Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹನುಮ ಧ್ವಜ ತೆರವು ಪ್ರಕರಣ: ತಪ್ಪನ್ನು ತಿದ್ದಿಕೊಳ್ಳುವಂತೆ ಸಿದ್ದರಾಮಯ್ಯಗೆ ಎಚ್ಚರಿಕೆ ನೀಡಿದ ಕುಮಾರಸ್ವಾಮಿ

ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಭಾಗಿಯಾದರು. ಕೇಸರಿ ಶಾಲು ಧರಿಸಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಲ್ಲದೆ, ಜೈ ಶ್ರೀರಾಮ್ ಘೋಷವಾಕ್ಯದೊಂದಿಗೆ ಭಾಷಣ ಪ್ರಾರಂಭಿಸಿದ ಕುಮಾರಸ್ವಾಮಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಹನುಮ ಧ್ವಜ ತೆರವು ಪ್ರಕರಣ: ತಪ್ಪನ್ನು ತಿದ್ದಿಕೊಳ್ಳುವಂತೆ ಸಿದ್ದರಾಮಯ್ಯಗೆ ಎಚ್ಚರಿಕೆ ನೀಡಿದ ಕುಮಾರಸ್ವಾಮಿ
ಕೆರಗೋಡು ಗ್ರಾಮದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಹೆಚ್​ಡಿ ಕುಮಾರಸ್ವಾಮಿ ಮತ್ತು ಸಿಟಿ ರವಿ
Follow us
ದಿಲೀಪ್​, ಚೌಡಹಳ್ಳಿ
| Updated By: Rakesh Nayak Manchi

Updated on:Jan 29, 2024 | 3:39 PM

ಮಂಡ್ಯ, ಜ.29: ಹನುಮ ಧ್ವಜ (Hanuma Flag) ತೆರವು ಕಾಂಗ್ರೆಸ್ (Congress) ಸರಕಾರದ ಉದ್ಧಟತನವನ್ನು ತೋರಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ (HD Kumaraswamy) ಆರೋಪಿಸಿದರು. ಮಂಡ್ಯ ಜಿಲ್ಲೆಯ ಕೆರಗೋಡು (Keragodu) ಗ್ರಾಮದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಕೇಸರಿ ಶಾಲು ಧರಿಸಿ ಭಾಗಿಯಾಗಿದ ಕುಮಾರಸ್ವಾಮಿ, ಜೈ ಶ್ರೀರಾಮ್ ಘೋಷಣೆಯೊಂದಿಗೆ ಭಾಷಣ ಆರಂಭಿಸಿದರು.

ಹನುಮ ಧ್ವಜ ತೆರವು ವಿರೋಧಿಸಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಜನರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಲಾಠಿ ಚಾರ್ಜ್​ ವೇಲೆ ಒಬ್ಬರ ಕಣ್ಣಿಗೆ ಏಟು ಬಿದ್ದಿದೆ. ಕಣ್ಣು ಹೋಗಿದ್ದರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಣ್ಣು ತಂದು ಕೊಂಡುತ್ತಿತ್ತಾ? ಪೊಲೀಸರೇ ಎಚ್ಚರವಾಗಿರಿ. ಎಷ್ಟು ದಿನ ನಿಮ್ಮ ಆಟ ನಡೆಯುತ್ತದೆ ನಾನು ನೋಡುತ್ತೇನೆ. ಯಾವಾನೋ ಹೇಳುತ್ತಾನೆ ಅಂತಾ ಹೇಗೆ ಬೇಕೋ ಹಾಗೇ ಕೆಲಸ ಮಾಡುವುದನ್ನು ನಾವು ಒಪ್ಪಲ್ಲ ಎಂದು ಹೇಳಿದರು.

ಇದನ್ನೂ ಓದಿ: ಲೋಕಸಭೆ ಚುನಾವಣೆಗೆ ಕಾಂಗ್ರೆಸ್​ನಿಂದ ಕಲೆಕ್ಷನ್; ಹೆಚ್​ಡಿ ಕುಮಾರಸ್ವಾಮಿ ಗಂಭೀರ ಆರೋಪ

