ರಾಜಕೀಯ ನಿವೃತ್ತಿ ಘೋಷಿಸಿದ ತನ್ವೀರ್ ಸೇಠ್, ಕಾಂಗ್ರೆಸ್‌ಗೆ ಬಿಗ್ ಶಾಕ್; ಆತ್ಮಹತ್ಯೆಗೆ ಯತ್ನಿಸಿದ ಬೆಂಬಲಿಗ

| Updated By: Digi Tech Desk

Updated on: Feb 28, 2023 | 2:06 PM

ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್​ ಶಾಸಕ‌ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಇದರಿಂದ ಕಾಂಗ್ರೆಸ್​ಗೆ ಮರ್ಮಾಘಾತವಾಗಿದ್ದು, ಓರ್ವ ಬೆಂಬಲಿಗ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ರಾಜಕೀಯ ನಿವೃತ್ತಿ ಘೋಷಿಸಿದ ತನ್ವೀರ್ ಸೇಠ್, ಕಾಂಗ್ರೆಸ್‌ಗೆ ಬಿಗ್ ಶಾಕ್; ಆತ್ಮಹತ್ಯೆಗೆ ಯತ್ನಿಸಿದ ಬೆಂಬಲಿಗ
ತನ್ವೀರ್ ಸೇಠ್
Follow us on

ಮೈಸೂರು: ಇನ್ನೇನು ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಾಗಲೇ ಕಾಂಗ್ರೆಸ್(Congress)​ ಹಾಲಿ ಶಾಸಕ  (tanveer sait) ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಇದರಿಂದ ಚುನಾವಣೆ ಹೊಸ್ತಿಲಲ್ಲಿ‌ ಕಾಂಗ್ರೆಸ್‌ಗೆ ಆರಂಭಿಕ ಆಘಾತವಾದಂತಾಗಿದೆ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​, ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರಿಗೆ ಪತ್ರ ಬರೆದಿದ್ದು, ಬರುವ ವಿಧಾನಸಭೆ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದರಿಂದ ಬೆಂಬಲಿಗನೋರ್ವ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.

ಮೈಸೂರಿನ ನರಸಿಂಹರಾಜ ಕ್ಷೇತ್ರದ ಶಾಸಕರಾಗಿರುವ ತನ್ವೀರ್ ಸೇಠ್, ಅನಾರೋಗ್ಯದ ಕಾರಣ ನೀಡಿ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದಾರೆ. ನನಗೆ ಅನಾರೋಗ್ಯ ಇರುವುದರಿಂದ ಮುಂದಿನ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಪತ್ರದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಕಳೆದ ವರ್ಷ ಡಿಸೆಂಬರ್​ನಲ್ಲೇ ರಾಜಕೀಯ ನಿವೃತ್ತಿ ಬಗ್ಗೆ ತನ್ವೀರ್ ಸೇಠ್ ಪತ್ರ ಬರೆದಿದ್ದು, ಈಗ ಆ ಪತ್ರದ ವಿಚಾರ ಬೆಳಕಿಗೆ ಬಂದಿದೆ.

ತನ್ವೀರ್ ಸೇಠ್​ ನಿವೃತ್ತಿ ಪತ್ರದಲ್ಲೇನಿದೆ?

ನನ್ನ ಮೇಲೆ ಹಲ್ಲೆಯಾದ ಬಳಿಕ ಆರೋಗ್ಯ ತುಂಬಾ ಏರುಪೇರಾಗಿದೆ. ಮೊದಲಿನಂತೆ ನಾನು ಮಾನಸಿಕ ಹಾಗೂ ದೈಹಿಕವಾಗಿಯೂ ಶಕ್ತಿಯುತವಾಗಿಲ್ಲ. ಅನಾರೋಗ್ಯದ ಕಾರಣ ನನಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ. ನನಗೆ ಈ ಬಾರಿ ಟಿಕೆಟ್ ಬೇಡ. ನಾನು ಇನ್ಮುಂದೆ ಯಾವುದೇ ಚುನಾವಣೆಯಲ್ಲೂ ಸ್ಪರ್ಧಿಸಲ್ಲ. ಆದ್ರೆ ಕಾಂಗ್ರೆಸ್‌ನಲ್ಲೇ ಇರುತ್ತೇನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಬೆಂಬಲಿಗರ ಆಕ್ರೋಶ

