ಬೆಂಗಳೂರು: ಕಾಂಗ್ರೆಸ್ನವರದ್ದು ಚೈನಾ ಬಜಾರ್ ಗ್ಯಾರಂಟಿ ಎಂದು ಎಂಎಲ್ಸಿ ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯವಾಡಿದ್ದಾರೆ. ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಹಾಗೂ ಗ್ಯಾರಂಟಿಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸರ್ಕಾರ ರಚನೆಗೂ ಮುನ್ನವೇ ಗ್ಯಾರಂಟಿ ಬಗ್ಗೆ ಅಪಸ್ವರ ಶುರುವಾಗಿದೆ. ಹಲವೆಡೆ ಜನರು 200 ಯುನಿಟ್ ವಿದ್ಯುತ್ ಬಿಲ್ ಕಟ್ಟಲ್ಲ ಅಂತಿದ್ದಾರೆ ಎಂದು ಹೇಳಿದ್ದಾರೆ. ಸರ್ಕಾರ ರಚನೆಗೂ ಮುನ್ನವೇ ಗ್ಯಾರಂಟಿಗಳ ಬಗ್ಗೆ ಬಿಜೆಪಿ ನಾಯಕರು ಟೀಕಾ ಪ್ರಹಾರ ಆರಂಭಿಸಿದ್ದಾರೆ. ಮಾಜಿ ಸಚಿವ ಅಶ್ವತ್ಥನಾರಾಯಣ ಕೂಡ ಗ್ಯಾರಂಟಿಗಳಿಗೆ ಈಗ ಷರತ್ತು ವಿಧಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.
ತೆರಿಗೆ ಕಟ್ಟುವವರಿಗೆ ಗ್ಯಾರಂಟಿ ಅನ್ವಯ ಆಗಲ್ಲ ಅಂತ ಈಗ ಹೇಳ್ತಿದ್ದಾರೆ. ಡಾ.ಜಿ. ಪರಮೇಶ್ವರ್ ಹಾಗೂ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ. ಅವರ ಮಾಲ್ ಹಾಗೆಯೇ, ಅವುಗಳು ಯಾವುದೇ ಉಪಯೋಗಕ್ಕೆ ಬರಲ್ಲ. ಕಾಂಗ್ರೆಸ್ನದ್ದು ಸುಳ್ಳು ಭರವಸೆ ಅಂತ ಸ್ಪಷ್ಟವಾಗಿದೆ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
ಸರ್ಕಾರಿ ಬಸ್‌ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೇರಿದಂತೆ ಐದು ಗ್ಯಾರಂಟಿಗಳನ್ನು ಕಾಂಗ್ರೆಸ್ ಘೋಷಿಸಿತ್ತು. ಇದಕ್ಕೂ ಮುನ್ನವೇ, ಗೃಹಲಕ್ಷ್ಮೀ ಯೋಜನೆ ಮೂಲಕ ಬಡ ಕುಟುಂಬಗಳ ಮಹಿಳೆಯರಿಗೆ ಪ್ರತಿ ತಿಂಗಳು 2,000 ರೂ, ಬಡವರಿಗೆ ತಿಂಗಳಿಗೆ 200 ಯೂನಿಟ್ ಉಚಿತ ವಿದ್ಯುತ್, 10 ಕೆಜಿ ಅಕ್ಕಿ ಹಾಗೂ ನಿರುದ್ಯೋಗಿ ಯುವಕರಿಗೆ ಪ್ರತಿ ತಿಂಗಳು 3,000 ರೂ. ನೀಡುವುದಾಗಿ ಕಾಂಗ್ರೆಸ್ ಘೋಷಿಸಿತ್ತು.
ಇದನ್ನೂ ಓದಿ: ಕಾಂಗ್ರೆಸ್ ಗ್ಯಾರಂಟಿಗಳಿಗೆ ಷರತ್ತುಗಳು ಅನ್ವಯ! ಅಶ್ವತ್ಥನಾರಾಯಣ ಹೇಳಿದ್ದೇನು?
ಕಾಂಗ್ರೆಸ್ ಬಹುಮತ ಪಡೆದ ಹಿನ್ನೆಲೆಯಲ್ಲಿ ಚಿತ್ರದುರ್ಗದ ಹಳ್ಳಿಯಲ್ಲಿ ಜನರು ವಿದ್ಯುತ್ ಬಿಲ್ಲು ಕಟ್ಟಲು ನಿರಾಕರಿಸಿದ ಬಗ್ಗೆ ಸೋಮವಾರ ವರದಿಯಾಗಿತ್ತು.
ರಾಜ್ಯದ ಜನರಿಗೆ ಗ್ಯಾರಂಟಿ ನೀಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಈಗ ಮತದಾರರ ಭಾವನೆಗೆ ಧಕ್ಕೆ ತರುವ ಕೆಲಸ ಮಾಡಬಾರದು ಎಂದು ಬೆಂಗಳೂರಿನಲ್ಲಿ ಎಂಎಲ್ಸಿ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಉಚಿತ ವಿದ್ಯುತ್ ನೀಡುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ಕರೆಂಟ್ ಬಿಲ್ ಕಟ್ಟುವುದೇ ಬೇಡ ಎಂದು ಡಿಕೆಶಿ ಹೇಳಿದ್ದರು. ಈಗ ಅದೆಲ್ಲಾ ಗ್ಯಾರಂಟಿಗಳಿಗೆ ಷರತ್ತು ಹಾಕಲು ಹೊರಟಿದ್ದಾರೆ. ಇದರಿಂದ ಕಟ್ಟಕಡೆಯ ವ್ಯಕ್ತಿಗೆ ಮೋಸ ಮಾಡಿದಂತಾಗಲಿದೆ. ಯಾವುದೇ ಒಬ್ಬ ವ್ಯಕ್ತಿಗೆ ಅನ್ಯಾಯ ಆಗದಂತೆ ಎಚ್ಚರ ವಹಿಸಲಿ ಎಂದು ಅವರು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:09 pm, Tue, 16 May 23