ಕೊಪ್ಪಳ: ಈ ಬಾರಿ ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Election 2023)ಯಲ್ಲಿ ಹುಲಿಯಾ (ಸಿದ್ದರಾಮಯ್ಯ) ಕಾಡಿಗೆ ಹೋಗುತ್ತದೆ, ಬಂಡೆ (ಡಿ.ಕೆ.ಶಿವಕುಮಾರ್) ಒಡೆದು ಹೋಗುತ್ತದೆ, ರಾಜ್ಯದಲ್ಲಿ ಮತ್ತೆ ಕಮಲ (ಬಿಜೆಪಿ) ಅರಳಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ಹೇಳಿದ್ದಾರೆ. ಕೊಪ್ಪಳದಲ್ಲಿ ನಡೆದ ಜನಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು, ಈ ಹಿಂದೆ ವಿದ್ಯುತ್ ಕಂಬ ನಿಲ್ಲಿಸಿದ್ರೂ ಕಾಂಗ್ರೆಸ್ ಗೆಲ್ಲುತ್ತಿತ್ತು. ಈಗ ಕ್ಷೇತ್ರ ಇಲ್ಲದೆ ರಾಹುಲ್ ಗಾಂಧಿ (Rahul Gandhi) ಕೇರಳಕ್ಕೆ ಹೋಗಿದ್ದಾರೆ, ಕರ್ನಾಟಕದಲ್ಲಿ ಸಿದ್ದರಾಮಯ್ಯಗೆ (Siddaramaiah) ಕ್ಷೇತ್ರ ಇಲ್ಲ. ಆದರೂ ಸಿದ್ದರಾಮಯ್ಯ ಅವರು ಈಗಾಗಲೇ ಮುಖ್ಯಮಂತ್ರಿ ಶರ್ಟ್ ಹೊಲಿಸಿ ಇಟ್ಟಿದ್ದಾರೆ. ಆದರೆ ನನ್ನ ಅಪ್ಪನಾಣೆಗೂ ಸಿದ್ದರಾಮಯ್ಯ ಮತ್ತೆ ಸಿಎಂ ಆಗುವುದಿಲ್ಲ ಎಂದರು.
ದೇವೇಗೌಡರ ಬಳಿ ಬೆಳೆದು ಅವರನ್ನೇ ನೀವು ತುಳಿದು ಬಂದಿರಿ. ಬಳಿಕ ಸೋನಿಯಾ ಗಾಂಧಿ ಕಾಲು ಹಿಡಿದು ನೀವು (ಸಿದ್ದರಾಮಯ್ಯ) ಮುಖ್ಯಮಂತ್ರಿ ಆಗಿದ್ದೀರಿ ಎಂದು ಹೇಳಿದ ಕಟೀಲ್, ನನ್ನನ್ನು ನೀವು ಜೋಕರ್ ಅಂತೀರಾ, ನೀವು ಬ್ರೋಕರ್. ಬ್ರೋಕರ್ ಆಗಿಯೇ ನೀವು ಮುಖ್ಯಮಂತ್ರಿ ಆಗಿದ್ದು ಎಂದು ಹೇಳಿದರು. ಇನ್ನು ಡಿ.ಕೆ.ಶಿವಕುಮಾರ್ ಮೇಲೆ ವಾಗ್ದಾಳಿ ನಡೆಸಿದ ಕಟೀಲ್, ಡಿಕೆಶಿಗೆ ಎರಡು ಕುಕ್ಕರ್ ಮೇಲೆ ಬಹಳ ಪ್ರೀತಿ. ಒಂದು ಮಂಗಳೂರು ಕುಕ್ಕರ್, ಇನ್ನೊಂದು ಬೆಳಗಾವಿ ಕುಕ್ಕರ್. ಮಂಗಳೂರಿನಲ್ಲಿ ಕುಕ್ಕರ್ ಸ್ಫೋಟಿಸಿದವನನ್ನ ಅಮಾಯಕ ಅಂತಾರೆ ಎಂದರು.
