ನಾನು ಕೇಸರಿ ಶಾಲು ಹಾಕುವುದಿಲ್ಲ, ಕುಮಾರಸ್ವಾಮಿ ಹಾಕಿದ್ದನ್ನು ಪರೋಕ್ಷವಾಗಿ ಖಂಡಿಸಿದ ದೇವೇಗೌಡ

| Updated By: ರಮೇಶ್ ಬಿ. ಜವಳಗೇರಾ

Updated on: Feb 02, 2024 | 4:18 PM

HD Kumaraswany Saffron Shawl: ಮಂಡ್ಯದ ಕೆರಗೋಡ ಹನುಮ ಧ್ವಜ ತೆರವುನ ವಿರೋಧಿಸಿ ಬಿಜೆಪಿ ಮಾಡಿದ್ದ ಪ್ರತಿಭಟನೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಭಾಗವಹಿಸಿ ಬೆಂಬಲ ಸೂಚಿಸಿದ್ದರು. ಆದ್ರೆ, ಪ್ರತಿಭಟನೆ ವೇಳೆ ಕುಮಾರಸ್ವಾಮಿ ಕೇಸರಿ ಶಾಲ ಧರಿಸಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಇದಕ್ಕೆ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ಆರೋಪ ಪ್ರತ್ಯಾರೋಪಗಳಿಗೆ ಕಾರಣವಾಗಿದೆ. ಇದರ ಮಧ್ಯೆ ಇದೀಗ ಜೆಡಿಎಸ್ ವರಿಷ್ಠ ಹೆಚ್​ಡಿ ದೇವೇಗೌಡ ಅವರು, ಕುಮಾರಸ್ವಾಮಿ ಕೇಸರಿ ಶಾಲು ಹಾಕಿರುವುದನ್ನು ಪರೋಕ್ಷವಾಗಿ ಖಂಡಿಸಿದ್ದಾರೆ. ಅಲ್ಲದೇ ನಾನು ಖಂಡಿತವಾಗಿ ಕೇಸರಿ ಶಾಲು ಹಾಕುವುದಿಲ್ಲ ಎಂದು ಹೇಳಿದ್ದಾರೆ.

ನಾನು ಕೇಸರಿ ಶಾಲು ಹಾಕುವುದಿಲ್ಲ, ಕುಮಾರಸ್ವಾಮಿ ಹಾಕಿದ್ದನ್ನು ಪರೋಕ್ಷವಾಗಿ ಖಂಡಿಸಿದ ದೇವೇಗೌಡ
ಕುಮಾರಸ್ವಾಮಿ-ದೇವೇಗೌಡ
Follow us on

ನವದೆಹಲಿ/ಮಂಡ್ಯ, (ಫೆಬ್ರವರಿ 02): ಮಂಡ್ಯ ತಾಲೂಕಿನ ಕೆರಗೋಡ ಗ್ರಾಮದ ಹನುಮ ಧ್ವಜ ತೆರವು ವಿವಾದಕ್ಕೆ(Keregodu Hanuman flag Row) ಸಂಬಂಧಿಸಿದಂತೆ ಬಿಜೆಪಿ ಪ್ರತಿಭಟನೆ ವೇಳೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್​ಡಿ ಕುಮಾರಸ್ವಾಮಿ(HD Kumaraswamy ) ಅವರು ಕೇಸರಿ ಶಾಲು (saffron shawl) ಧರಿಸಿದಕ್ಕೆ ಸ್ವತಃ ಹೆಚ್​ಡಿ ದೇವೇಗೌಡ (HD Devegowda) ಖಂಡಿಸಿದ್ದಾರೆ.ಈ ಬಗ್ಗೆ ನವದೆಹಲಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿರುವ ದೇವೇಗೌಡ, ಕುಮಾರಸ್ವಾಮಿ ಕೇಸರಿ ಶಾಲು ಹಾಕಬಾರದಿತ್ತು, ನಮ್ಮ ಪಕ್ಷದ ಶಾಲು ಹಾಕಬಹುದಿತ್ತು ಎಂದು ಹೇಳಿದ್ದಾರೆ. ಈ ಮೂಲಕ ಕುಮಾರಸ್ವಾಮಿ ಕೇಸರಿ ಶಾಲು ಹಾಕಿರುವುದನ್ನು ಪರೋಕ್ಷವಾಗಿ ಖಂಡಿಸಿದ್ದಾರೆ.

