ಚಿಂತಾಮಣಿ ರಾಮ ರಾಜ್ಯವಾಗಲು ಬಿಜೆಪಿ ಗೆಲ್ಲಬೇಕು: ಸಚಿವ ಸುಧಾಕರ್

|

Updated on: Mar 14, 2023 | 7:25 PM

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರಕ್ಕೆ ಆಗಮಿಸಿದ ವಿಜಯ ಸಂಕಲ್ಪ ಯಾತ್ರೆಯ ಮೆರವಣಿಗೆಯಲ್ಲಿ ಬಾಗಿಯಾಗಿ ಮಾತನಾಡಿದ ಸಚಿವ ಸುಧಾಕರ್, ನಾನು ಮತ್ತೆ ಮತ್ತೆ ಬರುತ್ತೇನೆ, ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವವರೆಗೂ ಬರುತ್ತೇನೆ, ಮತ್ತೆ ರಾಮರಾಜ್ಯ ಸ್ಥಾಪನೆಯನ್ನು ಚಿಂತಾಮಣಿಯಲ್ಲಿ ಸ್ಥಾಪನೆ ಮಾಡುತ್ತೇನೆ ಎಂದರು.

ಚಿಂತಾಮಣಿ ರಾಮ ರಾಜ್ಯವಾಗಲು ಬಿಜೆಪಿ ಗೆಲ್ಲಬೇಕು: ಸಚಿವ ಸುಧಾಕರ್
ಚಿಕ್ಕಬಳ್ಳಾಪುರದ ಚಿಂತಾಮಣಿ ಕ್ಷೇತ್ರದಲ್ಲಿ ವಿಜಯ ಸಂಕಲ್ಪ ಯಾತ್ರೆ
Follow us on

ಚಿಂತಾಮಣಿ: ಮಾಜಿ ಸಚಿವ ದಿ.ಕೆ.ಎಂ. ಕೃಷ್ಣಾರೆಡ್ಡಿ ಅವರ ಕಾಲದಲ್ಲಿ ಚಿಂತಾಮಣಿಯಲ್ಲಿದ್ದ (Chintamani) ರಾಮರಾಜ್ಯವನ್ನು ಮತ್ತೆ ಪುನರ್ ಪ್ರತಿಷ್ಠಾಪನೆ ಮಾಡಲು ಬಿಜೆಪಿ (BJP) ಅಭ್ಯರ್ಥಿ ಗೆಲ್ಲಬೇಕು, ಇದಕ್ಕೆ ಎಲ್ಲರೂ ಶ್ರಮಿಸುವಂತೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ (Dr.K.Sudhakar) ಕರೆ ನೀಡಿದರು. ಜಿಲ್ಲೆಯ ಚಿಂತಾಮಣಿ ನಗರಕ್ಕೆ ಆಗಮಿಸಿದ ವಿಜಯ ಸಂಕಲ್ಪ ಯಾತ್ರೆಯ ಮೆರವಣಿಗೆಯಲ್ಲಿ ಬಾಗಿಯಾಗಿ ಮಾತನಾಡಿದ ಅವರು, ದಿವಂಗತ ಕೆ.ಎಂ. ಕೃಷ್ಣಾರೆಡ್ಡಿ ಅವರು ಶಾಸಕರಾಗಿದ್ದ ಸಂದರ್ಭದಲ್ಲಿ ಚಿಂತಾಮಣಿ ತಾಲೂಕಿನಲ್ಲಿ ರಾಮರಾಜ್ಯವಿತ್ತು. ಅವರು ಗೃಹ ಸಚಿವರಾದರೂ ಸಾಮಾನ್ಯ ವ್ಯಕ್ತಿಯಂತೆ ಕೆಲಸ ಮಾಡಿದ್ದರು. ಅಂತಹ ವ್ಯಕ್ತಿಯ ಆಶಯಗಳನ್ನು ಈಡೇರಿಸುವುದು ನಮ್ಮೆಲ್ಲರ ಕರ್ತವ್ಯ, ಅವರು ಬಿಟ್ಟುಹೋದ ರಾಮರಾಜ್ಯವನ್ನು ಮತ್ತೆ ಸ್ಥಾಪನೆ ಮಾಡಬೇಕಿದೆ ಎಂದರು.

