ಬೆಳಗಾವಿ ಅಧಿವೇಶನ; ಅಶೋಕ ಮತ್ತು ವಿಶ್ವನಾಥ್ ಹಿರಿಯ ನಾಯಕರು, ಅವರ ನಡುವೆ ಭಿನ್ನಾಭಿಪ್ರಾಯವಿಲ್ಲ: ಎಸ್ ಟಿ ಸೋಮಶೇಖರ್, ಶಾಸಕ

ಬೆಳಗಾವಿ ಅಧಿವೇಶನ; ಅಶೋಕ ಮತ್ತು ವಿಶ್ವನಾಥ್ ಹಿರಿಯ ನಾಯಕರು, ಅವರ ನಡುವೆ ಭಿನ್ನಾಭಿಪ್ರಾಯವಿಲ್ಲ: ಎಸ್ ಟಿ ಸೋಮಶೇಖರ್, ಶಾಸಕ

ಅರುಣ್​ ಕುಮಾರ್​ ಬೆಳ್ಳಿ
|

Updated on: Dec 08, 2023 | 12:34 PM

Karnataka Assembly Session: ಸದನದಲ್ಲಿ ಬಿಜೆಪಿ ಶಾಸಕರ ಮಾತುಗಳನ್ನು ಕೇಳುತ್ತಿದ್ದರೆ ಅವರ ನಡುವೆ ಸಾಮರಸ್ಯ ಮತ್ತು ಸಂವಹನ ಕೊರತೆಯಿರೋದು ಕನ್ನಡಿಗರ ಗಮನಕ್ಕೆ ಬರುತ್ತಿದೆ. ವಿರೋಧ ಪಕ್ಷದ ನಾಯಕ ಮತ್ತು ಬಿಜೆಪಿ ರಾಜ್ಯಾಧ್ಯಕ್ಷನ ನೇಮಕ ನಡೆದ ಬಳಿಕ ಅವರ ನಡುವೆ ಅಸಮಾಧಾನ ಭುಗಿಲೇಳುತ್ತಿದೆ. ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಬಸನಗೌಡ ಯತ್ನಾಳ್ ಅವರಂತೆ ಪ್ರಾಯಶಃ ಎಸ್ ಎಸ್ ವಿಶ್ವನಾಥ್ ಕೂಡ ಆಕಾಂಕ್ಷಿಯಾಗಿದ್ದರು ಅನ್ನೋದು ಸದನದಲ್ಲಿ ಯಲಹಂಕ ಶಾಸಕನ ನಿನ್ನೆಯ ವರ್ತನೆಯಿಂದ ಗೊತ್ತಾಗುತ್ತದೆ.

ಬೆಳಗಾವಿ: ಬಿಜೆಪಿ ಶಾಸಕರಲ್ಲಿ ಒಮ್ಮತ ಇಲ್ಲ ಅನ್ನೋದು ವಿಧಾನಸಭಾ ಅಧಿವೇಶನದಲ್ಲಿ ನಿನ್ನೆ ಕಾರ್ಯಕಲಾಪ ನಡೆಯುತ್ತಿದ್ದಾಗ ಸ್ಪಷ್ಟವಾಗಿದೆ. ವಿರೋಧ ಪಕ್ಷದ ನಾಯಕ ಆರ್ ಅಶೋಕ (R Ashoka) ಮಾತಾಡುತ್ತಿರುವಾಗಲೇ ಹಿರಿಯ ಶಾಸಕ ಎಸ್ ಆರ್ ವಿಶ್ವನಾಥ್ (SR Vishwanath) ಸಭಾತ್ಯಾಗ ಮಾಡಿದ್ದು ಚರ್ಚೆಗೆ ಗ್ರಾಸವಾಗಿದೆ. ಬಿಜೆಪಿ ಶಾಸಕರ ನಡುವಿನ ಐಕ್ಯತೆ ಮತ್ತು ವಿಶ್ವನಾಥ್ ವರ್ತನೆ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಸದನದ ಹೊರಗಡೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಪಕ್ಷದ ಶಾಸಕ ಎಸ್ ಟಿ ಸೋಮಶೇಖರ್ (ST Somashekhar), ಅವೆಲ್ಲ ಸಣ್ಣಪುಟ್ಟ ವಿಚಾರಗಳು, ಅಶೋಕ್ ಪಕ್ಷದ ಅತ್ಯಂತ ಹಿರಿಯ ನಾಯಕ ಮತ್ತು ಎಲ್ಲರನ್ನು ಜೊತೆಗೂಡಿಸಿಕೊಂಡು ಹೋಗುತ್ತಿದ್ದಾರೆ, ಹಾಗೆಯೇ, ವಿಶ್ವನಾಥ್ ನಾಲ್ಕನೇ ಬಾರಿ ಶಾಸಕನಾಗಿ ಆಯ್ಕೆಯಾಗಿದ್ದು ಅವರಿಬ್ಬರ ನಡುವೆ ಅಸಮಾಧಾನವಿಲ್ಲ ಎಂದು ಹೇಳಿದರು. ವಿರೋಧ ಪಕ್ಷದ ನಾಯಕ ಮಾತಾಡುತ್ತಿರುವಾಗಲೇ ಸಭಾತ್ಯಾಗ ಮಾಡೋದು ಸರಿಯಲ್ಲ, ಅವರ ಮಾತು ಮುಗಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಉತ್ತರ ಕೇಳಿ ಸಭಾತ್ಯಾಗ ಮಾಡಬಹುದಿತ್ತು, ಬೆಳಗಾವಿಯಲ್ಲಿ ಅಧಿವೇಶನ ನಡೆಸಿತ್ತಿರೋದು ಸಭ್ಯಾತ್ಯಾಗ ಮಾಡಲು ಅಲ್ಲ ಎಂದು ಸೋಮಶೇಖರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