ಬೆಂಗಳೂರು, ಸೆ.12: ಜಮೀನು ವ್ಯವಹಾರ ಪ್ರಕರಣದಲ್ಲಿ ಕಾನೂನಾತ್ಮಕವಾದ ತೊಡಕು ಯಾವುದೂ ಇಲ್ಲ. ಇದು ಬಹಳ ಹಳೇ ಕೇಸ್, ಕಾನೂನು ಪ್ರಕಾರ ವ್ಯವಹಾರ ನಡೆದಿದೆ ಎಂದು ಹೇಳುವ ಮೂಲಕ ತಮ್ಮ ವಿರುದ್ಧ ಕೇಳಿಬಂದ ಆರೋಪಕ್ಕೆ ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ.ಸುಧಾಕರ್ (D.Sudhakar) ಸ್ಪಷ್ಟನೆ ನೀಡಿದರು. ನಗರದಲ್ಲಿ ಮಾತನಾಡಿದ ಅವರು, ಭೂ ಕಬಳಿಕೆ ಮಾಡುವಂತಹ ಪ್ರಶ್ನೆಯೇ ಉದ್ಭವ ಆಗಿಲ್ಲ. ಕಾನೂನಾತ್ಮಕವಾಗಿಯೇ ಜಮೀನು ಖರೀದಿ ಮಾಡಿದ್ದೇವೆ ಎಂದರು.
ಅವರು ನನ್ನನ್ನು ಭೇಟಿ ಮಾಡುವುದು, ದೌರ್ಜನ್ಯದ ಕೇಸ್ ಹಾಕುವುದು, ವಿಡಿಯೋ ತುಣುಕುಗಳನ್ನು ಬಿಡುವುದು ಇದೆಲ್ಲವೂ ಶುದ್ಧ ಸುಳ್ಳು. ಸಚಿವನಾಗಿದ್ದೇನೆ ಅನ್ನೋ ಕಾರಣಕ್ಕೆ ತೇಜೋವಧೆ ಮಾಡಲು ಪಿತೂರಿ ನಡೆಸಲಾಗುತ್ತಿದೆ. ಆದರೆ ಇದರಲ್ಲಿ ಅವರಿಗೆ ಜಯ ಸಿಗುವುದಿಲ್ಲ ಎಂದು ಟಿವಿ9ಗೆ ಸುಧಾಕರ್ ಹೇಳಿದರು.
ತಪ್ಪು ಮಾಡಿದ್ದರೆ ಇಷ್ಟೊತ್ತಿಗೆ ನಾನು ರಾಜೀನಾಮೆ ಕೊಡುತ್ತಿದ್ದೆ. ತಪ್ಪು ಮಾಡದಿದ್ದಾಗ ರಾಜೀನಾಮೆ ಏಕೆ ಕೊಡಬೇಕು ಎಂದು ಪ್ರಶ್ನಿಸಿದ ಸುಧಾಕರ್, 60 ವರ್ಷದಲ್ಲಿ ಎಲ್ಲಿಯೂ ಕೂಡ ನನ್ನ ಮೇಲೆ ಆಪಾದನೆಗಳು ಇಲ್ಲ. ನಾನು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವಿರಗೆ ಏನು ದಾಖಲೆ ಕೊಡಬೇಕೋ ಕೊಟ್ಟಿದ್ದೇನೆ. ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ನ್ಯಾಯ ಕೊಡಿಸಿ ಎಂದು ಕೇಳಿದ್ದೇನೆ ಎಂದರು.
ಇದನ್ನೂ ಓದಿ: ಡಿ ಸುಧಾಕರ್ ವಿರುದ್ಧ ದಾಖಲಾಗಿರುವುದು ಸುಳ್ಳು ಮೊಕದ್ದಮೆ; ಡಿಸಿಎಂ ಡಿಕೆ ಶಿವಕುಮಾರ್
ಬ್ರಾಹ್ಮಣರ ಬಗ್ಗೆ ಸಚಿವ ಡಿ.ಸುಧಾಕರ್ ಅವಹೇಳನಕಾರಿಯಾಗಿ ಮಾತನಾಡಿದ ವಿಡಿಯೋ ವೈರಲ್ ಆಗಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸುಧಾಕರ್, ನನಗೆ ಎಲ್ಲಾ ಜಾತಿಗಳ ಬಗ್ಗೆ ಅಪಾರ ಗೌರವವಿದೆ. ಬ್ರಾಹ್ಮಣ ಸಂಸ್ಕೃತಿ, ಜೈನ ಸಂಸ್ಕೃತಿ ಎರಡು ಒಂದೇ. ಬ್ರಾಹ್ಮಣರು ಜನಿವಾರ ಹಾಕುತ್ತಾರೆ, ಜೈನರೂ ಜನಿವಾರ ಹಾಕುತ್ತಾರೆ. ಬ್ರಾಹ್ಮಣರ ಆಚಾರ ವಿಚಾರಗಳಂತೆಯೇ ನಮ್ಮ ವಿಚಾರಗಳು ಇವೆ ಎಂದರು.
ನಾನು ಯಾವುದೇ ಜಾತಿಯನ್ನು ನಿಂದನೆ ಮಾಡುವಂಥ ಪ್ರಶ್ನೆ ಇಲ್ಲ. ನನ್ನ ರಾಜಕೀಯ ಜೀವನದಲ್ಲಿ ಎಲ್ಲೂ ಜಾತಿ ನಿಂದನೆ ಮಾಡಿಲ್ಲ. ಸಣ್ಣಪುಟ್ಟ ಸಮುದಾಯವನ್ನೂ ಕೂಡ ಪ್ರೀತಿಯಿಂದ ಕಂಡಿದ್ದೇನೆ ಎಂದು ಸುಧಾಕರ್ ಹೇಳಿದ್ದಾರೆ.
ರೌಡಿಗಳ ಗುಂಪು ಬಂದು ನಮ್ಮ ಶೆಡ್ ಹೊಡೆದು ಹಾಕಿದ್ದಾರೆ. ಹಣ ಕೊಟರೆ ಜಾಗ ಕ್ಲಿಯರ್ ಮಾಡಿಸುತ್ತೇವೆ ಎಂದು ರೌಡಿಗಳು ಹೇಳಿದ್ದರು. ರೌಡಿಗಳ ಜೊತೆ ಬಂದಿದ್ದ ಮಹಿಳೆಯರು ನಮ್ಮ ಮೇಲೆ ಹಲ್ಲೆ ಮಾಡಿದ್ದರು. ಘಟನೆ ನಡೆದ ದಿನ ಸಚಿವ ಡಿ.ಸುಧಾಕರ್ ಅಲ್ಲಿಗೆ ಬಂದಿರಲಿಲ್ಲ, ಸಚಿವ ಡಿ.ಸುಧಾಕರ್ ಹೇಳಿದ್ದಾರೆ ಎಂದು ರೌಡಿಗಳು ಹಲ್ಲೆ ಮಾಡಿದ್ದಾಗಿ ಸಚಿವ ಡಿ.ಸುಧಾಕರ್ ವಿರುದ್ಧ ಪ್ರಕರಣ ದಾಖಲಿಸಿದ ದೂರುದಾರ ಕುಟುಂಬದ ರತ್ನಾ ಹೇಳಿದ್ದಾರೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