ನಮಗೆ ಆಶೀರ್ವಾದ ಮಾಡಿ, ಕರ್ನಾಟಕವನ್ನು ನಂಬರ್ 1 ಮಾಡುತ್ತೇನೆ: ಸಿಎಂ ಬೊಮ್ಮಾಯಿ

|

Updated on: Mar 05, 2023 | 6:28 PM

ಬೆಂಗಳೂರು ನಂತರ ವೇಗವಾಗಿ ಬೆಳೆಯುತ್ತಿರುವ ನಗರ ತುಮಕೂರು. ಇಷ್ಟು ವರ್ಷ ಆಗದ ಅಭಿವೃದ್ಧಿ ಕೆಲಸ ಕೇವಲ 5 ವರ್ಷದಲ್ಲಾಗಿದೆ. ಟೀಕೆ ಮಾಡುವವರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ನಮಗೆ ಆಶೀರ್ವಾದ ಮಾಡಿ, ಕರ್ನಾಟಕವನ್ನು ನಂಬರ್ 1 ಮಾಡುತ್ತೇನೆ: ಸಿಎಂ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ
Follow us on

ತುಮಕೂರು: ಈ ಬಾರಿ ನಮಗೆ ಆಶೀರ್ವಾದ ಮಾಡಿ, ಕರ್ನಾಟಕವನ್ನು ನಂಬರ್ 1 ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ. ತುಮಕೂರು ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಹಾಗೂ ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಕಾರ್ಮಿಕ ಇಲಾಖೆ ಸೇರಿದಂತೆ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಸಹಾಯಧನ ವಿತರಿಸಿ ಮಾತನಾಡಿದ ಅವರು, ನರೇಂದ್ರ ಮೋದಿ (Narendra Modi) ಪ್ರಧಾನಿಯಾದ ಬಳಿಕ ದೇಶದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಸ್ಮಾರ್ಟ್ ಸಿಟಿ ಯೋಜನೆಗೆ 970 ಕೋಟಿ ಅನುದಾನ ನೀಡಲಾಗುತ್ತಿದೆ. ಬೆಂಗಳೂರು ನಂತರ ವೇಗವಾಗಿ ಬೆಳೆಯುತ್ತಿರುವ ನಗರ ತುಮಕೂರು. ಇಷ್ಟು ವರ್ಷ ಆಗದ ಅಭಿವೃದ್ಧಿ ಕೆಲಸ ಕೇವಲ 5 ವರ್ಷದಲ್ಲಾಗಿದೆ. ಟೀಕೆ ಮಾಡುವವರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ಎಂದರು.

ಉದ್ಘಾಟನಾ ಕಾರ್ಯಕ್ರಮಕ್ಕೆ ಸಿಎಂ ಬೊಮ್ಮಾಯಿ ಅವರು ತಡವಾಗಿ ಆಗಮಿಸಿದ್ದಾರೆ. ಈ ಬಗ್ಗೆ ಕ್ಷಮೆ ಕೇಳಿದ ಅವರು, ಕಾರ್ಯಕ್ರಮಕ್ಕೆ ತಡವಾಗಿರಬಹುದು, ಆದರೆ ನಿಮಗೆ ತಲುಪಿಸುವಂತಹ ಕಾರ್ಯಕ್ರಮಗಳಲ್ಲಿ ತಡವಾಗಿಲ್ಲ ಎಂದರು. 65 ವರ್ಷಗಳ ಕಾಲ ಅಧಿಕಾರದ ದುರ್ಬಳಕೆ ಮಾಡಿಕೊಂಡಿರುವುದನ್ನು ನೋಡಿದ್ದೇವೆ. ಸತ್ಯವನ್ನ ಸುಳ್ಳು ಮಾಡಿ ಸುಳ್ಳನ್ನ ಸತ್ಯ ಮಾಡಿದ ರಾಜಕಾರಣ ನೋಡಿದ್ದೇವೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಕಾಂಗ್ರೆಸ್​ ವಿರುದ್ಧ ಟೀಕಿಸಿದರು.

