ರಾಜ್ಯದಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆ ಗ್ಯಾರಂಟಿ ಗುದ್ದಾಟ ತಾರಕ್ಕೇರಿದೆ.. ಈ ನಡುವೆ ಕಾಂಗ್ರೆಸ್ ಶಾಸಕರ ವಿರುದ್ಧ ಅಕ್ರಮ ಗೆಲುವಿನ ಆರೋಪ ಕೇಳಿ ಬಂದಿದೆ. ಈ ಆರೋಪ ಮಾಡಿರೋದು ಯಾರು. ಗೆದ್ದ ಶಾಸಕ ಚುನಾವಣೆ ಪೂರ್ವದಲ್ಲಿ ನಡೆಸಿದ ಅಕ್ರಮವೇನು (Golmaal).. ಇಲ್ಲಿದೆ ಅದರ ಪಿನ್ ಟೂ ಪಿನ್ ಮಾಹಿತಿ.. ಈ ಸ್ಟೋರಿ ನೋಡಿ… ರಾಜ್ಯದಲ್ಲಿ ಹೀನಾಯ ಸೋಲು ಕಂಡಿರುವ ಬಿಜೆಪಿ ಕಲಿಗಳು (Tumkur BJP) ಕಾಂಗ್ರೆಸ್ ಪಕ್ಷದ ಒಂದೊಂದೇ ತಪ್ಪುಗಳನ್ನು ಹೆಕ್ಕಿ ಹೆಕ್ಕಿ ತೆಗೆಯುತಿದ್ದಾರೆ.. ಚುನಾವಣೆ ಸಂದರ್ಭದಲ್ಲಿ ಅಕ್ರಮ ಎಸಗಿ ಗೆಲುವು ಕಂಡಿದೆ ಅಂತೆಲ್ಲಾ ಮಾಧ್ಯಮಗಳ ಮುಂದೆ ಸಾಕ್ಷಿ ಸಮೇತ ಕಾಣಿಸಿಕೊಂಡು ಬಿಜೆಪಿ ಸೋತರೂ ಸುಮ್ಮನೆ ಕೂರೋದಿಲ್ಲ ಅಂತಾ ಅಬ್ಬರಿಸಿದ್ದಾರೆ.. ಹೌದು.. ಈ ಆರೋಪ ಎದುರಿಸುತ್ತಿರೋದು ಕುಣಿಗಲ್ ಕ್ಷೇತ್ರದ ಹಾಲಿ ಶಾಸಕ ಡಾ. ರಂಗನಾಥ್ (Dr HD Ranganath). ಇವರು ಕೆಪಿಸಿಸಿ ಅಧ್ಯಕ್ಷ, ರಾಜ್ಯದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ (DK Shivakumar) ಸಂಬಂಧಿ.. ಇವರ ಅಕ್ರಮಕ್ಕೆ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್ ಸಾಥ್ ನೀಡಿದ್ದಾರೆ ಎಂದು ತುಮಕೂರಿನಲ್ಲಿ ವಿಧಾನಪರಿಷತ್ ಸದಸ್ಯ ನವೀನ್ ಸುದ್ದಿಗೋಷ್ಟಿ ನಡೆಸಿ ಗಂಭೀರ ಆರೋಪದ ಜೊತೆ ದಾಖಲೆಯನ್ನೂ ಬಿಡುಗಡೆ ಮಾಡಿದ್ದಾರೆ.
