Next CM of Karnataka 2021: ಯಡಿಯೂರಪ್ಪ ನಿರ್ಗಮನ; ಕರ್ನಾಟಕದ ನೂತನ ಮುಖ್ಯಮಂತ್ರಿ ಯಾರು?

| Updated By: Skanda

Updated on: Jul 26, 2021 | 12:50 PM

BS Yediyurappa Resign: ಈಗ ಯಡಿಯೂರಪ್ಪ ನಿರ್ಗಮನದ ನಂತರ ಮತ್ತೆ ಲಿಂಗಾಯತ ಸಮುದಾಯದವರನ್ನೇ ಸಿಎಂ ಸ್ಥಾನಕ್ಕೆ ಕರೆದುಕೊಂಡು ಬರುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆಗೆ ಪಕ್ಷದ ಮೂಲಗಳು ಇಲ್ಲ ಎಂಬ ಉತ್ತರವನ್ನೇ ನೀಡುತ್ತಿವೆ.

Next CM of Karnataka 2021: ಯಡಿಯೂರಪ್ಪ ನಿರ್ಗಮನ; ಕರ್ನಾಟಕದ ನೂತನ ಮುಖ್ಯಮಂತ್ರಿ ಯಾರು?
ಬಿ.ಎಸ್,ಯಡಿಯೂರಪ್ಪ (ಸಂಗ್ರಹ ಚಿತ್ರ)
Follow us on

ಬೆಂಗಳೂರು: ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್​.ಯಡಿಯೂರಪ್ಪ ರಾಜೀನಾಮೆ ಘೋಷಿಸಿದ್ದಾರೆ. ಕಳೆದ ಕೆಲ ದಿನಗಳ ರಾಜಕೀಯ ಬೆಳವಣಿಗೆಗಳನ್ನು ನೋಡಿದಾಗ ಇದು ನಿರೀಕ್ಷಿತ ನಿಲುವೇ ಆಗಿತ್ತಾದರೂ ಭಾರೀ ಮಳೆ, ಪ್ರವಾಹದ ಕಾರಣದಿಂದ ಕೊನೆ ಕ್ಷಣದ ಬದಲಾವಣೆ ಆಗಬಹುದೆಂದು ಭಾವಿಸಲಾಗಿತ್ತು. ಆದರೆ, ನಿನ್ನೆಯಷ್ಟೇ ಬೆಳಗಾವಿಗೆ ತೆರಳಿ ನೆರೆ ಪರಿಸ್ಥಿತಿ ವೀಕ್ಷಿಸಿ ಮರಳಿದ್ದ ಯಡಿಯೂರಪ್ಪ, ಇಂದು ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ ಸಾಧನಾ ಸಮಾವೇಶದಲ್ಲಿ ಗದ್ಗದಿತರಾಗಿ ಮಾತನಾಡುತ್ತಲೇ ರಾಜೀನಾಮೆ  ಘೋಷಣೆ ಮಾಡಿದ್ದಾರೆ. ಯಡಿಯೂರಪ್ಪ ರಾಜೀನಾಮೆ (BSY Resignation) ನಂತರ ಮುಖ್ಯಮಂತ್ರಿ ಹುದ್ದೆಗೆ ಯಾರನ್ನು ನೇಮಿಸಬೇಕು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ (BJP) ಪಾಳಯ ಈಗಾಗಲೇ ಎರಡು ಸೂತ್ರಗಳನ್ನು ಸಿದ್ಧಪಡಿಸಿಕೊಳ್ಳಲಾಗಿದ್ದು, ಮುಖ್ಯಮಂತ್ರಿ ಬದಲಾವಣೆಯ ಜತೆಯಲ್ಲೇ ನಾಲ್ವರು ಉಪಮುಖ್ಯಮಂತ್ರಿಗಳನ್ನು (DCM) ನೇಮಕ ಮಾಡುವ ಸಾಧ್ಯತೆಯೂ ಇದೆ ಎಂಬ ಮಾತುಗಳು ಪಕ್ಷದ ವಲಯದಿಂದ ಕೇಳಿ ಬರುತ್ತಿವೆ.

