ಹೆಚ್​ಡಿ ಕುಮಾರಸ್ವಾಮಿ ವಿರುದ್ಧ ಭೂಕಬಳಿಕೆ ಆರೋಪ: ತನಿಖೆಗೆ ಎಸ್​ಐಟಿ ರಚನೆ

ರಾಮನಗರದ ಕೇತಗಾನಹಳ್ಳಿಯಲ್ಲಿನ ಸರ್ಕಾರಿ ಜಮೀನು ಕಬಳಿಕೆ ಆರೋಪದ ಹಿನ್ನೆಲೆಯಲ್ಲಿ ಹೆಚ್.ಡಿ. ಕುಮಾರಸ್ವಾಮಿ ಮತ್ತು ಕುಟುಂಬದ ಸದಸ್ಯರ ವಿರುದ್ಧ ಎಸ್ಐಟಿ ತನಿಖೆ ಆರಂಭವಾಗಿದೆ. ಹೈಕೋರ್ಟ್‌ನ ನಿರ್ದೇಶನದ ಮೇರೆಗೆ ರಚಿಸಲಾದ ಈ ತನಿಖಾ ತಂಡವು ಕರ್ನಾಟಕ ಭೂ ಕಂದಾಯ ಕಾಯ್ದೆ ಮತ್ತು ಭೂ ಕಬಳಿಕೆ ನಿಷೇಧ ಕಾಯ್ದೆಯಡಿ ತನಿಖೆ ನಡೆಸಲಿದೆ. ಎಸ್.ಆರ್. ಹಿರೇಮಠ ಅವರ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಿಂದಾಗಿ ಈ ತನಿಖೆ ಪ್ರಾರಂಭವಾಗಿದೆ.

ಹೆಚ್​ಡಿ ಕುಮಾರಸ್ವಾಮಿ ವಿರುದ್ಧ ಭೂಕಬಳಿಕೆ ಆರೋಪ: ತನಿಖೆಗೆ ಎಸ್​ಐಟಿ ರಚನೆ
ಹೆಚ್​ಡಿ ಕುಮಾರಸ್ವಾಮಿ
Edited By: ವಿವೇಕ ಬಿರಾದಾರ

Updated on: Feb 01, 2025 | 2:12 PM

ಬೆಂಗಳೂರು, ಫೆಬ್ರವರಿ 01: ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ (HD Kumaraswamy) ಮತ್ತು ಅವರ ಕುಟುಂಬ‌ ಸದಸ್ಯರ ವಿರುದ್ಧ ಕೇಳಿಬಂದಿರುವ ರಾಮನಗರ ಜಿಲ್ಲೆ ಬಿಡದಿ ಹೋಬಳಿಯ ಕೇತಗಾನಹಳ್ಳಿ ಗ್ರಾಮದ ಸರ್ಕಾರಿ ಜಮೀನು ಕಬಳಿಸಿದ್ದಾರೆ ಎಂಬ ಆರೋಪದ ತನಿಖೆ ನಡೆಸಲು ರಾಜ್ಯ ಸರ್ಕಾರ ಹಿರಿಯ ಐಎಎಸ್ ಅಧಿಕಾರಿ ಅಮಲಾನ್ ಆದಿತ್ಯ ಬಿಸ್ವಾಸ್ ನೇತೃತ್ವದಲ್ಲಿ ಎಸ್​ಐಟಿ ರಚನೆ ಮಾಡಿದೆ.

ಕರ್ನಾಟಕ ಭೂ ಕಂದಾಯ ಕಾಯ್ದೆ 1964 ಮತ್ತು ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯ್ದೆ-2011ರ ಅಡಿಯಲ್ಲಿ ಎಸ್​ಐಟಿ ರಚನೆ ಮಾಡಲಾಗಿದೆ. ಈ ಎಸ್​ಐಟಿ ತಂಡದಲ್ಲಿ ಭೂ ಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಯ ಜಂಟಿ ನಿರ್ದೇಶಕ ನಿಸ್ಸಾರ್ ಅಹಮ್ಮದ್​, ಬೆಂಗಳೂರು ವಿಭಾಗದ ಹೆಚ್ಚುವರಿ ಪ್ರಾದೇಶಿಕ ಇಸ್ಲಾವುದ್ದೀ ಗದ್ಯಾಳ, ಕಂದಾಯ ಆಯುಕ್ತಾಲಯದ ತಹಶೀಲ್ದಾರ್​ ಗಣಪತಿ ಶಾಸ್ತ್ರಿ ಇದ್ದಾರೆ.

