ಹುಸಿ ಗ್ಯಾರಂಟಿಗಳ ಭಾರದಿಂದಲೇ ಕಾಂಗ್ರೆಸ್ ಸರ್ಕಾರ ಕುಸಿದು ಬೀಳುವುದು ನಿಶ್ಚಿತ: ಸುನಿಲ್ ಕುಮಾರ್

|

Updated on: Jun 13, 2023 | 4:07 PM

ಐದು ಗ್ಯಾರಂಟಿ ಯೋಜನೆಗಳ ಭಾರದಿಂದಲೇ ಕರ್ನಾಟಕ ಕಾಂಗ್ರೆಸ್ ಸರ್ಕಾರ ಕುಸಿದು ಬೀಳವುದು ನಿಶ್ಚಿತ ಎಂದು ಮಾಜಿ ಸಚಿವರೂ ಆಗಿರುವ ಕಾರ್ಕಳ ಶಾಸಕ ಸುನಿಲ್ ಕುಮಾರ್ ಭವಿಷ್ಯ ನುಡಿದಿದ್ದಾರೆ.

ಹುಸಿ ಗ್ಯಾರಂಟಿಗಳ ಭಾರದಿಂದಲೇ ಕಾಂಗ್ರೆಸ್ ಸರ್ಕಾರ ಕುಸಿದು ಬೀಳುವುದು ನಿಶ್ಚಿತ: ಸುನಿಲ್ ಕುಮಾರ್
ಸುನಿಲ್ ಕುಮಾರ್, ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್
Follow us on

ಬೆಂಗಳೂರು: ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಯೋಜನೆಗಳ (Guaranteed Schemes) ಬಗ್ಗೆ ರಾಜಕೀಯ ಪಕ್ಷಗಳಲ್ಲಿ ಮಾತ್ರವಲ್ಲದೆ, ಸಾರ್ವಜನಿಕರಲ್ಲೂ ಪರ ವಿರೋಧಗಳು ವ್ಯಕ್ತವಾಗುತ್ತಿದೆ. ಒಂದು ಕಡೆ ಉಚಿತ ಯೋಜನೆಗಳಿಂದ ಜನರಿಗೆ ಅನುಕೂಲವಾಗಲಿದೆ ಎಂದು ಹೇಳುತ್ತಿದ್ದರೆ, ಇನ್ನೊಂದಷ್ಟು ಜನರು ಉಚಿತ ಯೋಜನೆಗಳಿಂದ ಸರ್ಕಾರದ ಬೊಕ್ಕಸ ಖಾಲಿಯಾಗಲಿದೆ ಎಂದು ಹೇಳುತ್ತಿದ್ದಾರೆ. ಆದರೀಗ, ಈ ಐದು ಗ್ಯಾರಂಟಿ ಯೋಜನೆಗಳ ಭಾರದಿಂದಲೇ ಸರ್ಕಾರ ಕುಸಿದು ಬೀಳುವುದು ನಿಶ್ಚಿತ ಅಂತಾ ಮಾಜಿ ಸಚಿವರೂ ಆಗಿರುವ ಕಾರ್ಕಳ ಬಿಜೆಪಿ ಶಾಸಕ ಸುನಿಲ್ ಕುಮಾರ್ (Sunil Kumar) ಅವರು ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿದ ಸುನಿಲ್ ಕುಮಾರ್, “ಕಾಂಗ್ರೆಸ್ ಸರ್ಕಾರದ ಆಡಳಿತದ ವೈಖರಿಯ ದಾರಿ ಮತ್ತು ಧಾಟಿಯನ್ನು ನೋಡಿದರೆ ಮುಂದಿನ ದಿನಗಳಲ್ಲಿ ತನ್ನ ಹುಸಿ ಗ್ಯಾರಂಟಿಗಳ ಭಾರದಿಂದಲೇ ಕುಸಿದು ಬೀಳುವುದು ನಿಶ್ಚಿತ. ಈ ಸಂಧರ್ಭದಲ್ಲಿ ರಾಜ್ಯ ಮತ್ತು ಜಿಲ್ಲೆಗಳಲ್ಲಿ ವೈಚಾರಿಕ ಬದ್ಧತೆಯ ಯುವಕರು ಬಿಜೆಪಿಯ ನೇತೃತ್ವವನ್ನು ವಹಿಸಿಕೊಳ್ಳುವುದು ಅಗತ್ಯ ಮತ್ತು ಅನಿವಾರ್ಯ” ಎಂದಿದ್ದಾರೆ.

