಟಿಪ್ಪು & ಸಿದ್ದರಾಮಯ್ಯ ಹೋಲಿಕೆಯ ಮಾತುಗಳು ಸಾಂದರ್ಭಿಕ; ಅಶ್ವಥ್ ನಾರಾಯಣ ಸ್ಪಷ್ಟನೆ

ಈ ಮಧ್ಯೆ, ಮಂಡ್ಯದಲ್ಲಿ ಟಿಪ್ಪು ಸುಲ್ತಾನ್ ಮತ್ತು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಹೋಲಿಸಿ ಆಡಿರುವ ಮಾತುಗಳು ಸಾಂದರ್ಭಿಕ ಪ್ರಸ್ತಾಪವೇ ವಿನಃ ಯಾವುದೇ ದುರುದ್ದೇಶದ ಮಾತುಗಳಲ್ಲ ಎಂದು ಸಚಿವ ಅಶ್ವಥ್ ನಾರಾಯಣ ಸ್ಪಷ್ಟನೆ ನೀಡಿದ್ದಾರೆ. ಚುನಾವಣೆಯಲ್ಲಿ ಕಾಂಗ್ರೆಸ್ಸನ್ನು ಸೋಲಿಸಬೇಕು ಎನ್ನುವ ಅರ್ಥದಲ್ಲಷ್ಟೇ ನಾನು ಆ ಮಾತು ಆಡಿದ್ದೇನೆ. ಅದರಿಂದ ಸಿದ್ದರಾಮಯ್ಯ ಅವರಿಗೆ ನೋವುಂಟಾಗಿದ್ದಾರೆ ವಿಷಾದಿಸುತ್ತೇನೆ ಎಂದು ಹೇಳಿದ್ದಾರೆ.

ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:05 pm, Thu, 16 February 23