ನಾಳೆ ನರೇಂದ್ರ ಮೋದಿ ಜೊತೆಗೆ ಹೋದಾಗಲೂ ನನ್ನ ಪಕ್ಷದ ಶಾಲು ಹಾಕುತ್ತೇನೆ. ನಾನು ಖಂಡಿತವಾಗಿ ಕೇಸರಿ ಶಾಲು ಹಾಕುವುದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿರುವ ದೇವೇಗೌಡ, ಪ್ರತಿಭಟನೆಯ ವೇಳೆ ಯಾರೋ ಬಂದು ಕೇಸರಿ ಶಾಲು ಹಾಕಿರುತ್ತಾರೆ. ಆಯಾ ಸಂದರ್ಭಕ್ಕೆ ಹಾಕಿರುತ್ತಾರೆ, ದೊಡ್ಡ ವ್ಯಾಖ್ಯಾನ ಮಾಡುವ ಅಗತ್ಯವಿಲ್ಲ ಎಂದು ಕುಮಾರಸ್ವಾಮಿ ಕೇಸರಿ ಶಾಲು ಹಾಕಿರುವುದನ್ನು ಕೊನೆಗೆ ಸಮರ್ಥಿಸಿಕೊಂಡರು.

ಇದನ್ನೂ ಓದಿ: ಹನುಮ ಧ್ವಜ ತೆರವು ಪ್ರಕರಣ: ತಪ್ಪನ್ನು ತಿದ್ದಿಕೊಳ್ಳುವಂತೆ ಸಿದ್ದರಾಮಯ್ಯಗೆ ಎಚ್ಚರಿಕೆ ನೀಡಿದ ಕುಮಾರಸ್ವಾಮಿ

ಭಾರೀ ಚರ್ಚೆಗೆ ಗ್ರಾಸವಾಗಿದ್ದ ಎಚ್​ಡಿಕೆ ಕೇಸರಿ ಶಾಲು

ಮಾಜಿ ಸಿಎಂ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌ಡಿ ಕುಮಾರಸ್ವಾಮಿ ಅವರು ಬಿಜೆಪಿ ಜೊತೆಗಿನ ಮೈತ್ರಿಯ ಬೆನ್ನಲ್ಲೇ ಕೇಸರಿ ಶಾಲನ್ನು ಹೆಗಲಿಗೆ ಹಾಕಿಕೊಂಡಿರುವುದು ರಾಜಕೀಯ ಪಡಸಾಲೆ ಹಾಗೂ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗುತ್ತಿದೆ. ಅದರಲ್ಲೂ ರೈತ, ಪ್ರಗತಿಪರ ಹೋರಾಟದ ಹಿನ್ನೆಲೆಯನ್ನು ಹೊಂದಿರುವ ಮಂಡ್ಯದಲ್ಲೇ ಕುಮಾರಸ್ವಾಮಿ ತೊಟ್ಟಿರುವ ಕೇಸರಿ ದಿರಿಸು ಹಾಗೂ ನಡೆ ನುಡಿಗಳು ಪರ ಮತ್ತು ವಿರೋಧ ಚರ್ಚೆಗಳನ್ನು ಹುಟ್ಟುಹಾಕಿದೆ.

ಆರ್‌ ಎಸ್‌ ಎಸ್ ಹಾಗೂ ಪರಿವಾರದ ವಿರುದ್ಧ ಕುಮಾರಸ್ವಾಮಿ ಈ ಹಿಂದೆ ಹಲವು ಬಾರಿ ಸಮರ ಸಾರಿದ್ದರು. ಪತ್ರಿಕೆಗಳಲ್ಲಿ ನೇರವಾಗಿ ಆರ್‌ಎಸ್‌ಎಸ್ ಸಂಘಟನೆಯನ್ನು ಟೀಕಿಸಿ ಲೇಖನಗಳನ್ನು ಬರೆದಿದ್ದರು. ಅಲ್ಲದೆ, ಬಿಜೆಪಿಯ ಕೆಲವು ರಾಷ್ಟ್ರೀಯ ಮಟ್ಟದ ನಾಯಕರಿಗೆ ‘ಪೇಶ್ವೆಗಳ’ ಪಟ್ಟವನ್ನು ನೀಡಿದ್ದರು. ಇದರಿಂದ ಕರ್ನಾಟಕ ಹಾಳಾಗುತ್ತಿದೆ ಎಂದೂ ಗುಟುರು ಹಾಕಿದ್ದರು. ಇದಕ್ಕೆ ಪ್ರತಿಯಾಗಿ ಬಿಜೆಪಿ ನಾಯಕರು ಎಚ್‌ಡಿ ಕುಮಾರಸ್ವಾಮಿ ವಿರುದ್ಧ ನಾನಾ ಬಗೆಯ ಕ್ಯಾಂಪೇನ್‌ಗಳನ್ನು ನಡೆಸಿದ್ದರು.

