ಬೆಂಗಳೂರು: ವಿಧಾನಪರಿಷತ್ನ ಮೂರು ಸ್ಥಾನಗಳಿಗೆ ಜೂನ್ 30ರಂದು ನಡೆಯಲಿರುವ ಉಪ ಚುನಾವಣೆಗೆ (MLC By Election) ಕಾಂಗ್ರೆಸ್ ಪಕ್ಷವು ಸೋಮವಾರ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಬಿಜೆಪಿ ತ್ಯಜಿಸಿ ಕಾಂಗ್ರೆಸ್ಗೆ ಸೇರಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲನುಭವಿಸಿದ್ದ ಜಗದೀಶ ಶೆಟ್ಟರ್ಗೆ (Jagadish Sjettar) ಟಿಕೆಟ್ ನೀಡಲಾಗಿದೆ. ನಿರೀಕ್ಷೆಯಂತೆಯೇ ಎನ್‌ಎಸ್ ಬೋಸರಾಜು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬೆಂಬಲಿಗ ತಿಪ್ಪಣ್ಣ ಕಮಕನೂರ್ ಅವರಿಗೂ ಟಿಕೆಟ್ ಘೋಷಣೆ ಮಾಡಲಾಗಿದೆ. ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಮಂಗಳವಾರ (ಜೂನ್ 20) ಕೊನೆಯ ದಿನವಾಗಿದೆ. ಮಧ್ಯಾಹ್ನ 3 ಗಂಟೆಯವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದೆ.
ಜೂನ್ 21 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಜೂನ್ 23 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಜೂನ್ 30 ರಂದು ಬೆಳಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ಶಾಸಕರು ಮತದಾನ ಮಾಡಲಿದ್ದಾರೆ. ಆ ನಂತರ ಮತ ಎಣಿಕೆ ನಡೆಯಲಿದ್ದು, ಫಲಿತಾಂಶ ಪ್ರಕಟವಾಗಲಿದೆ.
ಬೋಸರಾಜು ಅವರು ಸದ್ಯ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಉಭಯ ಸದನಗಳ ಸದಸ್ಯರಲ್ಲದ ಕಾರಣ ಸಚಿವರಾಗಿ ಮುಂದುವರಿಯಲು ಪರಿಷತ್ಗೆ ಆಯ್ಕೆಯಾಗುವುದು ಅನಿವಾರ್ಯವಾಗಿದೆ.
ಜಗದೀಶ್ ಶೆಟ್ಟರ್ ಅವರು ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಸ್ಪರ್ಧಿಸಿ ಬಿಜೆಪಿಯ ಮಹೇಶ್ ಟೆಂಗಿನಕಾಯಿ ವಿರುದ್ಧ ಸೋಲನುಭವಿಸಿದ್ದರು. ಅವರು ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸ್ಥಾನ ಆಕಾಂಕ್ಷಿ ಎಂದು ಹೇಳಲಾಗಿತ್ತು. ಕಾಂಗ್ರೆಸ್ ಸರ್ಕಾರದ ಪೂರ್ಣಪ್ರಮಾಣದ ಸಚಿವ ಸಂಪುಟ ಅಸ್ತಿತ್ವಕ್ಕೆ ಬಂದ ಬಳಿಕ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹುಬ್ಬಳ್ಳಿಗೆ ತೆರಳಿ ಶೆಟ್ಟರ್ ಅವರ ಜತೆ ಮಾತುಕತೆ ನಡೆಸಿದ್ದರು. ಸೂಕ್ತ ಸ್ಥಾನಮಾನ ನೀಡುವ ಭರವಸೆಯನ್ನೂ ನೀಡಿದ್ದರು.
ಇದನ್ನೂ ಓದಿ: ಮೇಲ್ಮನೆ ಉಪಚುನಾವಣೆ: ಇಂದಿನಿಂದ ನಾಮಪತ್ರ, ಬಿಜೆಪಿ-ಜೆಡಿಎಸ್ ಸ್ಪರ್ಧೆ ಡೌಟ್: ಕಾಂಗ್ರೆಸ್ನಿಂದ ಯಾರಾಗ್ತಾರೆ ಎಂಎಲ್ಸಿ?
ಮುಂಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬೆಂಬಲಿಗ ತಿಪ್ಪಣ್ಣಪ್ಪ ಕಮಕನೂರ್ಗೆ ಕಾಂಗ್ರೆಸ್ ಪಕ್ಷವು ಪರಿಷತ್ ಚುನಾವಣೆ ಟಿಕೆಟ್ ಘೋಷಣೆ ಮಾಡಲಾಗಿದೆ ಎನ್ನಲಾಗಿದೆ. ಕೋಲಿ ಸಮಾಜದ ಮುಖಂಡರಾಗಿರುವ ತಿಪ್ಪಣ್ಣಪ್ಪ ಕಮಕನೂರ್ ಈ ಹಿಂದೆ ಕೂಡಾ ಹತ್ತು ತಿಂಗಳ ಕಾಲ ಪರಿಷತ್ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು. ಕಲಬುರಗಿ ಜಿಲ್ಲೆಯಲ್ಲಿ ಕೋಲಿ ಸಮಾಜದ ಜನ ಹೆಚ್ಚಿದ್ದು, ಲೋಕಸಭೆ ಚುನಾವಣೆ ದೃಷ್ಟಿಯಿಂದ ಕಾಂಗ್ರೆಸ್ ಈ ಹೆಜ್ಜೆ ಇಟ್ಟಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಕೋಲಿ ಸಮಾಜದ ಬಾಬುರಾವ್ ಚಿಂಚನಸೂರ್ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಆ ಸ್ಥಾನವನ್ನು ಮತ್ತೋರ್ವ ಕೋಲಿ ಸಮಾಜದ ಮುಖಂಡನಿಗೆ ಸಿಗುವಂತೆ ಮಾಡಲು ಕಾಂಗ್ರೆಸ್ ಮುಂದಾಗಿದೆ.
ವಿಧಾನಪರಿಷತ್ ಸದಸ್ಯರಾಗಿದ್ದ ಆರ್. ಶಂಕರ್, ಲಕ್ಷ್ಮಣ ಸವದಿ, ಬಾಬುರಾವ್ ಚಿಂಚನಸೂರ್ ವಿಧಾನಸಭೆ ಚುನಾವಣೆಗೂ ಮುನ್ನ ಪರಿಷತ್ ಸ್ಥಾನಕ್ಕೆ ಹಾಗೂ ಬಿಜೆಪಿಗೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಹೀಗಾಗಿ ಪರಿಷತ್ನಲ್ಲಿ ಮೂರು ಸ್ಥಾನ ತೆರವಾಗಿದ್ದವು. ಇದೀಗ ಆ ಸ್ಥಾನಗಳ ಭರ್ತಿಗೆ ಉಪಚುನಾವಣೆ ನಡೆಯುತ್ತಿದೆ.
ಬಾಬುರಾವ್ ಚಿ೦ಚನಸೂರು ಅವರ ಪರಿಷತ್ ಸದಸ್ಯತ್ವ ಅವಧಿ 2024ರ ಜೂನ್ 17ಕ್ಕೆ, ಆರ್ ಶ೦ಕರ್ ಅವರ ಅವಧಿ 2026 ರ ಜೂನ್ 30ಕ್ಕೆ ಹಾಗೂ ಲಕ್ಷ್ಮಣ ಸವದಿ ಸದಸ್ಯತ್ವ ಅವಧಿ 2028ರ ಜೂನ್ 14ಕ್ಕೆ ಕೊನೆಗೊಳ್ಳುವುದರಲ್ಲಿತ್ತು. ಆದರೆ ಕಾಂಗ್ರೆಸ್‌ನಿ೦ದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಸಲುವಾಗಿ ಇವರು ಎ೦ಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:42 pm, Mon, 19 June 23