ಸಂಘರ್ಷಕ್ಕೆ ಸರ್ಕಾರವೇ ಕಾರಣ

ಕೆರಗೋಡು ಗ್ರಾಮದಲ್ಲಿನ ಸಂಘರ್ಷಕ್ಕೆ ಸರಕಾರವೇ ಕಾರಣವಾಗಿದೆ. ಮಂಡ್ಯ ಜಿಲ್ಲಾಧಿಕಾರಿಯನ್ನು ಮೊದಲು ಅಮಾನತ್ತು ಮಾಡಿ ಇಲ್ಲಿಂದ ಹೊರಗೆ ಕಳುಹಿಸಿ. ಈ ಘಟನೆಗೆಲ್ಲ ಕಾರಣ ಮಂಡ್ಯ ಜಿಲ್ಲಾಧಿಕಾರಿ. ಹನುಮಂತನ‌ ಕೆಣಕ್ಕಿದ್ದಕ್ಕೆ ಲಂಕ ದಹನವಾಯ್ತು. ಅದೇ ರೀತಿ ನಿಮ್ಮ ಅವನತಿ ಆಗುತ್ತದೆ. ಸಿದ್ದರಾಮಯ್ಯ ಹೆಸರಿನಲ್ಲಿ ರಾಮ ಇದ್ದರೆ ಸಾಲದು, ನಿಮ್ಮಲ್ಲಿ ರಾಮನ ನಡವಳಿಕೆ ಇರಬೇಕು. ಇಲ್ಲಿ ನಡೆದಿರುವ ಲಾಠಿ ಚಾರ್ಜ್ ಸರಕಾರದ ರಾಕ್ಷಸಿ ಪ್ರವೃತ್ತಿ ತೋರಿಸುತ್ತದೆ. ಸಿದ್ದರಾಮಯ್ಯ ಸರಕಾರಕ್ಕೆ ಎಚ್ಚರಿಕೆ ಕೊಡುತ್ತಿದ್ದೇನೆ. ನಿಮ್ಮ ತಪ್ಪು ತಿದ್ದಿಕೊಳ್ಳಿ. ರಾಜಕೀಯ ಮಾಡಿದ್ದು ನೀವು. ಅಧಿಕಾರದ ಅಮಲಿನಲ್ಲಿ ದೈಹಿಕ ಹಲ್ಲೆ ಮಾಡಿಸಿದ್ದೀರಿ. ಈ ಹೋರಾಟ ಇಲ್ಲಿಗೆ ನಿಲ್ಲಿಸುವ ಪ್ರಶ್ನೆ ಇಲ್ಲ. ನಮ್ಮ ಕಾರ್ಯಕರ್ತರಿಗೆ ದೈಹಿಕವಾಗಿ ಪೆಟ್ಟು ಕೊಟ್ಟಿದ್ದೀರಿ. ಇದಕ್ಕೆ ಅಧಿಕಾರಿಗಳಿಗೆ ಪ್ರಾಯಶ್ಚಿತ್ತವಾಗಲೇ ಬೇಕು ಎಂದರು.

ಇದು ರಾಜಕೀಯ ಲಾಭ ನಷ್ಟದ ಹೋರಾಟವಲ್ಲ. ಧ್ವಜ ಸ್ಥಂಭ ವಿಚಾರದಲ್ಲಿ ಸುಳ್ಳು ದಾಖಲೆ ಸೃಷ್ಟಿಯಾಗಿದೆ. ಅಧಿಕಾರಿಗಳ ಮೂಲಕ ಉದ್ಧಟತನ ತೋರಿಸುತ್ತಿದ್ದಾರೆ. ಅಧಿಕಾರಿಗಳು ತಕ್ಷಣ ಕೆರಗೋಡಿನಲ್ಲಿ ಶಾಂತಿ ಸಭೆ ಕರೆಯಬೇಕು. ಧ್ವಜದ ಮರು ಸ್ಥಾಪನೆ ಆಗಬೇಕು. ಅಲ್ಲಿಯವರೆಗೂ ನಮ್ಮ ಹೋರಾಟ ಇರುತ್ತದೆ. 144 ಸೆಕ್ಷನ್ ಮೊದಲು ಕಿತ್ತುಹಾಕಿ. ಜನರು ಕೆರಳಿದರೆ ಪೊಲೀಸರಿಂದ ತಡೆಯಲು ಸಾಧ್ಯವಿಲ್ಲ ಎಂದರು.

