ನನಗೆ ರಾಜಕೀಯವಾಗಿ ಅಗ್ನಿಪರೀಕ್ಷೆ ಇದೆ, ಅರ್ಥಮಾಡಿಕೊಳ್ಳಿ: ಹಾಸನದಲ್ಲಿ ಕುಮಾರಸ್ವಾಮಿ ಹೇಳಿಕೆ

|

Updated on: Feb 26, 2023 | 8:52 PM

Hassan JDS Ticket Fight: ಹಾಸನ ಟಿಕೆಟ್ ವಿಚಾರವಾಗಿ ಪಕ್ಷ ಹಾಳು ಮಾಡಲು ತಯಾರಿಲ್ಲ ಎಂದು ಕುಮಾರಸ್ವಾಮಿ ಹೇಳುತ್ತಿದ್ದಂತೆ ಕಾರ್ಯಕರ್ತರು ಕೂಗಾಡಿದರು. ಈ ವೇಳೆ ಗರಂ ಆದ ಕುಮಾರಸ್ವಾಮಿ, ನನ್ನ ಧ್ವನಿ ಇನ್ನೂ ಎರಡು ತಿಂಗಳು ಇರಬೇಕು. ನನ್ನ ಆರೋಗ್ಯ ಹಾಳಾದರೆ ನೀವು ಬರುತ್ತೀರಾ ಅಂತಾ ಆಕ್ರೋಶ ವ್ಯಕ್ತಪಡಿಸಿದರು.

ನನಗೆ ರಾಜಕೀಯವಾಗಿ ಅಗ್ನಿಪರೀಕ್ಷೆ ಇದೆ, ಅರ್ಥಮಾಡಿಕೊಳ್ಳಿ: ಹಾಸನದಲ್ಲಿ ಕುಮಾರಸ್ವಾಮಿ ಹೇಳಿಕೆ
ಹೆಚ್.ಡಿ.ಕುಮಾರಸ್ವಾಮಿ
Follow us on

ಹಾಸನ: ರಾಜ್ಯದಲ್ಲಿ ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ತರಬೇಕೆಂದು ಕೆಲಸ ಮಾಡುತ್ತಿದ್ದೇನೆ. ಅನಾರೋಗ್ಯದ ನಡುವೆ ಕೂಡ ನಿತ್ಯ 18 ಗಂಟೆ ಕೆಲಸ ಮಾಡುತ್ತಿದ್ದೇನೆ. ನೀವು ಹಾಸನದ ವಿಚಾರವಾಗಿ ಕೇಳಲು ನೀವು ಬಂದಿದ್ದೀರಿ. ನನಗೆ ರಾಜಕೀಯ ವಾಗಿ ಅಗ್ನಿಪರೀಕ್ಷೆ ಇದೆ ಅರ್ಥಮಾಡಿಕೊಳ್ಳಿ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಹೇಳಿದ್ದಾರೆ. ಹಾಸನದ ರಿಂಗ್ ರಸ್ತೆಯಲ್ಲಿ ಮಾತನಾಡಿದ ಅವರು, ಹಾಸನ ಟಿಕೆಟ್ (Hassan JDS Ticket Fight) ವಿಚಾರವಾಗಿ ಪಕ್ಷ ಹಾಳು ಮಾಡಲು ತಯಾರಿಲ್ಲ ಎಂದು ಹೇಳಿದಾಗ ಕಾರ್ಯಕರ್ತರು ಜೋರಾಗಿ ಕೂಗಾಡಿದರು. ಈ ವೇಳೆ ಕಾರ್ಯಕರ್ತರ ಮೇಲೆ ಗರಂ ಆದ ಕುಮಾರಸ್ವಾಮಿ, ನನ್ನ ಧ್ವನಿ ಇನ್ನೂ ಎರಡು ತಿಂಗಳು ಇರಬೇಕು. ನನ್ನ ಆರೋಗ್ಯ ಹಾಳಾದರೆ ನೀವು ಬರುತ್ತೀರಾ? ನೀವು ಇಲ್ಲಿ ಸ್ವರೂಪ್​ನನ್ನು ಗೆಲ್ಲಿಸಲು ಬಂದಿಲ್ಲ. ಸ್ವರೂಪ್​ ಮನೆ ಹಾಳು ಮಾಡಲು ಬಂದಿದ್ದೀರಾ. ಏನು ತಮಾಷೆ ಮಾಡುತ್ತೀರಾ, ಗೌರವಯುತವಾಗಿ ಕೇಳಿ. ಇಲ್ಲಿ ರಾಜಕೀಯ ಮಾಡದಿರಬಹುದು, ನಾನು ಇಲ್ಲೇ ಹುಟ್ಟಿದವನು. ಸಮಾಧಾನವಾಗಿ ಇರದಿದ್ದರೆ ನಾನು ಮಾತನಾಡಲ್ಲವೆಂದು ಆಕ್ರೋಶ ಭರಿತವಾಗಿ ಹೇಳಿದರು.

