ಒಗ್ಗೂಡಿದ ವಿಪಕ್ಷಗಳು; ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆಯನ್ನು ಭೇಟಿ ಮಾಡಿದ ಶರದ್ ಪವಾರ್

|

Updated on: Apr 13, 2023 | 10:29 PM

ದೇಶ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಲು ಮತ್ತು ಸಂವಿಧಾನವನ್ನು ಸುರಕ್ಷಿತವಾಗಿಡಲು, ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ, ಯುವಕರ ಉದ್ಯೋಗಕ್ಕಾಗಿ ಮತ್ತು ಹಣದುಬ್ಬರ ಮತ್ತು ಸ್ವಾಯತ್ತ ಸಂಸ್ಥೆಗಳ ದುರುಪಯೋಗದಂತಹ ಸಮಸ್ಯೆಗಳಿಗಾಗಿ ನಾವು ಒಂದಾಗಿ ಹೋರಾಡಲು ಸಿದ್ಧರಿದ್ದೇವೆ ಎಂದ ಖರ್ಗೆ

ಒಗ್ಗೂಡಿದ ವಿಪಕ್ಷಗಳು; ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆಯನ್ನು ಭೇಟಿ ಮಾಡಿದ ಶರದ್ ಪವಾರ್
ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿಯನ್ನು ಭೇಟಿಯಾದ ಶರದ್ ಪವಾರ್
Follow us on

ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ (Sharad Pawar) ಇಂದು (ಗುರುವಾರ) ನವದೆಹಲಿಯಲ್ಲಿ ಖರ್ಗೆ ಅವರ ನಿವಾಸದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge)  ಮತ್ತು ರಾಹುಲ್ ಗಾಂಧಿ (Rahul Gandhi) ಅವರನ್ನು ಭೇಟಿ ಮಾಡಿದ್ದಾರೆ. ಸಭೆಯ ನಂತರ ಮಾತನಾಡಿದ ರಾಹುಲ್ ಗಾಂಧಿ, ಪ್ರತಿಪಕ್ಷಗಳ ಒಗ್ಗಟ್ಟಿಗಾಗಿ ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಪ್ರತಿಪಕ್ಷಗಳನ್ನು ಒಗ್ಗೂಡಿಸುವ ಪ್ರಕ್ರಿಯೆ ಆರಂಭವಾಗಿದೆ. ಪ್ರತಿಪಕ್ಷಗಳ ಒಗ್ಗಟ್ಟಿಗಾಗಿ ಕೆಲಸ ಮಾಡಲು ನಾವೆಲ್ಲರೂ ಸೇರಿದ್ದೇವೆ ಎಂದು ಹೇಳಿದ್ದಾರೆ. ದೇಶ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಲು ಮತ್ತು ಸಂವಿಧಾನವನ್ನು ಸುರಕ್ಷಿತವಾಗಿಡಲು, ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ, ಯುವಕರ ಉದ್ಯೋಗಕ್ಕಾಗಿ ಮತ್ತು ಹಣದುಬ್ಬರ ಮತ್ತು ಸ್ವಾಯತ್ತ ಸಂಸ್ಥೆಗಳ ದುರುಪಯೋಗದಂತಹ ಸಮಸ್ಯೆಗಳಿಗಾಗಿ ನಾವು ಒಂದಾಗಿ ಹೋರಾಡಲು ಸಿದ್ಧರಿದ್ದೇವೆ. ಎಲ್ಲರೊಂದಿಗೂ ಪ್ರತ್ಯೇಕ ಪ್ರತ್ಯೇಕವಾಗಿ ಮಾತನಾಡುತ್ತೇವೆ. ಪವಾರ್ ಕೂಡ ಅದನ್ನೇ ಹೇಳುತ್ತಾರೆ. ಶರದ್ ಪವಾರ್ ಅವರು ಮುಂಬೈನಿಂದ ನೇರವಾಗಿ ಇಲ್ಲಿಗೆ ಬಂದು ನಮ್ಮೊಂದಿಗೆ ಚರ್ಚೆ ನಡೆಸಿರುವುದು ನಮಗೆಲ್ಲ ಸಂತಸ ತಂದಿದೆ. ನಾನು ಮತ್ತು ರಾಹುಲ್ ಗಾಂಧಿ ಅವರು ನಿತೀಶ್ ಮತ್ತು ತೇಜಸ್ವಿ ಅವರ ಜತೆ ವಿಪಕ್ಷಗಳ ಒಗ್ಗಟ್ಟಿಗಾಗಿ ಸಭೆ ನಡೆಸಿದ್ದೇವೆ ಎಂದು ಸುದ್ದಿಗಾರರ ಜತೆ ಮಾತನಾಡಿದ ಖರ್ಗೆ ಹೇಳಿದ್ದಾರೆ.