ಇನ್ನು ಮತದಾನದ ಮುನ್ನ ಕ್ಷೇತ್ರದಲ್ಲಿ ಗ್ಯಾರಂಟಿ ಕಾರ್ಡ್ ವಿತರಣೆ ಮಾಡಲಾಗಿದೆ. ಕಾರ್ಡ್ ನಲ್ಲಿ ಅಭ್ಯರ್ಥಿಯ ಕ್ರಮ ಸಂಖ್ಯೆ, ಸಿಂಬಲ್ ಹಾಗೂ ಬಾರ್ ಕೋಡ್ ಇದೆ. 60 ಸಾವಿರ ಕಾರ್ಡ್ ಗಳನ್ನ ಮನೆ ಮನೆಗೆ ಹೋಗಿ ವಿತರಣೆ ಮಾಡಿದ್ದಾರೆ. ಕಾರ್ಡ್ ಅನ್ನು ಎಟಿಎಂ ರೀತಿ ಬಳಸಬಹುದಾಗಿದೆ. ಅಲ್ಲದೆ ಗಿಫ್ಟ್ ಖರೀದಿ ಮಾಡಬಹುದು ಎಂದು ಮತದಾರರಿಗೆ ಆಮಿಷ ಒಡ್ಡಿದ್ದಾರೆ. ಮತದಾನ ಬಳಿಕ ಕಾರ್ಡ್ ಬಳಸಬಹುದು ಅಂತಾ ಸುಳ್ಳು ಭರವಸೆ ನೀಡಿದ್ದಾರೆ ಎಂದು ಮಾಧ್ಯಮಗಳ ಮುಂದೆ ಡಾ. ರಂಗನಾಥ್ ಭಾವ ಚಿತ್ರ ಇರೋ ಸ್ಮಾರ್ಟ್ ಕಾರ್ಡ್ ಅನ್ನು ಬಿಜೆಪಿ ನಾಯಕರು ಸುದ್ದಿಗೋಷ್ಟಿಯಲ್ಲಿ ಪ್ರದರ್ಶಿಸಿದರು. ಅಕ್ರಮ ಮಾಡಿ ಕುಣಿಗಲ್ ಶಾಸಕ ಗೆದ್ದಿದ್ದಾರೆ. ನಾವು ಕಾನೂನು ಹೋರಾಟ ಮಾಡ್ತೀವಿ ಹೈಕೋರ್ಟ್ ನಲ್ಲಿ ಈ ಬಗ್ಗೆ ಕೇಸ್ ದಾಖಲು ಮಾಡ್ತೀವಿ. ಮತದಾರರ ಮೂಲಕ ಕೇಸ್ ದಾಖಲಿಸಲು ನಿರ್ಧಾರ ಮಾಡಿದೀವಿ ಎಂದು ಬಿಜೆಪಿ ಪರಾಜಿತ ಅಭ್ಯರ್ಥಿ ಡಿ. ಕೃಷ್ಣಕುಮಾರ್ (D Krishna Kumar) ಆರೋಪಗಳ ಸುರಿ ಮಳೆಗೈದರು.
ಡಾ ರಂಗನಾಥ್ ಅಕ್ರಮ ಮಾಡುವುದರಲ್ಲಿ ಎತ್ತಿದ ಕೈ.. ಚುನಾವಣೆ ಹಲವು ತಿಂಗಳು ಇರುವಾಗಲೇ.. ಕುಕ್ಕರ್ ಗಳನ್ನ ಮನೆ ಮನೆಗೂ ಹಂಚಿದ್ದಾರೆ.. ನಿರಂತವಾಗಿ ನಾಲ್ಕೈದು ತಿಂಗಳುಗಳಿಂದ ಹಂಚಿದ್ದಾರೆ.. ಹಂಚಿಕೆ ವಿರುದ್ಧ ಕೇಸ್ ದಾಖಲಿಸಿದರೂ ಕೂಡ ಚುನಾವಣೆಯಲ್ಲಿ ಅಕ್ರಮ ಮಾಡಿದ್ದಾರೆ.. ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಮಾಡಿದ ಹೋರಾಟ ಹಾದಿಯಲ್ಲೇ ಕುಣಿಗಲ್ ಕ್ಷೇತ್ರದ್ದು ಕೂಡ ಹೋರಾಟ ಮಾಡಿ ಗೆಲ್ತೀವಿ ಅಂತಾ ಶಪಥ ಮಾಡಿದ್ದೇವೆ ಎನ್ನುತ್ತಿದ್ದಾರೆ ಬಿಜೆಪಿ ಮುಖಂಡರು.. ಚುಣಾವಣೆ ಬಳಿಕ ಜಿದ್ದಾಜಿದ್ದಿ ಫಲಿತಾಂಶ ಬಂದ ಬಳಿಕವೂ ರಾಜಕೀಯ ಅಖಾಡದಲ್ಲಿ ಜಿದ್ದಾಜಿದ್ದಿಗೆ ಪೂರ್ಣ ವಿರಾಮ ಸಿಕ್ಕಿಲ್ಲ. ಕ್ಷೇತ್ರದಲ್ಲಿ ಬಿಜೆಪಿ-ಕಾಂಗ್ರೆಸ್ ನಡುವಿನ ಕಿತ್ತಾಟ ಯಾವ ತಿರುವು ಪಡೆದುಕೊಳ್ಳುತ್ತೆ ಕಾದುನೋಡ್ಬೇಕಿದೆ..
ವರದಿ: ಮಹೇಶ್ ಟಿವಿ9 ತುಮಕೂರು
ಇನ್ನಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:22 am, Fri, 2 June 23