ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದ ಜನ ಏನೆಂದು ಹಿಂದೆಯೇ ತೋರಿಸಿದ್ದೀರಿ. ಇಂದು (ಫೆ.5) ಜೆಡಿಎಸ್ ಸಮಾವೇಶದಲ್ಲಿ (JDS convention) ಒಂದು ಲಕ್ಷ ಜನ ಸೇರುವ ಮೂಲಕ ಪಕ್ಷವನ್ನು ಟೀಕಿಸಿದವರಿಗೆ ಉತ್ತರ ನೀಡಿದಂತಿದೆ ಎಂದು ಮಾಜಿ ಸಚಿವ ಜಿ.ಟಿ.ದೇವೇಗೌಡ (G.T.Deve Goda) ಹೇಳಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದ ಜಯಪುರದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಎರಡು ಬಾರಿ ನೀವು ನನ್ನನ್ನು ಗೆಲ್ಲಿಸಿದ್ದೀರಿ, 3ನೇ ಬಾರಿಗೆ ನನಗೆ ಮತ ನೀಡಿ. ಮಾತ್ರವಲ್ಲದೆ, ಮೈಸೂರು ಜಿಲ್ಲೆಯ ಎಲ್ಲಾ ಕ್ಷೇತ್ರದಲ್ಲೂ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ. ಆ ಮೂಲಕ ಹೆಚ್.ಡಿ.ಕುಮಾರಸ್ವಾಮಿರನ್ನು (H.D.Kumaraswamy) ಮತ್ತೆ ಸಿಎಂ ಮಾಡಬೇಕು ಎಂದರು.
ನಿಮ್ಮ ಮತ ವಜ್ರದ ಹಾರ. ನೀವು ಹಾಕುವ ಒಂದೊಂದು ಮತ ಹೆಚ್.ಡಿ ದೇವೇಗೌಡರಿಗೆ ವಜ್ರದ ಹಾರದ ಹಾಗೆ. ನಿಖಿಲ್ ಕುಮಾರಸ್ವಾಮಿ, ಹರೀಶ್ ಗೌಡ ಲವ-ಕುಶ, ರಾಮ-ಲಕ್ಷ್ಮಣ ಇದ್ದಂತೆ. ಹುಣಸೂರು ಕ್ಷೇತ್ರದಲ್ಲಿ ಪುತ್ರ ಹರೀಶ್ ಗೌಡ ಗೆದ್ದೇ ಗೆಲ್ಲುತ್ತಾರೆ. ನಿಖಿಲ್ ದೊಡ್ಡ ಮಟ್ಟದ ನಾಯಕರಾಗಿ ಬೆಳೆಯುತ್ತಾರೆ. ಅದಕ್ಕೆ ಜನರ ಆಶೀರ್ವಾದ ಬೇಕು. ಕೊರೊನಾ ಸಮಯದಲ್ಲಿ ಪ್ರತಿ ಮನೆಗೂ ಅಧಿಕಾರಿಗಳ ಮೂಲಕ ಅಗತ್ಯ ವಸ್ತುಗಳನ್ನ ತಲುಪಿಸಲಾಗಿದೆ. ಬಹಳ ಜನ ನಾನು ಏನು ಮಾಡಿಲ್ಲ ಎನ್ನುತ್ತಾರೆ. ನಮಗೆ ಯಾರು ಸರಿಸಾಟಿ ಇಲ್ಲ ಎಂದು ನೀವು ಸಾಬೀತುಪಡಿಸಿದ್ದೀರಿ. ಇನ್ನೂ ಕೆಲಸಗಳು ಬಾಕಿ ಇದೆ. ಊರೂರಿಗೂ ಬರುತ್ತೇನೆ ಎಂದರು.
