AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿಯಿಂದ ಸರ್ಕಾರಿ ಜಮೀನು ಆರ್​ಎಸ್​ಎಸ್​ಗೆ ಹಂಚಿಕೆ: ವಿವಾದಿತ ಭೂಮಿ ಪಟ್ಟಿ ಮಾಡಲು ಮುಂದಾದ ಕಾಂಗ್ರೆಸ್ ಸರ್ಕಾರ

ಆರ್‌ಎಸ್‌ಎಸ್ ಮತ್ತು ಅದಕ್ಕೆ ಸಂಬಂಧಿಸಿದ ಸಂಸ್ಥೆಗಳಿಗೆ ಸರ್ಕಾರ ಮಂಜೂರು ಮಾಡಿದ ಭೂಮಿಯನ್ನು ಪರಿಶೀಲಿಸಲು ಕಾಂಗ್ರೆಸ್ ಸರ್ಕಾರ ಮುಂದಾಗಿದ್ದು, ವಿವಾದಿತ ಭೂಮಿಯನ್ನು ಶಾರ್ಟ್‌ಲಿಸ್ಟ್ ಮಾಡಲು ಪ್ರಾರಂಭಿಸಿದೆ.

ಬಿಜೆಪಿಯಿಂದ ಸರ್ಕಾರಿ ಜಮೀನು ಆರ್​ಎಸ್​ಎಸ್​ಗೆ ಹಂಚಿಕೆ: ವಿವಾದಿತ ಭೂಮಿ ಪಟ್ಟಿ ಮಾಡಲು ಮುಂದಾದ ಕಾಂಗ್ರೆಸ್ ಸರ್ಕಾರ
ಬಿಜೆಪಿ ಸರ್ಕಾರದ ಅವಧಿಯಲ್ಲಿ ಆರ್​ಎಸ್​ಎಸ್​ ಸಂಸ್ಥೆಗಳಿಗೆ ಹಂಚಿಕೆ ಮಾಡಿದ ಜಮೀನು ಪರಿಶೀಲಿಸುತ್ತಿರುವ ಕಾಂಗ್ರೆಸ್ ಸರ್ಕಾರ
Rakesh Nayak Manchi
|

Updated on: Jun 12, 2023 | 2:53 PM

Share

ದೇವನಹಳ್ಳಿ: ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಮತ್ತು ಅದರ ಅಂಗಸಂಸ್ಥೆಗಳಿಗೆ ಮಂಜೂರು ಮಾಡಿದ ಭೂಮಿಯನ್ನು ಪರಿಶೀಲಿಸಲು ಕರ್ನಾಟಕದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ನಿರ್ಧರಿಸಿದ್ದು, ಈಗಾಗಲೇ ವಿವಾದಿತ ಭೂಮಿಯನ್ನು ಶಾರ್ಟ್‌ಲಿಸ್ಟ್ ಮಾಡಲು ಪ್ರಾರಂಭಿಸಲಾಗಿದೆ. ಬೆಂಗಳೂರು (Bengaluru) ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಸಮೀಪದ ಹರಳೂರಿನಲ್ಲಿ ಚಾಣಕ್ಯ ವಿಶ್ವವಿದ್ಯಾಲಯ ಸ್ಥಾಪಿಸಲು ಶಿಕ್ಷಣ ಮತ್ತು ಸಾಮಾಜಿಕ ಅಧ್ಯಯನ ಕೇಂದ್ರಕ್ಕೆ (ಸೆಸ್) ನೀಡಿರುವ 116 ಎಕರೆ ಭೂಮಿಯನ್ನು ಪರಿಶೀಲಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

2021-22ರಲ್ಲಿ ಬಿಜೆಪಿ ಸರ್ಕಾರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ ಸೇರಿದ ಭೂಮಿಯನ್ನು ಸೆಸ್‌ಗೆ 50 ಕೋಟಿ ರೂ.ಗೆ ಹಂಚಿಕೆ ಮಾಡಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದರು. ಭೂಮಿಯ ಬೆಲೆ 300 ಕೋಟಿ ರೂ.ಗಿಂತ ಹೆಚ್ಚು ಮತ್ತು ಸೆಸ್‌ನಲ್ಲಿರುವ ಜನರು ಆರ್‌ಎಸ್‌ಎಸ್‌ನೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ವಿಪಕ್ಷ ನಾಯಕರಾಗಿದ್ದ ಸಮಯದಲ್ಲಿ ಸಿದ್ದರಾಮಯ್ಯ ಆರೋಪಿಸಿದ್ದರು.

