Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೃಹಲಕ್ಷ್ಮೀ ಯೋಜನೆ ಚಾಲನೆಗೆ ಮೈಸೂರು ಆಯ್ಕೆ ಹಿಂದಿದೆಯಾ ಮಾಸ್ಟರ್ ಪ್ಲ್ಯಾನ್​? ಬೆಳಗಾವಿಯಿಂದ ಶಿಫ್ಟ್ ಆಗಿದ್ದೇಕೆ?

ಮನೆ ಯಜಮಾನಿಗೆ 2000 ನೀಡುವ ಗೃಹ ಲಕ್ಷ್ಮೀ ಯೋಜನೆಗೆ ಚಾಲನೆಗೆ ಮೈಸೂರು ಆಯ್ಕೆ ಹಿಂದಿದೆಯಾ ಮಾಸ್ಟರ್ ಪ್ಲ್ಯಾನ್​? ಬೆಳಗಾವಿಯಲ್ಲಿ ನಿಗದಿಯಾಗಿದ್ದ ಕಾರ್ಯಕ್ರಮ ಏಕಾಏಕಿ ಮೈಸೂರಿಗೆ ಶಿಫ್ಟ್​ ಮಾಡಿದ್ದೇಕೆ? ಲಕ್ಷ್ಮೀ ಹೆಬ್ಬಾಳ್ಕರ್-ಸತೀಶ್ ಜಾರಕಿಹೊಳಿ ಗುದ್ದಾಟದಿಂದ ಸ್ಥಳಾಂತರವಾಯ್ತಾ? ಈ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು? ಎಲ್ಲಾ ವಿವರ ಇಲ್ಲಿದೆ.

ಗೃಹಲಕ್ಷ್ಮೀ ಯೋಜನೆ ಚಾಲನೆಗೆ ಮೈಸೂರು ಆಯ್ಕೆ ಹಿಂದಿದೆಯಾ ಮಾಸ್ಟರ್ ಪ್ಲ್ಯಾನ್​? ಬೆಳಗಾವಿಯಿಂದ ಶಿಫ್ಟ್ ಆಗಿದ್ದೇಕೆ?
ಗೃಹ ಲಕ್ಷ್ಮಿ ಯೋಜನೆ
Follow us
ದಿಲೀಪ್​, ಚೌಡಹಳ್ಳಿ
| Updated By: ರಮೇಶ್ ಬಿ. ಜವಳಗೇರಾ