ಹೆಚ್​ಡಿ ಕುಮಾರಸ್ವಾಮಿ ಮತ್ತು ಅವರ ಕುಟುಂಬದವರು ಕೇತಗಾನಹಳ್ಳಿಯಲ್ಲಿ ಸರ್ವೆ ನಂ. 8,9,10, 16, 17 ಮತ್ತು 79ರಲ್ಲಿನ ಜಮೀನುಗಳನ್ನು ಕಬಳಿಸಿದ್ದಾರೆ ಎಂಬ ಆರೋಪಿಸಿ ಧಾರವಾಡದ ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ ಎಸ್​ಆರ್​ ಹಿರೇಮಠ ಹೈಕೋರ್ಟ್​ನಲವಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶ ಪಾಲಿಸಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿಯನ್ನೂ ಸಲ್ಲಿಸಿದ್ದರು.

ಇದನ್ನೂ ಓದಿ: ಗುತ್ತಿಗೆದಾರರು 1 ವರ್ಷ ಯಾವುದೇ ಗುತ್ತಿಗೆ ಪಡೆಯಬೇಡಿ, ಕೆಲಸ ಮಾಡಬೇಡಿ: ಕುಮಾರಸ್ವಾಮಿ

ಈ ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್​ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಇದರ ಬೆನ್ನಲ್ಲೇ ಸರ್ಕಾರ ಎಸ್​ಐಟಿ ರಚನೆ ಮಾಡಿದೆ.

ಹೈಕೋರ್ಟ್​ ಸೂಚನೆ ಮೇರೆಗೆ ತನಿಖಾ ತಂಡ ರಚನೆ: ಕೃಷ್ಣಭೈರೇಗೌಡ

ಹೆಚ್​​ಡಿ ಕುಮಾರಸ್ವಾಮಿ ವಿರುದ್ಧ ಸರ್ಕಾರಿ ಜಾಗ ಒತ್ತುವರಿ ಆರೋಪಕ್ಕೆ ಸಂಬಂಧಿಸಿದಂತೆ ಕಂದಾಯ ಸಚಿವ ಕೃಷ್ಣಭೈರೇಗೌಡ ಮಾತನಾಡಿ, ಹೈಕೋರ್ಟ್​ ಸೂಚನೆ ಮೇರೆಗೆ ತನಿಖಾ ತಂಡವನ್ನು ರಚನೆ ಮಾಡಲಾಗಿದೆ. ಹೈಕೋರ್ಟ್ ಸೂಚನೆಯನ್ನು ಪಾಲಿಸಲು ಅಧಿಕಾರಿಗಳಿಗೆ ಹೇಳಿದ್ದೇನೆ. ಹೈಕೋರ್ಟ್ ಸೂಚನೆ ಕೊಟ್ಟಾಗ ಸರ್ಕಾರ ಗೌರವಿಸಬೇಕಾಗುತ್ತದೆ. ಹೈಕೋರ್ಟ್ ‌ಕೊಟ್ಟಿರುವ ಸಮಯದೊಳಗೆ ಸಮಿತಿ ವರದಿ ನೀಡುತ್ತೆ ಎಂದು ಹೇಳಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Prasanna Gaonkar