ಬೆಂಗಳೂರಿನ ಬೈಯಪ್ಪನಹಳ್ಳಿ ಬಳಿ ಸರ್ಕಾರೇತರ ಸಂಸ್ಥೆ ರಾಷ್ಟ್ರೋತ್ಥಾನ ಪರಿಷತ್ತಿಗೆ ಶೈಕ್ಷಣಿಕ ಉದ್ದೇಶಗಳಿಗಾಗಿ ಮಂಜೂರು ಮಾಡಲಾದ 8 ಎಕರೆ 32 ಗುಂಟಾ ಭೂಮಿಯನ್ನು ಸರ್ಕಾರ ಪರಿಶೀಲಿಸುತ್ತಿದೆ. ಹೊಸಪೇಟೆ ತಾಲೂಕಿನ ಜಂಬುನಾಥನಹಳ್ಳಿಯಲ್ಲಿ ಇದೇ ಸಂಸ್ಥೆಗೆ ಮಂಜೂರಾಗಿದ್ದ ಐದು ಎಕರೆ ಜಮೀನು ಕೂಡ ಸರಕಾರದ ಅಧೀನದಲ್ಲಿದೆ. ಕಲಬುರಗಿ, ಚಿಕ್ಕಮಗಳೂರು, ಮೈಸೂರು, ಮಂಡ್ಯ, ಆನೇಕಲ್ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ರಾಷ್ಟ್ರೋತ್ಥಾನ ಪರಿಷತ್ತಿಗೆ ಮಂಜೂರಾದ ಸುಮಾರು 25-30 ಎಕರೆ ಭೂಮಿಯನ್ನು ಸರ್ಕಾರ ಪರಿಶೀಲಿಸುತ್ತಿದೆ.

ಇದನ್ನೂ ಓದಿ: ಬಿಜೆಪಿಯವರು RSS ಸೇರಿದಂತೆ ತಮ್ಮ ಸಂಸ್ಥೆಗಳಿಗೆ ಸರ್ಕಾರಿ ಭೂಮಿ ನೀಡಿದ್ದಾರೆ; ಸಚಿವ ದಿನೇಶ್​ ಗುಂಡೂರಾವ್ ಆರೋಪ

ದಕ್ಷಿಣ ಬೆಂಗಳೂರಿನ ಚನ್ನೇನಹಳ್ಳಿಯಲ್ಲಿ ಜನ ಸೇವಾ ಟ್ರಸ್ಟ್ ಹೆಸರಿನ ಸಂಸ್ಥೆಗೆ ಮಂಜೂರಾಗಿದ್ದ 40.07 ಎಕರೆ ಜಮೀನು ಕಂದಾಯ ಇಲಾಖೆಯ ಪರಿಶೀಲನೆಯಲ್ಲಿದೆ. ತಾವರೆಕೆರೆಯಲ್ಲಿ ಇದೇ ಟ್ರಸ್ಟ್‌ಗೆ ಮಂಜೂರಾತಿಯಾಗಿದೆ ಎಂದು ಹೇಳಲಾಗಿದ್ದ 25 ಎಕರೆ ಜಮೀನು ಕೂಡ ಪರಿಶೀಲನೆಯಲ್ಲಿದೆ. ಶಿವಮೊಗ್ಗದಲ್ಲಿ ನೀರಾವರಿ ಇಲಾಖೆಗೆ ಸೇರಿದ ಎರಡು ಎಕರೆ ಜಾಗವನ್ನು ಅಧ್ಯಯನ, ಸಂಶೋಧನೆ ಮತ್ತು ತರಬೇತಿ ಕೇಂದ್ರದ ಹೆಸರಿನಲ್ಲಿ ಸಂಸ್ಥೆಯೊಂದಕ್ಕೆ ಮಂಜೂರು ಮಾಡಲಾಗಿತ್ತು.

