ಶಿವಮೊಗ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಶಿವಮೊಗ್ಗದ ಸೊರಬ ಕ್ಷೇತ್ರದ ಶಾಸಕ ಮಧು ಬಂಗಾರಪ್ಪ(Madhu Bangarappa) ಸ್ಥಾನ ಪಡೆದಿದ್ದಾರೆ. ಇಂದು(ಮೇ.27) ರಾಜಭವನದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಪುತ್ರರಾದ ಮಧು ಬಂಗಾರಪ್ಪ ಕಾಂಗ್ರೆಸ್ ಪಾಳಯದಲ್ಲಿ ಉತ್ತಮ ವರ್ಚಸ್ಸು ಹೊಂದಿದ್ದಾರೆ. 1966 ಸೆಪ್ಟಂಬರ್ 4ರಂದು ಸೊರಬ ತಾಲೂಕಿನ ಕುಬಟೂರು ಎಂಬಲ್ಲಿ ಜನಿಸಿದ ಮಧು ಬಂಗಾರಪ್ಪ ಪದವೀಧರರು. ತಂದೆ ಎಸ್. ಬಂಗಾರಪ್ಪ ತಾಯಿ ಶಕುಂತಲಾ ಬಂಗಾರಪ್ಪ. ವ್ಯಾಪಾರೋದ್ಯಮಿಯಾದ ಇವರು ರಾಜಕೀಯಕ್ಕೆ ಬರುವ ಮೊದಲು ಸಿನಿಮಾ ಆಡಿಯೋ ಕ್ಷೇತ್ರದಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದರು.
ಇವರು 2013ರಲ್ಲಿ ಸೊರಬ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಮೊದಲ ಬಾರಿಗೆ ಚುನಾವಣೆಯಲ್ಲಿ ಗೆಲುವು ಸಾಧಿಸಿದರು. ಸೊರಬ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿರುವ ಮಧು ಬಂಗಾರಪ್ಪ 2023ರ ವಿಧಾನಸಭಾ ಚುನಾವಣೆಯಲ್ಲಿ 44,262ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಹಾಗೂ ಅವರ ಸಹೋದರ ಕುಮಾರ್ ಬಂಗಾರಪ್ಪ ಅವರನ್ನು ಸೋಲಿಸಿದರು. ಮಧು ಬಂಗಾರಪ್ಪ ಕರ್ನಾಟಕ ಕಾಂಗ್ರೆಸ್‌ನ ಹಿಂದುಳಿದ ವರ್ಗಗಳ ವಿಭಾಗದ (ಒಬಿಸಿ) ಕಾರ್ಯಾಧ್ಯಕ್ಷರು. ಕನ್ನಡ ನಟ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ಸಹೋದರ ಆಗಿದ್ದಾರೆ. ರಾಜಕೀಯ ಹೊರತುಪಡಿಸಿ ‘ಕಲ್ಲರಳಿ ಹೂವಾಗಿ’ ಕನ್ನಡ ಚಿತ್ರ ನಿರ್ಮಾಣಕ್ಕಾಗಿ ರಾಷ್ಟ್ರಪತಿಗಳಿಂದ ಪದಕ ಪಡೆದಿದ್ದಾರೆ. ಚಲನಚಿತ್ರ ನಟರಾಗಿ, ನಿರ್ಮಾಪಕರಾಗಿ, ವಿತರಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
ಇದನ್ನೂ ಓದಿ:Mankal Vaidya: ಮೊದಲ ಬಾರಿಗೆ ಸಚಿವ ಸ್ಥಾನ ಗಿಟ್ಟಿಸಿಕೊಂಡ ಮಂಕಾಳ ವೈದ್ಯ
ರಾಜಕೀಯ