ಸಮಾವೇಶದಲ್ಲಿ ಮಾತನಾಡಿದ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಜಿ.ಟಿ.ದೇವೇಗೌಡರಿಗೆ ಕಾಂಗ್ರೆಸ್ ನಾಯಕರು ಹಾಕಿದ್ದ ಸವಾಲಿಗೆ ನೀವೆಲ್ಲ ಉತ್ತರ ನೀಡಿದ್ದೀರಿ. ನೀವೆಲ್ಲಾ ತೊಡೆ ತಟ್ಟಿ ನಿಂತಿದ್ದೀರಿ. ಕಳೆದ ಐತಿಹಾಸಿಕ ಚುನಾವಣೆಯಲ್ಲಿ ಜಿಟಿಡಿ ಅವರನ್ನು ಗೆಲ್ಲಿಸಿ ಉತ್ತರ ನೀಡಿದ್ದೀರಿ. ಈ ಬಾರಿ 40 ರಿಂದ 50 ಸ್ಥಾನಕ್ಕೆ ಜೆಡಿಎಸ್ ಸೀಮಿತವಾಗುವುದಿಲ್ಲ. 123 ಸ್ಥಾನವನ್ನು ಗೆಲ್ಲುವ ಗುರಿಯನ್ನು ಹೊಂದಿದ್ದೇವೆ. ಕುಮಾರಸ್ವಾಮಿ ಅವರು ಒಬ್ಬಂಟ್ಟಿಯಾಗಿ ರಾಜ್ಯ ಸುತ್ತುತ್ತಿದ್ದಾರೆ ಎಂದರು.
ಇದನ್ನೂ ಓದಿ: ಕುಮಾರಸ್ವಾಮಿ ಹೆಂಗೆ ಅಂದ್ರೆ ಬುಸ್…ಬುಸ್…ಎಂದ ಜಮೀರ್ ಅಹಮದ್ಗೆ ಜೆಡಿಎಸ್ ಸರಣಿ ಟ್ವೀಟ್ ಏಟು
ಜೆಡಿಎಸ್ಗೆ ಮೈಸೂರು ಭಾಗಕ್ಕೆ ಜಿಟಿ ದೇವೇಗೌಡ ಒಂದು ಶಕ್ತಿ ಎಂದು ನನಗೆ ಕುಮಾರಣ್ಣ ಹೇಳಿ ಕಳುಹಿಸಿದ್ದಾರೆ. ಈ ಬೃಹತ್ ಕಾರ್ಯಕ್ರಮವನ್ನು ಹೆಚ್.ಡಿ ದೇವೇಗೌಡರು ಲೈವ್ನಲ್ಲಿ ಕಾರ್ಯಕ್ರಮ ವೀಕ್ಷಣೆ ಮಾಡುತ್ತಿದ್ದಾರೆ. ಹೆಚ್.ಡಿ ಕೋಟೆಯ ಚಿಕ್ಕಣ್ಣ ಅವರ ಪುತ್ರ ಹಾಗೂ ಪಿರಿಯಾಪಟ್ಟಣದ ಕೆ.ಮಹದೇವ್ ಅವರನ್ನು ಅಭ್ಯರ್ಥಿ ಮಾಡುವ ವಿಷಯಕ್ಕೆ ಕುಮಾರಣ್ಣನ ಶೀಘ್ರವೇ ತೆರೆ ಎಳೆಯಲಿದ್ದಾರೆ ಎಂದರು.
ಪಂಚ ರತ್ನಯಾತ್ರೆಯ ಮೂಲಕ ಕುಮಾರಸ್ವಾಮಿ ಅವರು ಪ್ರವಾಸ ಮಾಡುತ್ತಿದ್ದಾರೆ. ಕಡಿಮೆ ಅವಧಿಯಲ್ಲಿ ಕುಮಾರಸ್ವಾಮಿ ಅವರು ನೀಡಿರುವ ಜನಪರ ಯೋಜನೆಗಳು ಇಂದಿಗೂ ಮನೆ ಮಾತಾಗಿದೆ. ಕುಮಾರಸ್ವಾಮಿ ಅವರ ಏಕಾಂಗಿ ಹೋರಾಟಕ್ಕೆ ನೀವೆಲ್ಲಾ ಸಾಥ್ ನೀಡಬೇಕು. ನಿಖಿಲ್ ರಾಮನಗರದಲ್ಲಿ ಸ್ಪರ್ಧೆ ಮಾಡಬೇಕು ಎಂದು ಜನರ ಕೂಗಾಗಿತ್ತು. ಅವರ ಕೂಗಿಗೆ ಸ್ಪಂದಿಸಿ ನಾನು ಸ್ಪರ್ಧೆ ಮಾಡುತ್ತಿದ್ದೇನೆ. ನನ್ನ ಹಾಗೂ ಹರೀಶ್ ಗೌಡ ಸಂಬಂಧ ಕೆವಲ ರಾಜಕಾರಣಕ್ಕೆ ಮಾತ್ರ ಸೀಮಿತವಲ್ಲ. ಜಿಲ್ಲೆಯಲ್ಲಿ ಯುವಕರೊಂದಿಗೆ ಪಕ್ಷ ಸಂಘಟನೆ ಮಾಡುವ ಜವಾಬ್ದಾರಿಯನ್ನು ಹರೀಶ್ ಗೌಡ ತೆಗೆದುಕೊಳ್ಳಲಿದ್ದಾರೆ ಎಂದರು.
