ಕಲಬುರಗಿ, ನ.29: ಸಚಿವ ಕೃಷ್ಣ ಭೈರೇ ಗೌಡ(Krishna Byre Gowda) ವಿರುದ್ದ ಆಳಂದ ಶಾಸಕ ಬಿ.ಆರ್ ಪಾಟೀಲ್(BR Patil) ಮತ್ತೆ ಕಿಡಿಕಾರಿದ್ದಾರೆ. ನಾನು ಯಾವುದೇ ರೀತಿ ಅವಮಾನ ಮಾಡುವ ಹೇಳಿಕೆ ನೀಡಿಲ್ಲ ಎನ್ನುವ ಭೈರೇ ಗೌಡ ಹೇಳಿಕೆಗೆ ‘ಇದು ವಾದ ಮಾಡಿದಂತಾಗುತ್ತೆ. ನಾನೇ ಆವತ್ತು ಸದನದಲ್ಲಿದ್ದೆ, ಗೂಬೆ ಹೊರಿಸುವ ಕೆಲಸ ಮಾಡುತ್ತೀರಾ ಎಂದು ಕೇಳಿದ್ದೆ. ಹೀಗಾಗೇ ಆರೋಪ ಹೊತ್ತುಕೊಂಡು ಸದನಕ್ಕೆ ಹಾಜರಾಗಲ್ಲ ಎಂದಿದ್ದೆ. ‘ನಾನೇನು ನ್ಯಾಯಾಂಗ ತನಿಖೆ, ಅಯೋಗ ರಚನೆ ಮಾಡಿ ಅಂದಿಲ್ಲ. ಬದಲಾಗಿ ರಾಜಕೀಯವಾಗಿ ಚರ್ಚೆ ಆಗಲಿ, ನಾನು ಕೆಲ ದಾಖಲೆಗಳನ್ನು ನೀಡುತ್ತೇನೆಂದು ಹೇಳಿದ್ದೆ.
ಸಿಎಂ ಸಿದ್ದರಾಮಯ್ಯ ಎದುರು ಕೆಲ ದಾಖಲೆ ನೀಡುತ್ತೇನೆ. ನಾನು ಸಮಾಜವಾದಿ ಹಿನ್ನಲೆಯಿಂದ ಬಂದಿದ್ದೆನೆ. ನನ್ನಲ್ಲಿ ಯಾವುದೇ ಅಂತರಂಗ, ಬಹಿರಂಗವಿಲ್ಲ. ಪ್ರಿಯಾಂಕ್ ಖರ್ಗೆ ಸಚಿವರಾದ ಮೇಲೆ ನನ್ನ ಕ್ಷೇತ್ರಕ್ಕೆ ಹತ್ತು ಯಾತ್ರಿ ನಿವಾಸ ನೀಡಿದ್ದರು. ಅದರಲ್ಲಿ ಕೇವಲ ಒಂದು ಪೂರ್ಣಗೊಂಡಿದೆ. ಆ ಬಗ್ಗೆ ಪ್ರಗತಿ ಪರೀಶಿಲನಾ ಸಭೆ ಕೂಡ ನಡೆದಿಲ್ಲ. ಮತ್ತು ಕೆಲವು ಕಡೆ ಕಳೆಪೆ ಕೆಲಸ ಆಗಿದೆ. ಇದನ್ನು ಸ್ವತಃ ಭೈರೇ ಗೌಡರೆ ಒಪ್ಪಿಕೊಂಡು, ಭೂಸೇನಾ ನಿಗಮದಲ್ಲಿ ಕೆಲ ನ್ಯೂನ್ಯತೆ ಇದೆ ಎಂದಿದ್ದರು.