ಮುಧೋಳದಲ್ಲಿ ಬಿಜೆಪಿ ಕಚೇರಿ ನಿರ್ಮಾಣಕ್ಕೆ 134 ಚ.ಮೀ.ನಷ್ಟು ಜಾಗ ನೀಡಲಾಗಿದೆ ಎನ್ನಲಾಗಿದ್ದು, ಅದರ ಪರಿಶೀಲನೆಯೂ ನಡೆಯುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ಬಿಜೆಪಿ ಸರ್ಕಾರವು ಮಂಜೂರು ಮಾಡಿದ ಹಲವಾರು ಜಮೀನುಗಳನ್ನು ಸರ್ಕಾರ ಪರಿಶೀಲಿಸುತ್ತಿದೆ.

ಚನ್ನಾದೇವಿ ಅಗ್ರಹಾರ ಗ್ರಾಮಸ್ಥರಿಂದ ಪ್ರತಿಭಟನೆ

ದೊಡ್ಡಬಳ್ಳಾಪುರ ತಾಲೂಕಿನ ಚನ್ನಾದೇವಿ ಅಗ್ರಹಾರ ಗ್ರಾಮದಲ್ಲಿ ಗ್ರಾಮಸ್ಥರ ವಿರೋಧದ ನಡುವೆ 5 ಎಕರೆ ಸರ್ಕಾರಿ ಜಮೀನು ಮಂಜೂರು ಮಾಡಿದ ಆರೋಪ ಕೇಳಿಬಂದಿದೆ. ಹೆಚ್ಎಂಆರ್ ಚಿಕ್ಕಗುಳ್ಳಪ್ಪ ಎಜುಕೇಶನ್ ಟ್ರಸ್ಟ್​​ಗೆ ಮಂಜೂರು ಮಾಡಿರುವ 5 ಎಕರೆ ಜಮೀನನ್ನು ಈ ಹಿಂದಿನ ಸರ್ಕಾರದಲ್ಲಿ ಕಂದಾಯ ಸಚಿವರಾದ ಆರ್ ಅಶೋಕ್ ಆದೇಶದ ಮೆರಗೆ ಮಂಜೂರು ಮಾಡಿ ಸ್ಥಳಿಯರಿಗೆ ಅನ್ಯಾಯ ಮಾಡಿದ್ದಾರೆ ಅಂತ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.

ಚುನಾವಣೆಗೂ ಮುನ್ನ ಚೆನ್ನಾದೇವಿ ಅಗ್ರಹಾರ ಗ್ರಾಮದ ಸರ್ವೆ ನಂಬರ್ 25 ರಲ್ಲಿರುವ 5 ಎಕರೆ ಜಮೀನು ಮಂಜೂರು ಮಾಡಿದ್ದಾರೆ ಎಂದು ಆರೋಪಿಸಿದ ಗ್ರಾಮಸ್ಥರು, ಜಾನುವಾರುಗಳು ಮತ್ತು ಜನರಿಗೆ ಅನುಕೂಲವಾಗಬೇಕಿದ್ದ ಜಮೀನು ಇದಾಗಿದೆ. ಆದರೆ ಯಾವುದೋ ಸಂಸ್ಥೆಗೆ ಕೊಟ್ಟು ಸ್ಥಳಿಯರಿಗೆ ಅನ್ಯಾಯ ಮಾಡಿದ್ದಾರೆ. ಕೂಡಲೆ ಮಂಜೂರಾತಿಯನ್ನ ರದ್ದು ಮಾಡುವಂತೆ ಸ್ಥಳಿಯರು ಒತ್ತಾಯಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