ನಾನು ಮತ್ತೆ ಮತ್ತೆ ಬರುತ್ತೇನೆ, ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವವರೆಗೂ ಬರುತ್ತೇನೆ, ಮತ್ತೆ ರಾಮರಾಜ್ಯ ಸ್ಥಾಪನೆಯನ್ನು ಚಿಂತಾಮಣಿಯಲ್ಲಿ ಸ್ಥಾಪನೆ ಮಾಡುತ್ತೇನೆ ಎಂದು ಹೇಳಿದ ಸುಧಾಕರ್, ಚಿಂತಾಮಣಿಯಲ್ಲಿ ಬಿಜೆಪಿಯೇ ಇಲ್ಲ ಎಂದವರಿಗೆ ತಕ್ಕ ಉತ್ತರ ನೀಡುವಂತೆ ಇಂದು ಕೇಸರೀಮಯವಾಗಿದೆ. ನಾನು ಅನ್ನುವವರಿಗೆ ಕೇಸರಿ ಎಲ್ಲಿದೆ ಎಂದು ತೋರಿಸಲಾಗಿದೆ. ನಾವು ಅನ್ನುವವರು ಮಾತ್ರ ಬಿಜೆಪಿ. ನಾವು ಬಯಸುವ ಬಿಜೆಪಿಯನ್ನು ಚಿಂತಾಮಣಿಯಲ್ಲಿ ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.

ಇದನ್ನೂ ಓದಿ: Chikkaballapur: ಬಲಿಜ ಜನಾಂಗಕ್ಕೆ 2ಎ ಮೀಸಲಾತಿ ನೀಡುತ್ತೇವೆ; ಸಚಿವ ಸುಧಾಕರ್ ಭರವಸೆ

ಪ್ರಧಾನಿ ನರೇಂದ್ರ ಮೋದಿ ಅವರು ಕೋವಿಡ್ ಸಂದರ್ಭದಲ್ಲಿ ಮೂರು ಡೋಸ್ ಲಸಿಕೆ ನೀಡಿದ್ದಾರೆ. ಪ್ರತಿ ರೈತನಿಗೆ ಕೃಷಿ ಸಮ್ಮಾನ್ ಯೋಜನೆಯಡಿ ಕೇಂದ್ರ 6 ಸಾವಿರ ಮತ್ತು ರಾಜ್ಯ 4 ಸಾವಿರ ಸೇರಿ ವಾರ್ಷಿಕ 10 ಸಾವಿರ ನೀಡಲಾಗುತ್ತಿದೆ. ಇದು ಡಬಲ್ ಇಂಜಿನ್ ಸರ್ಕಾರದ ಸಾಧನೆ. ಆದರೆ ಕಾಂಗ್ರೆಸ್​ನಲ್ಲಿ ಡಬಲ್ ಸ್ಟೀಯರಿಂಗ್ ಬಸ್ ಇದೆ. ಈ ಬಸ್​ನಲ್ಲಿ ಎರಡು ಸ್ಟೀಯರಿಂಗ್ ಇದೆ. ಸಿದ್ದರಾಯಮ್ಯ ಒಂದು ಕಡೆಗೆ ಎಳೆದೆರೆ, ಡಿ.ಕೆ. ಶಿವಕುಮಾರ್ ಮತ್ತೊಂದು ಕಡೆಗೆ ಎಳೆಯುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಅಂತಹ ಡಬಲ್ ಸ್ಟಿಯರಿಂಗ್ ಬಸ್ ಬೇಕಾ ಅಥವಾ ಡಬಲ್ ಇಂಜಿನ್ ಸರ್ಕಾರ ಬೇಕಾ ಎಂಬುದನ್ನು ತೀರ್ಮಾನಿಸಿ. ಚುನಾವಣೆಗೆ ಇನ್ನು ಕೇವಲ 45 ದಿನಗಳಿವೆ. ಪಕ್ಷದ ಕಾರ್ಯಕರ್ತರು ಪ್ರತಿ ದಿನ ಪ್ರತಿ ಗ್ರಾಮಕ್ಕೆ ಭೇಟಿ ನೀಡಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನೀಡಿರುವ ಎಲ್ಲ ಯೋಜನೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಹೇಳಿದರು.