ಆತ್ಮನಿರ್ಭರ ಭಾರತ “ಸಬ್ ಕೇ ಸಾಥ್ ಸಬ್ ಕೇ ವಿಕಾಸ್” ತಂತ್ರಜ್ಞಾನ ಮುಖಾಂತರ ಫಲಾನುಭವಿಗಳಿಗೆ ಅಕೌಂಟ್ ಮೂಲಕ ತಲುಪಿಸಿದ್ದೇವೆ. 16 ಸಾವಿರ ಕೋಟಿ, ಕಿಸಾನ್ ಸಮ್ಮಾನ್ ಯೋಜನೆಯಡಿ 4482 ಕೋಟಿ ರಾಜ್ಯ ಸರ್ಕಾರ ರೈತರಿಗೆ ನೀಡಿದೆ. ಜಲ ಜೀವನ ಮುಖಾಂತರ ಮನೆ ಬಾಗಿಲಿಗೆ ನೀರು ಕೊಟ್ಟಿದ್ದೇವೆ. ರಾಜ್ಯದಲ್ಲಿ 2 ಲಕ್ಷ 38 ಸಾವಿರ ಬಡವರ ಮನೆಗೆ ವಿದ್ಯುತ್ ಸಂಪರ್ಕ ಕೊಟ್ಟಿದ್ದೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಇದನ್ನೂ ಓದಿ: ಲಕ್ಷ್ಮಿ ಹೆಬ್ಬಾಳ್ಕರ್‌ರಿಂದ 2ನೇ ಬಾರಿ ಶಿವಾಜಿ ಪ್ರತಿಮೆ ಉದ್ಘಾಟನೆ; ಹಾಸ್ಯಾಸ್ಪದ ಎಂದ ಸಿಎಂ ಬಸವರಾಜ ಬೊಮ್ಮಾಯಿ

ಸ್ಮಾರ್ಟ್ ಸಿಟಿ ಯೋಜನೆ 970 ಕೋಟಿಯ ಯೋಜನೆಯಾಗಿದೆ. ತುಮಕೂರು ಜಿಲ್ಲೆಯ ಇತಿಹಾಸದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಅನುದಾನ ಯಾರು ಕೊಟ್ಟಿದ್ದಾರೆ? ದೂರ ದೃಷ್ಟಿ‌ನಾಯಕ ಪ್ರಧಾನಿ ಮೋದಿ ಅವರು ಎನು ಘೋಷಣೆ ಮಾಡಿದ್ದಾರೋ ಅದನ್ನ ಆಚರಣೆಗೆ ತಂದಿದ್ದಾರೆ. ಸುಮಾರು 500 ಕೋಟಿ ಕೇಂದ್ರ ಸರ್ಕಾರ, 400 ಕೋಟಿ ರಾಜ್ಯ ಸರ್ಕಾರದಿಂದ ಸ್ಮಾರ್ಟ್ ಸಿಟಿಗಾಗಿ ನೀಡಿದ್ದೇವೆ ಎಂದರು. ಸ್ಮಾರ್ಟ್ ಸಿಟಿ ಆಗಿದ್ದು ನಮ್ಮ ಕಾಲದಲ್ಲಿ, ಅಭಿವೃದ್ಧಿ ಆಗಿದ್ದು ನಮ್ಮ ಕಾಲದಲ್ಲಿ. ನಾನೂ ಎಂತಹ ಲಾ ಆ್ಯಂಡ್ ಆರ್ಡರ್ ಬಂದರೂ ನ್ಯಾಯಯುತವಾಗಿ, ಪಕ್ಷಪಾತವಾಗಿ ಇದ್ದೇನೆ. ಬರುವಂತಹ ದಿನಗಳಲ್ಲಿ ಆಶೀರ್ವಾದ ಮಾಡಿ, ನಕಾರಾತ್ಮಕವಾಗಿ ಅಲ್ಲ ಸಕಾರಾತ್ಮಕವಾಗಿ ಮಾಡಿ. ಕರ್ನಾಟಕವನ್ನ ನಂಬರ್ 1 ಮಾಡುತ್ತೇನೆ ಎಂದರು.

