ಬೆಂಗಳೂರು, ಆಗಸ್ಟ್ 14: ಯಶವಂತಪುರ ಕ್ಷೇತ್ರದಲ್ಲಿ ಸುಂಟರಗಾಳಿ ಎದ್ದಿದೆ, ಇದು ನಮಗೆ ಎಚ್ಚರಿಕೆಯ ಗಂಟೆ ಎಂದು ಬಿಜೆಪಿ ನಾಯಕ ಆರ್ ಅಶೋಕ (R Ashoka) ಗುರುವಾರ ಹೇಳಿದರು. ಯಶವಂತಪುರ ಶಾಸಕ ಎಸ್ಟಿ ಸೋಮಶೇಖರ್ (ST Somashekhar) ಜತೆ ಮಾತುಕತೆ ನಡೆಸಿದ ಬಳಿಕ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಯಶವಂತಪುರ ಕ್ಷೇತ್ರದಲ್ಲಿ ಒಂದು ರೀತಿಯ ಸುಂಟರಗಾಳಿ ಎದ್ದಿದ್ದು, ನಮಗೆ ಎಚ್ಚರಿಕೆಯ ಗಂಟೆಯಾಗಿದೆ. ಈ ಎಲ್ಲ ಬೆಳವಣಿಗೆಗಳ ಬಗ್ಗೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಜಿವಿ ರಾಜೇಶ್ ಗಮನಕ್ಕೆ ತರುತ್ತೇನೆ ಎಂದರು.
ವಾಟ್ಸ್ಆ್ಯಪ್ ಗ್ರೂಪ್ ರಚಿಸಿಕೊಂಡು ತೊಂದರೆ ಕೊಡುತ್ತಿದ್ದಾರೆಂದು ಸೋಮಶೇಖರ್ ಹೇಳಿದ್ದಾರೆ. ಯಶವಂತಪುರ ಕ್ಷೇತ್ರದಲ್ಲಿ ತೊಂದರೆ ಕೊಡ್ತಿದ್ದಾರೆಂದು ಹೇಳಿದ್ದಾರೆ. ಕಾರ್ಪೊರೇಷನ್ ಟಿಕೆಟ್ ಸಿಗುತ್ತದೆಂದು ಬೆಂಬಲಿಗರು ಕಾಂಗ್ರೆಸ್ಗೆ ಹೋಗಿದ್ದಾರೆ, ಆದರೆ ನಾನು ಕಾಂಗ್ರೆಸ್ಗೆ ಹೋಗುವುದಿಲ್ಲ ಎಂದು ಸೋಮಶೇಖರ್ ನನ್ನ ಬಳಿ ತಿಳಿಸಿದ್ದಾರೆ. ತೊಂದರೆ ಕೊಡುತ್ತಿರುವ ಒಂದಷ್ಟು ಜನರ ಹೆಸರು ಕೂಡ ಹೇಳಿದ್ದಾರೆ. ಸೋಮಶೇಖರ್ ಆತುರದ ನಿರ್ಧಾರ ತೆಗೆದುಕೊಳ್ಳಲ್ಲ ಅಂದುಕೊಂಡಿದ್ದೇನೆ. ಚುನಾವಣೆ ಎಂದರೆ ಏನು? ಮತದಾರರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬ ಬಗ್ಗೆ ಸೋಮಶೇಖರ್ ಬಳಿ ಮಾತನಾಡಿ ಮನವರಿಕೆ ಮಾಡಿಕೊಟ್ಟಿದ್ದೇನೆ ಎಂದು ಅಶೋಕ್ ಹೇಳಿದರು.
ಸೋಮಶೇಖರ್ ಪಕ್ಷ ಬಿಡುವುದಿಲ್ಲ ಅಂದಿದ್ದಾರೆ. ಸ್ಥಳೀಯ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ಕಾಂಗ್ರೆಸ್‌ನವರು ಅವರನ್ನು ಅಭ್ಯರ್ಥಿಯಾಗಲು ಆಹ್ವಾನಿಸಿರುವುದು ನಿಜ. ಲೋಕಸಭಾ ಚುನಾವಣೆ ಅಭ್ಯರ್ಥಿಯಾಗಲು ಆಹ್ವಾನಿಸಿರುವುದು ನಿಜ. ಆದರೆ ಯಾವುದೇ ಕಾರಣಕ್ಕೂ ಸಂಸದ ಸ್ಥಾನದ ಅಭ್ಯರ್ಥಿ ಆಗಲ್ಲ ಎಂದಿದ್ದಾರೆ ಎಂದು ಅಶೋಕ್ ತಿಳಿಸಿದರು.
ಇದನ್ನೂ ಓದಿ: ಅವರಾಗಿಯೇ ಕಾಂಗ್ರೆಸ್ ಪಕ್ಷಕ್ಕೆ ಬರುತ್ತಿದ್ದಾರೆ, ನಾವು ಯಾವುದೇ ಆಪರೇಷನ್ ಹಸ್ತ ಮಾಡುತ್ತಿಲ್ಲ: ಡಿಸಿಎಂ ಡಿಕೆ ಶಿವಕುಮಾರ್
ಎಸ್ಟಿ ಸೋಮಶೇಖರ್ ಅವರು ಕಾಂಗ್ರೆಸ್ ಸೇರಲಿದ್ದಾರೆ ಎಂಬ ವದಂತಿ ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿದೆ. ಅವರ ಕೆಲವು ಮಂದಿ ಬೆಂಬಲಿಗರು ಕಾಂಗ್ರೆಸ್ ಸೇರ್ಪಡೆಯಾಗಿರುವುದು ವದಂತಿಗಳಿಗೆ ಪುಷ್ಟಿ ನೀಡಿದೆ. ಈ ಮಧ್ಯೆ, ಬಿಜೆಪಿ ನಾಯಕರು ಒಬ್ಬೊಬ್ಬರಾಗಿ ಸೋಮಶೇಖರ್ ಬಳಿ ಮಾತುಕತೆ ನಡೆಸಿ ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ. ಬಿಜೆಪಿ ವರಿಷ್ಠರನ್ನು ಭೇಟಿಯಾಗಲು ಸೋಮಶೇಖರ್ ಅವರು ಆಗಸ್ಟ್ 25ರಂದು ದೆಹಲಿಗೆ ತೆರಳುವ ಸಾಧ್ಯತೆ ಇದ್ದು, ಆ ಬಳಿಕ ನಿರ್ಧಾರ ಪ್ರಕಟಿಸುವ ನಿರೀಕ್ಷೆ ಇದೆ.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