ಬೆಂಗಳೂರು: ರೌಡಿಸಂ ಹಿನ್ನಲೆಯಿರುವ ಸೋಕಾಲ್ಡ್ ಡಾನ್ಗಳು ರಾಜಕೀಯಕ್ಕೆ ಎಂಟ್ರಿ ಕೊಡುತ್ತಿದ್ದು, ಈ ಪೈಕಿ ಸೈಲೆಂಟ್ ಸುನೀಲ (Silent Sunila) ಕೂಡ ಒಬ್ಬನಾಗಿದ್ದು, ಬಿಜೆಪಿ ಸದಸ್ಯತ್ವ ಪಡೆದಿದ್ದ. ಇದೀಗ ಆತನ ಬಿಜೆಪಿ ಸದಸ್ಯತ್ವವನ್ನು ಬೆಂಗಳೂರು ಕೇಂದ್ರ ಬಿಜೆಪಿ ಘಟಕ ರದ್ದುಗೊಳಿಸಿದೆ. ಸುನೀಲ್ ಬಿಜೆಪಿ (BJP Karnataka) ಸೇರಿದ್ದ ಬಗ್ಗೆ ಫೋಟೋ ವೈರಲ್ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದ್ದು, ಸುನೀಲ್ ಹೆಸರಿನ ಸದಸ್ಯತ್ವಕ್ಕೂ ಬಿಜೆಪಿಗೂ ಸಂಬಂಧವೇ ಇಲ್ಲ ಎಂದು ಬೆಂಗಳೂರು ಕೇಂದ್ರ ಬಿಜೆಪಿ ಅಧ್ಯಕ್ಷ ಮಂಜುನಾಥ್ ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಟಿವಿ9 ಜೊತೆ ಮಾಹಿತಿ ಹಂಚಿಕೊಂಡ ಅವರು, ಸೈಲೆಂಟ್ ಸುನೀಲನನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಂಡಿಲ್ಲ. ಸದಸ್ಯತ್ವ ನೋಂದಣಿ ವೇಳೆ ಆನ್‌ಲೈನ್ ಮೂಲಕ ಬಿಜೆಪಿ ಸದಸ್ಯತ್ವ ಪಡೆದಿದ್ದನು. ಈ ಸದಸ್ಯತ್ವವನ್ನು ಬೆಂಗಳೂರು ಕೇಂದ್ರ ಘಟಕದಿಂದ ರದ್ದುಪಡಿಸಿದ್ದೇವೆ. ಸುನೀಲ್ ಸದಸ್ಯತ್ವ ರದ್ದಿನ ಬಗ್ಗೆ ರಾಜ್ಯ ಘಟಕಕ್ಕೂ ಶಿಫಾರಸು ಮಾಡಲಾಗಿದೆ. ಈ ರೀತಿಯ ಘಟನೆಯಿಂದ ಬಿಜೆಪಿಗೂ ಮುಜುಗರವಾಗಿದೆ ಎಂದರು.
ರೌಡಿಸಂ ಹಾಗೂ ರಾಜಕಾರಣ ಯಾವಾಗಲೂ ಜೊತೆಜೊತೆಗೆ ಹೆಜ್ಜೆ ಹಾಕುತ್ತವೆ. ರಾಜಕೀಯ ತೆರೆಯ ಮುಂದಿನ ಕೆಲಸ ಮಾಡಿದರೆ, ರೌಡಿಸಂ ತೆರೆಯ ಹಿಂದಿನ ಕೆಲಸ ಮಾಡುತ್ತದೆ. ರೌಡಿಸಂ ಹಿನ್ನೆಲೆಯಿರುವ ಸೋಕಾಲ್ಡ್ ಡಾನ್ಗಳು ಈಗ ರಾಜಕೀಯಕ್ಕೆ ಬರಲು ಮುಂದಾಗಿದ್ದಾರೆ. ಇಂಥವರ ಪೈಕಿ ಸೈಲೆಂಟ್ ಸುನೀಲ ಸಹ ಒಬ್ಬನಾಗಿದ್ದನು.
ಒಂದು ಕಾಲದ ಗೂಂಡಾ, ರೌಡಿಶೀಟರ್ ಹಾಗೂ ಬೆಂಗಳೂರಿನಲ್ಲಿ ಹವಾ ಇಟ್ಟಿದ್ದ ಸೈಲೆಂಟ್ ಸುನೀಲ ಈಗ ಸೈಲೆಂಟಾಗಿ ರೌಡಿ ಪಟ್ಟದಿಂದ ರಾಜಕೀಯ ಪುಢಾರಿ ಪಟ್ಟಕ್ಕೆ ಏರಿ ಕೂರಲು ಸಜ್ಜಾಗಿ ನಿಂತಿದ್ದ. ಅದಕ್ಕೆ ಸಾಕ್ಷಿ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಡೆದ ರಕ್ತದಾನ ಶಿಬಿರ ಕಾರ್ಯಕ್ರಮ. ಸದ್ಯ ಚಾಮರಾಜಪೇಟೆಯಲ್ಲಿ ಕಾಂಗ್ರೆಸ್ನ ಪ್ರಭಾವಿ ಶಾಸಕ ಜಮೀರ್ ಎದುರಿಗೆ ಭವಿಷ್ಯ ಕಟ್ಟಿಕೊಳ್ಳಲು ಸೈಲೆಂಟಾಗಿ ಸುನೀಲ ಸ್ಕೆಚ್ ಹಾಕಿದ್ದ. ಇದು ಬೆಂಗಳೂರಿನ ಮಟ್ಟಿಗೆ ಭಾರಿ ಸಂಚಲನದ ಜೊತೆಗೆ ವಿವಾದವನ್ನೂ ಸೃಷ್ಟಿಸಿತ್ತು.