ಹುಟ್ಟೂರು ಯಲ್ಲಾಪುರ, ಬೆಳೆದೂರು ದಾಂಡೇಲಿಯ ದಟ್ಟ ಕಾಡುಗಳ ನಡುವೆ. ರವಿ ಬೆಳಗೆರೆ ಎಂಬ ಅಕ್ಷರ ರಾಕ್ಷಸನ ಕಟ್ಟಾಭಿಮಾನದಿಂದ ಹಾಳಾಗಿ, ಸೈನ್ಸ್ ನಲ್ಲಿ ಡಿಗ್ರಿ ಪಡೆದು ಜರ್ನಲಿಸಂಗೆ ಹಿಂಬದಿ ಕಿಟಕಿಯಿಂದ ನುಸುಳಿದ್ದು 2010 ರ ಅಕ್ಟೋಬರ್ ನಲ್ಲಿ. ಉಡುಪಿಯಲ್ಲಿ ಮೊದಲ ಪತ್ರಿಕೋದ್ಯಮ ಕರ್ತವ್ಯ ಪ್ರಾರಂಭಿಸಿದ್ದು 2010 ರಲ್ಲಿಯೇ. ಜನಶ್ರೀ ನ್ಯೂಸ್ ಮೊದಲು ಅನ್ನ ನೀಡಿದ ಸಂಸ್ಥೆ. ಉಡುಪಿ ಜಿಲ್ಲಾ ವರದಿಗಾರನಾಗಿ ಮೂರು ವರ್ಷ ಕೆಲಸ ಮಾಡಿ 2013 ರ ಅಂತ್ಯಕ್ಕೆ ಸಮಯ ನ್ಯೂಸ್ ಮೂಲಕ ಬೆಂಗಳೂರಿಗೆ ಎಂಟ್ರಿ. ಬಿಗ್ ೩, ಬೆಂಗಳೂರ್ ಲೈವ್, ಸಮಯ ಸಕಾಲ ಕಾರ್ಯಕ್ರಮದಲ್ಲಿ ವರದಿಗಾರಿಕೆ ಮಾಡಿದ ಖುಷಿ. 2014 ರ ಡಿಸೆಂಬರ್ ನಿಂದ ಟಿವಿ9 ನಲ್ಲಿ ಕೆಲಸ ಪ್ರಾರಂಭ. ಟಿವಿ9 ನಲ್ಲಿ ಮೊದಲು ಮೆಟ್ರೋ ರಿಪೋರ್ಟಿಂಗ್ ಮೂಲಕ ಬೆಂಗಳೂರು ಸುತ್ತುವ ಅರಿಯುವ ರಾಜಧಾನಿಯ ನಾಡಿಮಿಡಿತ ಹುಡುಕುವ ಅವಕಾಶ. ಮೆಟ್ರೋ ಬ್ಯೂರೋ ದಲ್ಲಿ ಶೈಕ್ಷಣಿಕ ಹಾಗೂ ಬಿಬಿಎಂಪಿ ವರದಿಗಾರಿಕೆ. ಚಪ್ಪಲಿಯಿಂದ ಹಿಡಿದು ಚಾದರ್ ತನಕ ಸ್ಟೋರಿ ಮಾಡಿದ ಅನುಭವ. ಮೆಟ್ರೋ ಟೀಂ ನಿಂದ ರಾಜಕೀಯ ವರದಿಗಾರಿಕೆಗೆ ಶಿಫ್ಟ್ ಆದ ತಕ್ಷಣ- ಮುಂದುವರಿದಿದೆ ನಿರಂತರ ಪಯಣ. ಕಥೆ, ಕಾದಂಬರಿ, ಕವನ, ಸಿನಿಮಾ, ಸುತ್ತಾಟ, ಆಗಾಗ ಕಿತ್ತಾಟ, ಸ್ನೇಹಿತರೊಂದಿಗೆ ಒಡನಾಟ ಇವೆಲ್ಲ ಮಾಮೂಲಿ ದಿನಚರಿ. ಇವತ್ತಿಗೂ ಬರವಣಿಗೆಯೊಂದೇ ಖುಷಿ ಕೊಡುವ ಖರ್ಜೂರ. ಸ್ಟಾಕ್ ಮಾರ್ಕೆಟ್ ನಲ್ಲಿ 2019 ರಿಂದ ಆ್ಯಕ್ಟಿವ್.

Read More
Follow Us