ಕೊಪ್ಪಳ: ಕರ್ನಾಟಕ ರಾಜಕಾರಣದಲ್ಲಿ ಸದ್ಯದ ಮಟ್ಟಿಗೆ ಭಾರೀ ಚರ್ಚೆಯಲ್ಲಿರುವ ಜಿಲ್ಲೆ ಕೊಪ್ಪಳ (Koppal). ಇದಕ್ಕೆ ಕಾರಣ ಪ್ರಬಲ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ (BJP And Congress) ಇದೇ ಜಿಲ್ಲೆಯನ್ನು ಟಾರ್ಗೆಟ್ ಮಾಡಿಕೊಂಡಿರುವುದು. ಒಂದು ಕಡೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರು ಮೇಲಿಂದ ಮೇಲೆ ಕೊಪ್ಪಳ ಜಿಲ್ಲೆಗೆ ಆಗಮಿಸುತ್ತಲೇ ಇದ್ದಾರೆ. ಇನ್ನೊಂದೆಡೆ ಬಿಜೆಪಿ ಜಿಲ್ಲೆಯಲ್ಲಿ ಆಕ್ಟಿವ್ ಆಗಿ ಚಟುವಟಿಕೆಗಳನ್ನು ನಡೆಸುತ್ತಿದೆ. ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಸಿದ್ದರಾಮಯ್ಯ ಅವರು ಕುಷ್ಟಗಿ ಕ್ಷೇತ್ರದಿಂದ ಚುನಾವಣೆಗೆ ಇಳಿಯುತ್ತಾರೆಯೇ ಎಂಬ ಸುಳಿವು ಬಿಜೆಪಿಗೆ ಸಿಕ್ಕಿದೆಯೇ ಎಂಬುದು ಈಗಿನ ಪ್ರಶ್ನೆಯಾಗಿದೆ. ಇದರ ಹೊರತಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಕೊಪ್ಪಳವನ್ನೇ ಟಾರ್ಗೆಟ್ ಮಾಡುವುದರ ಹಿಂದೆ ಮತಬೇಟೆಯ ರೋಚಕ ತಂತ್ರಗಾರಿಕೆ ಇದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ.
ಕೊಪ್ಪಳದ ಮೇಲೆ ಬಿಜೆಪಿ, ಕಾಂಗ್ರೆಸ್ ಗೇಮ್ ಪ್ಲಾನ್ ಮಾಡಿಕೊಂಡಿದೆ. ಕೊಪ್ಪಳಕ್ಕೆ ಪದೇ ಪದೇ ಸಿದ್ದರಾಮಯ್ಯ ಅವರು ಯಾಕೆ ಬರುತ್ತಿದ್ದಾರೆ ಎಂಬ ಹಲವು ಅನುಮಾನ ಹುಟ್ಟಿಕೊಂಡಿವೆ. ಸಿದ್ದರಾಮಯ್ಯ ಜಿಲ್ಲೆ ಭೇಟಿಯಿಂದ ಎಚ್ಚೆತ್ತ ಬಿಜೆಪಿಯೂ ಆಕ್ಟಿವ್ ಆಗತೊಡಗಿದೆ. ಸಿದ್ದರಾಮಯ್ಯ ಅವರು ಕುಷ್ಟಗಿಯಿಂದ ಸ್ಪರ್ಧಿಸುತ್ತಾರೆ ಎಂಬ ಸುಳಿವು ಬಿಜೆಪಿಗೆ ಸಿಕ್ಕಿದೆಯೇ ಎಂಬುದು ಈಗಿರುವ ಪ್ರಶ್ನೆಯಾಗಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಪಕ್ಷ ಕಟ್ಟಿದ ಪ್ರಮುಖರಲ್ಲಿ ಒಬ್ಬರಾದ ನನ್ನನ್ನು ಕಡೆಗಣಿಸುವ ಪ್ರಶ್ನೆಯೇ ಬರುವುದಿಲ್ಲ: ಬಿಎಸ್ವೈ
ಕಳೆದ ಹತ್ತು ತಿಂಗಳ ಹಿಂದೆ ಕುಷ್ಟಗಿಯಲ್ಲಿ ಸಂವಿಧಾನ ಉಳಿಸುವ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಭಾಗಿಯಾಗಿದ್ದರು. ಇದೀಗ ಚುನಾವಣೆ ಸಮೀಪಿಸುತ್ತಿದ್ದಂತೆ ಕ್ಷೇತ್ರ ಹುಡುಕಾಟದಲ್ಲಿ ತೊಡಗಿದ್ದಾಗ ಸಿದ್ದರಾಮಯ್ಯ ಮತ್ತು ಬಣ ಕುಷ್ಟಗಿ ಕ್ಷೇತ್ರದಲ್ಲಿ ಸರ್ವೆ ಮಾಡಿಸಿದೆ. ಐವತ್ತು ಜನರಿಂದ ಈ ಸಮೀಕ್ಷೆ ಕಾರ್ಯ ನಡೆಸಲಾಗಿದೆ. ಈ ಬೆಳವಣಿಗೆಗಳನ್ನು ಗಮನಿಸಿದಾಗ ಸಿದ್ದರಾಮಯ್ಯ ಅವರು ಕುಷ್ಟಗಿಯಿಂದಲೇ ಸ್ಪರ್ಧೆ ಮಾಡುತ್ತಾರೆಯೇ ಎಂಬ ಹಲವು ಅನುಮಾನಗಳು ಹುಟ್ಟುಹಾಕಿದೆ.