ಇದನ್ನೂ ಓದಿ: Bengaluru: ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗಲಾಟೆ: ಗೋವಿಂದರಾಜನಗರ ಠಾಣೆಯಲ್ಲಿ 3 ಪ್ರತ್ಯೇಕ ಪ್ರಕರಣ ದಾಖಲು
ಸೈಲೆಂಟ್ ಸುನೀಲನ ಜೊತೆ ಬಿಜೆಪಿ ನಾಯಕರಾದ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಉದಯ್ ಗರುಡಾಚಾರ್, ಬೆಂಗಳೂರು ಕೇಂದ್ರ ಹಾಗು ದಕ್ಷಿಣ ಕ್ಷೇತ್ರದ ಸಂಸದರಾದ ಪಿ.ಸಿ.ಮೋಹನ್ ಮತ್ತು ತೇಜಸ್ವಿ ಸೂರ್ಯ ಅವರು ಫೋಸ್ ಕೊಟ್ಟದ್ದರು. ಈ ಮೂವರು ನಾಯಕರು ಸೈಲೆಂಟ್ ಸುನೀಲನ ಜೊತೆಗೆ ವೇದಿಕೆ ಹಂಚಿಕೊಂಡು ಕೊಂಡಾಡಿರುವುದು ಈಗ ಸೈಲೆಂಟ್ ರಾಜಕೀಯ ಏಂಟ್ರಿ ಅಗುತ್ತಿರುವುದಕ್ಕೆ ಸಾಕ್ಷಿ ಅಗಿತ್ತು. ಜೊತೆಗೆ ರೌಡಿಸಂಗೂ ರಾಜಕೀಯಕ್ಕೂ ಇರುವ ಸಂಬಂಧ ಎಷ್ಟು ಗಟ್ಟಿಯಾಗಿದೆ ಎನ್ನುವುದು ಈ ಕಾರ್ಯಕ್ರಮದಲ್ಲಿ ಸಾಬೀತಾಗಿತ್ತು.
ಸೈಲೆಂಟ್ ಸುನೀಲ ರಾಜಕೀಯಕ್ಕೆ ಬರಲು ತಯಾರಿ ನಡೆಸುತ್ತಿದ್ದ. ಇದೇ ಕಾರಣಕ್ಕೆ ಸುತ್ತಲು ರೌಡಿಗಳನ್ನು ಹಾಕಿಕೊಂಡು ತಿರುಗುತಿದ್ದವರು ಈಗ ಎಂಎಲ್ಎ, ಎಂಪಿಗಳೊಂದಿಗೆ ತಿರುಗುತ್ತಿದ್ದಾರೆ. ತಾನೊಬ್ಬ ರೌಡಿ ಎನ್ನುವ ಪಟ್ಟ ಹೊಂದಿದ್ದರೆ ಸಮಾಜದಲ್ಲಿ ಕೊನೆಯ ತನಕವೂ ರೌಡಿಯಾಗಿಯೇ ಇರಬೇಕಾಗುತ್ತದೆ. ಅದರೆ ಅದೇ ರೌಡಿ ಎನ್ನುವ ಹಣೆಪಟ್ಟಿಯ ಬದಲು ರಾಜಕೀಯ ನಾಯಕ ಎಂದು ಬದಲಾದರೆ ಯಾವುದೇ ಆತಂಕ ಇರುವುದಿಲ್ಲ ಎನ್ನುವ ನಿಲುವಿಗೆ ಬಂದಂತಿತ್ತು.
ಆದರೆ ಯಾವಾಗ ಸುನೀಲ ಬಿಜೆಪಿ ನಾಯಕರೊಂದಿಗೆ ಕಾಣಿಸಿಕೊಂಡಿದ್ದರೋ ಅಂದಿನಿಂದ ವಿಪಕ್ಷಗಳಿಗೆ ಅಸ್ತ್ರವೊಂದು ಸಿಕ್ಕಂತಾಗಿತ್ತು. ಸೈಲೆಂಟ್ ಸುನೀಲ ಪಕ್ಷ ಸೇರುತ್ತಿರುವ ಬಗ್ಗೆ ಬಿಜೆಪಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿತ್ತು. ರೌಡಿ ಮೋರ್ಚಾ ತೆರೆಯುವುತ್ತಿದ್ದಾರೆ ಎಂಬಿತ್ಯಾದಿ ಟೀಕೆಗಳನ್ನು ಕಾಂಗ್ರೆಸ್ ನಡೆಸಿತ್ತು. ಜೆಡಿಎಸ್ ಕೂಡ ಟೀಕಿಸಿತ್ತು. ಆದರೆ ತದನಂತರದಲ್ಲಿ ಜೆಡಿಎಸ್ ಪಕ್ಷದೊಳಗೂ ರೌಡಿಗಳ ಎಂಟ್ರಿಯಾಗಿತ್ತು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:02 pm, Sat, 18 March 23