ರಾಜಕೀಯ ಜೀವನ 2013ರ ಚುನಾವಣೆಯಲ್ಲಿ 58,541 ಮತಗಳನ್ನು ಪಡೆದು 37,316 ಮತ ಪಡೆದ ಕೆಜೆಪಿ ಪಕ್ಷದ ಹೆಚ್. ಹಾಲಪ್ಪರನ್ನು ಸೋಲಿಸಿ ಮೊದಲ ಬಾರಿಗೆ ಶಾಸಕರಾದರು. ಈ ಚುನಾವಣೆಯಲ್ಲಿ ಮಧು ಬಂಗಾರಪ್ಪಗೆ ಕಾಂಗ್ರೆಸ್‌ನಿಂದ ಸಹೋದರ ಕುಮಾರ್ ಬಂಗಾರಪ್ಪ ಎದುರಾಳಿಯಾಗಿದ್ದರು. 33,176 ಮತಗಳನ್ನು ಪಡೆದು ಕುಮಾರ್ ಬಂಗಾರಪ್ಪ ಸೋಲು ಕಂಡರು. 2018ರ ಚುನಾವಣೆಯಲ್ಲಿ ಸೊರಬದ ರಾಜಕೀಯ ಚಿತ್ರಣ ಬದಲಾಯಿತು. ಕುಮಾರ್ ಬಂಗಾರಪ್ಪ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು. ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು 72,091 ಮತಗಳನ್ನು ಪಡೆದು ಜಯಗಳಿಸಿದರು. ಮಧು ಬಂಗಾರಪ್ಪ ಜೆಡಿಎಸ್‌ನಿಂದ ಕಣಕ್ಕಿಳಿದು 58,805 ಮತಗಳನ್ನು ಪಡೆದು ಸೋಲೊಪ್ಪಿಕೊಂಡರು.
2013, 2014ರಲ್ಲಿ ಮಧು ಬಂಗಾರಪ್ಪ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತರಕಾಗಿಯೂ ಕಾರ್ಯ ನಿರ್ವಹಣೆ ಮಾಡಿದ್ದಾರೆ. 2018ರ ಚುನಾವಣೆಯಲ್ಲಿ ಸೋತ ಬಳಿಕವೂ ಅವರನ್ನು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷರಾಗಿ ಪಕ್ಷ ನೇಮಕ ಮಾಡಿತ್ತು. 2019ರ ಲೋಕಸಭೆ ಚುನಾವಣೆಯಲ್ಲಿ ಮಧು ಬಂಗಾರಪ್ಪ ಶಿವಮೊಗ್ಗ ಕ್ಷೇತ್ರದಿಂದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. 506512 ಮತಗಳನ್ನು ಪಡೆದು ಬಿಜೆಪಿಯ ಬಿ. ವೈ. ರಾಘವೇಂದ್ರ ಎದುರು ಸೋಲುಕಂಡರು.
ಇದನ್ನೂ ಓದಿ:KN Rajanna: ಮಧುಗಿರಿ ಶಾಸಕ ಕೆಎನ್ ರಾಜಣ್ಣರಿಗೆ ಒಲಿದ ಸಚಿವ ಸ್ಥಾನ
2023ರ ವಿಧಾಸಭಾ ಚುನಾವಣೆಯಲ್ಲಿ 98,912ಮತಗಳನ್ನು ಪಡೆಯುವ ಮೂಲಕ ಸೊರಬದಲ್ಲಿ ಭರ್ಜರಿ ಗೆಲುವು ಸಾಧಿಸಿದರು. 44,262ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಹಾಗೂ ಅವರ ಸಹೋದರ ಕುಮಾರ್ ಬಂಗಾರಪ್ಪ ಅವರನ್ನು ಸೋಲಿಸಿದರು. 2023ರ ವಿಧಾನಸಭಾ ಚುನಾವಣೆಗೆ ಮಧು ಬಂಗಾರಪ್ಪ ಪರ ನಟ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ಇಬ್ಬರೂ ಸೊರಬದಲ್ಲಿ ಪ್ರಚಾರ ನಡೆಸಿದ್ದರು.
ಇನ್ನಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:02 pm, Sat, 27 May 23