ಹುಬ್ಬಳ್ಳಿ: ಅಥಣಿ ಕ್ಷೇತ್ರದ ಶಾಸಕ ಲಕ್ಷ್ಮಣ ಸವದಿ (Lakshman Savadi) ಗೆ ಮಂತ್ರಿಗಿರಿ ನೀಡಬೇಕು ಎಂದು ಮೂರು ಸಾವಿರ ಮಠ (Moorusavir Math) ದ ಗುರು ಸಿದ್ದರಾಜಯೋಗಿಂದ್ರ ಸ್ವಾಮೀಜಿ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಂಬರುವ ದಿನಗಳಲ್ಲಿ ಲಕ್ಷ್ಮಣ ಸವದಿಗೆ ಸಚಿವ ಸ್ಥಾನ ನೀಡಬೇಕು ಎಂದು ಹೇಳಿದ್ದಾರೆ. ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿ ಒಳ್ಳೆಯ ಅನುಭವಿ ರಾಜಕಾರಣಿಗಳು. ಸಜ್ಜನ, ಸಾತ್ವಿಕ ರಾಜಕಾರಣಿಗಳು, ಸಚಿವ ಸ್ಥಾನ ಕೊಡಬೇಕಿತ್ತು ಎಂದಿದ್ದಾರೆ.
ಸವದಿಗೆ ಮಂತ್ರಿ ಸ್ಥಾನ ಕೊಟ್ಟರೆ ಕಾಂಗ್ರೆಸ್ ಪಕ್ಷಕ್ಕೆ ಒಳ್ಳೆಯದು. ಕಾಂಗ್ರೆಸ್ ಜನರಿಗೆ ನೀಡಿದ ಗ್ಯಾರಂಟಿ ಜಾರಿ ಮಾಡೇ ಮಾಡುತ್ತೆ. ಅದರದೇ ಆದ ನೀತಿ ಇರುತ್ತೆ, ಯೋಜನೆ ಜಾರಿಗೆ ತರಬಹುದು. ಲಿಂಗಾಯತರನ್ನು ಕಡೆಗಣಿಸಿದ ಹಾಗೆ ಕಾಣಲ್ಲ ಎಂದರು.
ಲಕ್ಷ್ಮಣ ಸವದಿಗೆ ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆ ಸಿಎಂ ಸಿದ್ಧರಾಮಯ್ಯ ವಿರುದ್ಧ ಪೋಸ್ಟ್ ಹಾಕಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು, ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸವದಿ ರಾಜ್ಯ ನಾಯಕರು, ಅವರು ಪಕ್ಷಕ್ಕೆ ಬಂದಿರುವುದು ದೊಡ್ಡ ಶಕ್ತಿ ಎಂದು ಹೇಳಿದ್ರಿ. ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗೆಲ್ಲಲು ಲಕ್ಷ್ಮಣ್ ಸವದಿ ಕಾರಣ. ಆದರೂ ನಿಮಗೆ ಲಕ್ಷ್ಮಣ ಸವದಿ ನೆನಪಾಗಿಲ್ವಾ ಎಂದು ಆಕ್ರೋಶ ಹೊರಹಾಕಿದ್ದಾರೆ.
ನಮ್ಮ ಸಾಹುಕಾರ್ ನಾಯಕತ್ವಕ್ಕೆ ಕೆಲವು ನಾಯಕರು ಹೆದರಿದ್ದಾರೆ. ಸವದಿ ಮಂತ್ರಿ ಆಗದಂತೆ ಕುತಂತ್ರ ನಡೆಸಿದ್ದಾರೇನೋ ಎಂಬ ಭಾವ ಕಾಡುತ್ತಿದೆ ಅಂತ ಪೋಸ್ಟ್ ಹಾಕುವ ಮೂಲಕ ಸಿಎಂ ಸಿದ್ದರಾಮಯ್ಯ ವಿರುದ್ಧವೇ ಸವದಿ ಫ್ಯಾನ್ಸ್ ಕೆಂಡಾಮಂಡಲರಾಗಿದ್ದಾರೆ.
ಕಲಘಟಗಿ ಶಾಸಕ ಸಂತೋಷ ಲಾಡ್‌ಗೆ ಸಚಿವ ಸ್ಥಾನ ಸಿಕ್ಕ ಹಿನ್ನಲೆ ನಗರದಲ್ಲಿ ಸಂತೋಷ ಲಾಡ್ ಅಭಿಮಾನಿಗಳ ಬಳಗದಿಂದ ಜಯಘೋಷ ಕೂಗಿ ಸಂಭ್ರಮಿಸಿದ್ದಾರೆ. ಪಟಾಕಿ ಸಿಡಿಸಿ, ಸಹಿ ಹಂಚಿ ಹುಬ್ಬಳ್ಳಿಯ ರಾಣಿ ಚೆನ್ನಮ್ಮ ವೃತ್ತದಲ್ಲಿ ವಿಜಯೋತ್ಸವ ಆಚರಿಸಿದ್ದಾರೆ.
ಇದನ್ನೂ ಓದಿ: Siddaramaiah Cabinet:ಸಿದ್ದರಾಮಯ್ಯ ಸಂಪುಟ ಫುಲ್ ಫಿಲ್: ಅನುಭವಿ- ಉತ್ಸಾಹಿ ತಂಡ ಹೀಗಿದೆ
ಮತ್ತೊಂದು ಕಡೆ ಲಕ್ಷ್ಮೀ ಹೆಬ್ಬಾಳಕರ್ ಅಭಿಮಾನಿಗಳು ಸಹ ಸಂಭ್ರಮಿಸಿದ್ದಾರೆ. ಹುಬ್ಬಳ್ಳಿಯ ವಿನೋಭಾ ನಗರದಲ್ಲಿ ಬಣ್ಣ ಎರಚಿ ಪಟಾಕಿ ಸಿಡಿಸಿ ಅಭಿಮಾನಿಗಳು ವಿಜಯೋತ್ಸವ ಆಚರಿಸಿಕೊಂಡಿದ್ದಾರೆ.
ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.