ನವದೆಹಲಿ, ಮಾರ್ಚ್ 11: ಈ ಬಾರಿ 400 ಸೀಟುಗಳನ್ನು ಪಡೆಯಬೇಕು. ಪ್ರಧಾನಿ ನರೇಂದ್ರ ಮೋದಿ (Narendra Modi) ಸತತ ಮೂರನೇ ಬಾರಿಗೆ ಕೇಂದ್ರದ ಗದ್ದುಗೆಗೆ ಏರಬೇಕು ಎಂಬ ಎರಡು ಅಜೆಂಡಾಗಳೊಂದಿಗೆ ಬಿಜೆಪಿ (BJP) ಭರ್ಜರಿ ಚುನಾವಣಾ ಪ್ರಚಾರ (Election Campaign) ಈಗಾಗಲೇ ಉತ್ತರ ಭಾರತದಲ್ಲಿ ಮತಬೇಟೆ ಆರಂಭಿಸಿರುವ ಪ್ರಧಾನಿ ಮೋದಿ ಕೆಲವೇ ದಿನಗಳಲ್ಲಿ ದಕ್ಷಿಣದ ರಾಜ್ಯಗಳಿಗೆ ಬರಲಿದ್ದಾರೆ. ಮಾರ್ಚ್ 15ರಿಂದ 19ರವರೆಗೆ ದಕ್ಷಿಣ ಭಾರತದಲ್ಲಿ ಮೋದಿ ಅವರ 15 ಱಲಿ ಹಾಗೂ ಸಾರ್ವಜನಿಕ ಸಭೆಗಳು ನಿಗದಿಯಾಗಿವೆ.
ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಪ್ರಧಾನಿ ಮೋದಿ ರೋಡ್ ಶೋ, ಸಮಾವೇಶಕ್ಕೆ ಯೋಜನೆ ರೂಪಿಸಲಾಗಿದೆ. ಮಾರ್ಚ್ 17ರಂದು ಶಿವಮೊಗ್ಗದಲ್ಲಿ ಪ್ರಧಾನಿ ಮೋದಿ ಱಲಿ ನಡೆಯಲಿದೆ. ಶಿವಮೊಗ್ಗದಲ್ಲಿ 4 ಕ್ಷೇತ್ರಗಳನ್ನೊಳಗೊಂಡ ಸಮಾವೇಶ ಆಯೋಜಿಸಲಾಗಿದ್ದು, ಒಟ್ಟಾರೆಯಾಗಿ ರಾಜ್ಯದಲ್ಲಿ 4 ಸಾರ್ವಜನಿಕ ಱಲಿ ನಡೆಸಲು ಬಿಜೆಪಿ ಸಿದ್ಧತೆ ಮಾಡಿಕೊಂಡಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ-ಚಿಕ್ಕಮಗಳೂರು ಕ್ಷೇತ್ರಗಳಲ್ಲಿ ಮೋದಿ ಸಮಾವೇಶಕ್ಕೆ ಸಿದ್ಧತೆ ಮಾಡಲಾಗುತ್ತಿದೆ.
ಪ್ರಧಾನಿ ಮೋದಿ ವಾರಾಣಸಿ ಱಲಿ ಬಳಿಕ ಇದೀಗ ಗುಜರಾತ್ನತ್ತ ಮುಖಮಾಡಿದ್ದಾರೆ. ಮಾರ್ಚ್ 12ರಂದು ಗುಜರಾತ್ ಹಾಗೂ ರಾಜಸ್ಥಾನದಲ್ಲಿ ಮೋದಿ ಚುನಾವಣಾ ಪ್ರಚಾರ ಅಭಿಯಾನ ನಡೆಸಲಿದ್ದಾರೆ.
ಲೋಕಸಭೆ ಚುನಾವಣೆ ದಿನಾಂಕ ಬಹುತೇಕ ಈ ವಾರ ಪ್ರಕಟಗೊಳ್ಳುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕಳೆದ ಹಲವು ದಿನಗಳಿಂದ ಪ್ರಧಾನಿ ನರೇಂದ್ರ ಮೋದಿ ಉತ್ತರ ಭಾರತದಾದ್ಯಂತ ಅನೇಕ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡುತ್ತಿದ್ದಾರೆ. ಹಲವಾರು ಮಹತ್ವದ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಜೊತೆಗೆ ಚುನಾವಣಾ ಪ್ರಚಾರ ಅಭಿಯಾನಗಳನ್ನೂ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಉಕ್ರೇನ್ ಮೇಲೆ ರಷ್ಯಾ ಸಂಭಾವ್ಯ ಪರಮಾಣು ದಾಳಿ ತಡೆದಿದ್ದ ಪ್ರಧಾನಿ ಮೋದಿ: ಸಿಎನ್ಎನ್ ವರದಿ
ಚುನಾವಣೆ ವೇಳಾಪಟ್ಟಿ ಪ್ರಕಟಗೊಳ್ಳುವುದರೊಂದಿಗೆ ಮೋದಿ ಅವರ ಪ್ರಚಾರ ಅಭಿಯಾನ ಇನ್ನಷ್ಟು ಬಿರುಸುಕೊಳ್ಳಲಿದೆ. ಆ ನಿಟ್ಟಿನಲ್ಲಿ ಬಿಜೆಪಿ ಈಗಾಗಲೇ ಸಕಲ ಸಿದ್ಧತೆಗಳನ್ನು ನಡೆಸಿಕೊಂಡಿದೆ. ಮತ್ತೊಂದೆಡೆ, ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ದೆಹಲಿಯಲ್ಲಿ ಇಂದು ಬಿಡುಗಡೆಯಾಗುವ ನಿರೀಕ್ಷೆ ಇದೆ. ಇದರಲ್ಲಿ ಕರ್ನಾಟಕದ ಅಭ್ಯರ್ಥಿಗಳ ಹೆಸರು ಕೂಡ ಇರಬಹುದು ಎಂದು ಭಾವಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