ಕಾಂಗ್ರೆಸ್ ಕೊಡುವ 2 ಸಾವಿರ ರೂ. ರಾಜ್ಯದ ದಿವಾಳಿಗೆ ಕಾರಣ

ಚುನಾವಣೆಯಲ್ಲಿ ಗೆಲ್ಲುವ ನಿಟ್ಟಿನಲ್ಲಿ ಮಹಿಳೆಯರಿಗೆ $2 ಸಾವಿರ ಕೊಡುವುದಾಗಿ ಕಾಂಗ್ರೆಸ್ ಘೋಷಣೆ ಮಾಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ನೀವು ಕೊಡುವ 2 ಸಾವಿರ ರೂಪಾಯಿ ರಾಜ್ಯವನ್ನು ದಿವಾಳಿ ಮಾಡುತ್ತದೆ ಎಂದರು. ವಿದ್ಯಾರ್ಥಿನಿಯರಿಗೆ ಡಿಗ್ರಿವರೆಗೆ ಉಚಿತ ಶಿಕ್ಷಣ, ಉಚಿತ ಬಸ್ ಪಾಸ್ ಇದು ಸೂಕ್ಷ್ಮತೆ ಇರುವ ಸರ್ಕಾರದ ಕೆಲಸ. ಈ ನಾಡು ಕರ್ನಾಟಕ ಎಲ್ಲರಿಗಾಗಿ, ವಿಶೇಷವಾಗಿ ಕಟ್ಟಕಡೆಯ ಜನರಿಗಾಗಿ. ಈ ನಾಡಿನ ಜನ ಸಮೃದ್ಧರಾಗಬೇಕು, ಶ್ರೀಮಂತರಾಗಬೇಕು. ಆ ನಿಟ್ಟಿನಲ್ಲಿ ನಾವು ಸರ್ಕಾರ ನಡೆಸುತಿದ್ದೇವೆ ಎಂದರು.

ರಸ್ತೆ, ಒಳ ಚರಂಡಿ, ಡಿಜಿಟಲ್ ಗ್ರಂಥಾಲಯ ಸೇರಿ ಆಧುನಿಕವಾಗಿ ತುಮಕೂರು ಬೆಳೆಯುತ್ತಿದೆ. ಇದೇ ವರ್ಷ ತುಮಕೂರಿಗೆ ಎತ್ತಿನ ಹೊಳೆ ನೀರನ್ನು ಹರಿಸುತ್ತೇವೆ. ಯಾರು ಏನೂ ಟೀಕೆ ಮಾಡಲಿ, ತಲೆ ಕೆಡಿಸಿ ಕೊಳ್ಳಬೇಡಿ ಎಂದು ಕೆಲವರು ಸಲಹೆ ಮಾಡಿದ್ದಾರೆ. ನಾನು ನ್ಯಾಯ ಸಮ್ಮತವಾಗಿಯೇ ನಡೆದುಕೊಳ್ಳುತಿದ್ದೇವೆ. ಹಿಂದಿನ ಸರ್ಕಾರದ ಏನೆಲ್ಲಾ ಮುಚ್ಚಿ ಹಾಕಿದ್ದಾರೆ ಗೊತ್ತು. ನಾವು ಯಾವುದೇ ಸಂಸ್ಥೆಯ ಹರಣ ಮಾಡುವ ಕೆಲಸ ನಾವು ಮಾಡಿಲ್ಲ. ನ್ಯಾಯಕ್ಕೆ ಸತ್ಯಕ್ಕೆ ಜಯ ಸಿಗಬೇಕು. ಕಾನೂನು ಸುವ್ಯವಸ್ಥೆ ಚೆನ್ನಾಗಿದೆ. ಜನರು ಅಭಿವೃದ್ಧಿ ಪರವಾಗಿ ನಮಗೆ ಬೆಂಬಲ ನೀಡುವಂತೆ ಮನವಿ ಮಾಡಿದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:28 pm, Sun, 5 March 23