ತಮ್ಮದೇ ದಾಟಿಯಲ್ಲಿ ಭಾಷಣ ಮಾಡುತ್ತಿದ್ದ ಕಟೀಲ್, ಡಿಕೆ ಶಿವಕುಮಾರ್ ಕುಟುಂಬವನ್ನ ಕಳ್ಳರ ಸಂತಾನ ಎಂದು ಹೇಳಿದ್ದಾರೆ. ಡಿ.ಕೆ. ಶಿವಕುಮಾರ್ ತಿಹಾರ್ ಜೈಲಿಗೆ ಹೋಗಿದ್ದು ಯಾಕೆ? ಎಂತಾ ಸಂತಾನ ರೀ ಇವರದ್ದು, ಇವರದ್ದು ಕಳ್ಳರ ಸಂತಾನ ಎಂದು ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ರೈತರ ಸಾಲ ಮನ್ನಾ ಮಾಡದವರು ಉದ್ಯಮಿಗಳ ಸಾಲ ಮನ್ನಾ ಮಾಡಿರುವುದು ಸರಿಯೇ?: ತೇಜಸ್ವಿ ಸೂರ್ಯಗೆ ಸಿದ್ದರಾಮಯ್ಯ ಪ್ರಶ್ನೆ
ಸಿದ್ದರಾಮಯ್ಯ ಮತ್ತು ಸೋನಿಯಾ ಗಾಂಧಿ ಬಗ್ಗೆ ನಳಿನ್ ಕುಮಾರ್ ಕಟೀಲ್ ಅವರು ಕತ್ತೆಯ ಕಥೆ ಮೂಲಕ ವಿವರಿಸಿದರು. ಒಂದು ದಿನ ಸೋನಿಯಾ ಮನೆ ಮುಂದೆ ಕತ್ತೆ ಮಲಗಿತ್ತು. ಅದನ್ನ ಮಲ್ಲಿಕಾರ್ಜುನ ಖರ್ಗೆ, ಅಜಾದ್, ಸೇರಿದಂತೆ ಯಾರಿಂದಲೂ ಓಡಿಸಲು ಆಗಿರಿಲ್ಲ. ಅಲ್ಲಿಂದ ಓಡಿಸಿದ್ದು ಸಿದ್ದರಾಮಯ್ಯ, ಅದಕ್ಕೆ ಕಾಂಗ್ರೆಸ್ ಸೇರುತ್ತೀಯಾ ಅಂದಿದ್ದರಂತೆ. ಈ ವೇಳೆ ಕತ್ತೆ ಓಡಿತ್ತು. ಕತ್ತೆಗೂ ಕಾಂಗ್ರೆಸ್ ಬೇಡವಾಗಿದೆ ಎಂದರು.
ಈ ರಾಜ್ಯಕ್ಕೆ ಟಿಪ್ಪು ಸಂತಾನ ಬೇಕಾ? ಹನುಮ, ಶ್ರೀರಾಮನ ಭಕ್ತರು ಬೇಕಾ ಎಂದು ಜನರೇ ಯೋಚನೆ ಮಾಡಿ. ನಮಗೆ ಹನಮಮಾಲೆ, ದತ್ತಮಾಲೆಯಲ್ಲಿ ನಂಬಿಕೆ ಇದೆ. ಕಾಂಗ್ರೆಸ್ಗೆ ಟಿಪ್ಪು ಮೇಲೆ ಮಾತ್ರ ನಂಬಿಕೆ ಇದೆ ಎಂದು ಹೇಳಿದ ಕಟೀಲ್, ಯಲಬುರ್ಗಾದಲ್ಲೂ ಕಾಂಗ್ರೆಸ್ ಮುಕ್ತ ಅಗುತ್ತದೆ ಎಂದರು.
ಕಾಂಗ್ರೆಸ್ ಬಯೋತ್ಪಾದಕರಿಗೆ ಸಪೋಟ್೯ ಮಾಡುವ ಪಕ್ಷವಾಗಿದೆ. ಇಂದಿರಾ ಗಾಂಧಿಯೇ ಬಯೋತ್ಪಾದಕರಿಗೆ ಪ್ರೇರಣೆ ನೀಡಿದ್ದು. ಹೀಗಾಗೇ ಬಯೋತ್ಪಾದಕರ ಪಾರ್ಟಿ ಕಾಂಗ್ರೆಸ್. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಾರ್ಗ ಮಾರ್ಗಗಳಲ್ಲಿ ಹಿಂದೂಗಳ ಹತ್ಯೆ ಆಗುತ್ತೆ. ನಿಮಗೆ ರಾಷ್ಟ್ರ ಚಿಂತಕರು ಬೇಕಾ, ರಾಷ್ಟ್ರ ವಿರೋಧಿಗಳು ಬೇಕಾ? ರಾಷ್ಟ್ರ ಭಕ್ತ ಮುಸ್ಲಿಂರನ್ನ ರಾಷ್ಟ್ರಪತಿ ಮಾಡಿದ್ದು ಬಿಜೆಪಿ ಪಕ್ಷ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:19 pm, Tue, 14 February 23