ಜೆಡಿಎಸ್​ ಅಧಿಕಾರಕ್ಕೆ ಬರಬೇಕಾದ್ರೆ ಹಾಸನದ 7 ಸೀಟ್ ಗೆಲ್ಲಬೇಕು ಎಂದು ಹೇಳಿದ ಕುಮಾರಸ್ವಾಮಿ, ಹಾಸನ ಕ್ಷೇತ್ರದ ಬಗ್ಗೆ ವಿಶೇಷ ಗೌರವ ಇಟ್ಟುಕೊಂಡಿದ್ದೇನೆ. ಹಾಸನ ಶಾಸಕರಾಗಿದ್ದ ಪ್ರಕಾಶ್ ಪಕ್ಷಕ್ಕೆ ನಿಷ್ಠೆಯಿಂದ ಇದ್ದರು. ರಾಜ್ಯದಲ್ಲಿ ಜೆಡಿಎಸ್ 40 ಸೀಟ್ ಸುಲಭವಾಗಿ ಗೆಲ್ಲಬಹುದು. ಮನೆಯಲ್ಲಿ ಕೂತರೂ ಜನ ನಮ್ಮನ್ನು ಗೆಲ್ಲಿಸುತ್ತಾರೆ. ಹಾಸನ ಜಿಲ್ಲೆಯ ವಿಚಾರ ಬಂದಾಗ ಕಣ್ಮುಚ್ಚಿ ಸಹಿ ಹಾಕಿದ್ದೇನೆ. ಬರುವ ಚುನಾವಣೆಯಲ್ಲಿ ನನ್ನ ಶ್ರಮ ವ್ಯರ್ಥ ಆಗಬಾರದು. ಕುಟುಂಬದ ವ್ಯಾಮೋಹಕ್ಕೆ ನಾನು ಬಲಿಯಾಗಲ್ಲ. ಕುಟುಂಬದ ಹಿತಕ್ಕಿಂತ ರಾಜ್ಯದ ಜನತೆ ಹಿತವೇ ನನಗೆ ಮುಖ್ಯ. ಯಾವುದೇ ಕಾರಣಕ್ಕೂ ಜನತೆಯ ಭಾವನೆಗೆ ತಲೆ ಬಾಗುತ್ತೇನೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಭವಾನಿಗೆ ಟಿಕೆಟ್ ಕೊಡಲ್ಲ ಎಂಬ ಸಂದೇಶ ರವಾನೆ ಮಾಡಿದರು.

ಇದನ್ನೂ ಓದಿ: ಸಭೆ ರದ್ದಾಗಿರಬಹುದು, ಆದರೆ ಹಾಸನ ಕ್ಷೇತ್ರದ ಟಿಕೆಟ್ ವಿಚಾರದಲ್ಲಿ ನನ್ನ ನಿಲುವು ಬದಲಾಗಲ್ಲ: ಕುಮಾರಸ್ವಾಮಿ