2024 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಸಮಾನ ಮನಸ್ಕ ವಿರೋಧ ಪಕ್ಷಗಳು ಸಾಮಾನ್ಯ ವೇದಿಕೆಯಲ್ಲಿ ಒಗ್ಗೂಡುವ ಮಾತುಕತೆಗಳ ನಡುವೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಅವರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಖರ್ಗೆ ಮತ್ತು ರಾಹುಲ್ ಗಾಂಧಿಯನ್ನು ಭೇಟಿಯಾದ ಒಂದು ದಿನದ ನಂತರ ಪವಾರ್ ಖರ್ಗೆಯವನ್ನು ಭೇಟಿ ಮಾಡಿದ್ದಾರೆ.

ಎನ್‌ಸಿಪಿ ಮುಖ್ಯಸ್ಥರು ಇತ್ತೀಚೆಗೆ ಗೌತಮ್ ಅದಾನಿಯನ್ನು ಬೆಂಬಲಿಸಿ ಮಾತನಾಡಿದ್ದರು. ಕಾಂಗ್ರೆಸ್ ಸೇರಿದಂತೆ ಹಲವಾರು ವಿರೋಧ ಪಕ್ಷಗಳ ಬೇಡಿಕೆಯಂತೆ ಜಂಟಿ ಸಂಸದೀಯ ಸಮಿತಿಯ ತನಿಖೆಯ ಬದಲಿಗೆ ಅದಾನಿ ವಿಷಯದಲ್ಲಿ ಸುಪ್ರೀಂಕೋರ್ಟ್ ತನಿಖೆಯ ಪರವಾಗಿ ಪವಾರ್ ಮಾತನಾಡಿದ್ದರು.

ಇದನ್ನೂ ಓದಿ: Narendra Modi: ಬ್ರಿಟನ್ ಪ್ರಧಾನಿ ಸುನಕ್‌ಗೆ ಮೋದಿ ದೂರವಾಣಿ ಕರೆ; ರಾಯಭಾರ ಕಚೇರಿಗಳಿಗೆ ರಕ್ಷಣೆ ಕಲ್ಪಿಸಲು ಆಗ್ರಹ

ನಿತೀಶ್ ಕುಮಾರ್, ಎಡಪಂಥೀಯರಾದ ಸೀತಾರಾಂ ಯೆಚೂರಿ ಮತ್ತು ಡಿ ರಾಜಾ ಅವರನ್ನು ಗುರುವಾರ ಭೇಟಿ ಮಾಡುವುದರೊಂದಿಗೆ ಪ್ರತಿಪಕ್ಷಗಳ ಏಕತೆಯನ್ನು ಗಟ್ಟಿಗೊಳಿಸುವ ಪ್ರಯತ್ನಗಳು ವೇಗವನ್ನು ಪಡೆದುಕೊಂಡವು. ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸೇರಿದಂತೆ ಹಲವು ವಿರೋಧ ಪಕ್ಷದ ನಾಯಕರನ್ನು ಭೇಟಿ ಮಾಡಿದ ನಂತರ ಜೆಡಿಯು ಮುಖ್ಯಸ್ಥರು ದೆಹಲಿಯಿಂದ ಹೊರಟಿದ್ದಾರೆ.

ಕುಮಾರ್ ಅವರೊಂದಿಗಿನ ಭೇಟಿಯ ನಂತರ, ಸಿಪಿಐ-ಎಂ ಪ್ರಧಾನ ಕಾರ್ಯದರ್ಶಿ ಯೆಚೂರಿ, ರಾಜ್ಯ ಮಟ್ಟದಲ್ಲಿ ಸೀಟು ಹೊಂದಾಣಿಕೆ ಮಾಡಲಾಗುವುದು ಮತ್ತು ಮೂರನೇ ರಂಗದ ಸಾಧ್ಯತೆಯಿದೆ ಎಂದು ಹೇಳಿದ್ದಾರೆ. ಕೇರಳದಲ್ಲಿ, ಕಾಂಗ್ರೆಸ್ ಮತ್ತು ನಮ್ಮ ಪಕ್ಷವು ಬದ್ಧ ವೈರಿಗಳು, ಬಿಜೆಪಿ ಅಲ್ಲಿ ಸ್ಪರ್ಧೆಯಲ್ಲೇ ಇಲ್ಲ ಎಂದು ಯೆಚೂರಿ ಹೇಳಿದ್ದಾರೆ.

ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