ಮೈಸೂರು: ಸಂಸದ ಪ್ರತಾಪ್ ಸಿಂಹ (Pratap Simha) ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನಡುವೆ ವಾಕ್ಸಮರ ನಡೆದಿದೆ. ಮೈಸೂರು ಜಿಲ್ಲೆ ಅಭಿವೃದ್ಧಿ ವಿಚಾರವಾಗಿ ಇಬ್ಬರ ನಡುವೆ ವಾಗ್ಯುದ್ದ ನಡೆದಿದೆ. ಈ ವಿಚಾರವಾಗಿ ಕೆಪಿಸಿಸಿ (KPCC) ವಕ್ತಾರ ಎಂ ಲಕ್ಷ್ಮಣ ಮಾತನಾಡಿ ಮೈಸೂರಿಗೆ ಸಂಸದ ಪ್ರತಾಪ್ ಸಿಂಹ ಅವರ ಕೊಡುಗೆ ಏನು ? ಸಿಎಂ ಸಿದ್ದರಾಮಯ್ಯ ಅವರ ಸಾಧನೆ ಪ್ರತಾಪ್ ಸಿಂಹ ಸಾಧನೆ ಏನು ಎಂಬುವುದರ ಕುರಿತು ಚರ್ಚೆಯಾಗಲಿ. ಈ ಬಗ್ಗೆ ಸೆ. 6 ರಂದು ಸಂಸದರ ಕಚೇರಿ ಬಳಿ ಬಹಿರಂಗ ಚರ್ಚೆ ನಡೆಸಲಿ. ನಾವು ಸಿಎಂ ಸಿದ್ದರಾಮಯ್ಯ ಅವರ ಕೆಲಸಗಳ ದಾಖಲೆ ತರುತ್ತೇವೆ ಎಂದು ಸವಾಲು ಹಾಕಿದರು.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ನಿಮ್ಮ ಸುಳ್ಳು, ನಿಮ್ಮ ಡೋಂಗಿತನ ಎಲ್ಲರಿಗೂ ಗೊತ್ತಿದೆ. ಸಿಎಂ ಸಿದ್ದರಾಮಯ್ಯ ಅವರು ಕಿಡಿಗೇಡಿಗಳನ್ನು ಗೆಲ್ಲಿಸಬೇಡಿ ಅಂತಾ ಕೈ ಮುಗಿದಿದ್ದಾರೆ. ಇದರಲ್ಲಿ ಏನು ತಪ್ಪಿದೆ? ಎಂದು ಪ್ರಶ್ನಿಸಿದರು. ಇನ್ನು ಸಿದ್ದರಾಮಯ್ಯ ವಿರುದ್ಧ ಶಾಸಕ ಜಿಟಿ ದೇವೇಗೌಡ ವಾಗ್ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಜಿಟಿ ದೇವೇಗೌಡ ಅವರು ಪ್ರತಾಪಸಿಂಹ ಬರೆದು ಕೊಟ್ಟ ಸ್ಕ್ರಿಪ್ಟ್ ಓದುತ್ತಾರೆ ಎಂದು ಆರೋಪ ಮಾಡಿದರು.
ಚಾಮುಂಡೇಶ್ವರಿ ಕ್ಷೇತ್ರಕ್ಕೆ ನಿಮ್ಮ ಕೊಡುಗೆ ಏನು ? ಕುಡಿಯುವ ನೀರಿನ ಯೋಜನೆ ಸೇರಿ ಎಲ್ಲಾ ಮಾಡಿರುವುದು ಸಿದ್ದರಾಮಯ್ಯ. ಈಗ ಜಿಟಿ ದೇವೇಗೌಡ ಟೇಬಲ್ ಕುಟ್ಟಿ ಮಾತನಾಡುತ್ತಿದ್ದಾರೆ. ಜಿಟಿ ದೇವೇಗೌಡ ಜೊತೆಯೂ ಚರ್ಚೆಗೆ ಸಿದ್ದನಿದ್ದೇನೆ. ಬೇಕಾದರೆ ಸಂಸದ ಪ್ರತಾಪಸಿಂಹರನ್ನು ಕರೆದುಕೊಂಡು ಬನ್ನಿ ಎಂದು ಸವಾಲ್ ಹಾಕಿದರು.