ಎರಡು ಬಾರಿ ಆಪರೇಷನ್ ಆಗಿರುವ ನಾನು ಯಾವನಿಗೋಸ್ಕರ ದುಡಿಯುತ್ತಿದ್ದೇನೆ? ರೈತರ ಉಳಿವಿಗಾಗಿ ಕೆಲಸ ಮಾಡುತ್ತಿದ್ದೇನೆ. ನನಗೆ ರಾಜಕೀಯ ಪರಿಜ್ಞಾನ ಇದೆ. 1989 ರಲ್ಲಿ ದೇವೇಗೌಡರು ಎರಡು ಕಡೆ ಸೋತಿದ್ದರು. ಇದಾದ ಬಳಿಕ 1992 ರ ಚುನಾವಣೆಯಲ್ಲಿ ದೇವೇಗೌಡರು ಲೋಕಸಭೆಯಲ್ಲಿ ದೇವೇಗೌಡರು ಗೆದ್ದರು. ಹಾಸನ ಕ್ಷೇತ್ರದ ದ ಬಗ್ಗೆ ನನ್ನ ಹೃದಯದಲ್ಲಿ ವಿಶೇಷ ಗೌರವ ಇಟ್ಟು ಕೊಂಡಿದ್ದೇನೆ ಎಂದರು.

ಹಾಸನದ ಟಿಕೇಟ್ ಕಾರ್ಯಕರ್ತನಿಗೆ: ಕುಮಾರಸ್ವಾಮಿ

ಕ್ಷೇತ್ರದಲ್ಲಿ ಒಬ್ಬ ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ ಗೆಲ್ಲಿಸುವ ಶಕ್ತಿ ಕಾರ್ಯಕರ್ತರಿಗೆ ಇದೆ ಎಂದು ಹೇಳಿದ್ದೆ. ಆ ಮಾತಿಗೆ ನಾನು ಬದ್ದನಾಗಿದ್ದೇನೆ. ಆದರೆ ಎಲ್ಲರೂ ಒಂದಾಗಿ ಹೋಗಬೇಕಿದೆ. ಯಾವುದೇ ಕಾರಣದಿಂದ ಒಡಕು ಇರಬಾರದು. ನಾನು ಕೈಗೊಳ್ಳುವ ತೀರ್ಮಾನಕ್ಕೆ ಒಂದೇ ಧ್ವನಿಯಾಗಿ ಇರಬೇಕು. ನಾವು ಉಳಿದಿರುವುದೆ ನಿಮ್ಮಂತ ಲಕ್ಷಾಂತರ ಕಾರ್ಯಕರ್ತರ ಬಲದಿಂದ, ಅದು ನನಗೆ ಗೊತ್ತಿದೆ. ಮತ್ತೊಮ್ಮೆ ಹಾಸನದ ನೆಲದಲ್ಲಿ ನಿಂತು ಹಾಸನದ ಟಿಕೇಟ್ ಕಾರ್ಯಕರ್ತನಿಗೆ ಎಂದು ಹೇಳಿದರು.

ಹಾಸನ ಕ್ಷೇತ್ರದ ಜೆಡಿಎಸ್​ ಟಿಕೆಟ್ ವಿಚಾರವಾಗಿ ಫೈಟ್ ವಿಚಾರವಾಗಿ ಮಾತನಾಡಿದ ಕುಮಾರಸ್ವಾಮಿ, ನಾನು ಯಾವುದೇ ಕಾರಣಕ್ಕೂ ತಪ್ಪು ನಿರ್ಧಾರ ತೆಗೆದುಕೊಳ್ಳಲ್ಲ. ನಿಮ್ಮ ಛಲಕ್ಕೆ ಲೋಪ ಆಗಲು ನಾನು ಬಿಡುವುದಿಲ್ಲ. ನನ್ನ ಕಾರ್ಯಕರ್ತರನ್ನು ನಾನು ಬಿಟ್ಟುಕೊಡುವುದಿಲ್ಲ ಸಕಾರಾತ್ಮಕವಾಗಿ ನಾವು ತೀರ್ಮಾನ ತೆಗೆದುಕೊಳ್ಳುತ್ತೇವೆ. ಕೆಲವೇ ದಿನಗಳಲ್ಲಿ ಜೆಡಿಎಸ್‌ನ​ ಎರಡನೇ ಪಟ್ಟಿ ಪ್ರಕಟ ಆಗುತ್ತದೆ. ಎರಡನೇ ಪಟ್ಟಿಯಲ್ಲಿ ಹಾಸನ ಅಭ್ಯರ್ಥಿ ಹೆಸರು ಕೂಡ ಇರುತ್ತದೆ ಎಂದರು.