ರಾಜಕೀಯ ನಿವೃತ್ತಿ ಪತ್ರದ ವಿಷಯ ತಿಳಿಯುತ್ತಿದ್ದಂತೆಯೇ ಬೆಂಬಲಿಗರು, ಕಾಂಗ್ರೆಸ್ ಕಾರ್ಯಕರ್ತರ ದಂಡು ಮೈಸೂರಿನಲ್ಲಿರುವ ತನ್ವೀರ್ ಸೇಠ್ ನಿವಾಸದ ಮುಂದೆ ಜಮಾಯಿಸಿದ್ದು, ನಿವೃತ್ತಿ ಘೋಷಣೆ ನಿರ್ಧಾರದಿಂದ ಹಿಂದೆ ಸರಿಯುವಂತೆ ಆಗ್ರಹಿಸುತ್ತಿದ್ದಾರೆ. ಮುಂದೆಯೂ ನೀವೇ ಎಂಎಲ್‌ಎ, ಸ್ಪರ್ಧಿಸಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ತನ್ವೀರ್ ಕಾಲಿಗೆ ಬಿದ್ದು ನಿರ್ಧಾರ ಬದಲಾಯಿಸುವಂತೆ ಪರಿಪರಿಯಾಗಿ ಬೇಡಿಕೊಂಡಿದ್ದಾರೆ. ಇನ್ನು ಬೆಂಬಲಿಗನೋರ್ವ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಯತ್ನಿಸಿದ್ದಾನೆ.

ತನ್ವೀರ್ ಸೇಠ್​ ಮೇಲೆ ದಾಳಿ

ಮೈಸೂರಿನ ಬನ್ನಿಮಂಟಪದ ಬಾಲಭವನದ ಆವರಣದಲ್ಲಿ ನಡೆಯುತ್ತಿದ್ದ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ತನ್ವೀರ್ ಸೇಠ್ ಅವರ ಕುತ್ತಿಗೆಯ ಭಾಗಕ್ಕೆ ಯುವಕನೋರ್ವ ಚೂರಿಯಿಂದ ಇರಿದಿದ್ದ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ತನ್ವೀರ್ ಸೇಠ್ ಸಾವಿನ ದವಡೆಯಿಂದ ಪಾರಾಗಿ ಬಂದಿದ್ದಾರೆ. ಆದ್ರೆ, ಅಂದಿನಿಂದ ಅವರಿಗೆ ಪದೇ ಪದೇ ಅನಾರೋಗ್ಯ ಕಾಡುತ್ತಿದೆ. ಇದರಿಂದ ಅವರು ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ.

ಸೋಲಿಲ್ಲದ ಸರದಾರ ತನ್ವೀರ್ ಸೇಠ್

ತನ್ವೀರ್ ಸೇಠ್ ಅವರ ಮೇಲೆಯೇ ಹಲ್ಲೆಗಳು ನಡೆದಿದ್ದರೂ ಕ್ಷೇತ್ರದಲ್ಲಿ ಇತ್ತೀಚೆಗಿನ ವರ್ಷಗಳಲ್ಲಿ ಯಾವುದೇ ರೀತಿಯ ಗಲಭೆಗಳಿಗೆ ಅವಕಾಶವಾಗದಂತೆ ನೋಡಿಕೊಂಡಿದ್ದಾರೆ. ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಆ ಮತಗಳು ತನ್ವೀರ್ ಸೇಠ್ ಕೈಬಿಟ್ಟಿಲ್ಲ. ಹೀಗಾಗಿ ಪ್ರತಿ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಾ ಬರುತ್ತಿದ್ದಾರೆ. ಅವರ ರಾಜಕೀಯ ನಡೆಯನ್ನು ಗಮನಿಸಿದ್ದೇ ಆದರೆ ಅವರ ತಂದೆ ಅಜೀಜ್ ಸೇಠ್‌ ರವರ ನಿಧನದಿಂದ ತೆರವಾದ ಸ್ಥಾನಕ್ಕೆ 2002ರಲ್ಲಿ ನಡೆದ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ ನಂತರ ಅವರು ಹಿಂತಿರುಗಿ ನೋಡಿಲ್ಲ.

ನರಸಿಂಹರಾಜ ಕ್ಷೇತ್ರದಲ್ಲಿ ಇದುವರೆಗೆ ಒಂದು ಉಪಚುನಾವಣೆ ಸೇರಿದಂತೆ ಒಟ್ಟು 5 ಚುನಾವಣೆಗಳನ್ನು (2002, 2004, 2008, 2013, 2018) ಎದುರಿಸಿದ್ದಾರೆ. ಈ ಎಲ್ಲಾ ಚುನಾವಣೆಗಳಲ್ಲೂ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದಾರೆ. ಅಲ್ಲದೇ ಅವರು ಕ್ಷೇತ್ರದಲ್ಲಿ ಎಂತಹ ಹಿಡಿತ ಸಾಧಿಸಿದ್ದಾರೆ ಎನ್ನುವುದಕ್ಕೆ ಇದು ಸಾಕ್ಷಿ. ಹೀಗೆ ಸೋಲನ್ನೇ ಕಾಣದ ಪ್ರಭಾವಿ ನಾಯಕ, ಅಲ್ಪಸಂಖ್ಯಾತ ಸಮುದಾಯದ ಪ್ರಭಾವಿ ಲೀಡರ್ ಚುನಾವಣೆ ಸಮಯದಲ್ಲಿ ರಾಜಕೀಯದಿಂದ ಹಿಂದೆ ಸರಿಯುತ್ತಿರುವುದು ಕಾಂಗ್ರೆಸ್​ಗೆ ಸಹಜವಾಗಿಯೇ ಆಘಾತವಾಗಿದೆ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 1:20 pm, Tue, 28 February 23