ಬಳಸಿ ಬಿಸಾಡುವ ನಿಮ್ಮ ತಂತ್ರಕ್ಕೆ ಬಲಿಯಾಗದೇ ಉಳಿದವರುಂಟೇ: ಬಿಜೆಪಿಗೆ ತಿರುಗೇಟು ನೀಡಿದ ಎಂ.ಬಿ.ಪಾಟೀಲ್

ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಎಂ.ಬಿ.ಪಾಟೀಲ್ ಅವರು ವೀರಶೈವ- ಲಿಂಗಾಯತರ ನಡುವೆ ಒಡಕು ಉಂಟುಮಾಡುವ ಯತ್ನ ನಡೆದಿತ್ತು ಎಂದು ಬಿಜೆಪಿ ಟೀಕಿಸಿದೆ. ಇದಕ್ಕೆ ತಿರುಗೇಟು ನೀಡಿದ ಪಾಟೀಲ್, ಬಳಸಿ ಬಿಸಾಡುವ ನಿಮ್ಮ ತಂತ್ರಕ್ಕೆ ಬಲಿಯಾಗದೇ ಉಳಿದವರುಂಟೇ ಸರ್ವಜ್ಞ ಎಂದಿದ್ದಾರೆ.

ಬಳಸಿ ಬಿಸಾಡುವ ನಿಮ್ಮ ತಂತ್ರಕ್ಕೆ ಬಲಿಯಾಗದೇ ಉಳಿದವರುಂಟೇ: ಬಿಜೆಪಿಗೆ ತಿರುಗೇಟು ನೀಡಿದ ಎಂ.ಬಿ.ಪಾಟೀಲ್
ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ (ಎಡ ಚಿತ್ರ)
Edited By:

Updated on: Jan 24, 2023 | 2:57 PM

ಬೆಂಗಳೂರು: ಅಧಿಕಾರದಲ್ಲಿದ್ದಾಗ ಲಿಂಗಾಯತ ವೀರಶೈವರ ನಡುವೆ ಕಂದಕ ಸೃಷ್ಟಿಸಿ, ಒಡೆಯುವ ಶಪಥ ಮಾಡಿ ಅದರ ಹಿಂದೆ ಬಿದ್ದಿದ್ದ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ (M.B.Patil) ಅವರಿಗೆ ರಾಜ್ಯದ ಅಭಿವೃದ್ಧಿಯ ಬಗ್ಗೆ ಯೋಚಿಸಲೂ ಸಮಯವಿರಲಿಲ್ಲ. ಹಾಗಾಗಿ ಈಗ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಉದ್ಘಾಟಿಸಿದ ಯೋಜನೆಯೇ (ನಾರಾಯಣಪುರದ ಸ್ಕಾಡಾ ಯೋಜನೆ) ತಮ್ಮದು ಎಂದು ನಾಚಿಕೆಯಿಲ್ಲದೆ ಹೇಳಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದ ಬಿಜೆಪಿಗೆ (BJP) ತಿರುಗೇಟು ನೀಡಿದ ಪಾಟೀಲ್, ನಿಮ್ಮ ಪಕ್ಷದೊಳಗೆ ಬಳಸಿ ಎಸೆಯುವ ಪದ್ಧತಿ ಇದೆ. ನಾಯಕರನ್ನು ಬಳಸಿ ನಂತರ ಅವರನ್ನು ಮೂಲೆಗುಂಪು ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಬಳಸಿ ಬಿಸಾಡುವ ನಿಮ್ಮ ತಂತ್ರಕ್ಕೆ ಬಲಿಯಾಗದೇ ಉಳಿದವರುಂಟೇ ಸರ್ವಜ್ಞ. ಪಕ್ಷವನ್ನು ಕಟ್ಟಿ, ಅಧಿಕಾರಕ್ಕೆ ತಂದವರನ್ನು ಅವಮಾನಿಸಿ, ಜೈಲಿಗಟ್ಟಿ, ಅಧಿಕಾರ ಖಸಿದು ಅವರ ಮೇಲೆಲ್ಲಾ ರೇಡ್ ಭಾಗ್ಯ ಮಾಡಿಸಿದ ನಿಮ್ಮ ಲಿಂಗಾಯತ ಪ್ರೇಮ ಎಲ್ಲರಿಗೂ ತಿಳಿದಿದೆ ಎಂದು ಪಾಟೀಲರು ಟ್ವೀಟ್ ಮಾಡಿದ್ದಾರೆ.