ಇದನ್ನೂ ಓದಿ: ಹಾಸನ ಟಿಕೆಟ್​ ಫೈಟ್: ಹಾಸನ ಅಖಾಡದಲ್ಲಿ ಕ್ಷಣಕ್ಕೊಂದು ತಿರುವು, ದಿನಕ್ಕೊಂದು ಬೆಳವಣಿಗೆ, ಹೆಚ್​ಡಿಕೆಗೆ ದೊಡ್ಡಗೌಡ್ರ ಖಡಕ್ ಸೂಚನೆ

ಕೆಲವು ಕಠಿಣ ತೀರ್ಮಾನ ಮಾಡುವಾಗ ನನಗೂ ಕಷ್ಟ ಇದೆ. ಹಾಸನದ ಏಳೂ ಸ್ಥಾನ ಸೇರಿ 123 ಸ್ಥಾನ ಗೆಲ್ಲವೇಕು. ಹಾಸನದಲ್ಲಿ ನಾನು ಹುಟ್ಟಿದರೂ ರಾಜಕಾರಣ ಮಾಡಿದ್ದು ರಾಮನಗರದಲ್ಲಿ. ಅಲ್ಲಿ ಮತ ಕೇಳಲು ನಾನು ಹೋಗದಿದ್ದರೂ ಜನ ಗೆಲ್ಲಿಸುತ್ತಾರೆ. ಈ ಜಿಲ್ಲೆಯ ಅಭಿವೃದ್ಧಿಗೆ ನನ್ನ ಕಾಣಿಕೆ ಕೂಡ ಇದೆ. ಈ ಮಣ್ಣಿನ ಋಣ ನಾನು ಮರೆಯುವುದಿಲ್ಲ. ನಿಮ್ಮ ಅಬಿಲಾಷೆ, ಭಾವನೆಗೆ ನಾನು ಚ್ಯುತಿ ತರುವುದಿಲ್ಲ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದೀರಿ ನಾನು ಅರ್ಥಮಾಡಿಕೊಳ್ಳುತ್ತೇನೆ. ಇದುವರೆಗೆ ನಮ್ಮ ಮೇಲೆ ಯಾರೂ ಬೊಟ್ಟು ಮಾಡಲು ಆಗಿಲ್ಲ. ಬೇರೆ ಪಕ್ಷದದವರಿಗೆ ನಡುಕ ಶುರುವಾಗಿದೆ ಎಂದರು.

ನಮ್ಮ ಪಂಚರತ್ನ ಯಾತ್ರೆ ಶುರು ಆದಾಗ ಯಾರೂ ನಮಗೆ ಪ್ರಚಾರ ನೀಡಲಿಲ್ಲ. ಆದರೆ ಈಗ ದಿನ ಬೆಳಗಾದರೆ ನಮ್ಮ ಕುಟುಂಬದ ಬಗ್ಗೆ ಸಾಕಷ್ಟು ಬರುತ್ತಿದೆ. ಈ ಬಗ್ಗೆ ಯಾರೂ ಗಂಭೀರವಾಗಿ ತೆಗೆದುಕೊಳ್ಳಬೇಡಿ. ನಾನು ಯಾವುದೇ ಕಾರಣದಿಂದ ತಪ್ಪು ನಿರ್ದಾರ ಮಾಡುವುದಿಲ್ಲ. ನೀವು ಪಕ್ಷದ ಸಂಘಟನೆ ಮುಂದುವರೆಸಿ. ನನಗೆ ಎರಡು ಮೂರು ದಿನ ಅವಕಾಶ ಕೊಡಿ ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:52 pm, Sun, 26 February 23