ಹಾಸನ ಕ್ಷೇತ್ರದ ಟಿಕೆಟ್ ವಿಚಾರದಲ್ಲಿ ಕುಟುಂಬದಲ್ಲಿ ಯಾವುದೇ ಗೊಂದಲವಿಲ್ಲ. ಟಿಕೆಟ್ ಹಂಚಿಕೆಯಲ್ಲಿ ಪಕ್ಷದ ವರಿಷ್ಠರ ತೀರ್ಮಾನವೇ ಅಂತಿಮವಾಗಿರಲಿದೆ. ಮಂಡ್ಯ ಜಿಲ್ಲೆಯಲ್ಲಿ ಹೆಚ್.ಡಿ.ರೇವಣ್ಣ ಸ್ಪರ್ಧೆ ಬಗ್ಗೆಯೂ ನನಗೆ ಗೊತ್ತಿಲ್ಲ. ವರಿಷ್ಠರು, ರಾಜ್ಯಾಧ್ಯಕ್ಷರು ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತಾರೆ. ನನ್ನ ಇತಿಮಿತಿಯಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ ಎಂದರು.
ನಿಖಿಲ್ ಕುಮಾರಸ್ವಾಮಿ ಮುಂದೆ ರಾಜ್ಯದ ಮುಖ್ಯಮಂತ್ರಿ ಆಗುತ್ತಾರೆ. ಸಿಎಂ ಆಗುವ ಎಲ್ಲಾ ಲಕ್ಷಣ ನಿಖಿಲ್ ಕುಮಾರಸ್ವಾಮಿ ಅವರಲ್ಲಿದೆ ಎಂದು ಜಿಟಿ ದೇವೇಗೌಡ ಪುತ್ರ ಹರೀಶ್ ಗೌಡ ಹೇಳಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರ ಒಂದು ಪವರ್ ಫುಲ್ ಕ್ಷೇತ್ರವಾಗಿದೆ. ಟೀಕೆ ಮಾಡಿದವರ ಬಗ್ಗೆ ಜನ ತೀರ್ಮಾನ ಮಾಡಬೇಕು. ನನ್ನ ಚರಿತ್ರೆಯ ಬಗ್ಗೆ ಗುಣದ ಬಗ್ಗೆ ಸರ್ಟಿಫಿಕೇಟ್ ಕೊಡುವುದಕ್ಕೆ ನೀವು ಇದ್ದೀರಾ. ದೇವಸ್ಥಾನಕ್ಕೆ ಒಂದು ರೂಪಾಯಿ ಕೊಟ್ಟಿಲ್ಲ ಎಂದು ಟೀಕೆ ಮಾಡಿದರು. ಬೇರೆ ಕ್ಷೇತ್ರದ ಜನರನ್ನ ಕರೆಸಿ ಸಮಾವೇಶ ಮಾಡುವುದಲ್ಲ, ಚಾಮುಂಡೇಶ್ವರಿ ಕ್ಷೇತ್ರದ ಜನರನ್ನು ಸೇರಿಸಿ ಸಮಾವೇಶ ಮಾಡಲಿ ಎಂದು ಸವಾಲು ಹಾಕಿದ್ದರು. ಇಂದು ಅದಕ್ಕೆಲ್ಲಾ ಉತ್ತರ ಸಿಕ್ಕಿದೆ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