ಒಂದು ತಿಂಗಳ ಹಿಂದೆಯೂ ಮದುವೆ ಕಾರ್ಯಕ್ರಮವನ್ನು ಮುಂದಿಟ್ಟುಕೊಂಡು ಸಿದ್ದರಾಮಯ್ಯ ಅವರು ಜಿಲ್ಲೆಗೆ ಆಗಮಿಸಿದ್ದರು. ಇದೀಗ ಇಂದು ಕುಷ್ಟಗಿ ಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ. ಅಮರೇಗೌಡ ಬಯ್ಯಾಪೂರ ಹುಟ್ಟು ಹಬ್ಬ ಹಿನ್ನೆಲೆ ತನ್ನ ಶಿಷ್ಯರಾಗಿರುವ ಜಮೀರ್ ಅಹ್ಮದ್ ಖಾನ್, ಸತೀಶ್ ಜಾರಕಿಹೊಳಿ ಜೊತೆ ಆಗಮಿಸುತ್ತಿದ್ದಾರೆ. ರಾಜಕೀಯ ಚದುರಂಗದಾಟ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ಮತ ಲೆಕ್ಕಾಚಾರವೂ ಅಡಗಿದೆ.
ಕುಷ್ಟಗಿಯಲ್ಲಿ ಮುಸ್ಲಿಂ, ಎಸ್ಸಿ ಎಸ್ಟಿ ಸಮುದಾಯದ ಮತಗಳೇ ಹೆಚ್ಚಿದೆ ಎಂಬುದು ಗಮನಿಸಬೇಕಾದ ಅಂಶವಾಗಿದೆ. ಕುಷ್ಟಗಿಯಲಿ ಸರಿ ಸುಮಾರು 30 ಸಾವಿರ ಮುಸ್ಲಿಂ ಮತಗಳು, ಐವತ್ತು ಸಾವಿರಕ್ಕೂ ಅಧಿಕ SC St ಮತಗಳಿವೆ. ಇದರ ಲೆಕ್ಕಾಚಾರವನ್ನೂ ಸಿದ್ದರಾಮಯ್ಯ ಮತ್ತು ಬಣ ಹಾಕಿಕೊಂಡಂತಿದೆ. ಇನ್ನೊಂದೆಡೆ ಸಿದ್ದು ಆಗಮನದ ಒಂದು ದಿನದ ಮುನ್ನ ಬಿಜೆಪಿ ಸಮಾವೇಶ ನಡೆಸಿ ಶಕ್ತಿ ಪ್ರದರ್ಶನ ತೋರಿಸಿದೆ.
ಇದನ್ನೂ ಓದಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ‘ಕೈ‘ ಬಿಟ್ಟು, ಕೆ.ಹೆಚ್. ಮುನಿಯಪ್ಪಗೆ ಮಣೆ ಹಾಕಿ ಕಾಂಗ್ರೆಸ್ ಚುನಾವಣಾ ಸಮಿತಿ ರಚನೆ!
ಮತ ಲೆಕ್ಕಾಚಾರ ಹಾಕಿದ ಬಿಜೆಪಿ ಸೂಕ್ತ ಯೋಜನೆ ರೂಪಿಸಿ ನಿನ್ನೆ (ಡಿ.15) ಬಿಜೆಪಿ ಸಮಾವೇಶ ನಡೆಸಿತು. ಬಾಗಲಕೋಟೆ ಜಿಲ್ಲೆಯಲ್ಲಿ ಆಯೋಜನೆಗೊಂಡಿದ್ದ ಈ ಕಾರ್ಯಕ್ರಮವನ್ನು ಕೊಪ್ಪಳ ಜಿಲ್ಲೆಗೆ ಸ್ಥಳಾಂತರಿಸಿತು. ಈ ಕಾರ್ಯಕ್ರಮಕ್ಕೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಆಗಮಿಸಿ ವಿವಿಧ ಬಿಜೆಪಿ ಕಚೇರಿಗಳನ್ನು ಉದ್ಘಾಟಿಸಿದರು.
ಸಿದ್ದರಾಮಯ್ಯ ಅವರು ರಾಜ್ಯದ ಯಾವುದೇ ಕ್ಷೇತ್ರದಲ್ಲಿ ನಿಂತರೂ ಅವರನ್ನು ಸೋಲಿಸುವುದು ನಿಶ್ಚಿತ ಎಂದು ಬಿಜೆಪಿ ನಾಯಕರು ಶಪಥ ಮಾಡಿದ್ದಾರೆ. ಇನ್ನೊಂದೆಡೆ ತಮ್ಮ ಪಕ್ಷದ ಒಳಗಿನ ವಿರೋಧಿ ಬಣದ ಭೀತಿ ಕೂಡ ಸಿದ್ದರಾಮಯ್ಯರನ್ನು ಕಾಡುತ್ತಿದೆ. ಇದೇ ಕಾರಣಕ್ಕೆ ಮಾಜಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯರಿಗೆ ಕ್ಷೇತ್ರ ಹುಡುಕಾಟ ಕಷ್ಟಕರವಾಗಿದ್ದು, ಇದುವರೆಗೆ ಕ್ಷೇತ್ರವನ್ನು ಅಂತಿಮಗೊಳಿಸಿಲ್ಲ. ಆದರೆ ಅಂತಿಮವಾಗಿ ಸಿದ್ದರಾಮಯ್ಯ ಅವರು ಯಾವ ಕ್ಷೇತ್ರದಿಂದ ಕಣಕ್ಕಿಳಿಯುತ್ತಾರೆ ಎಂಬುದನ್ನು ಕಾದುನೋಬೇಕಿದೆ.
ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:23 am, Fri, 16 December 22