ಬೆಂಗಳೂರು, ಡಿ.8: ವಿಪಕ್ಷ ನಾಯಕ ಆರ್.ಅಶೋಕ್ (R Ashok) ಮತ್ತು ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ನಡುವೆ ಸಮನ್ವಯವಾಗಿಲ್ಲ. ಇಬ್ಬರ ನಡುವಿನ ಸಮನ್ವಯ ಕೊರತೆ ಬಗ್ಗೆ ಪ್ರಶ್ನಿಸಿದ್ದು ನಿಜ ಎಂದು ಯಲಹಂಕ ಶಾಸಕ ಎಸ್ಆರ್ ವಿಶ್ವನಾಥ್ (SR Vishwanath) ಹೇಳಿದ್ದಾರೆ. ಈ ಬಗ್ಗೆ ಟಿವಿ9 ಜೊತೆ ಮಾತನಾಡಿದ ಅವರು, ಸದನ ನಡೆಯುತ್ತಿರುವ ಸಂದರ್ಭದಲ್ಲೇ ಕಾರ್ಯಕರ್ತನ ಮೇಲೆ ಹಲ್ಲೆ ನಡೆದಿದೆ. ಹಲ್ಲೆಗೊಳಗಾದ ಕಾರ್ಯಕರ್ತನ ರಕ್ಷಣೆ ಹೊಣೆ ನಮ್ಮದು ಎಂದರು.
ನಮ್ಮ ಕಾರ್ಯಕರ್ತರ ರಕ್ಷಣೆಗೆ ನಾವು ಪ್ರಯತ್ನಿಸುತ್ತಿದ್ದೇವೆ. ಸರ್ಕಾರದ ಉತ್ತರಕ್ಕೆ ತೃಪ್ತರಾಗದೆ ಸಭಾತ್ಯಾಗ ಮಾಡಿದ್ದೆವು. ಈ ವೇಳೆ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರಿಗೆ ಮಾಹಿತಿಯಿರಲಿಲ್ಲ. ಏಕಾಏಕಿ ಸದನದಿಂದ ಹೊರಬಂದಿದ್ದರಿಂದ ಗೊಂದಲವಾಯಿತು. ನಾವು ಸದನದ ಬಾವಿಗಿಳಿದು ಧರಣಿ ಮಾಡುತ್ತೇವೆ ಎಂದುಕೊಂಡಿದ್ದೆ. ಆದರೆ, ಆರ್.ಅಶೋಕ್ ನಮ್ಮನ್ನು ಸದನದಿಂದ ಹೊರಗೆ ಕರೆತಂದರು. ಒಂದಿಷ್ಟು ಶಾಸಕರು ಸದನದಲ್ಲೇ ಉಳಿದಿದ್ದರಿಂದ ಗೊಂದಲವಾಯಿತು ಎಂದರು.
ಇದನ್ನೂ ಓದಿ: ಬೆಳಗಾವಿ ಅಧಿವೇಶನ; ಅಶೋಕ ಮತ್ತು ವಿಶ್ವನಾಥ್ ಹಿರಿಯ ನಾಯಕರು, ಅವರ ನಡುವೆ ಭಿನ್ನಾಭಿಪ್ರಾಯವಿಲ್ಲ: ಎಸ್ ಟಿ ಸೋಮಶೇಖರ್, ಶಾಸಕ
ಎಲ್ಲಾ ಶಾಸಕರ ಜೊತೆ ಸಮನ್ವಯ ಸಾಧಿಸಿಲ್ಲವೆಂದು ಸುವರ್ಣಸೌಧದಲ್ಲಿ ವಿಪಕ್ಷ ನಾಯಕ ಅಶೋಕ್ ವಿರುದ್ಧ ರೇಗಿದ್ದು ನಿಜ. ತೀವ್ರ ಬೇಸರವಾಗಿದ್ದರಿಂದ ನಿನ್ನೆಯೇ ನಾನು ಬೆಂಗಳೂರಿಗೆ ಬಂದುಬಿಟ್ಟೆ. ಸೋಮವಾರ ಸದನಕ್ಕೆ ಹಾಜರಾಗುತ್ತೇನೆ. ಬುಧವಾರ ರಾಜ್ಯ ಬಿಜೆಪಿ ಅಧ್ಯಕ್ಷರು ಔತಣಕೂಟ ಆಯೋಜಿಸಿದ್ದಾರೆ ಎಂದರು.
ವಿಧಾನಸಭೆಯಲ್ಲಿ ಸಭಾತ್ಯಾಗದ ವಿಚಾರವಾಗಿ ಸಿಟ್ಟಾಗಿರುವ ವಿಶ್ವನಾಥ್ ಅವರು ಬುಧವಾರ (ಡಿಸೆಂಬರ್ 13) ಸಂಜೆ 6 ಗಂಟೆಗೆ ಬೆಳಗಾವಿಯ ಖಾಸಗಿ ಹೊಟೇಲ್ನಲ್ಲಿ ಬೆಂಗಳೂರಿನ ಬಿಜೆಪಿ ಶಾಸಕರ ಸಭೆ ಕರೆದಿದ್ದಾರೆ. ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರಿಗೂ ಆಹ್ವಾನ ನೀಡಲಾಗಿದೆ. ಆರ್.ಆಶೋಕ್ಗೂ ಆಹ್ವಾನ ನೀಡುವುದಾಗಿ ಹೇಳುತ್ತಿದ್ದಾರೆ.
ಬೆಂಗಳೂರು ನಗರದ ಅಭಿವೃದ್ಧಿ, ಬಿಜೆಪಿ ಕಾರ್ಯಕರ್ತರ ಸಮಸ್ಯೆ, ಸಿಎಂ ಭೇಟಿ ಬಗ್ಗೆ ಚರ್ಚಿಸುವ ಅಜೆಂಡಾ ಇಟ್ಟುಕೊಂಡು ಸಭೆ ಕರೆಯಲಾಗಿದೆ. ವಿಪಕ್ಷ ನಾಯಕರು ಇಡೀ ರಾಜ್ಯದ ಬಗ್ಗೆ ಗಮನ ಹರಿಸಬೇಕಿರುವ ಹಿನ್ನೆಲೆ ಬೆಂಗಳೂರು ಬಗ್ಗೆ ನಾವೇ ಚರ್ಚೆ ಮಾಡಬೇಕು ಎಂದು ಹೇಳಿಕೊಂಡು ಸಭೆ ನಡೆಸಲಾಗುತ್ತಿದೆ. ಅಂದು ರಾತ್ರಿ ವೇಳೆ ಬಿವೈ ವಿಜಯೇಂದ್ರ ಅವರು ಬಿಜೆಪಿ ಶಾಸಕರಿಗೆ ಔತಣಕೂಟ ಕೂಡ ಏರ್ಪಡಿಸಿದ್ದಾರೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:10 pm, Fri, 8 December 23