Updated on:Aug 24, 2023 | 3:26 PM

ಮೈಸೂರು, (ಆಗಸ್ಟ್ 24): ಕಾಂಗ್ರೆಸ್ (Congress)​ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ ಮನೆ ಯಜಮಾನಿಗೆ 2000 ನೀಡುವ ಗೃಹ ಲಕ್ಷ್ಮೀ ಯೋಜನೆಗೆ (Gruha Lakshmi Scheme) ಚಾಲನೆಗೆ ಸಕಲ ಸಿದ್ಧತೆಗಳು ನಡೆದಿವೆ. ಇದೇ ಆಗಸ್ಟ್ 30ರಂದು ಮೈಸೂರಿನಲ್ಲಿ ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಮ್ಮುಖದಲ್ಲಿ ಯೋಜನೆಗೆ ಅದ್ಧೂರಿಯಾಗಿ ಚಾಲನೆ ನೀಡಲು ನಿರ್ಧರಿಸಲಾಗಿದೆ. ಆದ್ರೆ, ಈ ಕಾರ್ಯಮವನ್ನು ಬೆಳಗಾವಿಯಿಂದ ಏಕಾಏಕಿ ಮೈಸೂರಿಗೆ ಸ್ಥಳಾಂತರ ಮಾಡಿದ್ದೇಕೆ ಎನ್ನುವುದು ಮಿಲಿನ್​ ಡಾಲರ್ ಪ್ರಶ್ನೆಯಾಗಿದೆ. ಇದರ ಹಿಂದೆ ರಾಜಕೀಯ ಮುಸುಕಿನ ಗುದ್ದಾಟ ಶುರುವಾಗಿದೆ. ಸತೀಶ್ ಜಾರಕಿಹೊಳಿ ಕೈವಾಡದರಿಂದ ಮೈಸೂರಿಗೆ ಶಿಫ್ಟ್ ಆಗಿದೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್​ ಬೆಂಬಲಿಗರು ಆರೋಪಿಸುತ್ತಿದ್ದಾರೆ. ಒಂದು ವೇಳೆ ಬೆಳಗಾವಿಯಲ್ಲಿ ಈ ಕಾರ್ಯಕ್ರಮ ನಡೆದರೆ ಲಕ್ಷ್ಮೀ ಹೆಬ್ಬಾಳರ್​ ವರ್ಚಸ್ಸು ಹೆಚ್ಚಾಗಲಿದೆ ಎನ್ನುವ ಕಾರಣಕ್ಕೆ ಮೈಸೂರಿಗೆ ಸ್ಥಳಾಂತರ ಮಾಡಲಾಗಿದೆ ಎನ್ನುವ ಮಾತುಗಳು ಕೇಳಿಬಂದಿವೆ. ಇನ್ನು ಇವೆಲ್ಲದರ ಮಧ್ಯೆ ಮುಂಬರುವ ಲೋಕಸಭಾ ಚುನಾವಣೆ ದೃಷ್ಟಿ ಇಟ್ಟುಕೊಂಡು ಮೈಸೂರಿನಲ್ಲಿ ಗೃಹ ಲಕ್ಷ್ಮೀ ಚಾಲನೆ ಕಾರ್ಯಕ್ರಮ ಆಯೋಜಿಸಲಾಗಿದೆ ಎನ್ನಲಾಗಿದೆ.

ಹೌದು… ಮೈಸೂರು, ಚಾಮರಾಜನಗರ, ಮಂಡ್ಯ ಲೋಕಸಭಾ ಕ್ಷೇತ್ರದ ಗುರಿಯಾಗಿಸಿಕೊಂಡು ಗೃಹಲಕ್ಷ್ಮೀ ಯೋಜನೆ ಚಾಲನೆ ಕಾರ್ಯಕ್ರಮ ಆಯೋಜಿಸಲಾಗಿದೆ ಎನ್ನಲಾಗಿದೆ. ಮೈಸೂರಿನಲ್ಲಿ ಅದ್ಧೂರಿಯಾಗಿ ಕಾರ್ಯಕ್ರಮ ಮಾಡುವುದರಿಂದಿಗೆ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮೂಲಕ ಲೋಕಸಭಾ ಚುನಾವಣೆಗೆ ರಣಕಹಳೆ ಮೊಳಗಿಸುವ ಪ್ಲ್ಯಾನ್ ಆಗಿದೆ. ಕಳೆದ ಚುನಾವಣೆಯಲ್ಲಿ ಮೈಸೂರು, ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮೇಲುಗೈ ಸಾಧಿಸಿತ್ತು. ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಸುಮಲಾತಗೆ ಗೆದ್ದಿದ್ದರು. ಈ ಬಾರಿ ಶತಯಗಾತಯವಾಗಿ ಮೂರು ಕ್ಷೇತ್ರಗಳನ್ನ ವಶಪಡಿಸಿಕೊಳ್ಳು ಸಿಎಂ ಸಿದ್ದರಾಮಯ್ಯ ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ. ಹೀಗಾಗಿ ಒಂದುವರೆ ಲಕ್ಷ ಫಲಾನುಭವಿಗಳನ್ನ ಒಟ್ಟುಗೂಡಿಸಿ ಅದ್ದೂರಿಯಾಗಿ ಗೃಹ ಲಕ್ಷ್ಮೀ ಯೋಜನೆ ಚಾಲನೆ ನೀಡಲು ಸಿದ್ಧತೆ ನಡೆಸಲಾಗಿದೆ. ಇದಷ್ಟೇ ಅಲ್ಲ ಮೈಸೂರು ಭಾಗದಲ್ಲಿ ಜೆಡಿಎಸ್ ಶಕ್ತಿ ಕುಂದಿಸುವ ತಂತ್ರವಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: ಗೃಹಲಕ್ಷ್ಮೀ ಕಾರ್ಯಕ್ರಮ ಬೆಳಗಾವಿಯಿಂದ ಮೈಸೂರಿಗೆ ಶಿಫ್ಟ್​ ಆಗಿರುವುದರ ಹಿಂದೆ ರಾಜಕೀಯ ಷಡ್ಯಂತ್ರದ ಮಾತು