ಕುಟುಂಬ ರಾಜಕೀಯ, ಕಿಚನ್ ಪಾಲಿಟಿಕ್ಸ್ ಎಂದೆಲ್ಲಾ ವಿಶೇಷಣಗಳೊಂದಿಗೆ ದಳಪತಿಗಳ ವಿರುದ್ಧ ಬಿಜೆಪಿ ಪರಿವಾರ ಮುಗಿಬಿದ್ದಿತ್ತು. ಆದರೆ ಸದ್ಯ ಎಲ್ಲವೂ ಬದಲಾಗಿದೆ. ಕೇಸರಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ಕುಮಾರಸ್ವಾಮಿ ತಮ್ಮ ಪಕ್ಷದ ಸಾಂಪ್ರದಾಯಿಕ ಬಣ್ಣ ರೈತರ ಹಸಿರನ್ನು ತೊರೆದು ಹಿಂದುತ್ವದ ಕೇಸರಿಯ ಮೊರೆ ಹೋಗಿದ್ದಾರೆ. ಇದಕ್ಕೆ ಕಾಂಗ್ರೆಸ್ ಟೀಕಿಸಿದೆ. ಜಾತ್ಯಾತೀತತೆ, ರೈತರ ಪರ ಪಕ್ಷ ಎನ್ನುವರು ಹಸಿರು ಶಾಲು ಬಿಟ್ಟು ಈಗ ಕೇಸರಿ ಶಾಲು ಹಾಕಿದ್ದಾರೆ ಎಂದು ಕಾಂಗ್ರೆಸ್ ವ್ಯಂಗ್ಯವಾಡಿತ್ತು.

ಕೇಸರಿ ಶಾಲು ಸಮರ್ಥಿಸಿಕೊಂಡು ತಿರುಗೇಟು ನೀಡಿದ್ದ ಎಚ್​ಡಿಕೆ

ಟೀಕೆಗಳು ವ್ಯಕ್ತವಾಗುತ್ತಿದ್ದಂತೆಯೇ ಕುಮಾರಸ್ವಾಮಿ ಈ ಬಗ್ಗೆ ಪ್ರತಿಕ್ರಿಯಿಸಿ, ನಾನು ಕೇಸರಿ ಶಾಲು ಹಾಕಿಕೊಂಡಿದ್ದು ಮಹಾನ್ ಅಪರಾಧವಾ? ಕಾಂಗ್ರೆಸ್​​ನವರಿಗೆ ಕೇಸರಿ ಮೇಲೆ ಯಾಕೆ ಸಂಕುಚಿತ ಮನೋಭಾವ? ಮಂಡ್ಯ ಉಸ್ತುವಾರಿ ಸಚಿವರಿಂದ (ಚಲುವರಾಯಸ್ವಾಮಿ) ನಾನು ನನ್ನ ಪಕ್ಷವನ್ನು ಹೇಗೆ ಉಳಿಸಿಕೊಳ್ಳಬೇಕು ಎಂಬುದನ್ನು ಕಲಿಯಬೇಕಿಲ್ಲ. ನನಗೆ ಜನ ಕೊಟ್ಟಿರುವ ಪ್ರೀತಿ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ನಮ್ಮ ರಾಷ್ಟ್ರ ಧ್ವಜದಲ್ಲಿ ಯಾವ ಬಣ್ಣಗಳಿವೆ ಎಂಬುವುದು ಕಾಂಗ್ರೆಸ್​ನವರಿಗೆ ತಿಳಿದಿಲ್ಲವೆ? ರಾಷಟ್ರ ಧ್ವಜದಿಂದ ಕೇಸರಿ ಬಣ್ಣ ತೆಗೆದರೆ ಏನು ಅರ್ಥ ಉಳಿಯುತ್ತದೆ. ಕೇಸರಿ ಬಣ್ಣದ ಮೇಲೆ ಅಸಹನೆ, ಸಂಕುಚಿತ ಭಾವನೆ ಏಕೆ? ನಾನು ಕೇಸರಿ ಶಾಲು ಹಾಕಿಕೊಂಡಿದ್ದರ ಬಗ್ಗೆ ಮಾತನಾಡುತ್ತಿದ್ದಾರೆ. ದಲಿತ ಸಮುದಾಯ ಬಂಧುಗಳು ಸಭೆಗೆ ಕರೆದಾಗ ಅಲ್ಲಿಗೆ ಹೋಗಿ ಜೈ ಭೀಮ್ ಕಾರ್ಯಕರ್ತರು ಧರಿಸುವ ನೀಲಿ ಬಣ್ಣದ ಶಾಲನ್ನೂ ಹಾಕಿದ್ದೇನೆ. ಇದು ಇವರ ಕಣ್ಣಿಗೆ ಕಾಣಲಿಲ್ಲವೆ ಎಂದು ತಾವು ಕೇಸರಿ ಶಾಲು ಧರಿಸಿದ್ದನ್ನು ಸಮರ್ಥಿಸಿಕೊಂಡು ಕಾಂಗ್ರೆಸ್​ಗೆ ತಿರುಗೇಟು ನೀಡಿದ್ದರು.

ಮತ್ತಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