ದೆಹಲಿ: ನ್ಯಾಷನಲ್ ಹೆರಾಲ್ಡ್ (National Herald) ದಿನಪತ್ರಿಕೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಸೋಮವಾರ ಜಾರಿ ನಿರ್ದೇಶನಾಲಯದ (Enforcement Directorate – ED) ವಿಚಾರಣೆಗೆ ಹಾಜರಾಗಲಿದ್ದಾರೆ. ಇದು ರಾಹುಲ್ ಅವರು ಎದುರಿಸುತ್ತಿರುವ 4ನೇ ವಿಚಾರಣೆ. ಈ ಮೊದಲು ಜೂನ್ 13 ಮತ್ತು 15ರಂದು ರಾಹುಲ್ ಗಾಂಧಿ ವಿಚಾರಣೆ ನಡೆದಿತ್ತು. ಈವರೆಗೆ ಸುಮಾರು 30 ತಾಸುಗಳ ಅವಧಿಗೆ ರಾಹುಲ್ ವಿಚಾರಣೆ ನಡೆದಿದೆ. ತಮ್ಮ ನಾಯಕನ ವಿಚಾರಣೆ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ನಾಯಕರು ದೇಶದ ವಿವಿಧೆಡೆ ವ್ಯಾಪಕ ಪ್ರತಿಭಟನೆ ನಡೆಸಿದ್ದರು.
ಜೂನ್ 17ರಂದು ರಾಹುಲ್ ಗಾಂಧಿ ಅವರಿಗೆ ಮತ್ತೊಮ್ಮೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ವಿಚಾರಣೆ ಮುಂದೂಡುವಂತೆ ರಾಹುಲ್ ಗಾಂಧಿ ಮನವಿ ಮಾಡಿದ್ದರು. ತಮ್ಮ ತಾಯಿಯ ಅನಾರೋಗ್ಯದ ಕಾರಣವನ್ನು ಮುಂದಿಟ್ಟು ರಾಹುಲ್ ಗಾಂಧಿ ಅವರು ವಿಚಾರಣೆ ಮುಂದೂಡಬೇಕು ಎಂದು ವಿನಂತಿಸಿದ್ದರು. ಕೊವಿಡ್ ಸೋಂಕಿನಿಂದ ಬಳಲುತ್ತಿರುವ ಸೋನಿಯಾಗಾಂಧಿ ಕಳೆದ ಜೂನ್ 12ರಿಂದ ಆಸ್ಪತ್ರೆಯಲ್ಲಿದ್ದಾರೆ.
ರಾಹುಲ್ ಅವರ ವಿನಂತಿ ಒಪ್ಪಿಕೊಂಡಿದ್ದ ಜಾರಿ ನಿರ್ದೇಶನಾಲಯವು ವಿಚಾರಣೆಯನ್ನು ಸೋಮವಾರಕ್ಕೆ (ಜೂನ್ 20) ಮುಂದೂಡಿತ್ತು. ಕಳೆದ ವಾರ ಪೊಲೀಸರ ಅನುಮತಿಯಿಲ್ಲದೆ ದೇಶಾದ್ಯಂತ ಪ್ರತಿಭಟನೆ ನಡೆಸಿತ್ತು. ಅಗ್ನಿಪಥ್ ಸೇನಾ ನೇಮಕಾತಿ ಮತ್ತು ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಸರ್ಕಾರ ಆರಂಭಿಸಿರುವ ಸೇಡಿನ ರಾಜಕಾರಣ ವಿರೋಧಿಸಿ ಕಾಂಗ್ರೆಸ್ ಪಕ್ಷವು ಇಂದು ಮತ್ತೆ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದೆ. ಶಾಂತರೀತಿಯ ಪ್ರತಿಭಟನೆ ನಡೆಸುತ್ತೇವೆ ಎಂದು ಕಾಂಗ್ರೆಸ್ ಘೋಷಿಸಿದೆ.
ಸೇಡಿನ ರಾಜಕಾರಣ ಮತ್ತು ಅಗ್ನಿಪಥ್ ನಿಯಮಗಳನ್ನು ವಿರೋಧಿಸಿ ದೇಶಾದ್ಯಂತ ನಮ್ಮ ಕಾರ್ಯಕರ್ತರು ಪ್ರತಿಭಟನೆ ನಡೆಸಲಿದ್ದಾರೆ ಎಂದು ಕಾಂಗ್ರೆಸ್ ನಾಯಕ ಮತ್ತು ಸಂಸದ ಜೈರಾಮ್ ರಮೇಶ್ ನಿನ್ನೆ ಟ್ವೀಟ್ ಮಾಡಿದ್ದರು. ಕಾಂಗ್ರೆಸ್ ನಿಯೋಗವೊಂದು ರಾಷ್ಟ್ರಪತಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಲಿದೆ ಎಂದು ಕಾಂಗ್ರೆಸ್ ತಿಳಿಸಿದೆ.
Tomorrow lakhs of Congress workers across the country will continue peaceful protests against the anti-youth Agnipath scheme & against Modi Govt’s vendetta politics targeting its leader Shri Rahul Gandhi, MP. A Congress delegation will also meet Honble Rashtrapati in the evening.
— Jairam Ramesh (@Jairam_Ramesh) June 19, 2022
ಏನಿದು ನ್ಯಾಷನಲ್ ಹೆರಾಲ್ಡ್ ಪ್ರಕರಣ?
ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಮಾಲೀಕತ್ವವನ್ನು ಹೊಂದಿರುವ ಯಂಗ್ ಇಂಡಿಯನ್‌ನಲ್ಲಿ ಪಕ್ಷದ ಪ್ರಚಾರದಲ್ಲಿ ಹಣಕಾಸು ಅಕ್ರಮಗಳ ಕುರಿತು ಇಡಿ ತನಿಖೆಗೆ ಈ ಪ್ರಕರಣವು ಸಂಬಂಧಿಸಿದೆ. ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (AJL) ಪ್ರಕಟಿಸಿದೆ. ಇಡಿ ಇತ್ತೀಚೆಗೆ ಕಾಂಗ್ರೆಸ್‌ನ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಪವನ್ ಬನ್ಸಾಲ್ ಅವರನ್ನು ಕೂಡ ಈ ಪ್ರಕರಣದಲ್ಲಿ ಪ್ರಶ್ನಿಸಿತ್ತು.
ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಮತ್ತು ಇತರೆ ಕೆಲವು ಸ್ವಾತಂತ್ರ್ಯ ಹೋರಾಟಗಾರರು ಸೇರಿ 1938ರಲ್ಲಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಶುರು ಮಾಡಿದ್ದರು. ದೇಶದ ಸ್ವಾತಂತ್ರ್ಯ ಚಳುವಳಿಗೆ ಬೆನ್ನೆಲುಬಾಗಿ ನಿಲ್ಲುವುದು ಈ ಪತ್ರಿಕೆಯ ಪ್ರಮುಖ ಉದ್ದೇಶವಾಗಿತ್ತು. ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್) ಪ್ರಕಟಿಸಿರುವ ಈ ಪತ್ರಿಕೆ ಸ್ವಾತಂತ್ರ್ಯದ ಬಳಿಕ ಕಾಂಗ್ರೆಸ್ ಮುಖವಾಣಿಯಾಗಿ ಬದಲಾಗಿತ್ತು. ಕಾಂಗ್ರೆಸ್ ಪಕ್ಷದ ನಿಲುವು, ಅಭಿಪ್ರಾಯಗಳನ್ನು ಇದರಲ್ಲಿ ಪ್ರಕಟ ಮಾಡಲಾಗುತ್ತಿತ್ತು. 1938ರ ಸೆಪ್ಟೆಂಬರ್ 9ರಂದು ಲಕ್ನೋದಲ್ಲಿ ಇಂಗ್ಲೀಷ್ ಭಾಷೆಯ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಪ್ರಕಟಣೆ ಆರಂಭವಾಗಿತ್ತು. ಬಳಿಕ ಹಿಂದಿ ಭಾಷೆಯ ನವಜೀವನ್ ಮತ್ತು ಉರ್ದು ಭಾಷೆಯ ಕ್ವಾಮಿ ಆವಾಜ್ ಪತ್ರಿಕೆಯನ್ನೂ ಆರಂಭ ಮಾಡಿತ್ತು. ಈ ಮೂರೂ ಪತ್ರಿಕೆಗಳ ಒಡೆತನ ಎಜಿಎಲ್ ಹೆಸರಿನಲ್ಲಿತ್ತು.
ನೆಹರು ಅವರು ಕಟ್ಟಿದ್ದ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (AJL) ಕಂಪನಿಯು ಯಾವುದೇ ಒಬ್ಬ ವ್ಯಕ್ತಿಗೆ ಸೇರುವುದಿಲ್ಲ. 2010ರ ವೇಳೆಗ ಎಜಿಎಲ್ 1057 ಷೇರುದಾರರನ್ನು ಹೊಂದಿತ್ತು, ಆದರೆ, ತೀವ್ರ ನಷ್ಟದಲ್ಲಿದ್ದ ಈ ಕಂಪನಿಯ ಷೇರುಗಳನ್ನು 2011ರಲ್ಲಿ ಯಂಗ್ ಇಂಡಿಯಾ ಸಂಸ್ಥೆಗೆ ವರ್ಗಾವಣೆ ಮಾಡಲಾಗಿತ್ತು. ನೆಹರು ಪ್ರಧಾನಿಯಾಗಿದ್ದಾಗ ಎಜಿಎಲ್ ಗೆ ಭಾರೀ ಪ್ರಮಾಣದಲ್ಲಿ ದೇಣಿಗೆ ಹರಿದುಬರುತ್ತಿತ್ತು. ಪ್ರಧಾನಿಯ ಅಧಿಕಾರ ಬಳಸಿಕೊಂಡು ದೇಶದ ವಿವಿದೆಡೆ ಭೂಮಿಯನ್ನೂ ಮಂಜೂರು ಮಾಡಿದ್ದರು. ಎಜಿಎಲ್ ಆರ್ಥಿಕ ಸಂಕಷ್ಟದಲ್ಲಿದ್ದರೂ, ಈ ಕಂಪನಿ ಹೊಂದಿದ್ದ ಆಸ್ತಿಯ ಮೌಲ್ಯ ಅಂದಾಜು 2 ರಿಂದ 5 ಸಾವಿರ ಕೋಟಿ ಎಂದು ಹೇಳಲಾಗಿದೆ. 2007ರ ಏಪ್ರಿಲ್ 1 ರಂದು ತಾತ್ಕಾಲಿಕವಾಗಿ ಈ ಪತ್ರಿಕೆಯ ಪ್ರಕಟಣೆಯನ್ನು ಸ್ಥಗಿತಗೊಳಿಸಲಾಗಿತ್ತು. ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುವಲ್ಲಿ ವಿಫಲ, ಜಾಹೀರಾತು ಆದಾಯದ ಕೊರತೆಯಿಂದಾಗಿ 2008ರಲ್ಲಿ ಎಜಿಎಲ್ ಅನ್ನು ಮುಚ್ಚಲಾಗಿತ್ತು. ಬಳಿಕ 2016ರ ಜನವರಿ 21 ರಿಂದ ಮತ್ತೊಮ್ಮೆ ಮುದ್ರಣ ಆರಂಭಿಸಲಾಗಿತ್ತು.
ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