ಮೈಸೂರಿಗೆ ಶಿಫ್ಟ್​ ಆಗಿರುವುದರ ಬಗ್ಗೆ ಡಿಕೆಶಿ ಹೇಳಿದ್ದೇನು?

ಗೃಹಲಕ್ಷ್ಮೀ ಯೋಜನೆ ಕಾರ್ಯಕ್ರಮ ಬೆಳಗಾವಿಯಿಂದ ಮೈಸೂರಿಗೆ ಶಿಫ್ಟ್ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಡಿಕೆ ಶಿವಕುಮಾರ್​ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಕಾರ್ಯಕ್ರಮ ಸ್ಥಳಾಂತರ ವಿಚಾರದಲ್ಲಿ ಯಾವುದೇ ರಾಜಕೀಯ ಇಲ್ಲ. ಬೆಳಗಾವಿಯಲ್ಲಿ ಮುಂದೆ ಇನ್ನೊಂದು ಕಾರ್ಯಕ್ರಮ ಮಾಡಲು ಪ್ಲಾನ್ ಮಾಡುತ್ತಿದ್ದೇವೆ. ಎಲ್ಲರ ಒಮ್ಮತದ ತೀರ್ಮಾನದಿಂದ ಮೈಸೂರಿನಲ್ಲಿ ಕಾರ್ಯಕ್ರಮ ಮಾಡುತ್ತಿದ್ದೇವೆ.ಬೆಳಗಾವಿಯಲ್ಲಿ ನಾವು ಎರಡು ಲೋಕಸಭಾ ಕ್ಷೇತ್ರ ಗೆಲ್ಲುತ್ತೇವೆ‌. ಮೈಸೂರಿನಲ್ಲಿ ಅನ್ನ ಭಾಗ್ಯ ಮಾಡುವ ಪ್ಲಾನ ಇತ್ತು. ಅಕ್ಕಿ ವಿಚಾರದಲ್ಲಿ ಒಂದಷ್ಟು ಅಡೆ ತಡೆ ಇದೆ. ಹೀಗಾಗಿ ಗೃಹ ಲಕ್ಷ್ಮೀಯನ್ನು ಇಲ್ಲಿಂದ ಆರಂಭಿಸುತ್ತಿದ್ದೇವೆ. ಬೆಂಗಳೂರಿನಲ್ಲೂ ಕಾರ್ಯಕ್ರಮ ಮಾಡುವ ಯೋಚನೆ ಮಾಡಿದ್ದೇವು. ಆದರೆ ಟ್ರಾಫಿಕ್ ಸಮಸ್ಯೆ ಉಂಟಾಗುತ್ತದೆ ಎಂದು ಮೈಸೂರಿಗೆ ಶಿಫ್ಟ್ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಆ.30ರಂದು ಫಲಾನುಭವಿಗಳ ಬ್ಯಾಂಕ್​ ಖಾತೆಗೆ 2000 ಜಮೆ ಆಗಲಿದ್ದು, ಫಲಾನುಭವಿಗಳ ಮೊಬೈಲ್​​ಗೆ ಕೂಡಲೇ ಸಂದೇಶ ರವಾನೆ ಆಗಲಿದೆ. ನಮ್ಮಲ್ಲಿ ಹಣದ ಕೊರತೆ ಇಲ್ಲ, ಹಣ ಬ್ಯಾಂಕ್​ಗೆ ಡೆಪಾಸಿಟ್ ಆಗಿದೆ. ಸರ್ವರ್​ ಸಮಸ್ಯೆಯಾದರೆ ಹಣ ಜಮೆ ಆಗುವುದು ತಡವಾಗಬಹುದು ಎಂದು ಹೇಳಿದರು.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 3:25 pm, Thu, 24 August 23