ಕೇಸರಿ ಶಾಲು ಹಾಕಿ ಪ್ರತಿಭಟನೆಯಲ್ಲಿ ಭಾಗಿಯಾದ ಕುಮಾರಸ್ವಾಮಿ

ಹನುಮ ಧ್ವಜ ತೆರುವು ಖಂಡಿಸಿ ಬಿಜೆಪಿ ಕರೆ ನೀಡಿದ ಪ್ರತಿಭಟನೆಯಲ್ಲಿ ಜೆಡಿಎಸ್ ಕೂಡ ಕೈಜೋಡಿಸಿದೆ. ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಅವರು ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು, ಈ ವೇಳೆ ಕಾರ್ಯಕರ್ತರೊಬ್ಬರು ಜೀಪ್ ಹತ್ತಿ ಕುಮಾರಸ್ವಾಮಿ ಅವರಿಗೆ ಕೇಸರಿ ಶಾಲು ಹಾಕಿದರು. ಇದೇ ವೇಳೆ ವೇದಿಕೆ ಮೇಲಿದ್ದ ಬಿಜೆಪಿ ನಾಯಕ ಸಿಟಿ ರವಿ ಅವರು ಕುಮಾರಸ್ವಾಮಿ ಅವರನ್ನು ವೇದಿಕೆಗೆ ಬರುವಂತೆ ಕೈಸನ್ನೆ ಮಾಡಿದರು. ಇನ್ನೊಂದೆಡೆ ಕುಮಾರಸ್ವಾಮಿ ಅವರ ಕೈ ಕುಲಕಲು ಕಾರ್ಯಕರ್ತರು ಮುಗಿಬಿದ್ದರು.

ಹನುಮಂತನ ಧ್ವಜ ತೆರವು ಮಾಡುತ್ತಿದ್ದಂತೆ ಕೃಷ್ಣಾರ್ಜುನರ ರಥ ಭಸ್ಮ

ಪ್ರತಿಭಟನೆಯಲ್ಲಿ ಮಾತನಾಡಿದ ಬಿಜೆಪಿ ನಾಯಕ ಸಿಟಿ ರವಿ, ಮಹಾಭಾರತ ಯುದ್ಧದ ಸಮಯದಲ್ಲಿ ಕೃಷ್ಣಾರ್ಜುನ‌ರ ರಥದ ಮೇಲೆ ಇದ್ದಿದ್ದು ಹನುಮಂತನ ಧ್ವಜ. ಆ ಧ್ವಜ ತೆಗೆದ ನಂತರ ರಥವೇ ಭಸ್ಮವಾಯಿತು. ಅದೇ ರೀತಿ ಕಾಂಗ್ರೆಸ್ ಹನುಮ ಧ್ವಜ ತೆಗೆದಿದ್ದು, ಅದು ಕೂಡ ಭಸ್ಮವಾಗಲಿದೆ ಎಂದರು.

ನಾವು ಈಗ ಪ್ರತಿ ಊರಲ್ಲಿ, ಪ್ರತಿ ಮನೆ ಮೇಲೆ ಹನುಮ ಧ್ವಜ ಹಾರಿಸುತ್ತೇವೆ. ಸರ್ಕಾರ ಏನು ಮಾಡುತ್ತೋ ನೋಡುತ್ತೇವೆ. ನಮ್ಮ ಮನೆಯ ಮೇಲಿನ ಧ್ವಜ ತೆಗೆಸೋದಕ್ಕೆ ಆಗುತ್ತಾ? ಕಾಂಗ್ರೆಸ್​ಗೆ ಎಲ್ಲೋ ಟಿಪ್ಪು ಸುಲ್ತಾನ್ ಪ್ರೇತ ಬಡಿದುಕೊಂಡಿದೆ. ಟಿಪ್ಪು ಕೂಡ ಶ್ರೀರಂಗ ಪಟ್ಟಣದಲ್ಲಿ ಹನುಮ ಧ್ವಜ ತೆಗೆಸಿದ್ದ. ಹನುಮ‌ಧ್ವಜ ತೆಗೆದ ನಂತರ ಅವನೇ ಅವಸಾನ ತಂದುಕೊಂಡ. ಅದೆ ರೀತಿ ಕಾಂಗ್ರೆಸ್ ಈ ಬಾರಿ ಹನುಮ ಧ್ವಜ ತೆಗೆದು ತನ್ನ ನಾಶಕ್ಕೆ ಕಾರಣವಾಗಲಿದೆ. ಈ ಬಾರಿ ಲೋಕಸಭೆಯಲ್ಲಿ 28 ಸ್ಥಾನಗಳಲ್ಲಿ ಜನ ಪಾಠ ಕಲಿಸುತ್ತಾರೆ. ಅದಕ್ಕಾಗಿಯೇ ಅವರು ಹನುಮ ಧ್ವಜ ತೆಗೆಸಿದ್ದಾರೆ ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:28 pm, Mon, 29 January 24