ಒಬ್ಬ ಮಂತ್ರಿಯಾಗಿ ತಪ್ಪು ಒಪ್ಪಿದ ಮೇಲೆ ಅದನ್ನು ಸುಧಾರಣೆ ಮಾಡಬೇಕಿತ್ತು. ಇವಾಗ ನನ್ನ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ ಅಂದರೆ ಹೇಗೆ? ಸದನದಲ್ಲಿ ಒಂದು ಪರಂಪರೆಯಿದೆ. ಯಾವ ಸಚಿವರು ಗೈರಾಗಿರುತ್ತಾರೋ, ಇದ್ದವರು ಉತ್ತರ ನೀಡುತ್ತಾರೆ ಎಂದು ಅಳಂದ ಪಟ್ಟಣದಲ್ಲಿ ಬಿ.ಆರ್ ಪಾಟೀಲ್ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ:BR Patil: ಮೂರನೇ ವ್ಯಕ್ತಿ ಮೂಲಕ ಹಣಕ್ಕೆ ಬೇಡಿಕೆ ಇಟ್ಟ ಸಚಿವರು; ಆಳಂದ ಕಾಂಗ್ರೆಸ್ ಶಾಸಕ ಬಿಆರ್ ಪಾಟೀಲ್ ಗಂಭೀರ ಆರೋಪ
ಬಿಆರ್ ಪಾಟೀಲ್ ಅವರು ನಿನ್ನೆ(ನ.28) ಕಳೆದ ವಿಧಾನಸಭೆಯ ವಿಷಯ ಪ್ರಸ್ತಾಪಿಸಿ ಪತ್ರ ಬರೆದಿದ್ದು, ‘2013ರಲ್ಲಿ ಕಾಮಗಾರಿಗಳನ್ನು ನಾನು ಕೆಆರ್‌ಐಡಿಎಲ್ ಸಂಸ್ಥೆಗೆ ನೀಡಿದ್ದೆ. ಕಾರಣಾಂತರಗಳಿಂದ 2013ರಲ್ಲಿ ನೀಡಿದ್ದ ಕಾಮಗಾರಿಗಳು ಪೂರ್ಣವಾಗಿಲ್ಲ. ಕಳೆದ ಅಧಿವೇಶನದಲ್ಲಿ ಪ್ರಸ್ತಾಪಿಸಿದಾಗ KRIDL ನಿಂದ ನಾನು ಲಂಚ ಪಡೆದು ಭೂಸೇನೆಗೆ ಕಾಮಗಾರಿ ಕೊಟ್ಟಿದ್ದೇನೆಂದು ನನ್ನನ್ನೇ ಅನುಮಾನದಿಂದ ನೋಡಿದರು. ಪ್ರಿಯಾಂಕ್ ಖರ್ಗೆ ಅನುಪಸ್ಥಿತಿಯಲ್ಲಿ ನನ್ನ ವಿರುದ್ಧ ಸಚಿವ ಕೃಷ್ಣ ಭೈರೇಗೌಡ ಅವರು ಅನುಮಾನ ಬರುವಂತೆ ಮಾತನಾಡಿದರು. ಅದಾದ ಮೇಲೂ ಕೂಡ ಪ್ರಿಯಾಂಕ ಖರ್ಗೆ ಕಾಮಗಾರಿಗಳ ಕುರಿತು ಸಭೆಯನ್ನು ನಡೆಸಲಿಲ್ಲ. ಇಂತಹ ಆರೋಪಗಳನ್ನು ಹೊತ್ತುಕೊಂಡು ನಾನು ಅಧಿವೇಶನಕ್ಕೆ ಹಾಜರಾಗುವುದು ಸರಿಯಲ್ಲ. ಪಂಚ ರಾಜ್ಯ ಚುನಾವಣೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಾರದೆಂದು ಈಗ ಪತ್ರ ಬರೆಯುತ್ತಿದ್ದೇನೆ. ತಕ್ಷಣವೇ ತನಿಖಾ ಆಯೋಗ ರಚನೆ ಮಾಡಿ ಎಂದು ಸಿಎಂಗೆ ಪತ್ರದ ಮೂಲಕ ಬಿ ಆರ್ ಪಾಟೀಲ್ ಆಗ್ರಹಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:40 pm, Wed, 29 November 23