ಕಾವೇರಿ ನದಿ ನೀರು ವಿವಾದ ವಿಚಾರವಾಗಿ ಮಾತನಾಡಿದ ಅವರು ಕಾವೇರಿ ಪ್ರಾಧಿಕಾರ ರಚನೆ ಮಾಡಿದ್ದು ಮೋದಿ. ಇದಕ್ಕೆ ಕೇಂದ್ರ ಸರ್ಕಾರದ ಚೀಫ್ ಇಂಜಿನಿಯರ್ ಮುಖ್ಯಸ್ಥರು. ಎಲ್ಲಾ ರಾಜ್ಯದ ಇಂಜಿನಿಯರ್ ಅಲ್ಲಿ ಇರುತ್ತಾರೆ. ಅಲ್ಲಿ ನಿರ್ಧಾರ ಮಾಡುವವರು ನೀವೆ. ನೀರು ಕೊಡಿ ಅಂತ ಹೇಳಿದವರು ನೀವೆ. ನೀರು ಇದ್ದರೆ ತಾನೇ ಕೊಡುವುದು? ಇಲ್ಲಿ ಬಂದು ಪರಿಸ್ಥಿತಿ ನೋಡಿ ತೀರ್ಮಾನ ಮಾಡಲಿಲ್ಲ. ಈಗ ಇಲ್ಲಿ ಬಂದು ಬಾಯಿ ಬಡಿದುಕೊಳ್ಳುತ್ತಿದ್ದೀರಾ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ಮಾಡಿದರು.
ಇದನ್ನೂ ಓದಿ: ಪ್ರತಾಪ್ ಸಿಂಹನನ್ನು ಸೋಲಿಸಿ ಎಂದ ಸಿದ್ದರಾಮಯ್ಯ, ಮಹಿಷಾ ದಸರಾ ಆರಂಭ ಮಾಡಿ ಮೈಸೂರಿನ ಸ್ವಾಸ್ಥ್ಯ ಕೆಡಿಸಿದ್ದು ಯಾರು ಅಂತ ಹೇಳಲಿ
ಕಾವೇರಿ ನೀರು ವಿಚಾರದಲ್ಲಿ ಡಿ ಕೆ ಶಿವಕುಮಾರ್ ಅವರ ಕೆಲಸ ಮೆಚ್ಚಬೇಕು. ನಮಗೆ ಕುಡಿಯಲು ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಲಿದೆ. ಇದರ ಜೊತೆಗೆ ಕೃಷಿಗೂ ನೀರು ಬೇಕು. ನಿಮ್ಮ ಯೋಗ್ಯತೆಗೆ ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸಲಿಲ್ಲ. ಅದರಲ್ಲಿ ನೀರು ಶೇಖರಣೆಯಾಗಿದ್ದರೆ ಈಗ ಅನುಕೂಲವಾಗುತಿತ್ತು. 25 ಸಂಸದರು ಮಾಡಬೇಕಿತ್ತು ಎಲ್ಲಿ ಹೋಗಿದ್ದಾರೆ ಎಂದು ಪ್ರಶ್ನಿಸಿದರು.
ಬಸವರಾಜ ಬೊಮ್ಮಾಯಿ ಇಬ್ಬರು ಮೂವರು ಜೋಕರ್ ಜೊತೆ ಸೇರಿ ಅವರು ಜೋಕರ್ ಆಗಿದ್ದಾರೆ. ಇಂಡಿಯಾ ದಿನೇ ದಿನೇ ಎಲ್ಲರಿಗೂ ಇಷ್ಟವಾಗುತ್ತಿದೆ. ಅದಕ್ಕಾಗಿ ಒಂದೇ ದೇಶ ಒಂದೇ ಚುನಾವಣೆ ಅನ್ನುತ್ತಿದ್ದೀರಾ. ಇದೊಂದು ಕೇಂದ್ರದ ಕುತಂತ್ರ. ಬಿಜೆಪಿ ಅಣ್ಣಾಮಲೈ ಮೂಲಕ ಪತ್ರ ಬರೆಸುತ್ತಾರೆ. ಇಲ್ಲಿ ಬಂದು ಪ್ರತಿಭಟನೆ ಮಾಡುತ್ತಾರೆ. ನೀರು ಬಿಡುವ ಕೀಲಿ ದೆಹಲಿಯಲ್ಲಿದೆ. ಅಲ್ಲಿ ಕುಳಿತುಕೊಂಡು ಬಟನ್ ಒತ್ತಿದರೆ ಸಾಕು ನೀರು ಹೋಗುತ್ತದೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