ಮನೆ ಬಾಗಿಲಿಗೆ ಕಂದಾಯ ದಾಖಲೆ

ಕಂದಾಯ ಸಚಿವ ಆರ್. ಅಶೋಕ್ ಅವರು ಮನೆ ಬಾಗಿಲಿಗೆ ಕಂದಾಯ ದಾಖಲೆ ನೀಡುವ ವಿನೂತನ ಯೋಜನೆ ಜಾರಿಗೊಳಿಸಿದ್ದಾರೆ. ಅಲ್ಲದೆ ಜಿಲ್ಲಾಧಿಕಾರಿ ನಡೆ ಗ್ರಾಮಗಳ ಕಡೆ ಕಾರ್ಯಕ್ರಮ ರೂಪಿಸಿ ಪ್ರತಿ ಗ್ರಾಮಕ್ಕೆ ಜಿಲ್ಲಾಧಿಕಾರಿ ಸೇರಿದಂತೆ ಎಲ್ಲ ಮಟ್ಟದ ಅಧಿಕಾರಿಗಳನ್ನು ಕರೆತಂದು ಜನರ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ಮಾಡುತ್ತಿದ್ದಾರೆ. ಇದನ್ನು ಕಾಂಗ್ರೆಸ್ ಮಾಡಿತ್ತಾ ಎಂದು ಪ್ರಶ್ನಿಸಿದರು.

ಜಿಲ್ಲೆಯಲ್ಲಿ 38 ಸಾವಿರ ನಿವೇಶನಗಳನ್ನು ಬಡವರಿಗಾಗಿ ಗುರ್ತಿಸಲಾಗಿದೆ. ಚಿಂತಾಮಣಿ ಪ್ರಮುಖ ನಗರವಾಗಿದೆ, ಆದರೂ ಈವರೆಗೆ ಅಭಿವೃದ್ಧಿ ಆಗಿಲ್ಲ, ಅಭಿವೃದ್ಧಿ ಆಗಬೇಕಾದರೆ ಬಿಜೆಪಿ ಶಾಸಕರು ಬರಬೇಕು. ಈವರೆಗೆ ಚಿಂತಾಮಣಿಯಲ್ಲಿ ಕಾಂಗ್ರೆಸ್, ಜೆಡಿಎಸ್ ಮತ್ತು ಪಕ್ಷೇತರ ಶಾಸಕರನ್ನು ನೋಡಿದ್ದೀರಿ, ಶಾಸಕರನ್ನು ನೋಡದ ಏಕೈಕ ಪಕ್ಷ ಬಿಜೆಪಿ. ಹಾಗಾಗಿ ಈ ಬಾರಿ ಬಿಜೆಪಿ ಶಾಸಕರು ಚಿಂತಾಮಣಿಯಿಂದ ಆರಿಸಿ ಬರಬೇಕು ಎಂದು ಕರೆ ನೀಡಿದರು.

ವರದಿ: ಭೀಮಪ್ಪ ಪಾಟೀಲ್, ಟಿವಿ9 ಚಿಕ್ಕಬಳ್ಳಾಪುರ

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:25 pm, Tue, 14 March 23