ಇನ್ನೊಂದೆಡೆ, ಕಾಂಗ್ರೆಸ್ ಸರ್ಕಾರದ ಗೃಹಜ್ಯೋತಿ ಯೋಜನೆಗೂ ಬಿಜೆಪಿ ಟೀಕೆ ವ್ಯಕ್ತಪಡಿಸುತ್ತಿದೆ. ಷರತ್ತಿನ ಮೇಲೆ 200 ಯುನಿಟ್ ವರೆಗೆ ವಿದ್ಯುತ್ ಅನ್ನು ಉಚಿತವಾಗಿ ಬಳಕೆ ಮಾಡಲು ಅವಕಾಶ ನೀಡುವ ಯೋಜನೆ ಇದಾಗಿದೆ. ಜುಲೈ 1ರಿಂದ ಈ ಯೋಜನೆ ಜಾರಿಯಾಗಿಲಿದೆ. ಈ ಬಗ್ಗೆ ಟ್ವೀಟ್ ಮಾಡಿದ ಬಿಜೆಪಿ, ಮುಂಬಾಗಿಲಿನಿಂದ ಉಚಿತ ಕೊಟ್ಟು ಹಿಂಬಾಗಿಲಿನಿಂದ ವಿದ್ಯುತ್ ದರ ಏರಿಕೆ ಮಾಡುತ್ತಿದೆ ಅಂತ ಆರೋಪಿಸಿದೆ.

ಇದನ್ನೂ ಓದಿ: ಬಿಜೆಪಿಯಿಂದ ಸರ್ಕಾರಿ ಜಮೀನು ಆರ್​ಎಸ್​ಎಸ್​ಗೆ ಹಂಚಿಕೆ: ವಿವಾದಿತ ಭೂಮಿ ಪಟ್ಟಿ ಮಾಡಲು ಮುಂದಾದ ಕಾಂಗ್ರೆಸ್ ಸರ್ಕಾರ

“ಮುಂಬಾಗಿಲಿನಲ್ಲಿ ನಿಂತು ಎಲ್ಲರಿಗೂ ಉಚಿತ ವಿದ್ಯುತ್ ಅಂತ ಹೇಳಿ, ಹಿಂಬಾಗಿಲಿನಿಂದ ವಿದ್ಯುತ್ ಬೆಲೆಗಳನ್ನು ಗಗನಕ್ಕೆ ಏರಿಸಿರುವ ಎಟಿಎಂ ಸರ್ಕಾರದ ತಂತ್ರ ಬಯಲಾಗಿದೆ. ಸಿದ್ದರಾಮಯ್ಯನವರೇ ಇದೀಗ ತಮ್ಮದೇ ಪಕ್ಷದ ಮತ್ತೋರ್ವ ಶಾಸಕ ತನ್ವೀರ್ ಸೇಠ್ ಅವರು ನಿಮಗೆ ಪತ್ರಬರೆದು ನೀವು ಮಾಡುತ್ತಿರುವುದು ತಪ್ಪು ಎಂದು ಹೇಳಿದರೂ, ಅದನ್ನು ಲೆಕ್ಕಿಸದಿರುವಷ್ಟು ಭಂಡರಾಗಿದ್ದೀರ? ತಮ್ಮ ಭಂಡತನದಿಂದ ರಾಜ್ಯಕ್ಕೆ ಕೆಡಕಾಗುತ್ತಿದೆ ನೆನಪಿರಲಿ” ಎಂದು ಟ್ವೀಟ್ ಮಾಡಿದೆ.

ಸಿದ್ದರಾಮಯ್ಯಗೆ ತನ್ವೀರ್ ಸೇಠ್ ಹೇಳಿದ್ದೇನು?

ವಿದ್ಯುತ್ ದರ ಏರಿಕೆ ಖಂಡಿಸಿ ರಾಜ್ಯದ ವಿವಿಧ ಕಡೆಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಈ ನಡುವೆ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದ ತನ್ವೀರ್ ಸೇಠ್, ವಿದ್ಯುತ್ ದರ ಏರಿಕೆಯನ್ನು ಮರು ಪರಿಶೀಲಿಸುವಂತೆ ಮನವಿ ಮಾಡಿದ್ದಾರೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಚೇತರಿಸಿಕೊಳ್ಳದ ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಪ್ರಸ್ತುತ ಸರ್ಕಾರ ಘೋಷಿಸಿರುವ 200 ಯೂನಿಟ್ ಉಚಿತ ಸೌಲಭ್ಯವನ್ನು ಜನ ಸಾಮಾನ್ಯರಿಗೆ ನೀಡಿ ಕಿತ್ತುಕೊಂಡಂತಾಗಿದೆ. ವಿದ್ಯುತ್ ದರ ಏರಿಕೆಯಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಿದೆ ಎಂದು ಪತ್ರದಲ್ಲಿ ಹೇಳಿದ್ದಾರೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