ಅಧಿಕಾರಕ್ಕೇರಿ ಎರಡು ವರ್ಷ ಪೂರೈಸಿದ ಹೊತ್ತಿನಲ್ಲೇ ರಾಜೀನಾಮೆ ಘೋಷಿಸಿರುವ ಯಡಿಯೂರಪ್ಪ ಅಂತಿಮವಾಗಿ ಹೈಕಮಾಂಡ್​ ನಿಲುವಿನಂತೆ ನಡೆದುಕೊಂಡಿದ್ದಾರೆ. ಅವರನ್ನು ಉಳಿಸಿಕೊಳ್ಳಬೇಕೆಂದು ವೀರಶೈವ-ಲಿಂಗಾಯತ ಸಮುದಾಯದ ಮಠಾಧೀಶರು ಒತ್ತಡ ಹೇರುವ ಪ್ರಯತ್ನವನ್ನು ಮಾಡಿದರಾದರೂ ಅದು ಫಲ ನೀಡಿಲ್ಲ. ಅಲ್ಲದೇ ಈ ವಿಚಾರದಲ್ಲಿ ಗಟ್ಟಿ ಮನಸ್ಸು ಮಾಡಿಕೊಂಡಿದ್ದ ಯಡಿಯೂರಪ್ಪ, ಪಕ್ಷದ ವರಿಷ್ಠರ ಅಣತಿಯಂತೆ ನಡೆದುಕೊಳ್ಳುತ್ತೇನೆ. ಅದನ್ನು ವಿರೋಧಿಸಿ ಯಾರೂ ಪ್ರತಿಭಟಿಸಬಾರದು ಎಂದು ಮೊದಲೇ ತಿಳಿಸಿದ್ದರು. ಆದರೆ, ಈಗ ಯಡಿಯೂರಪ್ಪ ನಿರ್ಗಮನದ ನಂತರ ಮತ್ತೆ ಲಿಂಗಾಯತ ಸಮುದಾಯದವರನ್ನೇ ಸಿಎಂ ಸ್ಥಾನಕ್ಕೆ ಕರೆದುಕೊಂಡು ಬರುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆಗೆ ಪಕ್ಷದ ಮೂಲಗಳು ಇಲ್ಲ ಎಂಬ ಉತ್ತರವನ್ನೇ ನೀಡುತ್ತಿವೆ.

ವೀರಶೈವ ಲಿಂಗಾಯತ ಮಠಾಧೀಶರ ಪ್ರಬಲ ಹೋರಾಟದ ನಡುವೆಯೂ ಲಿಂಗಾಯತರನ್ನು ಹೊರತುಪಡಿಸಿ ಒಕ್ಕಲಿಗ ಮತ್ತು ಬ್ರಾಹ್ಮಣ ಸಮುದಾಯದ ಮುಖ್ಯಮಂತ್ರಿ ಆಯ್ಕೆ ಬಗ್ಗೆ ಪಕ್ಷದ ವಲಯದಲ್ಲಿ ಚರ್ಚೆ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡುವುದು ಸ್ಪಷ್ಟವಾಗುತ್ತಿದ್ದಂತೆಯೇ ಹೊಸ ಸಿಎಂ ಆಯ್ಕೆ ಮಾಡುವ ವಿಚಾರದಲ್ಲಿ ಎರಡು ಸೂತ್ರಗಳನ್ನು ಬಿಜೆಪಿ ಸಿದ್ಧಪಡಿಸಿಕೊಂಡಿದೆ. ಬ್ರಾಹ್ಮಣ ಸಮುದಾಯಕ್ಕೆ ಮಣೆ ಹಾಕಿದರೆ ಪ್ರಲ್ಹಾದ್ ಜೋಷಿ ಅಥವಾ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಮುಖ್ಯಮಂತ್ರಿ ಮಾಡುವ ಬಗ್ಗೆ ಚರ್ಚೆಯಾಗಿದೆ ಎನ್ನಲಾಗಿದ್ದು, ಬ್ರಾಹ್ಮಣ ಸಮುದಾಯದವರನ್ನು ಮುಖ್ಯಮಂತ್ರಿ ಮಾಡಿದ್ದೇ ಆದಲ್ಲಿ ಉಪಮುಖ್ಯಮಂತ್ರಿ ಹುದ್ದೆಗೆ ಲಿಂಗಾಯತ, ಒಕ್ಕಲಿಗ, ವಾಲ್ಮೀಕಿ, ದಲಿತ ಸಮುದಾಯದ ಸಮೀಕರಣ ಸೂತ್ರ ಅನ್ವಯಿಸುವ ಸಾಧ್ಯತೆ ಇದೆ. ಆ ಪ್ರಕಾರವಾಗಿ ಬ್ರಾಹ್ಮಣ ಸಮುದಾಯದವರು ಮುಖ್ಯಮಂತ್ರಿಯಾದರೆ ಡಿಸಿಎಂ ಸ್ಥಾನಕ್ಕೆ ಅರವಿಂದ ಬೆಲ್ಲದ, ಶ್ರೀರಾಮುಲು,‌ ಸಿ.ಟಿ. ರವಿ, ಅರವಿಂದ ಲಿಂಬಾವಳಿ ‌ನೇಮಕವಾಗುವ ಸಾಧ್ಯತೆ ಇದೆ ಎಂಬ ಬಗ್ಗೆ ಪಕ್ಷದಲ್ಲಿ ಚರ್ಚೆ ನಡೆದಿದೆ.