ಯಡಿಯೂರಪ್ಪ ವಿರುದ್ಧ ಶಾಸಕ ಬಸನಡೌಡ ಪಾಟೀಲ್ ಯತ್ನಾಳ್, ಯತ್ನಾಳ್ ವಿರುದ್ಧ ಸಚಿವ ಮುರುಗೇಶ್ ನಿರಾಣಿ, ನಿರಾಣಿ ವಿರುದ್ಧ ಬಸವರಾಜ ಬೊಮ್ಮಾಯಿ, ಬೊಮ್ಮಾಯಿ ವಿರುದ್ಧ ಜಗದೀಶ್ ಶೆಟ್ಟರ್, ಹೀಗೆ ಲಿಂಗಾಯತ ನಾಯಕರು ಕಚ್ಚಾಡುವಂತೆ ಮಾಡಿರುವ ನಿಮ್ಮ ಹಿಡನ್ ಅಜಂಡಾ ಏನು ಮನುವಾದಿಗಳೇ ಎಂದು ಪ್ರಶ್ನಿಸಿದ ಪಾಟೀಲ್, ಲಿಂಗಾಯತ ನಾಯಕರನ್ನು ಮುಗಿಸುವುದೇ? ಜಗಳ ಹಚ್ಚಿ, ನೋಡಿಕೊಂಡು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹಾಗೂ ಬಿ.ಎಲ್.ಸಂತೋಷ್ ಅವರು ಕಡ್ಲೆಬೀಜ ತಿನ್ನುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಯೋಜನೆ ಉದ್ಘಾಟನೆ ಮತ್ತು ಪಾಟೀಲರ ಬಗ್ಗೆ ಬಿಜೆಪಿ ಹೇಳಿದ್ದೇನು?

ದೀಪಾವಳಿ ದಿನ ಆಕಾಶದಲ್ಲಿ ಯಾವುದೇ ರಾಕೇಟ್ ಟಪ್ ಎಂದರೆ ಸಾಕು ಅದು ನಾನೇ ಹಚ್ಚಿದ ರಾಕೇಟ್ ಎಂದು ಹುಡುಗರು ಹೇಳುತ್ತಾರೆ. ತಮ್ಮದಲ್ದೇ ಇದ್ದರೂ ಹಾಗೊಂದು ಸುಳ್ಳು ಹೇಳಿದರೆ ಅವರಿಗೇನೋ ಆತ್ಮಾನಂದ. ಅದೇ ರೀತಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ, ಮಾಜಿ ಸಚಿವರೂ ಆಗಿರುವ ಲಿಂಗಾಯತ ಧರ್ಮ ಒಡೆಯುವ ಹುನ್ನಾರದ ಮುಂದಾಳು ಎಂ.ಬಿ.ಪಾಟೀಲ್ ಅವರು ಅದೇ ರೀತಿಯ ಆತ್ಮಾನಂದ ಪಟ್ಟುಕೊಳ್ಳುವ ವರ್ಗಕ್ಕೆ ಸೇರುವ ಅಪರೂಪದ ರಾಜಕಾರಣಿ ಎಂದು ಬಿಜೆಪಿ ಟ್ವಿಟರ್​ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಹೇಳಿಕೊಂಡಿದೆ.

ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ ನಾರಾಯಣಪುರ ಎಡದಂಡೆ ಕಾಲುವೆ ಕಾಮಗಾರಿಯಲ್ಲೂ ತಾವು ಕ್ರೆಡಿಟ್ ಪಡೆಯಲು ಎಂಬಿ ಪಾಟೀಲರು ಹವಣಿಸುತ್ತಿದ್ದಾರೆ. ಪುಣ್ಯಕ್ಕೆ ವಿಧಾನಸೌಧ, ವಿಕಾಸಸೌಧ ನನ್ನದೇ ಸದ್ಯಕ್ಕೆ ಅದನ್ನು ನೋಡೋಕೆ ಮುಖ್ಯಮಂತ್ರಿಯವರನ್ನು ಬಿಟ್ಟಿದ್ದೇನೆ ಎಂದು ಹೇಳಿಲ್ಲ ಎಂಬುದನ್ನು ಸಮಾಧಾನಪಟ್ಟುಕೊಳ್ಳುವ ವಿಚಾರ ಎಂದು ಬಿಜೆಪಿ ಹೇಳಿದೆ. ಇದೇ ರೀತಿ ಕೇಂದ್ರ ಸರ್ಕಾರದಿಂದ ಬರುವ ಅಕ್ಕಿಗೆ ಸಿದ್ದರಾಮಯ್ಯ ಅವರ ಫೋಟೋ ಹಾಕಿ ನಾವೇ ಅಕ್ಕಿ ಕೊಟ್ವಿ ಎಂದು ಪ್ರಚಾರ ಮಾಡಿದ್ದರು ಅಂತ ಬಿಜೆಪಿ ಹೇಳಿದೆ.

ಹಾಗಿದ್ದರೆ ಯೋಜನೆ ಕಾಮಗಾರಿ ಬಗ್ಗೆ ಎಂ.ಬಿ.ಪಾಟೀಲರು ಹೇಳಿದ್ದೇನು?

ನಾರಾಯಣಪುರದ ಸ್ಕಾಡಾ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಜನವರಿ 19ರಂದು ಉದ್ಘಾಟಿಸಿದ್ದಾರೆ. ಇದಕ್ಕೂ ಮುನ್ನ ಟ್ವೀಟ್ ಮಾಡಿ ಪ್ರಧಾನಿಗೆ ಟಾಂಗ್ ಕೊಟ್ಟಿದ್ದ ಪಾಟೀಲ್, ಸಿದ್ದರಾಮಯ್ಯ ಅವರ ನೇತೃತ್ವದ ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ನಾನು ಜಲಸಂಪನ್ಮೂಲ ಸಚಿವನಾಗಿದ್ದಾಗ 2014ರಲ್ಲಿ ಪ್ರಾರಂಭಿಸಿ 2017ರಲ್ಲಿ ಕಾರ್ಯರೂಪಗೊಳಿಸಿದ ನನ್ನ ಕನಸಿನ SCADA ಮೊದಲ ಹಂತದ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸುತ್ತಿರುವುದು ನನಗೆ ಹೆಮ್ಮೆ ತಂದಿದೆ ಎಂದು ಎಂ.ಬಿ.ಪಾಟೀಲ್ ಅವರು ಹೇಳಿದ್ದರು.

ಎರಡನೇ ಟ್ವೀಟ್ ಮಾಡಿದ ಪಾಟೀಲರು, SCADA-Phase2 ಕೂಡ ನಮ್ಮ ಸಮ್ಮಿಶ್ರ ಸರ್ಕಾರದಲ್ಲಿ ಪ್ರಾರಂಭಿಸಿದ್ದು. ರಾಜ್ಯ ಬಿಜೆಪಿ ಸರ್ಕಾರ ಯಾವುದೇ ನಿರ್ಣಾಯಕ ಅಭಿವೃದ್ಧಿ ಮಾಡದಿದ್ದರೂ ಹಿಂದಿನ ಸರ್ಕಾರದ ಕೆಲಸಗಳಿಗೆ ಮೈಲೇಜ್ ಪಡೆಯಲು ಹಿಂಜರಿಯುವುದಿಲ್ಲ ಎಂದು ಟಾಂಗ್ ನೀಡಿದ್ದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