ಒಂದುವೇಳೆ ಒಕ್ಕಲಿಗ ಸಮುದಾಯಕ್ಕೆ ಮಣೆ ಹಾಕಿ ಮುಖ್ಯಮಂತ್ರಿ ಸ್ಥಾನ ನೀಡುವುದಾದರೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೆಸರು ಬಹುಮುಖ್ಯವಾಗಿ ಕೇಳಿಬರುತ್ತಿದೆ. ಒಕ್ಕಲಿಗ ಸಮುದಾಯದವರು ಮುಖ್ಯಮಂತ್ರಿಯಾದಲ್ಲಿ ಡಿಸಿಎಂಗಳಾಗಿ ವಾಲ್ಮೀಕಿ, ದಲಿತ, ಓಬಿಸಿ ಮತ್ತು ಲಿಂಗಾಯತ ಸಮುದಾಯದ ಸಮೀಕರಣ ಆಗುವ ಸಾಧ್ಯತೆ ಇದೆ. ಅದರಂತೆ ಡಿಸಿಎಂ ಸ್ಥಾನಕ್ಕೆ ಶ್ರೀರಾಮುಲು, ಅರವಿಂದ ಲಿಂಬಾವಳಿ, ಕೆ.ಎಸ್‌. ಈಶ್ವರಪ್ಪ ಅಥವಾ ಸುನಿಲ್ ಕುಮಾರ್ ಹಾಗೂ ಅರವಿಂದ ಬೆಲ್ಲದ್ ಅಥವಾ ಮುರುಗೇಶ್ ನಿರಾಣಿ ಹೆಸರು ಪರಿಗಣಿಸುವ ಸಾಧ್ಯತೆ ಬಗ್ಗೆ ಚರ್ಚೆ ನಡೆದಿರುವುದು ತಿಳಿದುಬಂದಿದೆ. ಹೀಗಾಗಿ ಮೂಲಗಳ ಪ್ರಕಾರ ಯಡಿಯೂರಪ್ಪ ಸ್ಥಾನಕ್ಕೆ ಲಿಂಗಾಯತ ಸಮುದಾಯದವರನ್ನೇ ಕರೆದುತಂದು ಕೂರಿಸುವುದು ಬಹುತೇಕ ಅನುಮಾನವಾಗಿದ್ದು, ಹೈಕಮಾಂಡ್​ ಅಂತಿಮ ನಿರ್ಧಾರ ಭಾರೀ ಕುತೂಹಲ ಮೂಡಿಸಿದೆ.

ಇದನ್ನೂ ಓದಿ:
ಬಿ ಎಸ್​ ಯಡಿಯೂರಪ್ಪ ರಾಜೀನಾಮೆ: ಬಿಜೆಪಿ ಸಂಸದೀಯ ಮಂಡಳಿ ಮುಂದಿನ ನಡೆ ಏನು? ನಾಳೆಯೇ ಮುಂದಿನ ಸಿಎಂ ಆಯ್ಕೆ? 

BJP ಸಾಧನಾ ಸಮಾವೇಶದಲ್ಲಿ ಸಿಎಂ ಬಿಎಸ್​ ಯಡಿಯೂರಪ್ಪ ಕಣ್ಣೀರು

(Karnataka CM BS Yediyurappa Resigned Who will be the Next CM of Karnataka 2021 here is the inside story)